* ‘ರಾಬರ್ಟ್‌’ ನಿರ್ಮಾಪಕ ಉಮಾಪತಿ ನನ್ನನ್ನು ಬಳಸಿಕೊಂಡಿದ್ದಾರೆ* ನನ್ನನ್ನು ಬೀದಿಗೆ ತಂದವರನ್ನು ಸುಮ್ಮನೆ ಬಿಡಲ್ಲ: ಅರುಣಾ* ದರ್ಶನ್‌, ಸ್ನೇಹಿತರ ಮಧ್ಯೆ ಒಡಕು ಮೂಡಿಸಲು ಅವರಿಂದ ಯತ್ನ* ಸಂಧಾನ ಮಾಡಿಕೊಂಡಿದ್ದೇವೆಂದರೆ ನಾನೇಗೆ ಸುಮ್ಮನಿರಲಿ?

ಬೆಂಗಳೂರು(ಜು.14): ನಟ ದರ್ಶನ್‌ ಮತ್ತು ಅವರ ಸ್ನೇಹಿತರ ನಡುವೆ ಒಡಕು ಮೂಡಿಸಲು ನಿರ್ಮಾಪಕ ಉಮಾಪತಿ ನನ್ನನ್ನು ಬಳಸಿಕೊಂಡರು. ಇಷ್ಟೆಲ್ಲ ರಾದ್ಧಾಂತಕ್ಕೆ ಆತನೇ ಕಾರಣ. ನನ್ನನ್ನು ಬೀದಿಗೆ ತಂದವರನ್ನು ಸುಮ್ಮನೆ ಬಿಡುವುದಿಲ್ಲವೆಂದು ವಂಚನೆ ಯತ್ನ ಪ್ರಕರಣದ ಆರೋಪಿ ಅರುಣಾ ಕುಮಾರಿ ಕಿಡಿಕಾರಿದ್ದಾರೆ.

ಈ ಸಂಬಂಧ ಖಾಸಗಿ ಸುದ್ದಿವಾಹಿನಿಗಳಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ನನಗೆ ಫೇಸ್‌ಬುಕ್‌ ಮೂಲಕ ಉಮಾಪತಿ ಪರಿಚಯವಾಗಿದ್ದು ನಿಜ. ಈ ಸ್ನೇಹದಲ್ಲಿ ಉಮಾಪತಿ ಅವರೊಂದಿಗೆ ಸಲುಗೆಯಿಂದ ಮಾತನಾಡಿದ್ದೇನೆ ಎಂದರು.

ಬಂಡವಾಳ ಬಯಲು:

ಒಬ್ಬ ಹೆಣ್ಣು ಮಗಳನ್ನು ಕೀಳು ಮಟ್ಟದಲ್ಲಿ ನಡೆಸಿಕೊಳ್ಳುತ್ತಾರಲ್ಲ ಏನೆಂದು ಹೇಳಬೇಕು ಇವರಿಗೆ. ನನ್ನನ್ನು ಬೀದಿಗೆ ತಂದು ನಿಲ್ಲಿಸಿ ನಾವು ಸಂಧಾನ ಮಾಡಿಕೊಂಡಿದ್ದೇವೆ ಅಂದರೆ ನಾನು ಹೇಗೆ ಸುಮ್ಮನೆ ಇರಲಿ. ಎಲ್ಲರ ಬಂಡವಾಳವನ್ನು ಬಯಲುಗೊಳಿಸುತ್ತೇನೆ. ನಾನು ಯಾರಿಗೂ ಮೋಸ ಮಾಡಿಲ್ಲ. ನನ್ನನ್ನು ಬಳಸಿಕೊಂಡಿದ್ದು ನಿರ್ಮಾಪಕ ಉಮಾಪತಿ. ಈ ರಾದ್ಧಾಂತಕ್ಕೆಲ್ಲ ಆತನೇ ಕಾರಣವಾಗಿದ್ದಾನೆ ಎಂದು ಅರುಣಾ ಆಕ್ರೋಶ ವ್ಯಕ್ತಪಡಿಸಿದರು.

ನಾನು ಎಲ್ಲರ ಬಗೆ ತಿಳಿದುಕೊಂಡು ಆ ಮೇಲೆ ಮೋಸ ಮಾಡುತ್ತೇನೆ ಎಂದು ಯಾರೋ ಒಬ್ಬ ನಿರ್ದೇಶಕ ಹಾಗೂ ನಟ ಹೇಳಿದ್ದಾರೆ. ನಾನೇನು ಎಲ್ಲರ ಬಗ್ಗೆ ಮಾಹಿತಿ ಕಲೆ ಹಾಕಲು ಸ್ಯಾಟ್‌ಲೈಟ್‌ ಬಿಟ್ಟಿದ್ದೀನಾ? ನನ್ನ ಒಡವೆ ಅಡವಿಟ್ಟು ಆ ನಟನಿಗೆ ನನ್ನ ಗಂಡ 6 ಲಕ್ಷ ರು. ದುಡ್ಡು ಕೊಟ್ಟಿದ್ದ. ಇದನ್ನೆಲ್ಲ ಮರೆತು ಬಿಟ್ಟಿದ್ದಾರೆ. ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ತಾಜ್‌ವೆಸ್ಟ್‌ ಎಂಡ್‌ ಹೋಟೆಲ್‌ಗೆ ನನ್ನನ್ನು ಅವರೇ ಕರೆದಿದ್ದು ಎಂದು ದೂರಿದರು.

ಉಮಾಪತಿಯಿಂದ ನಕಲಿ ಐಡಿ:

ನನ್ನ ಗೌರವ ಹಾಳಾಗಿದೆ. ಬ್ಯಾಂಕ್‌ ಅಧಿಕಾರಿ ಹೆಸರಿನ ನಕಲಿ ಐಡಿ ಕಾರ್ಡ್‌ ಸಹ ಉಮಾಪತಿ ಮಾಡಿಕೊಟ್ಟಿದ್ದು. ನಾನೇನು ತಪ್ಪು ಮಾಡಿದೆ ಅಂತ ಹೀಗೆ ಮಾಡಿದ್ದಾರೆ. ನನ್ನನ್ನು ಏಕವಚನದಲ್ಲಿ ಮಾತನಾಡಿಸುವ ಅಧಿಕಾರ ಏನಿದೆ ಇವರಿಗೆ. ನಾನೇನು ಅವರ ಹೆಂಡತಿನಾ ಎಂದು ಅರುಣಾ ವಾಗ್ದಾಳಿ ನಡೆಸಿದರು.

ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ:

ನಾನು ಎಲ್ಲರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಉಮಾಪತಿ ಜತೆ 32 ಪೇಜ್‌ಗಳಷ್ಟುಚಾಟಿಂಗ್‌ ಇದೆ ಎಂಬುದು ಸುಳ್ಳು. ಸತ್ಯವಾಗಿಯೂ ಅವೆಲ್ಲ ಜನರಲ್‌ ಮೆಸೇಜ್‌ಗಳು. ನನಗೆ ಮಾ.13ರಿಂದ ಉಮಾಪತಿ ಜತೆ ಸಂಪರ್ಕವಿದೆ. ಉಮಾಪತಿ ಅವರು ನೆರವು ನೀಡಿದ್ದರಿಂದ ದರ್ಶನ್‌ ಭೇಟಿಗೆ ಹೋಗಿದ್ದೆ. ಒಂದು ಬಾರಿ ಮೊಬೈಲ್‌ನಲ್ಲಿ ಕಾನ್ಫರೆನ್ಸ್‌ ಕಾಲ್‌ನಲ್ಲಿ ಮಾತನಾಡಿದ್ದೇನೆ. ನಾನು ದರ್ಶನ್‌ ಅವರ ಮನೆ ಹಾಗೂ ತೋಟಕ್ಕೆ ಹೋಗಿದ್ದೇನೆ. ಏನಾದರೂ ಕಳ್ಳತನ ಮಾಡಿದ್ದೀನಾ? ಎಂದು ಪ್ರಶ್ನಿಸಿದರು.

ನನ್ನನ್ನು ಯಾಕೆ ಉಮಾಪತಿ ಅವರು ಬಳಸಿಕೊಂಡರು ಎಂಬುದು ಗೊತ್ತಿಲ್ಲ. ಈ ವಿವಾದಕ್ಕೆ ಹೆಣ್ಣಾಗಿ ನನ್ನನ್ನು ಅವರು ಉಪಯೋಗಿಸಿಕೊಂಡಿದ್ದು ತಪ್ಪು. ನನಗೆ ಯಾರಿಂದಲೂ ಒಂದು ರುಪಾಯಿ ದುಡ್ಡು ಸಿಕ್ಕಿಲ್ಲ. ದರ್ಶನ್‌ ಅವರ ಸ್ನೇಹಿತರ ಮಧ್ಯೆ ಒಡಕು ಮೂಡಿಸಲು ನನ್ನನ್ನು ಉಮಾಪತಿ ಬಳಸಿಕೊಂಡಿದ್ದಾರೆ. ಈ ವಿವಾದದಿಂದ ಉಮಾಪತಿ ಅವರಿಗೆ ಏನೂ ಉಪಯೋಗವಾಗಿದೆ ಅದೂ ಗೊತ್ತಿಲ್ಲ. ಇದರಲ್ಲಿ ಅವರಿಗೂ ಲಾಭ ಏನು ಇಲ್ಲ. ಹರ್ಷನ ಜತೆ ಮಾತನಾಡಿದ್ದರೆ ಎಲ್ಲ ಕ್ಲಿಯರ್‌ ಆಗೋದು. ನನಗೆ ಹರ್ಷ ಸಂಪರ್ಕ ಇಲ್ಲ. ನನ್ನನ್ನು ಕರೆಸಿ ನಾಲ್ಕು ಏಟು ಹೊಡೆದು ಬುದ್ಧಿ ಹೇಳಿದ್ದರೆ ಎಲ್ಲ ಮುಗಿಯೋದು ಎಂದರು.

ಬ್ಯಾಂಕ್‌ ದಾಖಲೆಗಳನ್ನು ನಕಲಿ ಮಾಡಿಲ್ಲ. ಬ್ಯಾಂಕ್‌ಗೆ ಸಾಲ ಕೇಳಿದ್ದೇವೆ ಎಂಬುದು ಸುಳ್ಳು. ನಾವು ಬ್ಯಾಂಕ್‌ ಸಾಲ ಕೇಳಲು ಯೋಜಿಸಿದ್ದೆವು. ನನಗೆ ಉಮಾಪತಿ ಅವರೇ ದಾಖಲೆಗಳನ್ನು ಕೊಟ್ಟಿದ್ದು. ನಾನು ತಪ್ಪು ಮಾಡಿಲ್ಲ. ಅವರಿಬ್ಬರು ದೊಡ್ಡವರು. ನನ್ನಂತಹ ಅಮಾಯಕರನ್ನು ಅವರು ಬಳಸಿಕೊಂಡಿದ್ದು ತಪ್ಪು. ನನ್ನ ವೈಯಕ್ತಿಕ ವಿಚಾರ ಬೇಕಾಗಿಲ್ಲ. ಸ್ನೇಹದಲ್ಲಿ ಉಮಾಪತಿ ಅವರಿಗೆ ನಾನು ಹಾರ್ಟ್‌ ಸಿಂಬಲ್‌ ಕಳುಹಿಸಿದ್ದು ನಿಜ. ನನ್ನ ವೈಯಕ್ತಿಕ ವಿಚಾರ ಬೇಕಾಗಿಲ್ಲ. ನನ್ನ ಬದುಕು ಕೆಟ್ಟರೆ ದರ್ಶನ್‌ ಅವರು ಬರಲ್ಲ. ಉಮಾಪತಿ ಅವರು ಬರಲ್ಲ. ನಾನೇ ಸರಿಪಡಿಸಿಕೊಳ್ಳಬೇಕು ಎಂದು ಅರುಣಾ ಹೇಳಿದರು.

ಈ ವಿವಾದದ ಬೆಳಕಿಗೆ ಬಂದ ಬಳಿಕ ನನಗೆ ನನ್ನ ಮಗುವಿನ ಜೀವನ ಹೇಗೆ ಎಂಬುದು ಪ್ರಶ್ನೆಯಾಗಿದೆ. ನನ್ನ ತಂದೆ-ತಾಯಿಗೂ ಸಹ ಹಿಂಸೆ ಆಗಿದೆ. ಕೆಲವರು ಅವರಿಗೆ ಟಾರ್ಚರ್‌ ಕೊಡುತ್ತಿದ್ದಾರೆ. ಈ ಕಿರುಕುಳದಿಂದ ಬೇಸತ್ತು ನಮ್ಮ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಬೇಕು ಅನಿಸುತ್ತಿದೆ. ನಮ್ಮನ್ನು ಬದುಕಲು ಬಿಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

ನನ್ನ ಗಂಡ ವಂಚಕ: ಅರುಣಾ ಕುಮಾರಿ

ನನ್ನ ಗಂಡ ಕುಮಾರ್‌ ದೊಡ್ಡ ವಂಚಕ. ಆ ವ್ಯಕ್ತಿಯ ಹೆಸರು ಹೇಳಲು ನನಗೆ ಇಷ್ಟವಿಲ್ಲ. ಈ ಪ್ರಕರಣದಲ್ಲಿ ಆತ ಯಾಕೆ ಮಾತನಾಡುತ್ತಿದ್ದಾನೆ ಗೊತ್ತಿಲ್ಲ. ಅವನಿಂದ ನನ್ನ ಬದುಕು ನಾಶವಾಗಿದೆ. ನನ್ನ ಕುಟುಂಬ ನೊಂದಿದೆ ಎಂದು ಅರುಣಾ ಕುಮಾರಿ ಆಕ್ರೋಶ ವ್ಯಕ್ತಪಡಿಸಿದರು.

ಮನೆಗೆ ಬೀಗ ಹಾಕಿ ಪರಾರಿ

ವಂಚನೆ ಯತ್ನ ಕೃತ್ಯ ಬೆಳಕಿಗೆ ಬಂದ ನಂತರ ಆರೋಪಿ ಅರುಣಾ ಕುಮಾರಿ ಜೆ.ಪಿ.ನಗರದ ಜಂಬೂಸವಾರಿ ದಿಣ್ಣೆ ಸಮೀಪದಲ್ಲಿರುವ ತನ್ನ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾಳೆ. ಎರಡು-ಮೂರು ದಿನಗಳಿಂದ ಆಕೆ ಕಾಣುತ್ತಿಲ್ಲ ಎಂದು ಮನೆ ಮಾಲೀಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ನಕಲಿ ಐಡಿ ಪತ್ತೆ

ನನ್ನನ್ನು ಕೆನರಾ ಬ್ಯಾಂಕ್‌ ಏರಿಯಾ ಮ್ಯಾನೇಜರ್‌ ಎಂಬ ಅರುಣಾ ಹೆಸರಿನ ನಕಲಿ ಗುರುತು ಪತ್ರ ಪತ್ತೆಯಾಗಿದೆ. ತನ್ನನ್ನು ಬ್ಯಾಂಕ್‌ ಉದ್ಯೋಗಿ ಎಂದು ಹೇಳಿಕೊಂಡು ಕೆಲವರಿಗೆ ಆಕೆ ವಂಚಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಅರುಣಾ ಹೇಳಿದ್ದೇನು?

- ಬ್ಯಾಂಕ್‌ ಅಧಿಕಾರಿ ಹೆಸರಿನ ನಕಲಿ ಐಡಿ ಮಾಡಿಸಿಕೊಟ್ಟಿದ್ದು ಉಮಾಪತಿ

- ದಾಖಲೆ ನಕಲು ಮಾಡಿಲ್ಲ. ಅವೆಲ್ಲವನ್ನೂ ಕೊಟ್ಟಿದ್ದು ಕೂಡ ಉಮಾಪತಿ

- ದರ್ಶನ್‌, ಉಮಾಪತಿ ದೊಡ್ಡವರು. ನನ್ನನ್ನು ಬಳಸಿಕೊಂಡಿದ್ದು ತಪ್ಪು

- ನಾನು ಯಾರಿಗೂ ಮೋಸ ಮೋಡಿಲ್ಲ. ಎಲ್ಲರ ಬಂಡವಾಳ ಬಯಲು ಮಾಡ್ತೀನಿ

- ಇಷ್ಟೆಲ್ಲಾ ರಾದ್ಧಾಂತಕ್ಕೆ ‘ರಾಬರ್ಟ್‌’ ನಿರ್ಮಾಪಕನೇ ಕಾರಣ: ವಂಚನೆ ಯತ್ನ ಆರೋಪಿ