ಡಾ. ರಾಜ್‌ಕುಮಾರ್ ಅವರ ಕೊನೆಯ ಚಿತ್ರ 'ಶಬ್ದವೇದಿ'ಯಲ್ಲಿ ಅವರು ಮತ್ತು ಅಶ್ವಥ್ ಅವರಿಗೆ ಇಷ್ಟವಿಲ್ಲದ ಪಾತ್ರಗಳಲ್ಲಿ ನಟಿಸಿದರು. ಎಸ್. ನಾರಾಯಣ್ ಅವರ ಮಾತಿಗೆ ತಪ್ಪದ ಡಾ. ರಾಜ್, ಅವರ ಪ್ರೀತಿಗೆ ಮಣಿದ ಅಶ್ವಥ್, ಚಿತ್ರ ನಿರ್ಮಾಣದ ಒತ್ತಡದಲ್ಲಿದ್ದ ನಿರ್ದೇಶಕ, ಹೀಗೆ ಮೂವರ ಪರಿಸ್ಥಿತಿಯೇ ಇದಕ್ಕೆ ಕಾರಣ. ಚಿತ್ರದಲ್ಲಿನ ಪಾತ್ರಗಳ ಬಗ್ಗೆ ಅಭಿಮಾನಿಗಳಿಂದ ವಿರೋಧ ವ್ಯಕ್ತವಾಯಿತು.

ಡಾ ರಾಜ್‌ಕುಮಾರ್ ನಟನೆಯ ಕೊನೆಯ ಚಿತ್ರ 'ಶಬ್ದವೇದಿ' ಎಂಬುದು ಕರುನಾಡಿನ ಬಹುತೇಕ ಸಿನಿಪ್ರೇಕ್ಷಕರಿಗೆ ಗೊತ್ತು. ಎಸ್‌ ನಾರಾಯಣ ನಿರ್ದೇಶನದ 'ಶಬ್ದವೇದಿ' ಚಿತ್ರವನ್ನು 2000 ಇಸ್ವಿಯಲ್ಲಿ ತೆರೆಗೆ ತರಲಾಯಿತು. ಆದರೆ, ಆ ಚಿತ್ರ ಅದಕ್ಕೂ ಕೆಲವು ವರ್ಷಗಳ ಮೊದಲೇ ಮಾಡಬೇಕಿತ್ತು. ಆದರೆ, ಡಾ ರಾಜ್‌ ಅವರ ಅನಾರೋಗ್ಯ ಹಾಗೂ ಎಸ್‌ ನಾರಾಯಣ ಅವರ ಡೇಟ್ಸ್ ಕ್ಲಾಶ್‌ ಆಗಿ ಆ ಚಿತ್ರ ಅಂದುಕೊಂಡಿದ್ದಕ್ಕಿಂತ ಲೇಟ್ ಆಗಿ ತೆರೆಗೆ ಬಂತು. 

ವಿಷಯ ಈಗ ಅದಲ್ಲ.. ಡಾ ರಾಜ್‌ ನಟನೆಯ ಶಬ್ದವೇದಿ ಚಿತ್ರದಲ್ಲಿ ಹಿರಿಯ ನಟ ಅಶ್ವಥ್ ಅವರು ವಿದಾಯ ಹೇಳಿದ ಬಳಿಕವೂ ಮತ್ತೆ ಬಣ್ಣ ಹಚ್ಚಿದ್ದಾರೆ. ಡಾ ರಾಜ್‌ಕುಮಾರ್ ಅವರು ತಮ್ಮ ಕೊನೆಯ ಚಿತ್ರದಲ್ಲಿ ತಮಗೊಪ್ಪದ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಹಲವರು ಹೇಳುತ್ತಾರೆ. ಆದರೆ, ಅದೆಲ್ಲಕ್ಕಿಂತ ಮುಖ್ಯವಾಗಿ ಹಿರಿಯ ನಟ ಅಶ್ವಥ್‌ ಅವರು ಅದರಲ್ಲಿ ದ್ವಿಪಾತ್ರ ಮಾಡಿದ್ದು, ಅದು ಅಂಥ ಹಿರಿಯ ನಟ ಶಿಸ್ತಿನ ಸಿಪಾಯಿ ಮಾಡಬಾರದ ಪಾತ್ರವಾಗಿತ್ತು ಎಂಬುದು ಈಗಲೂ ಹಲವರ ಅನಿಸಿಕೆ. 

ಹಾಗಿದ್ದರೆ ಏಕೆ ಹಾಗಾಯ್ತು? ಇಷ್ಟವಿಲ್ಲದ ಹಾಗೂ ಅಭಿಮಾನಿಗಳಿಗೂ ಇಷ್ಟವಾಗದ ಪಾತ್ರಗಳಲ್ಲಿ ಈ ಇಬ್ಬರೂ ಹಿರಿಯ ನಟರು ಯಾಕೆ ಅಭಿನಯಿಸುವಂತೆ ಆಯ್ತು? ಅಲ್ಲೇ ಇರುವುದು ರಹಸ್ಯ..! ಇದೊಂಥರಾ 'ತ್ರಿಕೋನ ಪ್ರೇಮಕಥೆ' ಎಂದು ಹೇಳುವಂತೆ ಆಗಿಹೋದ 'ತ್ರಿಕೋನ ಪ್ರೀತಿ-ಗೌರವದ ಕಥೆ'. ಅಂದರೆ ಇಲ್ಲಿ, ಯಾರೂ ಏನನ್ನೂ ಬೇಕಂತಲೆ ಮಾಡಿಲ್ಲ. ಆದರೆ, ಆಗಬಾರದ್ದು (ಸಿನಿಪ್ರೇಕ್ಷಕರ ಅನಿಸಿಕೆ) ಆಗಿಹೋಯ್ತು! ಕಾರಣ, ಈ ಮೂವರ ಆಗಿನ ಪರಿಸ್ಥಿತಿ. 

ಹೌದು, ಮೊದಲನೆಯದಾಗಿ ಶಬ್ದವೇದಿ ನಿರ್ದೇಶಕರಾದ ಎಸ್‌ ನಾರಾಯಣ್‌ ಪರಿಸ್ಥಿತಿ. ಡಾ ರಾಜ್‌ಕುಮಾರ್ ಅವರಿಗೆ ಸಿನಿಮಾ ಮಾಡ್ತೀನಿ ಎಂದು ಹೇಳಿದ್ದ ಎಸ್‌ ನಾರಾಯಣ್ ಮಾತು ಮಾಧ್ಯಮಗಳಲ್ಲೂ ಪ್ರಚಾರ ಪಡೆದು ಇಡೀ ಕರ್ನಾಟಕಕ್ಕೇ ಗೊತ್ತಾಗಿತ್ತು. ಹೀಗಾಗಿ ಡಾ ರಾಜ್‌ ಒಪ್ಪಿಸಿ ಮಾಡಲೇಬೇಕಿತ್ತು. ಡಾ ರಾಜ್‌ಕುಮಾರ್ ಕೂಡ ಓಕೆ ಅಂತ ಹೇಳಿಬಿಟ್ಟಿದ್ದರು, ಮಾಡದೇ ಇದ್ರೆ ಕೊನೆಗಾಲದಲ್ಲಿ 'ಮಾತಿಗೆ ತಪ್ಪಿದ ಮಗ' ಪಟ್ಟ ಬರುತ್ತಿತ್ತು. ಅದನ್ನು ಸ್ವತಃ ಅಣ್ಣಾವ್ರು ಒಪ್ಪುವಂತಿರಲಿಲ್ಲ. 

ಈ ಇಬ್ಬರೂ ಅದಾಗಲೇ ಬಿಡಿಸಿಕೊಳ್ಳಲಾಗದ ಸರ್ಕ್ಲ್‌ನಲ್ಲಿ ಸೇರಿಕೊಂಡಿದ್ದರು. ಅಷ್ಟರಲ್ಲಿ ಡಾ ರಾಜ್‌ ಅವರೇ ಸ್ವತಃ ಕಾಲ್ ಮಾಡಿ ಅಶ್ವಥ್‌ ಅವರಿಗೆ ಪ್ರೀತಿಯಿಂದ ತಮ್ಮ ಶಬ್ದವೇದಿ ಚಿತ್ರದಲ್ಲಿ ಪಾತ್ರ ಮಾಡುವಂತೆ ಕೇಳಿಕೊಂಡರಂತೆ. ಡಾ ರಾಜ್‌ಕುಮಾರ್ ಮಾತಿಗೆ, ಪ್ರೀತಿಗೆ ಗೌರವ ಕೊಡುವ ಸಲುವಾಗಿ ಅಶ್ವಥ್‌ ಅದನ್ನು ಒಪ್ಪಿಕೊಂಡರು ಎನ್ನಲಾಗಿದೆ. ಹೀಗೆ 'ಎಸ್‌ನಾರಾಯಣ್-ಡಾ ರಾಜ್‌ಕುಮಾರ್'ಅಶ್ವಥ್‌' ಎಂಬ ಮೂರು ಪಿಲ್ಲರ್‌ಗಳು ಸೇರಿ 'ಶಬ್ದವೇದಿ' ಸಿನಿಮಾ ತೆರೆಗೆ ಬಂತು.

ಆದರೆ, ಸಿನಿಮಾ ಬಿಡುಗಡೆಯಾದ ಬಳಿಕ ಆ ಸಿನಿಮಾದಲ್ಲಿ ಡಾ ರಾಜ್‌ಕುಮಾರ್ ಅವರು ಮಾಡಿದ ಪಾತ್ರದ ಬಗ್ಗೆ ಅವರ ಪಕ್ಕಾ ಅಭಿಮಾನಿಗಳಿಂದ ತೀವ್ರ ಅಪಸ್ವರ ಕೇಳಿಬಂತು. ಇನ್ನು ಅಶ್ವಥ್‌ ಮಾಡಿದ ಪಾತ್ರದ ಬಗ್ಗೆ ಸ್ವತಃ ಅವರಿಗೇ ತೃಪ್ತಿ ಇರಲಿಲ್ಲ ಎಂಬುದು ಗುಟ್ಟಾಗಿ ಉಳಿಯಲಿಲ್ಲ. ಇನ್ನು, ಡಾ ರಾಜ್‌ಕುಮಾರ್ ಅವರು ಸ್ವತಃ ನಟ ಅಶ್ವಥ್‌ ಬಳಿ, 'ನಿಮ್ಮ ಪಾತ್ರ ಶಿಸ್ತಿಯ ಸಿಪಾಯಿಯಂತೆ ಬದುಕಿದ ನಿಮಗೆ ಒಪ್ಪುವಂತಹುದಲ್ಲ, ನನ್ನನ್ನು ಕ್ಷಮಿಸಿ' ಎಂದಿದ್ದರು ಎಂಬುದು ಬಹಿರಂಗವಾಗಿದೆ. 

ಹಾಗಿದ್ದರೆ ಏಕೆ ಹಾಗಾಯ್ತು? ಅಷ್ಟು ಹಿರಿಯ ನಟರಿಂದ, ಅನುಭವಸ್ಥರಿಂದ ಏಕೆ ಆ ಸಿನಿಮಾದಲ್ಲಿ ಅಂತಹ ತಪ್ಪು ನಡೆಯಿತು? ಇದಕ್ಕೆ ಕಾರಣ, ಬೇರೆ ಕಥೆಯನ್ನು ಅರ್ಜೆಂಟ್‌ ಆಗಿ ಮಾಡಲಾಗದ ಎಸ್‌ ನಾರಾಯಣ್ ಅಸಹಾಯಕತೆ, ಡಾ ರಾಜ್‌ಕುಮಾರ್ ಅವರ ಕೊಟ್ಟ ಮಾತಿಗೆ ತಪ್ಪಲಾಗದ ನಡವಳಿಕೆ ಹಾಗೂ ಅಶ್ವಥ್‌ ಅವರಿಗೆ ಅಣ್ಣಾವ್ರ ಮೇಲಿದ್ದ ಅಭಿಮಾನ. ಈ ಮೂರು ಕಾರಣಗಳು ಪರಸ್ಪರ ಈ ಮೂವರಿಗೆ ಇದ್ದ ಪ್ರೀತಿ-ಗೌರವ-ಅಭಿಮಾನಗಳಿಂದಲೇ ಮೇಳೈಸಿತ್ತು. ಆದರೆ, ಅದೇ ಡಾ ರಾಜ್‌ಕುಮಾರ್‌ ಅವರ ಕೊನೆಯ ಚಿತ್ರವೂ ಆಗಿದ್ದು ದುರಾದೃಷ್ಟ ಎನ್ನಬಹುದೇ?