Asianet Suvarna News Asianet Suvarna News

ಇಲ್ಲಿ ಜೈಲರ್ ಬಿಡುಗಡೆ, ಹಿಮಾಲಯದಲ್ಲಿ ರಜನೀಕಾಂತ್ ಧ್ಯಾನದಲ್ಲಿ!

ರಜನೀಕಾಂತ್ ಬಹು ನಿರೀಕ್ಷಿತ ಸಿನಿಮಾ ಜೈಲರ್ ಬಿಡುಗಡೆಯಾಗಿದೆ. ಟೆಕೆಟ್ ಸಾವಿರಾರು ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ, ಈ ಚಿತ್ರದ ಹೀರೋ ಹಿಮಾಲಯದಲ್ಲಿ ಧ್ಯಾನಿಸುತ್ತಿದ್ದಾರೆ. 

Jailer film release Rajinikanth visits Himalaya Supreeth KN article vcs
Author
First Published Aug 10, 2023, 5:07 PM IST | Last Updated Aug 10, 2023, 5:07 PM IST

- ಸುಪ್ರೀತ್ ಕೆ.ಎನ್

ಆಶ್ರಮಕ್ಕೆ ರಜನಿಕಾಂತ್ ಬಂದಿದ್ದಾರೆ ಎಂದು ನಿತ್ಯದ ಅಭ್ಯಾಸದಂತೆ ಗಂಗಾ ನದಿಯ ದಡಕ್ಕೆ ಹೋಗಿದ್ದಾಗ ಸನ್ಯಾಸಿಗಳೊಬ್ಬರು ಹೇಳಿದರು. ಆಶ್ಚರ್ಯವೇನೂ ಆಗಲಿಲ್ಲ. ರಜನಿಕಾಂತ್ ಆಗಾಗ ಹಿಮಾಲಯಕ್ಕೆ ಹೋಗೋದು, ಹಿಮಾಲಯಕ್ಕೆ ಹೋಗುವಾಗ ಹೃಷಿಕೇಶದ ಈ ಆಶ್ರಮಕ್ಕೆ ಬಂದು ಉಳಿದುಕೊಳ್ಳೋದು ಸಾಮಾನ್ಯ. ಪ್ರಧಾನಿ ಮೋದಿ, ರಜನಿಕಾಂತ್ ಹೀಗೆ ಅನೇಕರಿಗೆ ಈ ಆಶ್ರಮದ ಸ್ವಾಮಿಗಳು ಆಧ್ಯಾತ್ಮ ಗುರುಗಳು. ಹಾಗಾಗಿ ಆಶ್ಚರ್ಯವಾಗಲಿಲ್ಲ. ಆಶ್ರಮದೊಳಗೆ ನೋಡಿದರೆ ಗೆಸ್ಟ್ ಹೌಸಿನ ಮುಂದೆ ಒಳ್ಳೆ ಕಾರು ನಿಂತಿತ್ತು. ಆದರೆ ಪೊಲೀಸ್ ಜೀಪು, ಬೌನ್ಸರ್‌ಗಳು ಯಾರೂ ಇಲ್ಲ. ಆಮೇಲೆ ಪಾಠಕ್ಕೆಂದು ನಾನು ಸಭಾಂಗಣದೊಳಗೆ ಹೋದ ಐದು ನಿಮಿಷಗಳ ನಂತರ ರಜನಿಕಾಂತ್ ಬಂದ್ರು. ಅವರು ಮನೆಯಿಂದ ಹೊರಬಂದರೆ ಸಾಕು, ಅವರನ್ನು ನೋಡಲು ಸಾವಿರಾರು ಜನ ಕಾಯ್ತಿರ್ತಾರೆ. ಆದರೆ ಪುಟ್ಟ ಸಭಾಂಗಣದಲ್ಲಿ ಇದ್ದದ್ದು ಹೆಚ್ಚೆಂದರೆ 50 ಜನ. ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಇಲ್ಲಿ ಬಂದಿರುವುದು ನಮಗೆ ಖುಷಿ ತಂದಿದೆ, ಇವತ್ತು ಅವರ ಸಿನಿಮಾ ಜೈಲರ್ ಬಿಡುಗಡೆ ಆಗ್ತಿದೆ, ಅವರಿಗೆ ಒಳ್ಳೆದಾಗ್ಲಿ ಎಂದಾಗ, ಆ ಸ್ಟಾರ್‌ಗಿರಿಗೂ ತಮಗೂ ಸಂಬಂಧವೇ ಇಲ್ಲವೆನ್ನುವಂತಹ ನಿರ್ಲಿಪ್ತ ಭಾವ ಅವರ ಮುಖದಲ್ಲಿ!

ವೇದಾಂತದಲ್ಲಿ ಸಾಮಾನ್ಯವಾಗಿ ಒಂದು ಉದಾಹರಣೆ ಕೊಡುತ್ತಾರೆ: ಸಿನಿಮಾ ನಟನಂತೆ ನಮ್ಮ ಪಾತ್ರ ಮಾಡಬೇಕಷ್ಟೆ. ಅದಕ್ಕೆ ಅಂಟಿ ಕೊಳ್ಳಬಾರದು. ಕೋಟ್ಯಾಂತರ ರೂಪಾಯಿ ಇರುವ ಸಿನಿಮಾ ನಟ, ಶೂಟಿಂಗ್ ಸೆಟ್‌ಗೆ ಬಂದಾಗ, ಭಿಕ್ಷುಕನ ಪಾತ್ರ ಕೊಟ್ಟರೂ ಮಾಡ್ತಾನೆ. ಪ್ಯಾಕಪ್ ಅಂದ ಕೂಡಲೇ ತಮ್ಮ ಕಾರಲ್ಲಿ ಮನೆಗೆ ಹೋಗ್ತಾರೆ. ರಜನಿಕಾಂತ್ ಸಿನಿಮಾದಲ್ಲಿ super star, style king ಆದರೂ, ಪ್ಯಾಕಪ್ ಅಂದ ಕೂಡಲೇ makeup ತೆಗೆದು, ಬಿಳಿ ಶರ್ಟು ಪಂಚೆ ಹಾಕಿದಾಗ ಅವರೇ ಬೇರೆ! 

ಅಯ್ಯೋ! ಬೆಂಗಳೂರಿನಲ್ಲಿ ಜೈಲರ್ ಸಿನಿಮಾಗೆ 2200 ರೂ.; ಕನ್ನಡ ಚಿತ್ರಕ್ಕೆ ಬೆಲೆ ಇಲ್ಲ, ಕನ್ನಡಿಗರು ಗರಂ

ರಜನಿಕಾಂತ್ ಅವರಿಗೆ ಆಶ್ರಮ, ಹಿಮಾಲಯ ಇವೆಲ್ಲಾ ಯಾಕೆ ಬೇಕು? ಕೋಟಿ ಕೋಟಿ ಹಣ, ಅಭಿಮಾನಿಗಳು ಎಲ್ಲ ಇದ್ದಾರಲ್ಲ, ಆರೋಗ್ಯ ಕೈ ಕೊಟ್ರೆ ಒಳ್ಳೆ ಆಸ್ಪತ್ರೆಗೆ ಸೇರೊದಿರಲಿ, ಆಸ್ಪತ್ರೆಯನ್ನೇ ಕೊಂಡುಕೊಳ್ಳಬಹುದು. ಇಷ್ಟೆಲ್ಲಾ ಇದ್ದು ಅವರಿಗೆ ಒಂದು ಸತ್ಯ ಅರಿವಾಗಿದೆ: ಸರ್ವಂ ವ್ಯರ್ಥಂ ಮರಣ ಸಮಯೇ ಸಾಂಬ ಏಕ ಸಹಾಯಕಃ (ಮರಣ ಸಮಯದಲ್ಲಿ ಶಿವನೊಬ್ಬನೇ ಸಹಾಯಕ್ಕೆ ಬರೋದು, ಉಳಿದದ್ದೆಲ್ಲಾ ವ್ಯರ್ಥ). ಈ ಸತ್ಯ ಅರಿವಾದರೆ, ಬಲವಾಗಿ ಆಂತರ್ಯದಲ್ಲಿ ಬೇರೂರಿದರೆ ಹಿಮಾಲಯ ಸೆಳೆಯುತ್ತೆ. ಗಂಗೆ ಕರೆಸಿಕೊಳ್ಳುತ್ತಾಳೆ.

 

Latest Videos
Follow Us:
Download App:
  • android
  • ios