Asianet Suvarna News Asianet Suvarna News

ಚಿತ್ರಮಂದಿರ ತೆರೆಯುವುದು ಸುಲಭವಿಲ್ಲ,ಚಿತ್ರರಂಗಕ್ಕೆ ಇನ್ನೂ ಮುಂದುವರಿದಿದೆ ಕಷ್ಟಗಳು!

ಜೂ.21ರಿಂದ ಲಾಕ್‌ಡೌನ್ ಸಡಿಲಗೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಕಿರುತೆರೆಯಲ್ಲಿ ಶೂಟಿಂಗ್ ಸಂಭ್ರಮ ಆಗಲೇ ಮನೆ ಮಾಡಿದೆ. ರಿಯಾಲಿಟಿ ಶೋಗಳು ಸೆಟ್‌ಗೆ ಹೋಗುತ್ತಿವೆ. ಆದರೆ, ಇತ್ತ ಶೂಟಿಂಗ್ ಮುಗಿಸಿರುವ ಸಿನಿಮಾಗಳು ಯಾವಾಗ ತೆರೆಗೆ ಬರಲಿವೆ, ಚಿತ್ರಮಂದಿರಗಳು ಬಾಗಿಲು ತೆರೆಯುವುದು ಎಂದು ಎಂಬುದರ ಲೆಕ್ಕಾಚಾರ ಇಲ್ಲಿದೆ.
 

Film theatres in Karnataka undergoes major financial crises vcs
Author
Bangalore, First Published Jun 18, 2021, 2:40 PM IST

ಲಾಕ್‌ಡೌನ್ ಸಡಿಲಗೊಳ್ಳುತ್ತಿದೆ. ಈಗಾಗಲೇ ಕೆಲವರು ಶೂಟಿಂಗ್‌ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಿರುತೆರೆಯಲ್ಲಿ ಆಗಲೇ ಚಿತ್ರೀಕರಣ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿದೆ. ಹಾಗಾದರೆ ಚಿತ್ರಮಂದಿರಗಳ ಕತೆ ಏನು, ಯಾವಾಗ ಥಿಯೇಟರ್‌ಗಳು ಪ್ರಾರಂಭ ಆಗಬಹುದು, ಚಿತ್ರಮಂದಿರಗಳ ಬಾಗಿಲು ತೆಗೆದರೆ ಸಿನಿಮಾಗಳು ಬಿಡುಗಡೆಗೆ ಮನಸು ಮಾಡುತ್ತವೆಯೇ ಎಂಬುದು ಸದ್ಯದ ಕುತೂಹಲ.

ಆದರೆ, ಕೊರೋನಾ ಎರಡನೇ ಅಲೆಗೆ ಸಿಕ್ಕಿರುವ ಚಿತ್ರರಂಗ ಈ ಬಾರಿ ಸರ್ಕಾರ ಅನುಮತಿ ಕೊಟ್ಟ ಕೂಡಲೇ ಚಿತ್ರಮಂದಿರಗಳು ಬಾಗಿಲು ತೆರೆಯುವುದು ಅಷ್ಟು ಸುಲಭ ಇಲ್ಲ ಎತ್ತಿದ್ದಾರೆ ಪ್ರದರ್ಶಕರು. ಕೊರೋನಾ ಮೊದಲನೇ ಅಲೆಯಿಂದಲೂ ಪ್ರದರ್ಶಕರು ಸಾಕಷ್ಟು ಬೇಡಿಕೆಗಳನ್ನು ಮುಂದಿಟ್ಟುಕೊಂಡೇ ಬರುತ್ತಿದ್ದರು. ಆದರೆ, ಅವರ ಯಾವ ಬೇಡಿಕೆಗಳು ಇದುವರೆಗೂ ಪೂರೈಕೆ ಆಗಿಲ್ಲ. ಸಿನಿಮಾ ಪ್ರದರ್ಶನ ಇಲ್ಲದಿದ್ದಾಗಲೂ ಆಸ್ತಿ ತೆರಿಗೆ, ವಿದ್ಯುತ್, ನೀರಿನ ಬಿಲ್ಲು ಅಂತಲೇ ಸಾವಿರಾರು ರೂಪಾಯಿ ವೆಚ್ಚ ಮಾಡಿದ್ದಾರೆ. ಎಲ್ಲಾ ವಹಿವಾಟುಗಳು ಬಂದ್ ಆಗಿದ್ದಾಗಲೂ ಚಿತ್ರಮಂದಿರಗಳ ವೆಚ್ಚಕ್ಕೆ ಮಾತ್ರ ಯಾವುದೇ ರಿಯಾತಿ ಸಿಕ್ಕಿಲ್ಲ. ಮತ್ತೊಂದು ಕಡೆ ದೊಡ್ಡ ಚಿತ್ರಗಳು ಶೇಕಡವಾರು ಪದ್ಧತಿಯಲ್ಲಿ ತೆರೆ ಕಾಣಲು ಸಿದ್ಧವಿಲ್ಲ. ಚಿಕ್ಕ ಸಿನಿಮಾಗಳು ಶೇಕಡವಾರು ಪದ್ಧತಿಯಲ್ಲಿ ಬಂದರೂ ಪ್ರಯೋಜನ ಇಲ್ಲ.

ಲಾಕ್‌ಡೌನ್ ಎಫೆಕ್ಟ್: ಮೈಸೂರಿನಲ್ಲಿ ಪ್ರದರ್ಶನ ನಿಲ್ಲಿಸಿದ ಲಕ್ಷೀ ಚಿತ್ರಮಂದಿರ! 

ಪ್ರದರ್ಶಕರ ಕಷ್ಟ ನೂರಾರಿವೆ

ಕೊರೋನಾ ಆರಂಭವಾದಾಗಿನಿಂದಲೂ ಇಂಥ ಸಂಕಷ್ಟದಲ್ಲೇ ಸಿಕ್ಕಿಕೊಂಡಿರುವ ಚಿತ್ರಮಂದಿರಗಳ ಪಾಲಿಗೆ ಸದ್ಯದಲ್ಲೇ ಬಿಡುಗಡೆಯ ಬಾಗಿಲು ತೆರೆದರೂ ತೆರೆ ಮೇಲೆ ಸಿನಿಮಾ ಮೂಡಿಸುವುದು ಕಷ್ಟ ಎಂಬುದು ಪ್ರದರ್ಶಕರ ವಲಯದಿಂದ ಕೇಳಿ ಬರುತ್ತಿರುವ ಮಾತು. ‘ಈ ಬಾರಿ ಚಿತ್ರಮಂದಿರಗಳು ಬಾಗಿಲು ತೆರೆಯುವುದು ಅಷ್ಟು ಸುಲಭವಾಗಿಲ್ಲ. ಏಳೆಂಟು ತಿಂಗಳುಗಳಿಂದ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಮತ್ತೆ ತೆರೆಯಬೇಕು ಎಂದರೆ ಸಾಕಷ್ಟು ಸಿದ್ಧತೆಗಳು ಬೇಕು. ಸರ್ಕಾರ ಇದುವರೆಗೂ ಯಾವುದೇ ಸೌಲಭ್ಯ ಕೊಟ್ಟಿಲ್ಲ. ಎಷ್ಟು ಸಿನಿಮಾಗಳು ತೆರೆಗೆ ಬರಲು ತಯಾರಿವೆ ಎನ್ನುವ ಸಷ್ಟತೆ ಇಲ್ಲ. ಇಂಥ ಸಂದರ್ಭದಲ್ಲಿ ಥಿಯೇಟರ್‌ಗಳು ತೆಗೆಯುವುದು ಹೇಗೆ?’ ಎಂಬುದು ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಅವರ ಪ್ರಶ್ನೆ.

ಸರ್ಕಾರ ಕೊಡಬಹುದಾದ ಸೌಲಭ್ಯಗಳು, ನಿರ್ಮಾಪಕರ ಪೊ್ರೀತ್ಸಾಹ, ದೊಡ್ಡ ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆ, ಎಷ್ಟು ಚಿತ್ರಗಳು ಬರಲಿವೆ ಎಂಬುದರ ಮೇಲೆ ಚಿತ್ರಮಂದಿರಗಳು ಬಾಗಿಲು ತೆರೆಯುವ ವಿಚಾರ ನಿಂತಿದೆ. ಈ ನಿಟ್ಟಿನಲ್ಲಿ ಜೂ.21 ಪ್ರದರ್ಶಕರ ಸಂಘದ ಮೊದಲ ಹಂತದ ಸಭೆ ಕರೆಯುತ್ತಿದ್ದೇವೆ. ಇಲ್ಲಿ ಎಲ್ಲಾ ವಿಚಾರಗಳನ್ನು ಮಾತನಾಡಿದ ನಂತರವೇ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಿದ್ದೇವೆ.- ಕೆ.ವಿ. ಚಂದ್ರಶೇಖರ್

ಮತ್ತೊಂದು ಕಡೆ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆ ಸಿದ್ಧವಾಗಿದ್ದರೂ ಅವು ಬಿಡುಗಡೆ ದಿನಾಂಕ ಘೋಷಣೆ ಮಾಡಿಲ್ಲ. ಒಂದೆರಡು ಚಿತ್ರಗಳನ್ನು ನಂಬಿಕೊಂಡು ಚಿತ್ರಮಂದಿರಗಳು ಬಾಗಿಲು ತೆರೆಯುವ ಪರಿಸ್ಥಿತಿ ಇಲ್ಲ ಎಂಬುದೇ ಪ್ರದರ್ಶಕರ ಗಟ್ಟಿ ನಿಲುವು. ಮೊದಲನೇ ಅಲೆ ನಂತರ ಜನ ದೊಡ್ಡ ಪ್ರಮಾಣದಲ್ಲಿ ಗುಂಪು ಸೇರಿದ್ದಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಯಿತು ಎನ್ನುತ್ತಿದ್ದಾರೆ. ಅಲ್ಲದೆ ಕೊರೋನಾ ಎರಡನೇ ಅಲೆಯಲ್ಲಿ ಅತಿ ಹೆಚ್ಚು ಸಾವು- ನೋವುಗಳನ್ನು ಕಂಡಿದ್ದೇವೆ. ಹೀಗಾಗಿ ಚಿತ್ರಮಂದಿರಗಳು ಬಾಗಿಲು ತೆರೆದ ಕೂಡಲೇ ನಿರ್ಮಾಪಕರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳು ಕಡಿಮೆ. ಹೇಗೋ ತಮ್ಮ ಸಿನಿಮಾ ಚಿತ್ರಮಂದಿರಗಳಿಗೆ ಬಂದರೆ ಸಾಕು ಎನ್ನುವ ಪರಿಸ್ಥಿತಿ ಎದುರಿಸುತ್ತಿರುವ ಚಿತ್ರಗಳು ಮೊದಲ ಹಂತದಲ್ಲಿ ತೆರೆ ಕಾಣಬಹುದೇ ಹೊರತು, ದೊಡ್ಡ ಹಾಗೂ ಬಹು ನಿರೀಕ್ಷೆಯ ಚಿತ್ರಗಳು ಇನ್ನೂ ಎರಡು ಅಥವಾ ಮೂರು ತಿಂಗಳ ನಂತರವೇ ಬರಲಿವೆ ಎಂಬುದು ನಿರ್ಮಾಪಕರೇ ಹೇಳುವ ಲೆಕ್ಕಾಚಾರ.

ಚಿತ್ರರಂಗದಲ್ಲಿ 1000 ಕೋಟಿ ರೂ. ಲಾಕ್; ಕೋಟಿಗಳ ಗಡಿ ದಾಟಿದ ಸಿನಿಮಾ ನಷ್ಟದ ಲೆಕ್ಕಾಚಾರ! 

ಚಿತ್ರಮಂದಿರಗಳು ಬಾಗಿಲು ತೆರೆದ ಕೂಡಲೇ ಸಿನಿಮಾ ಬಿಡುಗಡೆ ಮಾಡಲಾಗದು. ಶೇ.100 ಸೀಟು ಭರ್ತಿಗೆ ಅವಕಾಶ ಕಲ್ಪಿಸಬೇಕು. ಶೇ.50 ಸೀಟು ಭರ್ತಿ ಷರತ್ತು ಇದ್ದರೆ ದೊಡ್ಡ ಸಿನಿಮಾಗಳಂತೂ ಯಾವುವು ತೆರೆ ಕಾಣಲ್ಲ. ಈ ಸಂಕಷ್ಟ ದೂರ ಆಗಬೇಕು, ಜನ ಕೊರೋನಾ ಭಯದಿಂದ ಆಚೆ ಬರಬೇಕು. ಆಗ ಮಾತ್ರ ಸಿನಿಮಾ ಬಿಡುಗಡೆ ಸಂಭ್ರಮ ಜೋರಾಗುತ್ತದೆ.- ಕೆ.ಪಿ. ಶ್ರೀಕಾಂತ್

ಶೇ.100 ಸೀಟು ಭರ್ತಿಗೆ ಅವಕಾಶ ಸಿಕ್ಕರೆ ಮಾತ್ರ ದೊಡ್ಡ ಸಿನಿಮಾ

‘ನನ್ನ ನಿರ್ಮಾಣದ ‘ಸಲಗ’ ಸೇರಿದಂತೆ ಬಹುತೇಕ ಚಿತ್ರಗಳ ನಿರ್ಮಾಪಕರದ್ದು ಒಂದೇ ನಿಲುವು, ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಕೊಟ್ಟ ಮೇಲೆಯೇ ಬಿಡುಗಡೆ ಮಾಡಬೇಕು ಎಂಬುದು. ಕಳೆದ ಬಾರಿ ಕೊರೋನಾ ಭಯ ಇತ್ತು. ಆದರೆ, ದೊಡ್ಡ ಪ್ರಮಾಣದಲ್ಲಿ ಸಾವುಗಳನ್ನು ನೋಡಿರಲಿಲ್ಲ. ಆದರೆ, ಎರಡನೇ ಅಲೆಯಲ್ಲಿ ಸಾವುಗಳು ದೊಡ್ಡ ಪ್ರಮಾಣದಲ್ಲಿ ಆದವು. ಹೀಗಾಗಿ ಜನ ಕೂಡ ಒಂದೇ ಕಡೆ ಸೇರುವುದು ಕಷ್ಟ. ಇದೆಲ್ಲವನ್ನೂ ನೋಡಿಕೊಂಡೇ ನಾವು ಚಿತ್ರಗಳನ್ನು ಬಿಡುಗಡೆ ಮಾಡುತ್ತೇವೆ’ ಎನ್ನುತ್ತಾರೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್.

Follow Us:
Download App:
  • android
  • ios