ಆರ್‌ ಕೇಶವಮೂರ್ತಿ 

ಬೆನ್ನಿಗೆ ನಿಂತ ಛಾಯಾಗ್ರಾಹಕ

‘ಯಾರಪ್ಪ ನೀನು’ ಅಂತ ಕೇಳುವವರೇ ಇಲ್ಲದ ದಿನಗಳು. ಆಗ ಫೋಟೋಗಳನ್ನು ತೆಗೆದು ಆ ಫೋಟೋಗಳ ಜತೆ ಸಿನಿಮಾದವರ ಮನೆಗಳಿಗೆ ಕೆರೆದುಕೊಂಡು ಹೋಗಿ ‘ಒಳ್ಳೆಯ ನಟ. ಇವರಿಗೊಂದು ಅವಕಾಶ ಕೊಡಿ’ ಎಂದು ಹೇಳುವಷ್ಟುನನ್ನ ಬೆನ್ನಿಗೆ ನಿಂತಿದ್ದು ಛಾಯಾಗ್ರಾಹಕ ಕೆಎನ್‌ ನಾಗೇಶ್‌ ಕುಮಾರ್‌. ಇವರು ತೆಗೆದ ಫೋಟೋ ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.

ವೀರಾಸ್ವಾಮಿ ಕೊಟ್ಟಅವಕಾಶ

ಕ್ರೇಜಿಸ್ಟಾರ್‌ ರವಿಚಂದ್ರನ್‌ ತಂದೆ ವೀರಾಸ್ವಾಮಿ ‘ಥೇಟ್‌ ರಜನಿಕಾಂತ್‌ ಥರಾನೇ ಕಾಣುತ್ತಿದ್ದಿಯಾ’ ಎಂದು ಹೇಳಿ ನನ್ನ ‘ರಣಧೀರ’ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು. ಈ ಸಿನಿಮಾ ನನ್ನ ಬೆಂಗಳೂರಿನಿಂದ ಆಗಿನ ಮದ್ರಾಸ್‌ಗೆ ಕರೆದುಕೊಂಡು ಹೋಯಿತು. ಅಲ್ಲಿ ಕೋಕಿಲಾ ಮೋಹನ್‌ ಮತ್ತು ಅವರ ಸ್ನೇಹಿತ ದಿಲೀಪ್‌ ಪರಿಚಯವಾದರು. ‘ರಣಧೀರ’ ಸಿನಿಮಾದಿಂದ ಬಂದ ಸಂಭಾವನೆ ನೋಡಿ, ‘ನನಗೂ ಹಣ ಕೊಡುತ್ತಾರೆ. ನಾನೂ ಕೂಡ ಸಿನಿಮಾದಿಂದ ಜೀವನ ಕಟ್ಟಿಕೊಳ್ಳಬಹುದು’ ಎನ್ನುವ ವಿಶ್ವಾಸ ಬಂತು.

ತಿರುವು ಕೊಟ್ಟಚಿತ್ರಗಳು

ತಿರುವು ಕೊಟ್ಟಿದ್ದು ‘ರಣರಂಗ’ ಹಾಗೂ ‘ಕೃಷ್ಣ ನೀ ಕುಣಿದಾಗ’. ಹೊನ್ನವಳ್ಳಿ ಕೃಷ್ಣ ಕೊಡಿಸಿದ ಪಾತ್ರ. ‘ಏನ್‌ ಮೇಡಮ್‌ ಓಪನ್‌ ಹೇರು, ಬಲ್‌ ಮಜವಾಗಿದೆ’ ಎಂದು ಸುಧಾರಾಣಿ ಅವರನ್ನು ರೇಗಿಸುವ ದೃಶ್ಯ. ಇಲ್ಲಿಂದಾಚೆಗೆ ಗೌರವ ಕೊಡಕ್ಕೆ ಆರಂಭಿಸಿದರು. ಆ ನಂತರ ಬಂದಿದ್ದು ‘ಕೃಷ್ಣ ನೀ ಕುಣಿದಾಗ’. ಬೇರೊಬ್ಬರು ಜಾಸ್ತಿ ಸಂಭಾವನೆ ಕೇಳಿದ್ದಕ್ಕೆ ನನಗೆ ಸಿಕ್ಕ ಪಾತ್ರ ಇದು. ‘ರಜನಿಕಾಂತ್‌ ಹಾಕಿ ತೆಗೆದಿದ್ದ ಕಾಸ್ಟೂ್ಯಮ್‌ ಇವರಿಗೆ ಹಾಕ್ರಿ. ನೋಡಕ್ಕೂ ರಜನಿಕಾಂತ್‌ ಥರಾನೇ ಇದ್ದಾನೆ’ ಎಂದರು ದ್ವಾರಕೀಶ್‌.

ಈ ನಲವತ್ತು ವರ್ಷದ ಸಿನಿಮಾ ಪ್ರಯಾಣ ಖುಷಿ ಕೊಟ್ಟಿದೆ. ಈಗ ಒಳ್ಳೆಯ ಸಿನಿಮಾಗಳು, ಅವಕಾಶಗಳು ಸಿಕ್ಕರಷ್ಟೇ ಸಿನಿಮಾಗಳಲ್ಲಿ ಅಭಿನಯಿಸುತ್ತೇನೆ. ಅವಕಾಶಕ್ಕಾಗಿ ಇನ್ನು ಯಾರ ಬಳಿಯೂ ಬೇಡಲಾರೆ. ಸಿನಿಮಾದ ಜತೆಗೆ ಬೇರೆ ಏನಾದ್ರೂ ಮಾಡಬೇಕು. ಮಗ ಪೋಸ್ಟ್‌ ಪ್ರೊಡಕ್ಷನ್‌ ಥಿಯೇಟರ್‌ ಮಾಡುತ್ತಿದ್ದಾನೆ. ನಿರ್ದೇಶನದ ತಯಾರಿಯೂ ಮಾಡಿಕೊಳ್ಳುತ್ತಿದ್ದಾನೆ.- ಜಗ್ಗೇಶ್‌, ನಟ

ಆಗ ನಾನೇ ರಜನಿಕಾಂತ್‌!

ವೀರಾಸ್ವಾಮಿ, ದ್ವಾರಕೀಶ್‌... ಹೀಗೆ ಯಾರೇ ನೋಡಿದರೂ ನನ್ನ ‘ನೋಡಕ್ಕೆ ರಜನಿಕಾಂತ್‌ ಥರಾನೇ ಇದ್ದಿಯಾ, ಬಾರೋ ಮರಿ ಇಲ್ಲಿ’ ಎನ್ನುತ್ತಿದ್ದರು. ಆಗ ಕನ್ನಡ ಚಿತ್ರರಂಗದ ಮಟ್ಟಿಗೆ ನಾನೇ ರಜನಿಕಾಂತ್‌ ಆಗಿದ್ದೆ. ಆ ಕಾಲಕ್ಕೆ ನಾನು ಟೂ ರೂಪಿಸ್‌ ಆರ್ಟಿಸ್ಟ್‌. ಅಂದರೆ 2 ಲಕ್ಷ ಸಂಭಾವನೆ ಪಡೆಯುತ್ತಿದ್ದ ಕ್ಯಾರೆಕ್ಟರ್‌ ಆರ್ಟಿಸ್ಟ್‌.

ಲೇ ಕರಿಯಾ ಹೀರೋ ಆಗೋ

ಎರಡು ಲಕ್ಷ ಕ್ಯಾರೆಕ್ಟರ್‌ ಆರ್ಟಿಸ್ಟ್‌ಗಾಗಿಯೇ ತೃಪ್ತಿಯಾಗಿದ್ದ ನನ್ನ ನೋಡಿ ‘ಲೇ ಕರಿಯಾ, ಇನ್ನು ಎಷ್ಟುದಿನ ಹೀಗೆ ಇರ್ತಿಯಾ. ಹೀರೋ ಆಗ್ಬಿಡು’ ಎಂದು ತಮ್ಮದೇ ಶೈಲಿಯಲ್ಲಿ ಹೇಳಿ ನನ್ನಲ್ಲಿ ಮೊದಲು ಹೀರೋ ಕನಸು ಬಿತ್ತಿದ್ದು ರೆಬೆಲ್‌ ಸ್ಟಾರ್‌ ಅಂಬರೀಶ್‌. ಏನಾದರೂ ಮಾಡಿ ಹೀರೋ ಆಗಬೇಕು ಅಂತ ಒದ್ದಾಡಿದೆ. ಆಗಲೇ ಬಂದಿದ್ದು ಆ ಸಿನಿಮಾ.

ತರ್ಲೆ ನನ್ಮಗ ಮತ್ತು ಭಂಡ ನನ್ನ ಗಂಡ

ಹೀರೋ ಆಗಬೇಕು ಅಂದುಕೊಂಡಾಗ ಹುಟ್ಟಿದ್ದೇ ‘ತರ್ಲೆ ನನ್ಮಗ’. ಆದರೆ, ಸೆಟ್ಟೇರಿದ ಈ ಸಿನಿಮಾ ಆರಂಭದಲ್ಲೇ ನಿಂತು ಹೋಯಿತು. ಮೊದಲೇ ಸಿನಿಮಾನೇ ಹೀಗಾಯಿತಲ್ಲ ಎಂದು ಚಿಂತೆಯಲ್ಲಿದ್ದಾಗ ನನ್ನ ಭಾವನ ಜತೆ ಸೇರಿ ‘ಭಂಡ ನನ್ನ ಗಂಡ’ ಶುರು ಮಾಡಿದೆ. ನಮ್ಮ ದುಡ್ಡಿನಲ್ಲೇ ನಾನೇ ಹೀರೋ ಆಗಲು ಹೊರಟೆ. ರಿಲೀಸ್‌ ಸಮಸ್ಯೆ ಆಯಿತು. ಮಧ್ಯರಾತ್ರಿ 2 ಗಂಟೆಗೆ ಅಂಬರೀಶ್‌ ಮನೆಗೆ ಹೋಗಿದ್ದೆ. ಸರಿಯಾಗಿ ಬೈದು ಕಳಿಸಿದರು. ಮರುದಿನ ಮಾಣಿಕ್‌ಚಂದ್‌ ಎಂಬವರು ಕರೆ ಮಾಡಿದರು. ‘ಅಂಬರೀಶ್‌ ಹೇಳಿದ್ರು ಸಿನಿಮಾ ಮಾಡಿದಿರಂತೆ’ ಎಂದರು. ಅವರೇ ಕೈಯಿಂದ 5 ಲಕ್ಷ ಹಾಕಿ ಸಿನಿಮಾ ರಿಲೀಸ್‌ ಮಾಡಿದರು. ಆ ಸಿನಿಮಾ ಇತಿಹಾಸ ಬರೆಯಿತು. ಅಂದಿನ ಕಾಲದಲ್ಲೇ ಸುಮಾರು 1 ಕೋಟಿ ಕಲೆಕ್ಷನ್‌ ಮಾಡಿತ್ತು.

ರಾಜಕೀಯ ಆಕಸ್ಮಿಕ

ರಾಜಕೀಯ ನನ್ನ ಆಕಸ್ಮಿಕ ಪ್ರವೇಶ. ಅಂಬರೀಶ್‌ ಅವರು ನನ್ನ ಚಿತ್ರದಲ್ಲಿ ಗೆಸ್ಟ್‌ ರೋಲ್‌ ಮಾಡಿದಾಗ ಇಡೀ ಮಂತ್ರಿಮಂಡಲವೇ ಸಿನಿಮಾ ಶೂಟಿಂಗ್‌ ಸೆಟ್‌ಗೆ ಬಂದಿತ್ತು. ಹೀರೋ ಆಗಿ ಹೆಸರು ಮಾಡಿದ ಮೇಲೆ ರಾಜಕೀಯ ಕಾರ್ಯಕ್ರಮಕ್ಕೆ ಹೋಗಿ ಮಾತನಾಡಿದ ಫಲ ನನ್ನ ರಾಜಕೀಯ ಪಡಸಾಲೆಯಲ್ಲಿ ನಿಲ್ಲಿಸಿತು. ಸಿನಿಮಾ ಫಸ್ಟ್‌, ಫ್ಯಾಮಿಲಿ ನಂತರ, ರಾಜಕೀಯ ಕೊನೆ.