ನಿಮಗೆ ನಿರ್ಮಾಣ ಸಂಸ್ಥೆ ಶುರು ಮಾಡಬೇಕು ಅನಿಸಿದ್ದು ಯಾಕೆ?

ಹೊಸತನದಿಂದ ಕೂಡಿದ ಪ್ರಯೋಗಾತ್ಮಕ ಸಿನಿಮಾಗಳೆಂದರೆ ಇಷ್ಟ. ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳ ಆಚೆಗೂ ನಾನು ಅಂಥ ಚಿತ್ರಗಳನ್ನು ನೋಡುತ್ತ, ಆ ಚಿತ್ರಗಳನ್ನು ಮಾಡಿದ ತಂಡಗಳನ್ನು ಮೆಚ್ಚಿಕೊಳ್ಳುತ್ತಿದ್ದೆ. ಆದರೆ, ಮುಂದೆ ಅವರಿಗೆ ಒಂದು ಸಿನಿಮಾ ಮಾಡುವ ವೇದಿಕೆ ಸಿಕ್ಕರೆ ಹೇಗೆ ಎನ್ನುವ ಯೋಚನೆ ಬಂದಾಗ ಆ ವೇದಿಕೆಯನ್ನು ನಾವೇ ಯಾಕೆ ಸೃಷ್ಟಿಸಬಾರದು ಎಂಬುದರ ಯೋಚನೆಯ ಫಲವೇ ನಮ್ಮ ‘ಪಿಆರ್‌ಕೆ’ ನಿರ್ಮಾಣ ಸಂಸ್ಥೆ. ನಿಜ ಹೇಳಬೇಕು ಅಂದರೆ ನಾನು ಇಲ್ಲಿ ಹಾಜರಿ ಅಷ್ಟೆ. ಎಲ್ಲವನ್ನೂ ನೋಡಿಕೊಳ್ಳುವುದು ನನ್ನ ಪತ್ನಿ ಅಶ್ವಿನಿ ಅವರು. ಅವರ ಕನಸು ಇದು. ಹೊಸಬರಿಗೆ ಅವಕಾಶ ಸಿಗಬೇಕು, ಅವರ ಚಿತ್ರಗಳು ಪ್ರೇಕ್ಷಕರ ಮುಂದೆ ಬರಬೇಕು ಎಂದು ನಿರ್ಮಾಣ ಸಂಸ್ಥೆ ಶುರು ಮಾಡಿದ್ದು.
ಕತೆ ಆಯ್ಕೆ ಅಥವಾ ನೀವು ನಿರ್ಮಾಣಕ್ಕೆ ಒಪ್ಪಿಕೊಳ್ಳುವ ತಯಾರಿ ಹೇಗಿರುತ್ತದೆ? ನಿರ್ದಿಷ್ಟ ಷರತ್ತುಗಳು ಉಂಟಾ? 

ಮಾನದಂಡಗಳು ಅಥವಾ ಷರತ್ತುಗಳು ಅಂತ ಯಾವುದೂ ಇಲ್ಲ. ಯಾಕೆಂದರೆ ಯಾವ ಸಿನಿಮಾ, ಯಾವ ಕಾರಣಕ್ಕೆ ಗೆಲ್ಲುತ್ತದೆ ಅಂತ ಹೇಗೆ ಹೇಳಕ್ಕೆ ಸಾಧ್ಯ. ಆದರೆ, ಕತೆಗೆ ನಾನು ತುಂಬಾ ಮಹತ್ವ ಕೊಡುತ್ತೇನೆ. ಕತೆ ಇಷ್ಟವಾಗಿ, ಆ ಕತೆಗೆ ತಕ್ಕಂತೆ ಪಾತ್ರಗಳು ಜತೆಯಾದರೆ ಸಿನಿಮಾ ಟೇಕಾಫ್ ಆಗುತ್ತದೆ. ಹೇಮಂತ್ ರಾವ್ ಅವರು ನನಗೆ ಕವಲುದಾರಿ ಕತೆ ಹೇಳುವಾಗ ಇಲ್ಲಿ ಅನಂತ್‌ನಾಗ್ ಮುಖ್ಯ ಪಾತ್ರಧಾರಿ ಅಂತ ಹೇಳಿದ್ರು. ಕತೆ ಇಷ್ಟವಾಯಿತು.

ಬಿಡುಗಡೆ ಮಾತ್ರ ತಡವಾಗುತ್ತಿದೆಯಲ್ಲ?

ನಿಜ ಹೇಳಬೇಕು ಅಂದರೆ ಅದಕ್ಕೆ ಕಾರಣ ಏನೂ ಅಂತ ನನಗೂ ಗೊತ್ತಾಗುತ್ತಿಲ್ಲ. ಆದರೆ, ಸುಖಾಸುಮ್ಮನೆ ಅಂತ ನಾವು ತಡ ಮಾಡುತ್ತಿಲ್ಲ. ಒಂದಿಷ್ಟು ತಾಂತ್ರಿಕ ಕೆಲಸಗಳು ಬೇರೆ ಬೇರೆ ದೇಶಗಳಲ್ಲಿ ಮಾಡಿಸಲಾಯಿತು. ಮೇಕಿಂಗ್‌ಗೆ ಹೆಚ್ಚು ಸಮಯ ಬೇಕಿತ್ತು.

ನೋಡುಗರಿಗೆ ಸಿನಿಮಾ ತಲುಪಿಸುವ ಹೊಸ ಐಡಿಯಾಗಳೇನು?

ಎಲ್ಲಾ ಕಡೆ ಈಗ ಡಿಜಿಟಲ್ ಮಾರುಕಟ್ಟೆಯ ಪ್ರಭಾವ. ಮಲ್ಟಿಫ್ಲೆಕ್ಸ್ ಸಂಸ್ಕೃತಿ. ಮನೆಯಲ್ಲೇ ಕೂತು ನೆಟ್‌ಪ್ಲಿಕ್ಸ್, ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ನೋಡುತ್ತಿರುವ ಕಾಲದಲ್ಲಿ ನಾವು ಥಿಯೇಟರ್‌ಗಳ ಮುಂದೆ ನಿಂತಿದ್ದೇವೆ. ನನ್ನ ಪ್ರಕಾರ ಡಿಜಿಟಲ್ ಮಾರುಕಟ್ಟೆಯನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಒಂದಿಷ್ಟು ಯೋಚನೆಗಳಿವೆ. ಈಗಾಗಲೇ ‘ಕವಲುದಾರಿ’ ಅಮೆಜಾನ್‌ಗೆ ಮಾರಾಟ ಮಾಡಿದ್ದೇವೆ. ಮಲ್ಟಿಪ್ಲೆಕ್ಸ್ ಪ್ರೇಕ್ಷಕರು ಗಮನದಲ್ಲಿಟ್ಟುಕೊಂಡು ಸಿನಿಮಾ ಕಟ್ಟಬೇಕಿದೆ.

ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ಮತ್ತೆ ಸಿನಿಮಾ ಯಾವಾಗ?
ಸದ್ಯದಲ್ಲೇ ಬರಲಿದೆ. ಕತೆ ಓಕೆ ಆಗಿದೆ. ನಿರ್ದೇಶಕ ಹಾಗೂ ಸಿನಿಮಾ ಹೆಸರನ್ನು ಕೆಲವೇ ದಿನಗಳಲ್ಲಿ ಹೇಳುತ್ತೇನೆ.

ಪಿಆರ್‌ಕೆ ನಿರ್ಮಾಣ ಸಂಸ್ಥೆಯಲ್ಲಿ ನೀವು ನಟಿಸೋದಿಲ್ವಾ?

ಅಯ್ಯೋ, ಯಾಕೆ ನಟಿಸಬಾರದು? ಕವಲುದಾರಿ ಕತೆ ಹೇಳಿದಾಗ ನಾನೇ ಹೇಮಂತ್‌ರಾವ್ ಅವರಿಗೆ ಕೇಳಿದೆ, ‘ನನಗೂ ಏನಾದರೂ ಪಾತ್ರ ಇದೆಯಾ’ ಅಂತ. ಆದರೆ, ಅವರು ಇಲ್ಲ ಅಂದ್ರು. ನನಗೆ ಸೂಕ್ತ ಎನಿಸುವ ಮತ್ತು ನಿರ್ದೇಶಕರು ತಾವು ಮಾಡಿಕೊಂಡ ಕತೆಯಲ್ಲಿ ನನ್ನ ಪಾತ್ರ ಇರುತ್ತದೆ ಅಂದರೆ ಒಬ್ಬ ನಟನಾಗಿ ಖಂಡಿತ ನಾನು ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ನಟಿಸುತ್ತೇನೆ.