ಕನ್ನಡ ಹುಟ್ಟಿದ್ದು ತಮಿಳಿಂದ ಎಂದು ತಮ್ಮೆದುರೇ ಹೇಳಿದ್ದ ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಯ ಬಗ್ಗೆ ಶಿವರಾಜ ಕುಮಾರ್ ಕೊನೆಗೂ ಮೌನ ಮುರಿದಿದ್ದಾರೆ.
ಬೆಂಗಳೂರು (ಜೂ.01): ಕನ್ನಡ ಹುಟ್ಟಿದ್ದು ತಮಿಳಿಂದ ಎಂದು ತಮ್ಮೆದುರೇ ಹೇಳಿದ್ದ ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಯ ಬಗ್ಗೆ ಶಿವರಾಜ ಕುಮಾರ್ ಕೊನೆಗೂ ಮೌನ ಮುರಿದಿದ್ದಾರೆ. ‘ಅಂದು ಕಮಲ್ ಅವರ ಮಾತು ಸರಿಯಾಗಿ ಕೇಳಿಸದ ಕಾರಣ ಆ ವೇದಿಕೆಯಲ್ಲಿ ಪ್ರತಿಕ್ರಿಯೆ ನೀಡಲಾಗಿರಲಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಕಮಲ್ ಅವರನ್ನು ಸಮರ್ಥನೆ ಮಾಡುತ್ತಿಲ್ಲ, ಕನ್ನಡವೇ ನನ್ನ ಮೊದಲ ಆದ್ಯತೆ’ ಎನ್ನುವ ಮೂಲಕ ಕನ್ನಡಿಗರ ಬೆಂಬಲಕ್ಕೆ ನಿಂತಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಅಣ್ಣಾವ್ರ ಕುಟುಂಬದಿಂದ ಬಂದವನು ನಾನು, ನನ್ನ ಕನ್ನಡ ಪ್ರೇಮದ ಬಗ್ಗೆ ಸ್ಪಷ್ಟನೆ ಕೊಡಬೇಕಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ‘ಕಮಲ ಹಾಸನ್ ಯಾಕೆ ಆ ರೀತಿ ಮಾತನಾಡಿದರು ಅನ್ನುವುದರ ಬಗ್ಗೆ ಅವರನ್ನೇ ಕೇಳಬೇಕು. ಆದರೆ ನಾನು ಯಾವತ್ತೂ ಮಾತೃಭಾಷೆಯ ಪರವಾಗಿ ನಿಲ್ಲುವವನು. ರಾಜ್ಯದ ಜನತೆಗೆ ನಾನೇನು ಅನ್ನುವುದು ಗೊತ್ತು, ಅವರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಎಲ್ಲಾ ಭಾಷೆಗಳ ಬಗ್ಗೆಯೂ ನನಗೆ ಗೌರವ ಇದೆ.
ಆದರೆ ಮಾತೃಭಾಷೆ ಕನ್ನಡಕ್ಕೆ ಯಾವತ್ತೂ ಮೊದಲ ಆದ್ಯತೆ ನೀಡುತ್ತೇನೆ. ಆ ಬಗ್ಗೆ ಅನುಮಾನ ಬೇಡ. ಕನ್ನಡಕ್ಕೆ ನನ್ನ ಜೀವವನ್ನೇ ಬೇಕೆಂದರೂ ನೀಡುತ್ತೇನೆ. ನಾಡು ನುಡಿಯ ಹಿತಕ್ಕೆ ಧಕ್ಕೆಯಾಗುವ ಸಂಗತಿ ನಡೆದಾಗ ಮೊದಲು ನನ್ನ ನೆಲದ ಪರವಾಗಿ ದನಿ ಎತ್ತುವವನು ನಾನು. ಕನ್ನಡಿಗರಿಗೆ ನಾನೇನು ಅನ್ನುವುದು ಗೊತ್ತು’ ಎಂದವರು ಹೇಳಿದ್ದಾರೆ. ‘ಕನ್ನಡಾಭಿಮಾನ ಏನು ಅನ್ನುವುದು ನನಗೂ ಗೊತ್ತಿದೆ. ಅಣ್ಣಾವ್ರ ಕನ್ನಡ ಅಭಿಮಾನ ನಿಮಗೆಲ್ಲರಿಗೂ ಗೊತ್ತೇ ಇದೆ. ನನ್ನ ಬಗ್ಗೆ ಕೇಳಿಬಂದ ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ’ ಎಂದೂ ಶಿವರಾಜ್ ಕುಮಾರ್ ಹೇಳಿದ್ದಾರೆ.
ನಟ ಕಮಲ್ ಹಾಸನ್ ಹೇಳಿಕೆ ತಪ್ಪು: ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾವು ಮಾತನಾಡಬಾರದು. ಬೇರೊಂದು ಭಾಷೆಯ ಜನರ ಭಾವನೆಗಳಿಗೆ ಧಕ್ಕೆಯಾಗುವಂತಿರಬಾರದು. ಭಾಷೆಯ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಕಮಲ್ ಹಾಸನ್ ಹೇಳಿಕೆಯನ್ನು ನಾವು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಮಾಜಿ ಸಂಸದೆ ಸುಮಲತಾ ಹೇಳಿದರು. ಕಮಲ್ ಹಾಸನ್ ಕನ್ನಡದ ವಿಚಾರದಲ್ಲಿ ಆ ರೀತಿ ಮಾತನಾಡಿರುವುದು ತಪ್ಪು. ಅವರು ವ್ಯಕ್ತಪಡಿಸಿರುವ ಅಭಿಪ್ರಾಯದಿಂದ ನಮ್ಮ ಭಾಷೆಗೇನೂ ಧಕ್ಕೆ ಬರುವುದಿಲ್ಲ. ಅವರ ಹೇಳಿಕೆಯನ್ನು ನಾವು ಒಪ್ಪುವುದಕ್ಕೂ ಸಾಧ್ಯವಿಲ್ಲ. ಇದು ನಮ್ಮ ಸ್ಪಷ್ಟ ಅಭಿಪ್ರಾಯ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸಾವಿರಾರು ವರ್ಷಗಳ ಹಿಂದೆ ಯಾವ ಭಾಷೆಯಿಂದ ಯಾವ ಭಾಷೆ ಬಂತು ಅಂತ ನಮಗೆ ಗೊತ್ತಿಲ್ಲ. ನಮಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವುದು ತಪ್ಪು. ಭಾಷೆಯ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ಕಮಲ್ ಹಾಸನ್ ಅವರು ಆ ರೀತಿ ಮಾತನಾಡಬಾರದಿತ್ತು ಎಂದು ನುಡಿದರು. ಕಮಲ್ ಹಾಸನ್ ಚಿತ್ರಗಳನ್ನು ನಿಷೇಧಿಸಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, ಸಿನಿಮಾ ಅನ್ನೊದು ಒಬ್ಬರಿಂದ ಆಗುವುವಂತಹದ್ದಲಲ್ಲ. ನೂರಾರು ಜನ ಸೇರಿದರೆ ಮಾತ್ರ ಸಿನಿಮಾ ಆಗಲು ಸಾಧ್ಯ. ಸಿನಿಮಾ ಅಂದಮೇಲೆ ಕನ್ನಡ, ತಮಿಳು, ತೆಲುಗು ಎಲ್ಲರೂ ಇರುತ್ತಾರೆ. ಒಬ್ಬರಿಂದ ಸಿನಿಮಾಗೆ ಅನ್ಯಾಯ ಮಾಡಬೇಕಾ ಎಂಬ ಬಗ್ಗೆ ಯೋಚನೆ ಮಾಡಬೇಕು. ಈ ವಿಚಾರವನ್ನು ನಾನು ವಿವಾದ ಮಾಡುವುದಿಲ್ಲ. ಜನರ ಭಾವನೆಗೆ ಧಕ್ಕೆಯಾದರೆ ಜನರೇ ಎದ್ದು ನಿಲ್ಲುತ್ತಾರೆ. ಕಮಲ್ ಹಾಸನ್ ಕ್ಷಮೆಯಾಚಿಸಿದ್ದರೆ ಸರಿ ಇರುತ್ತಿತ್ತು ಎಂದರು.
