'ಗೆಜ್ಜೆ ನಾದ' ನಟಿ ಈಗ ಹೇಗಿದ್ದಾರೆ, ಏನ್ಮಾಡ್ತಿದ್ದಾರೆ? ಮತ್ತೆ ಬಣ್ಣ ಹಚ್ಚುವ ಆಸೆ ಇಟ್ಟುಕೊಂಡಿರುವ ಶ್ವೇತಾ ಸಾಕಷ್ಟು ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.
ಚೈತ್ರದ ಪ್ರೇಮಾಂಜಲಿ, ಗೆಜ್ಜೆ ನಾದ, ಕರ್ಪೂರದ ಗೊಂಬೆ ಸೇರಿದಂತೆ ಅನೇಕ ಎವರ್ ಗ್ರೀನ್ ಸಿನಿಮಾಗಳಲ್ಲಿ ನಟಿಸಿರುವ ನಟಿ ಶ್ವೇತಾ ಈಗ ಎಲ್ಲಿದ್ದಾರೆ, ಎನ್ಮಾಡುತ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಸಿನಿಮಾರಂಗದಿಂದ ದೂರ ಆಗಿರುವ ನಟಿ ಶ್ವೇತಾ ಎಲ್ಲೋದ್ರು ಎನ್ನುವ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ಅನೇಕ ವರ್ಷಗಳ ಬಳಿಕ ನಟಿ ಶ್ವೇತಾ ಕನ್ನಡ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಅದಕ್ಕೆ ಕಾರಣ ನಟ ರಘುರಾಮ್. ಹೌದು ರಘುರಾಮ್ ಅವರ ಯೂಟ್ಯೂಬ್ ವಾಹಿನಿಗೆ ಶ್ವೇತಾ ಸಂದರ್ಶನ ನೀಡಿದ್ದಾರೆ. ಇದು ಶ್ವೇತಾ ಅವರ ಮೊದಲ ಕನ್ನಡ ಸಂದರ್ಶನವಾಗಿದ್ದು, ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಸಿನಿಮಾರಂಗದಿಂದ ದೂರ ಆಗಿದ್ದೇಕೆ, ಸದ್ಯ ಎಲ್ಲಿದ್ದಾರೆ ಎನ್ನುವ ಎಲ್ಲಾ ವಿಚಾರಗಳನ್ನು ನಟಿ ಶ್ವೇತಾ ಬಹಿರಂಗ ಪಡಿಸಿದ್ದಾರೆ.
ಶ್ವೇತಾ ಸದ್ಯ ಚೆನ್ನೈನಲ್ಲಿ ನೆಲೆಸಿದ್ದಾರೆ. ಪತಿ ಮತ್ತು ಇಬ್ಬರೂ ಮಕ್ಕಳ ಜೊತೆ ಶ್ವೇತಾ ಕುಟುಂಬ ನಡೆಸುತ್ತಿದ್ದಾರೆ. ಮದುವೆಯಾದ ಬಳಿಕ ಸಿನಿಮಾರಂಗಕ್ಕೆ ಗುಡ್‌ಬೈ ಹೇಳಿರುವ ನಟಿ ಮತ್ತೆ ಚಿತ್ರರಂಗಕ್ಕೆ ಮರಳುವ ಆಸೆಯಲ್ಲಿದ್ದಾರೆ. ಮಕ್ಕಳಾದ ಬಳಿಕ ಸಮಯ ಇರಲ್ಲ, ಕುಟುಂಬದ ಕಡೆ ಸಿಕ್ಕಾಪಟ್ಟೆ ಗಮನ ಕೊಡಬೇಕು, ಬ್ಯುಸಿಯಾದೆ ಹಾಗಾಗಿ ಸಿನಿಮಾರಂಗದಿಂದ ದೂರ ಆದೆ ಎಂದು ಶ್ವೇತಾ ಬಹಿರಂಗ ಪಡಿಸಿದರು. ಶ್ವೇತಾ ಅನೇಕ ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.
ವಿನೋದಿನಿ ಶ್ವೇತಾ ಆಗಿದ್ದು ಹೇಗೆ?
ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟಿ ಶ್ವೇತಾ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚಿರುವ ಶ್ವೇತಾ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಚೆನ್ನೈನಲ್ಲಿ ಹುಟ್ಟಿ ಬೆಳೆದ ನಟಿ ಶ್ವೇತಾ ಅವರ ಮೂಲ ಹೆಸರು ಲಕ್ಷ್ಮೀ. ವಿನೋದಿನಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದರೆ ಕನ್ನಡಕ್ಕೆ ವಿನೋದಿನಿ ಶ್ವೇತಾ ಆಗಿ ಪರಿಚಯವಾದರು. ನಿರ್ದೇಶಕ ಎಸ್ ನಾರಾಯಣ್ ಅವರು ಶ್ವೇತಾ ಎಂದು ನಾಮಕರಣ ಮಾಡಿದರು. ಬಳಿಕ ಕನ್ನಡದಲ್ಲಿ ಶ್ವೇತಾ ಅಗಿಯೇ ಖ್ಯಾತಿಗಿಸಿದರು.
ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟನೆ
ಚೈತ್ರದ ಪ್ರೇಮಾಂಜಲಿ ಮೂಲಕ ಕನ್ನಡಕ್ಕೆ ಕಾಲಿಟ್ಟ ನಟಿ ಶ್ವೇತಾ ಬಳಿಕ ಗೆಜ್ಜೆ ನಾದ, ಕರ್ಪೂರದ ಗೊಂಬೆ , ಮಿನುಗು ತಾರೆ, ಲಕ್ಷ್ಮೀ ಮಹಾಲಕ್ಷ್ಮಿ ಸೇರಿದಂತೆ ಕೋಟಿಗೊಬ್ಬ, ಕುಟುಂಬ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದರು. ನಟಿ ಶ್ವೇತಾ ನಟಿಸಿದ್ದ ಬಹುತೇಕ ಕನ್ನಡ ಸಿನಿಮಾಗಳು ಸೂಪರ್ ಹಿಟ್. ಹಾಗಾಗಿಯೇ ಶ್ವೇತಾ ಅವರನ್ನು ಲಕ್ಕಿ ನಾಯಕಿ ಎಂದೇ ಕರೆಯುತ್ತಿದ್ದರು.
ಮತ್ತೆ ಚೈತ್ರದ ಪ್ರೇಮಾಂಜಲಿ ಯಾವಾಗ ಎಂದು ನಿರೂಪಕ ರಘುರಾಮ್ ಕೇಳಿದಾಗ ನಾಯಕ ರಘುವೀರ್ ಇಲ್ಲ, ಅವರನ್ನು ತುಂಬಾ ಮಿಸ್ ಮಾಡಿ ಕೊಳ್ಳುತ್ತೀವಿ, ತುಂಬಾ ಒಳ್ಳೆಯ ವ್ಯಕ್ತಿ ಎಂದು ಹೇಳಿದರು. ಬಳಿಕ ಮೊದಲ ಸಿನಿಮಾದ ಬಗ್ಗೆ ಮಾತನಾಡಿದರು. ಸಿನಿಮಾಗೆ ಹಣದ ಸಮಸ್ಯೆಯಾಗಿತ್ತು. ಬಳಿಕ ರಘವೀರ್ ಹೇಗೋ ನಿಭಾಯಿಸಿಕೊಂಡು ಮಾಡಿದರು ಎನ್ನುವ ಸತ್ಯ ಬಹಿರಂಗ ಪಡಿಸಿದರು. ಗೆಜ್ಜೆ ನಾದ ಸಿನಿಮಾ, ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಕೋಟಿಗೊಬ್ಬ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದರು.
ಮೈಸೂರು ಹುಡುಗನ ಜೊತೆ ಮದುವೆ
ಚೆನ್ನೈ ಮೂಲದ ನಟಿ ಶ್ವೇತಾ ಮೈಸೂರು ಮೂಲದ ಬಿಲ್ಡರ್ ಶ್ರೀಧರ್ ಜೊತೆ ಮದುವೆಯಾದರು. 2009ರಲ್ಲಿ ಇಬ್ಬರೂ ಮದುವೆಯಾಗಿ ಚೆನ್ನೈನಲ್ಲಿ ನೆಲೆಸಿದರು. ಶ್ವೇತಾ ಅವರಿಗೆ ಇಬ್ಬರೂ ಮಕ್ಕಳು. ಮಗ ಲಲಿತ್ ಅತಿಥ್ಯ 7ನೇ ತರಗತಿ ಓದುತ್ತಿದ್ದಾರೆ, ಮಗಳು ವೇತಾಶ್ರೀ 4ನೇ ತರಗತಿ ಓದುತ್ತಿದ್ದಾರೆ. ಮಕ್ಕಳು ಈಗ ದೊಡ್ಡವರಾಗಿದ್ದಾರೆ. ಹಾಗಾಗಿ ಮಕ್ಕಳು ಸಹ ಯಾಕೆ ನಟನೆ ಮಾಡಬಾರದು ಎಂದು ಹೇಳುತ್ತಿದ್ದಾರೆ. ಉತ್ತಮ ಪಾತ್ರ ಸಿಕ್ಕಿದರೆ ಖಂಡಿತ ಕನ್ನಡ ಸಿನಿಮಾ ಮಾಡುತ್ತೇನೆ ಎಂದು ಶ್ವೇತಾ ಹೇಳಿದರು. ಇದೀಗ ಮತ್ತೆ ನಟನೆಗೆ ಮರಳುವ ಆಸೆ ಇಟ್ಟುಕೊಂಡಿರುವ ನಟಿ ಶ್ವೇತಾ ಜೊತೆಗೆ ಹ್ಯಾಂಡ್‌ಮೇಡ್ ಶಾಪ್ ತೆರೆಯಬೇಕೆಂದು ಹೇಳಿದ್ದಾರೆ.
ಪತಿಗೆ ಆಕ್ಸಿಡೆಂಟ್ ಆಗಿತ್ತು. ವೀಲ್ ಚೇರ್ ನಲ್ಲಿ ಇದ್ದರು. ಅದನ್ನು ನೋಡಿ ಅನೇಕರು ಸಹಾಯ ಬೇಕಾ, ಹಣ ಬೇಕಾ ಎಂದು ಅನೇಕರು ಕೇಳುತ್ತಿದ್ದರು. ಇನ್ನೂ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾರೆ, ಅದಕ್ಕೆ ತುಂಬಾ ಧನ್ಯವಾದಗಳು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ನಟಿ ಶ್ವೇತಾ ಮತ್ತೆ ಕನ್ನಡ ಸಿನಿಮಾಗಳಲ್ಲಿ ಮಿಂಚಲಿದ್ದಾರೆ.
