ಆ್ಯಕ್ಟಿಂಗ್ ಬರಲ್ಲ ಅಂತ ರಿಜೆಕ್ಟ್ ಮಾಡಿಬಿಟ್ರು, ನಾನ್ ಬಿಡ್ತೀನಾ? ಆ ದಿನಗಳ ನೆನಪಿಸಿಕೊಂಡ 'ಅಮೃತಧಾರೆ' ಭೂಮಿಕಾ!
ಅಮೃತಧಾರೆಯ ಭೂಮಿಕಾಳ ಆ್ಯಕ್ಟಿಂಗ್ಗೆ ಮನಸೋಲದವರೇ ಇಲ್ಲ. ಆದರೆ ಅಂದು ನಟಿಗೆ ಆ್ಯಕ್ಟಿಂಗ್ ಬರಲ್ಲ ಅಂತ ರಿಜೆಕ್ಟ್ ಮಾಡಲಾಗಿತ್ತು. ಆ ದಿನ ಹೇಗಿತ್ತು?
ಗಾಡ್ಫಾದರ್ ಇಲ್ಲದೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಇಲ್ಲಿ ಖ್ಯಾತಿ ಪಡೆಯುವುದು ಅಷ್ಟು ಸುಲಭದ ಮಾತೇ ಅಲ್ಲ ಬಿಡಿ. ಇದಾಗಲೇ ಸೀರಿಯಲ್ ಅಥವಾ ಸಿನಿಮಾಗಳಲ್ಲಿ ಖ್ಯಾತಿ ಪಡೆದಿರುವ ನಟ-ನಟಿಯರನ್ನು ಮಾತನಾಡಿದರೆ, ಅವರು ಪಟ್ಟಿರುವ ನೋವಿನ ದಿನಗಳು ತೆರೆದುಕೊಳ್ಳುತ್ತವೆ. ಅದೇ ರೀತಿಯಲ್ಲಿಯೇ ರಿಜೆಕ್ಟ್ ಆಗುವ ಮೂಲಕ ಸಿನಿ ಇಂಡಸ್ಟ್ರಿಗೆ ಕಾಲಿಟ್ಟವರು ಅಮೃತಧಾರೆ ಭೂಮಿಕಾ. ಭೂಮಿಕಾ ಅಂದರೆ ಸುಲಭದಲ್ಲಿ ಎಲ್ಲರಿಗೂ ತಿಳಿಯತ್ತೆ ಬಿಡಿ, ಏಕೆಂದ್ರೆ ಈ ಸೀರಿಯಲ್ ಮೂಲಕ ಅದ್ಭುತ ನಟನೆಯಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ನಟಿ. ಅಂದಹಾಗೆ ಇವರ ರಿಯಲ್ ಹೆಸರು ಛಾಯಾ ಸಿಂಗ್.
ಭೈರತಿ ರಣಗಲ್ ಚಿತ್ರದಲ್ಲಿಯೂ ನಟಿಸಿರುವ ಛಾಯಾ ಅವರು, ಇದೀಗ ಕಲಾ ಮಾಧ್ಯಮ ಯೂಟ್ಯೂಬ್ ಚಾನೆಲ್ನಲ್ಲಿ ತಾವು ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿರೋ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಆರಂಭದಲ್ಲಿ ಕಾಲೇಜಿಗೆ ಹೋಗುವ ದಿನದಲ್ಲಿ ಟ್ಯೂಷನ್ ಮಾಡೋಣ ಎಂದುಕೊಂಡು ಆ ದಿನಗಳಲ್ಲಿ ಬರುತ್ತಿದ್ದ ಯೆಲ್ಲೋ ಪೇಜಸ್ ತಡಕಾಡುತ್ತಿದ್ದರಂತೆ. ಆಗ ಶ್ಯಾಂಪೂ ಒಂದರ ಜಾಹೀರಾತಿಗೆ ಹುಡುಗಿಯರು ಬೇಕಾಗಿದ್ದಾರೆ ಎನ್ನೋದನ್ನು ನೋಡಿ ಇವರೂ ಅರ್ಜಿ ಹಾಕಿದ್ದಾರೆ. ಇವರಿಗೆ ಕರೆಯೂ ಬಂದು ಬಿಟ್ಟಿದೆ. ಫೋಟೋಶೂಟ್ ಅಂದ್ರೆ ಏನು ಎಂದೇ ಗೊತ್ತಿಲ್ಲದ ಛಾಯಾಗೆ ಫೋಟೋಶೂಟ್ ಮಾಡಿಸಿಯಾಯ್ತು. ಅದರಲ್ಲಿ ಸೆಲೆಕ್ಟೂ ಆಗಿ ಬಿಟ್ಟರು. ಕೊನೆಗೆ ಅವರಿಗೆ ದೂರದರ್ಶನ ಚಂದನದಲ್ಲಿ ಬರುತ್ತಿದ್ದ ಸಮಾಗಮ ಸೀರಿಯಲ್ಗೆ ಆಫರ್ ಬಂದಿತ್ತು.
ಅಪ್ಪಾಜಿಯನ್ನು ನಾನು ಎಂದಿಗೂ ಅನುಕರಿಸಲ್ಲ... ಆದರೆ... ಶಿವರಾಜ್ಕುಮಾರ್ ಓಪನ್ ಮಾತು
ನಿರ್ದೇಶಕ ಪಿ.ಎಚ್.ವಿಶ್ವನಾಥ್ ಅವರು ಛಾಯಾ ಅವರಿಗೆ ಆಫರ್ ಕೊಟ್ಟಿದ್ದರು. ಆಗಿನ್ನೂ ಚಿಕ್ಕವರಾಗಿದ್ದ ಛಾಯಾರಿಗೆ ನಟನೆ ಗೊತ್ತೇ ಇರಲಿಲ್ಲ. ಹಲವಾರು ಬಾರಿ ಆಡಿಷನ್ ಮಾಡಿದ್ರೂ ಸರಿಯಾಗಿ ನಟಿಸಲೇ ಇಲ್ವಂತೆ! ಇವಳ್ಯಾಕೋ ತಮಗೆ ಸರಿ ಹೊಂದಲ್ಲ ಎಂದು ರಿಜೆಕ್ಟ್ ಮಾಡಿ ಮನೆಗೆ ಕಳಿಸಿದ್ರಂತೆ. ಆ ದಿನಗಳನ್ನು ನೆನಪಿಸಿಕೊಂಡಿರೋ ಛಾಯಾ, ಆಗ ನನಗೆ ತುಂಬಾ ಬೇಜಾರು ಆಗೋಯ್ತು. ನನಗೆ ಆ್ಯಕ್ಟಿಂಗ್ ಬರಲ್ಲಾ ಅಂತ ಕಳಿಸ್ತೀರಾ, ನೋಡ್ತೇನೆ ಎಂದು ನನಗೆ ನಾನೇ ಚಾಲೆಂಜ್ ಹಾಕಿಕೊಂಡು ಬಿಟ್ಟೆ. ಯಾಕೆ ಬರಲ್ಲ, ಆ್ಯಕ್ಟಿಂಗ್ ಮಾಡಿ ತೋರಿಸ್ತೇನೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ. ಅಲ್ಲಿಂದ ಶುರುವಾದ ನನ್ನ ಜರ್ನಿ ಇಲ್ಲಿಯವರೆಗೆ ಬಂದು ನಿಂತಿದೆ. ಒಂದು ವೇಳೆ ಅಂದು ಪಿ.ಎಚ್.ವಿಶ್ವನಾಥ್ ಅವರು ನಿನಗೆ ಆ್ಯಕ್ಟಿಂಗ್ ಬರಲ್ಲ ಎಂದು ಹೇಳದಿದ್ದರೆ, ನಿಜಕ್ಕೂ ನಾನು ನಿಂತ ನೀರಾಗಿ ಬಿಡ್ತಿದ್ನೋ ಏನೋ. ಅವರ ಮಾತೇ ನನಗೆ ಸ್ಫೂರ್ತಿ ಆಗಿ ಆ್ಯಕ್ಟಿಂಗ್ ಕಲಿತೆ ಎಂದಿದ್ದಾರೆ.
ಹೀಗೆ ಹಲವು ಅವಕಾಶಗಳು ಬಂದವು. ಅನಂತ್ನಾಗ್ ಜೊತೆ ನಟಿಸುವ ಸಮಯದಲ್ಲಿ ಫಸ್ಟ್ ನೈಟ್ ಸೀನ್ನಲ್ಲಿ ನಟ ನಿನ್ನನ್ನು ಮುಟ್ಟಿದಾಗ ಭಯಪಟ್ಟು ನಡುಗಿ ಎದ್ದು ನಿಲ್ಲಬೇಕಿತ್ತು. ಆ ಆ್ಯಕ್ಟಿಂಗ್ ನಾನು ಮಾಡಿದ್ದನ್ನು ನೋಡಿ ಖುದ್ದು ವಿಶ್ವನಾಥ್ ಅವರೇ ಗಾಬರಿ ಬಿದ್ದು ಹೋದರು. ನಾನು ರಿಜೆಕ್ಟ್ ಮಾಡಿದ ಹುಡುಗಿ ನಿಜಕ್ಕೂ ನೀನೇನಾ ಎಂದು ಕೇಳಿದರು. ಅವತ್ತಿನಿಂದಲೂ ಎಲ್ಲರಿಗೂ ನನ್ನದೇ ಉದಾಹರಣೆ ಕೊಟ್ಟು ಛಾಯಾಳನ್ನು ನೋಡಿ ಕಲಿಯಿರಿ ಎನ್ನುತ್ತಿದ್ದರು. ಅದು ನನಗೆ ಇನ್ನಷ್ಟು ಸ್ಫೂರ್ತಿ ತುಂಬಿತು. ನನಗೆ ಕೊನೆಗೆ ಅವರ ಚಿತ್ರಗಳಲ್ಲಿಯೂ ಹಲವು ಆಫರ್ಗಳು ಸಿಕ್ಕವು ಎಂದಿದ್ದಾರೆ ಛಾಯಾ. ಅಂದಹಾಗೆ ಛಾಯಾ ಅವರು, ಕನ್ನಡ ಮಾತ್ರವಲ್ಲದೇ ಮಲಯಾಳು, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ, ಈಗಲೂ ನಟಿಸುತ್ತಿದ್ದಾರೆ. ಅವರಿಗೆ ಈಗ 43 ವರ್ಷ ವಯಸ್ಸು. ಆದರೂ ಫಿಟ್ನೆಸ್ ಮತ್ತು ಸೌಂದರ್ಯ ಕಾಪಾಡಿಕೊಂಡಿರುವ ನಟಿ ಇನ್ನೂ ಯಂಗ್ ಆಗಿಯೇ ಕಾಣಿಸುತ್ತಾರೆ. ತಮಿಳಿನ 'ತುಂಟಾಟ' ಚಿತ್ರ, ಧನುಷ್ ಜೊತೆ 'ತಿರುಡಾ ತಿರುಡಿ' ಸಿನಿಮಾ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ಮಫ್ತಿ ಸಿನಿಮಾದಲ್ಲಿ ಶಿವರಾಜ್ಕುಮಾರ್ ತಂಗಿಯಾಗಿ ನಟಿಸಿದ್ದಾರೆ. ಕನ್ನಡದ 'ಖಾಕಿ' ಸಿನಿಮಾದಲ್ಲಿಯೂ ನಟಿಸಿದ್ದಾರೆ. ಬಂಗಾಳಿ ಭಾಷೆಯಲ್ಲಿ ಕಿ ಕೋರ್ ಬೋಝಭೋ ತೊಮಾಕೆ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ ಕೂಡ. 2012ರಲ್ಲಿ ಛಾಯಾ ತಮಿಳು ನಟ ಕೃಷ್ಣ ಅವರ ಜೊತೆ ಮದುವೆಯಾಗಿದ್ದಾರೆ.
ನೀವ್ ಬೇಡ, ಅವ್ಳೇ ಬೇಕು ಅಂತ ಹೊರಟೇ ಹೋದ, ಈಗ ನೋಡಿ... 'ಮುಖ್ಯಮಂತ್ರಿ' ಚಂದ್ರು ಪತ್ನಿ ಮನದ ಮಾತು...