ಹಾರರ್ ಆ್ಯಂಥಾಲಜಿ ಎನ್ನುವುದೇ ವಿಶೇಷ...

ಆ್ಯಂಥಾಲಜಿ ಫಾರ್ಮುಲಾ ಕನ್ನಡ ಚಿತ್ರರಂಗಕ್ಕೆ ಹೊಸದಲ್ಲ. ಪುಟ್ಟಣ್ಣ ಕಣಗಾಲ್ ಕೂಡ ಹಿಂದೊಮ್ಮೆ ಈ ಪ್ರಯೋಗದಲ್ಲೂ ಗಮನ ಸೆಳೆದವರು. ಹಾಗೆಯೇ ತಮಿಳು, ಮಲಯಾಳಂನಲ್ಲೂ ಇಂತಹ ಸಿನಿಮಾ ಬಂದಿವೆ. ಹಾಗಾಗಿ ತುಸು ವಿಭಿನ್ನವಾದ ಪ್ರಯೋಗಕ್ಕೆ ಒಡ್ಡಿಕೊಳ್ಳೋಣ ಅಂತ ಹಾರರ್ ಆ್ಯಂಥಾಲಜಿ ಯೊಂದಿಗೆ ಈ ಸಿನಿಮಾ ಮಾಡಿದ್ದೇವೆ. ಹಾರರ್ ಅಂದಾಕ್ಷಣ ದೆವ್ವ, ಭೂಗಳೊಂದಿಗೆ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವಂತೆ ಮಾಡುವುದಲ್ಲ. ಪ್ರೇಕ್ಷಕರಿಗೂ ಒಂದಲ್ಲೊಂದು ರೀತಿಯಲ್ಲಿ ಆದ ದೆವ್ವದ ಭಯದ ಅನುಭವವನ್ನೇ ನಾವಿಲ್ಲಿ ತೆರೆಗೆ ತಂದಿದ್ದೇವೆ. ಅದು ಈ ಚಿತ್ರದ ಮೊದಲ ವಿಶೇಷ.

ಒಂದು ಕತೆ,ಅದರ ಜತೆಗೆ ನಾಲ್ಕು ಉಪ ಕತೆ...

ಆ್ಯಂಥಾಲಜಿ ಅಂದ್ರೇನೆ ಮೂರಕ್ಕಿಂತ ಹೆಚ್ಚು ಕತೆಗಳ ಚಿತ್ರ. ಅದರಲ್ಲೂ ಇದು ಐದು ಕತೆಗಳ ಚಿತ್ರ. ಐದು ಕತೆಗಳ ಮೂಲಕ ಒಂದು ಸಿನಿಮಾವನ್ನು ನಿರೂಪಿಸುವುದು ಅಂದ್ರೆ ತುಸು ಕಷ್ಟದ ಕೆಲಸ. ನಮಗೂ ಹೊಸ ಅನುಭವ. ಹೊಸ ರೀತಿಯಲ್ಲಿ ಸಿನಿಮಾ ಮಾಡಬೇಕು ಎನ್ನುವುದಷ್ಟೇ ತಲೆಯಲ್ಲಿತ್ತು. ಕತೆ ಕೇಳಿದಾಗ ಥ್ರಿಲ್ ಎನಿಸಿತು. ಹೇಗೆ ಬರುತ್ತೋ ಎನ್ನುವ ಕುತೂಹಲವೂ ಇತ್ತು. ಈಗ ಅದನ್ನು ತೆರೆ ಮೇಲೆ ನೋಡಿದಾಗ ಖುಷಿ ಆಗುತ್ತಿದೆ. ಚಿತ್ರದ ಪ್ಯಾಟರ್ನ್ ಪ್ರೇಕ್ಷಕರಿಗೂ ಹಿಡಿಸಿದೆ. ಆ ದೃಷ್ಟಿಯಲ್ಲಿ ನಾವು ಗೆದ್ದಿದ್ದೇವೆ. ಪ್ರೇಕ್ಷಕರ ಮೆಚ್ಚುಗೆ ಖುಷಿ ಕೊಟ್ಟಿದೆ. ಮತ್ತಷ್ಟು ಜನ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿದರೆ ನಮ್ಮ ಶ್ರಮ ಸಾರ್ಥಕ ಎನಿಸುತ್ತದೆ.

ಇದು ಗೆಳೆತನದೊಂದಿಗೆ ಆದ ಸಿನಿಮಾ...

ನಾವ್ಯಾರೂ ವೃತ್ತಿ ಪರ ನಿರ್ಮಾಪಕರಲ್ಲ. ಹಾಗೆ ನೋಡಿದರೆ ಇದು ಆಕಸ್ಮಿಕ ಮತ್ತು ಗೆಳೆತನದೊಂದಿಗೆ ನಿರ್ಮಾಣವಾದ ಸಿನಿಮಾ. ನಿರ್ದೇಶಕ ಗಿರೀಶ್ ನನ್ನ ಆತ್ನೀಯ ಸ್ನೇಹಿತ. ಈ ಹಿಂದೆ ಇಬ್ಬರು ಸೇರಿ ‘ಲೂಸಿಡ್ ಹ್ಯಾಂಗೋವರ್’ ಹೆಸರಿನ ಕಿರುಚಿತ್ರ ಮಾಡಿದ್ದೆವು. ಅದನ್ನು ಗಿರೀಶ್ ಅವರೇ ನಿರ್ದೇಶಿಸಿದ್ದರು. ಆದಾದ ನಂತರ ಹಾರರ್ ಆ್ಯಂಥಾಲಜಿಯ ‘ಒಂದ್ ಕತೆ ಹೇಳ್ಲಾ’ ಸಿನಿಮಾದ ಬಗ್ಗೆ ಹೇಳಿದ. ಮಾಡೋಣ ಅಂತ ಗಿರೀಶ್ ಜತೆಗೆ ಸೇರಿಕೊಂಡೆ.ಮತ್ತಷ್ಟು ಗೆಳೆಯರು ಬಂದರು. ನಿರ್ಮಾಣಕ್ಕಿಳಿದೆವು.ಆ ಮೇಲೆ ಚಿತ್ರದ ಮೊದಲ ಉಪ ಕತೆಯಲ್ಲಿ ನೀವು ಅಭಿನಯಿಸಿದರೆ ಚೆಂದ ಅಂತ ಗಿರೀಶ್ ನನ್ನನ್ನು ಆಯ್ಕೆ ಮಾಡಿಕೊಂಡರು. ಹಾಗೆಯೇ ನನ್ನ ಜತೆಗೆ ಪತ್ನಿ ಸೌಮ್ಯ ರಾಮನಗರ ಅಭಿನಯಿಸಿದರು. ರಿಯಲ್ ಜೋಡಿಯೇ ರೀಲ್ ಮೇಲೂ ಕಾಣಿಸಿಕೊಳ್ಳುವಂತಾಗಿದ್ದು ಒಂದು ಅದೃಷ್ಟ.

ಹಲವು ಕಲಾವಿದರು, ಹಲವು ವಿಶೇಷಣಗಳು..

ಹಲವು ವಿಶೇಷತೆಗಳಿರುವ ಸಿನಿಮಾ. ಇಲ್ಲಾರು ಸ್ಟಾರ್ ಇಲ್ಲ. ಆದರೂ ಅನುಭವಿ ಕಲಾವಿದರೇ ಇಲ್ಲಿದ್ದಾರೆ. ಐದು ಕತೆಗಳಲ್ಲೂ ಬೇರೆ ಬೇರೆ ಕಲಾವಿದರಿದ್ದಾರೆ. ಆ ಕತೆಗಳು ಬೇರೆ ಬೇರೆ ಆಯಾಮಗಳಲ್ಲಿ ಹೊಸ ಬಗೆಯ ಸಂಗತಿ ಹೇಳುತ್ತವೆ. ಅವುಗಳ ಥೀಮ್ ಮಾತ್ರ ಒಂದೇ ಆಗಿರುತ್ತದೆ. ಈ ಬಗೆಯ ನಿರೂಪಣೆ ಇಲ್ಲಿ ವಿಶೇಷವಾಗಿದೆ. ಆ ಮಟ್ಟಿಗೆ ಇದೊಂದು ವಿಭಿನ್ನ ಪ್ರಯೋಗ. ಸಂಗೀತ, ಛಾಯಾಗ್ರಹಣ, ಸಂಕಲನ ಎಲ್ಲವೂ ಅಚ್ಚುಕಟ್ಟಾಗಿವೆ.

ಹೇಳಿದ ಕಥೆಯನ್ನು ಕೇಳಬಹುದು ‘ಒಂದ್ ಕಥೆ ಹೇಳ್ಲಾ’!

ಖುಷಿಯಿದೆ, ಗೆಲ್ಲಬೇಕಿದೆ...

ಹೊಸಬರು ಸಿನಿಮಾ ಮಾಡುವುದು ಕಷ್ಟ. ಅದರಲ್ಲೂ ನಿರ್ಮಿಸಿದ ಸಿನಿಮಾವನ್ನು ತೆರೆಗೆ ತರವುದು ಇನ್ನು ಕಷ್ಟ. ಈ ವಿಚಾರದಲ್ಲಿ ನಾವು ಅದೃಷ್ಟವಂತರು. ಕಷ್ಟಪಟ್ಟು, ಇಷ್ಟಪಟ್ಟು ಸಿನಿಮಾ ಮಾಡಿದೆವು. ಆನಂತರ ಶುರುವಾಗಿದ್ದು ಅದರ ರಿಲೀಸ್ ಆತಂಕ. ಆದರೂ ಯಾವುದೇ ಅಡ್ಡಿ ಆತಂಕ ಇಲ್ಲದೆ ಅದನ್ನೀಗ ತೆರೆಗೆ ತಂದಿದ್ದೇವೆ. ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇಷ್ಟು ಆದರೆ ಮಾತ್ರ ಸಾಲದು. ನಾವು ಇನ್ನಷ್ಟು ಚಿತ್ರಮಂದಿರಗಳಿಗೆ ಹೋಗಬೇಕಿದೆ. ನಮಗೆ ಆ ಶಕ್ತಿ ಸಿಗಬೇಕಾದರೆ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಬೇಕಿದೆ.