ಬೆಂಗಳೂರು(ಜ.27): ವಿಷ್ಣುವರ್ಧನ್‌ ಜೊತೆಗೆ ಕ್ರಿಕೆಟ್‌ ಆಡಿದ್ದೆ. ಸಾಕಷ್ಟುಒಡನಾಟವಿತ್ತು. ಆದರೂ ಅವರ ಚಿತ್ರ ನಿರ್ದೇಶಿಸಲು ಆಗಲಿಲ್ಲವಲ್ಲ ಎಂದು ಬೇಸರವಿದೆ ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಹೇಳಿದ್ದಾರೆ.

ರಾಘವೇಂದ್ರ ಚಿತ್ರವಾಣಿಯ 44ನೇ ವಾರ್ಷಿಕೋತ್ಸವ ಹಾಗೂ 20ನೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತಿ ವಿಷ್ಣುವರ್ಧನ್‌ ಕೊಡಮಾಡುವ ಆರ್‌.ಶೇಷಾದ್ರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ‘ವಿಷ್ಣುವರ್ಧನ್‌ ಅವರಂಥಾ ಮೇರು ಕಲಾವಿದನ ಒಡನಾಟ ಸಿಕ್ಕಿದ್ದು ನಮ್ಮ ಅದೃಷ್ಟ. ಅವರ ಚಿತ್ರ ನಿರ್ದೇಶಿಸಲಾಗದಿದ್ದರೂ, ಅವರ ಅಣ್ಣನ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಭಾಜನನಾಗಿರುವುದಕ್ಕೆ ಸಂತಸವಿದೆ ಎಂದರು.

ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಬಾಬು ಕೃಷ್ಣಮೂರ್ತಿ, ಈ ಸಂಸ್ಥೆಯ ಸುಧೀಂದ್ರ ನನಗೆ ಬಹಳ ಆಪ್ತರು. ಕಾಕತಾಳೀಯವೋ ಏನೋ ಗೊತ್ತಿಲ್ಲ, ಅವರು ರಾಘವೇಂದ್ರ ಚಿತ್ರವಾಣಿ ಆರಂಭಿಸಿದ ಹೊತ್ತಿಗೇ ನಾನು ರಾಘವೇಂದ್ರ ವೈಭವ ಎಂಬ ಚಿತ್ರ ಮಾಡಿದೆ. ಇದೀಗ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಯೂ ಸಕಾಲಿಕವಾಗಿ ಬಂದದ್ದು ಸಂತೋಷ ತಂದಿದೆ ಎಂದರು.

ಡಾ.ರಾಜ್‌ ಮಾರ್ಗದರ್ಶನದಲ್ಲಿ ನಡೆದ ದರ್ಶನ್; ಸಂಭಾವನೆ ಪಡೆಯದೆ ರಾಯಭಾರಿ!

ಡಾ. ರಾಜ್‌ಕುಮಾರ್‌ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಂಗೀತ ನಿರ್ದೇಶಕಿ ಇಂದೂ ವಿಶ್ವನಾಥ್‌, ‘ಸಂಗೀತ ನಿರ್ದೇಶನ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ಸಿಗದಿರುವುದಕ್ಕೆ ನೋವಾಗುತ್ತದೆ. ಚಿತ್ರರಂಗದಲ್ಲಿ ಇಂಥಾ ತಾರತಮ್ಯ ನಿವಾರಣೆಯಾಗಲಿ’ ಎಂದರು.

ನಿರ್ಮಾಪಕ ಎನ್‌.ಕುಮಾರ್‌ ಅವರಿಗೂ ಈ ಸಂದರ್ಭ ರಾಘವೇಂದ್ರ ಚಿತ್ರವಾಣಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧ ಅವರು ಸುಧೀಂದ್ರ ಅವರೊಂದಿಗಿನ ಒಡನಾಟ ಹಂಚಿಕೊಂಡರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್‌ ಪುರಾಣಿಕ್‌, ರಾಘವೇಂದ್ರ ಚಿತ್ರವಾಣಿಯ ಸುಧೀಂದ್ರ ವೆಂಕಟೇಶ್‌ ಉಪಸ್ಥಿತರಿದ್ದರು.