ಭುವನ್​ ಪೊನ್ನಣ್ಣ ಅವರನ್ನು ಅಂಕಲ್​ ಎಂದು ತಿಳಿದಿದ್ದ ಹರ್ಷಿಕಾ ಪೂಣಚ್ಚ ಅವರು ಅಂಕಲ್​ ಎಂದೇ ಕರೆದು ಆಮೇಲೆ ಆದ ಎಡವಟ್ಟಿನ ಬಗ್ಗೆ ಕುತೂಹಲದ ಘಟನೆಯನ್ನು ಮೆಲುಕು ಹಾಕಿದ್ದಾರೆ. 

ನಟ, ಕೋರಿಯೋಗ್ರಾಫರ್​ ಭುವನ್​ ಪೊನ್ನಣ್ಣ ಜೊತೆ ಕಳೆದ ವರ್ಷ ಹಸೆಮಣೆ ಏರಿರುವ ನಟಿ ಹರ್ಷಿಕಾ ಪೂಣಚ್ಚ ಈಗ ತುಂಬು ಗರ್ಭಿಣಿ. ಮುಂದಿನ ತಿಂಗಳು ಅಂದರೆ ಅಕ್ಟೋಬರ್​ನಲ್ಲಿ ಅವರ ಹೆರಿಗೆ ಆಗಲಿದೆ ಎಂದು ಇದಾಗಲೇ ತಿಳಿಸಿದ್ದಾರೆ ದಂಪತಿ. ಈಚೆಗಷ್ಟೇ ವಿಭಿನ್ನ ರೀತಿಯಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡು ಮಗುವಿನ ಆಗಮನಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದರು. ಚಿತ್ರನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ ದಂಪತಿ ಮೊನ್ನೆಯಷ್ಟೇ ಹರ್ಷಿಕಾ ಅವರಿಗೆ ತಮ್ಮ ನಿವಾಸದಲ್ಲಿ ಸೀಮಂತ ಮಾಡಿದ್ದರು. ಅಂದಹಾಗೆ ಹರ್ಷಿಕಾ‌ ಮತ್ತು ಭುವನ್ ಪೊನ್ನಣ್ಣ ಅನೇಕ ವರ್ಷಗಳಿಂದ ಸ್ನೇಹಿತರಾಗಿದ್ದವರು, 2023ರ ಆಗಸ್ಟ್‌ 24ರಂದು ವಿರಾಜಪೇಟೆಯ ಅಮ್ಮತ್ತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ತಮ್ಮ ಮತ್ತು ಭುವನ್​ ಪೊನ್ನಣ್ಣ ಅವರ ಕುತೂಹಲದ ಲವ್​ ಸ್ಟೋರಿಯನ್ನು ಸಂದರ್ಶನವೊಂದರಲ್ಲಿ ನಟಿ ತೆರೆದಿಟ್ಟಿದ್ದಾರೆ. ಭುವನ್​ ಅವರನ್ನು ಮೊದಲ ಬಾರಿಗೆ ಅರಿಯದೇ ಅಂಕಲ್​ ಎಂದ ಕುತೂಹಲದ ವಿಷಯವನ್ನು ಹೇಳಿರುವ ನಟಿ, ಆ ತಪ್ಪಿಗೆ ಏನಾಯ್ತು ಎಂಬುದನ್ನೂ ತಿಳಿಸಿದ್ದಾರೆ. ಇದನ್ನು ಮೆಟ್ರೋಸಾಗಾ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾಗಿದೆ. ಭುವನ್​ ಅವರನ್ನು ಮೊದಲ ಬಾರಿಗೆ ಮೀಟ್​ ಆದಾಗ ಏನು ಅನ್ನಿಸ್ತು ಎನ್ನುವ ಪ್ರಶ್ನೆಗೆ ಹರ್ಷಿಕಾ ಅವರು, ಜೋರಾಗಿ ನಗುತ್ತಾ ಮೊದಲ ಬಾರಿಗೆ ಭುವನ್​ ಅವರನ್ನು ಭೇಟಿಯಾಗಿದ್ದು ತುಂಬಾ ತುಂಬಾ ಫನ್ನಿಯಾಗಿದೆ ಎಂದರು. ಅದರ ಬಗ್ಗೆ ವಿವರಿಸಿದ ನಟಿ, 'ನನ್ನ ಅಂಕಲ್​ ಕಾಲ್​ ಮಾಡಿ ಒಂದು ಫ್ಯಾಷನ್​ ಷೋ ಮಾಡ್ತಾ ಇದ್ದೇವೆ. ಇಂಟರ್​ನ್ಯಾಷನಲ್​ ಫ್ಯಾಷನ್​ ಕೋರಿಯೋಗ್ರಾಫರ್​ ಒಬ್ಬರು ನಿಮಗೆ ಕೋರಿಯೋಗ್ರಾಪ್​ ಮಾಡ್ತಾರೆ. ಅವರು ಕೂಡ ಕೊಡವನೇ ಅಂತ ಹೇಳಿದ್ರು. ನಾನು ಓಕೆ ಅಂದೆ. ನನ್ನ 60 ವರ್ಷದ ಅಂಕಲ್​ ಫೋನ್​ ಮಾಡಿ, ಒಬ್ಬರು ಇಂಟರ್​ನ್ಯಾಷನಲ್​ ಲೆವೆಲ್​ ಕೋರಿಯೋಗ್ರಾಫರ್​ ಫೋನ್​ ಮಾಡ್ತಾರೆ ಎಂದಾಗ ಎಲ್ಲರಿಗೂ ಏನು ಅನಿಸತ್ತಪ್ಪ, ಅವರು ಕೂಡ ಒಬ್ಬರು ಅಂಕಲ್ಲೇ ಇರ್ಬೋದು ಎಂದು. ಆಮೇಲೆ ಅಲ್ಲಿಂದ ಕಾಲ್​ ಬಂತು, ಹರ್ಷಿಕಾ ಪೂಣಚ್ಚ ಅವ್ರು ಮಾತಾಡೋದಾ ಕೇಳಿದ್ರು. ನಾನು ಹೌದು ಅಂಕಲ್​ ಹೇಳಿ ಅಂದೆ. ಆಗ ಅತ್ತ ಕಡೆಯ ವಾಯ್ಸ್​ ಪಾಸ್​ ಆಗೋಯ್ತು. ಆದರೆ ನನಗೆ ಅರ್ಥ ಆಗ್ಲಿಲ್ಲ. ನಾನೇ ಕಂಟಿನ್ಯೂ ಮಾಡಿ, ನೀವು ಕಾಲ್​ ಮಾಡ್ತೀರಿ ಅಂತ ಜಯಾ ಅಂಕಲ್​ ಹೇಳಿದ್ರು ನನಗೆ. ಅಂಕಲ್​ ನೀವು ಹೇಳಿದ್ದಲ್ಲಿ ನಾನು ಬರ್ತೇನೆ ಎಂದೆ' ಎನ್ನುತ್ತಲೇ ಆ ದಿನ ನಡೆದ ಘಟನೆಯನ್ನು ನಟಿ ಮೆಲುಕು ಹಾಕಿದ್ದಾರೆ.

ಮಕ್ಕಳನ್ನು ಹ್ಯಾಂಡ್​ಬ್ಯಾಗ್​ನಂತೆ ಬಳಸೋದೆಂಥ ಸಂಸ್ಕೃತಿ? ಐಶ್ವರ್ಯ ರೈಗೆ ಮಾಳವಿಕಾ ಅವಿನಾಶ್​ ಹೇಳಿದ್ದಿಷ್ಟು...

ಅವರು ಆಗ ಓಕೆ ಓಕೆ, ರಿಹರ್ಸಲ್​ಗೆ ಬನ್ನಿ. ಕೊಡವ ಸಮಾಜದಲ್ಲಿ. ನಾನು ವೇಟ್​ ಮಾಡ್ತೇನೆ ಎಂದು ಹೇಳಿ ಫೋನ್​ ಇಟ್ಟರು. ನಾನು ಅಲ್ಲಿ ಹೋದಾಗ, ಆ ಕಡೆಯಿಂದ ಮಾಡೆಲ್​ ರೀತಿಯಲ್ಲಿ ಒಬ್ಬ ಸುಂದರ ಬರ್ತಾ ಇದ್ರು. ನಾನೇನೋ ಇವ್ರು ಮಾಡೆಲ್​ ಇರ್ಬೇಕು ಅಂದುಕೊಂಡು ಸುಮ್ಮನಾದೆ. ಆಮೇಲೆ ಅವ್ರೇ ಬಂದು ಹಲೋ ನಾನು ಭುವನ್​ ಪೊನ್ನಣ್ಣ ಎಂದು ಹೇಳಿದಾಗ ಶಾಕ್​ ಆಗೋಯ್ತು. ಏಕೆಂದ್ರೆ ನನ್ನ ಅಂಕಲ್​ ಅವರ ಹೆಸರು ಹೇಳಿದ್ರು. ಇವ್ರನ್ನೇ ನಾನು ಅಂಕಲ್​ ಎಂದು ಕರೆದುಬಿಟ್ನಾ ಎಂದು ಕಂಗಾಲಾಗಿ ಹೋಗಿ ಏನು ಹೇಳಬೇಕು ಎಂದೇ ತಿಳಿಯಲಿಲ್ಲ ಎಂದು ಮೊದಲ ಬಾರಿ ಭುವನ್​ ಅವರನ್ನು ಮೀಟ್​ ಆಗಿರೋ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ನಾನು ಅಂಕಲ್​ ಎಂದು ಕರೆದ ರಿವೇಂಜ್​ ತೀರಿಸಿಕೊಳ್ಳಲು 22 ಸಲ ನನ್ನನ್ನು ನಡೆಸಿದರು. ಅದೇ ಮೊದಲು ನಾನು ನನ್ನ ಗಂಡನನ್ನು ಮೀಟ್​ ಆಗಿದ್ದು ಎಂದಿದ್ದಾರೆ ಹರ್ಷಿಕಾ.


ಅಂದಹಾಗೆ, ಹರ್ಷಿಕಾ ಅವರ ಮೂಲ ಕೊಡುಗು ಜಿಲ್ಲೆಯ ಒಂದು ಚಿಕ್ಕಹಳ್ಳಿ ಅಮ್ಮತಿ. ಓದಿದ್ದೆಲ್ಲಾ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ. ಪಿಯುಸಿಯಲ್ಲಿ ಇರುವಾಗಲೇ ಕೊಡವ ಭಾಷೆಯ ಚಲನಚಿತ್ರ ಪೊನ್ನಮ್ಮ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಕೊಂಕಣಿ ಚಲನಚಿತ್ರ ಕಜರ್, ತೆಲುಗು ಚಲನಚಿತ್ರ ಎಡುಕೊಂಡಲವಾಡ ವೆಂಕಟರಮಣ ಅಂಡಾರು ಬಾಗುಂಡಲಿಯಲ್ಲಿ ನಟಿಸಿದರು. ಕನ್ನಡದಲ್ಲಿ ಅವರು ಮೊದಲು ಪದಾರ್ಪಣೆ ಮಾಡಿದ್ದು 2010ರಲ್ಲಿ. ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಜಾಕಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ಇದು ಅವರಿಗೆ ಬ್ರೇಕ್​ ಕೊಟ್ಟಿತು. ಬಳಿಕ ಶಿವರಾಜ್‌ಕುಮಾರ್ ಅವರೊಂದಿಗೆ ಥಮಸ್ಸು ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ ಕೆಲವು ಚಿತ್ರಗಳಲ್ಲಿ ನಟಿಸಿರೋ ನಟಿಗೆ ಈಗ 31 ವರ್ಷ ವಯಸ್ಸು ಹಾಗೂ ಭುವನ್​ ಅವರಿಗೆ 34 ವರ್ಷ ವಯಸ್ಸು. 

ಬ್ರೆಡ್​ಗಾಗಿ ಅಂಗಡಿಗೆ ಹೋದಾಕೆ ವಾಪಸಾದಾಗ ಅದೇ ಕಂಪೆನಿಗೆ ಬ್ರ್ಯಾಂಡ್​ ಅಂಬಾಸಿಡರ್​! ಬಾಲೆಯ ರೋಚಕ ಕಥೆ ಕೇಳಿ

View post on Instagram