ಕನ್ನಡ ಚಿತ್ರರಂಗದಲ್ಲಿ 40 ವರ್ಷಗಳ ಪಯಣ ಪೂರೈಸಿದ ನಟ ಜಗ್ಗೇಶ್, ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಜಗ್ಗೇಶ್ ಚಿತ್ರರಂಗದ ಆಗು ಹೋಗುಗಳ ಬಗ್ಗೆ ಚರ್ಚಿಸುತ್ತಾರೆ. ಅಲ್ಲದೇ ಅಭಿಮಾನಿಗಳು ಕೇಳುವ ಪ್ರತಿಯೊಂದೂ ಪ್ರಶ್ನೆಗೂ ತಾಳ್ಮೆಯಿಂದ ಉತ್ತರಿಸುತ್ತಾರೆ. ಇದೀಗ ಪ್ಯಾನ್ ಇಂಡಿಯಾ ಚಿತ್ರಗಳ ಬಗ್ಗೆ ಚರ್ಚೆ ಮಾಡಿದ ಕಾರಣ ಕೆಲವು ನೆಟ್ಟಿಗರು ಜಗ್ಗೇಶ್ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದರು.

90 ಲಕ್ಷದಲ್ಲಿ ತಯಾರಾಗಿದ್ದ ಜಗ್ಗೇಶ್ 'ಎದ್ದೇಳು ಮಂಜುನಾಥ' ಸಿನಿಮಾ ಗಳಿಸಿದ್ದು ಕೇಳಿದ್ರೆ ಶಾಕ್ ಆಗ್ತೀರಾ!

ಹೌದು. ಕೆಲವು ದಿನಗಳ ಹಿಂದೆ ಪ್ರೆಸ್ ಮೀಟ್ ಮಾಡಿದ ಜಗ್ಗೇಶ್, ಪ್ಯಾನ್ ಇಂಡಿಯಾ ಸಿನಿಮಾಗಳು ಹೇಗೆಂದು ಚರ್ಚಿಸಿದ್ದರು. ಹಾಗಂಥ ಯಾರ ಹೆಸರೂ ಎತ್ತಿರಲಿಲ್ಲ. ಆದರೂ ಕೆಲವು ಕಿಡಿಗೇಡಿ ನೆಟ್ಟಿಗರು ಯಶ್‌ಗೆ ಈ ಮಾತು ಹೇಳಲಾಗಿದೆ ಎಂದು ಜಗ್ಗೇಶ್ ವಿರುದ್ಧ ತಿರುಗಿ ಬಿದ್ದಿದ್ದರು.  ಟೀಕಿಸಿದ್ದರು. ಅದರೆ ಜಗ್ಗೇಶ್ ಮಾತ್ರ ಈಗಲೂ ಯಶ್‌ನನ್ನು ಹಿರಿಮಗನಂತೆ ಎಂದು ಹೇಳಿದ್ದಾರೆ.

ಡಬ್ಬಿಂಗ್ ಬಗ್ಗೆ ಜಗ್ಗೇಶ್ ಮಾತು; 'ನಿಮ್ಮ ಮನೆ ಪಾಯಿಖಾನೆ ತೊಳೆದು ನಿಮ್ಮ ಸೇವೆ ಮಾಡುವೆ' 

ಹಲವು ವರ್ಷಗಳ ಹಿಂದೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಯಶ್‌ ನೀಡಿದ ಸಂದರ್ಶನದಲ್ಲಿ ನಟ ಜಗ್ಗೇಶ್ ಬಗ್ಗೆ ಮಾತನಾಡಿದ್ದರು. ಈ ವಿಡಿಯೋ ಶೇರ್ ಮಾಡಿಕೊಂಡ ಅಭಿಮಾನಿಯೊಬ್ಬ ಯಶ್ ಬಗ್ಗೆ ಏನಾದರೂ ಹೇಳಿ ಎಂದು ಕೇಳಿ ಕೊಂಡಿದ್ದಾರೆ. ಈ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. 

 

'ಯಶ್ ನನ್ನ ಹಿರಿ ಮಗನ ವಯಸ್ಸಿನವ. ನನ್ನಂತೆಯೇ ಯಾರ ಸಹಾಯವೂ ಇಲ್ಲದೇ ಬೆಳೆದವ ಎಂಬ ಹೆಮ್ಮೆ ಇದೆ. ಉದ್ಯಮದ ಒಳಗೆ ನಮಗೆಲ್ಲ ಹಿರಿ, ಕಿರಿಯರ ಜೊತೆಯ ಸಂಬಂಧ ಸೌಹಾರ್ದಯುತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್‌ಗಾಗಿ ಜೀವಿಸಿ, ಮೊಬೈಲ್‌ನಲ್ಲೇ ಬದುಕುವ ಹಾಗೂ ಇತ್ತೀಚಿಗೆ ಯೂಟ್ಯೂಬ್ ಖಾತೆ ತೆರೆದು ಹಿಂಬಾಲಕರಿಗಾಗಿ ಅಲೆಯುವ ತಂತ್ರವಾದಿಗಳಿಗೆ ಅದು ಅರಿವಾಗದು,' ಎಂದು ಜಗ್ಗೇಶ್ ಟ್ವೀಟಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

ಜಗ್ಗೇಶ್‌ ಬಗ್ಗೆ ಟೀಕೆ ಮಾಡುತ್ತಿದ್ದ ನೆಟ್ಟಿಗರು, ಈ ಟ್ವೀಟ್ ನೋಡಿ ಸುಮ್ಮನಾಗಿದ್ದಾರೆ. ತಂದೆ ಮಗನಂತಿರುವ ಸಂಬಂಧ ಹಾಳು ಮಾಡಬಾರದು ಎಂದು ಸಮಾಧಾನ ಮಾಡಿಕೊಂಡಿದ್ದಾರೆ.