ದುನಿಯಾ ವಿಜಯ್ ನಿರ್ದೇಶನದ, ನಿರ್ಮಾಣದ "ಸಿಟಿ ಲೈಟ್ಸ್" ಚಿತ್ರಕ್ಕೆ ವಿನಯ್ ರಾಜ್‌ಕುಮಾರ್ ನಾಯಕ, ವಿಜಯ್ ಪುತ್ರಿ ಮೋನಿಷಾ ನಾಯಕಿ. ಫೆಬ್ರವರಿ ೧೦, ೨೦೨೫ ರಂದು ಬೆಂಗಳೂರಿನಲ್ಲಿ ಮುಹೂರ್ತ ನೆರವೇರಿತು. ರಾಘವೇಂದ್ರ ರಾಜ್‌ಕುಮಾರ್ ದಂಪತಿ ಶುಭ ಹಾರೈಸಿದರು. ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು. ಮೋನಿಷಾ ಲಂಡನ್ ನಲ್ಲಿ ನಟನ ತರಬೇತಿ ಪಡೆದಿದ್ದಾರೆ.

ದುನಿಯಾ ವಿಜಯ್ (Duniya Vijay) ನಿರ್ದೇಶನದ 'ಸಿಟಿ ಲೈಟ್ಸ್‌' ಚಿತ್ರಕ್ಕೆ ಮಗಳು ಮೋನಿಷಾ (Monisha) ನಾಯಕಿ. ಈ ಚಿತ್ರಕ್ಕೆ ನಾಯಕರಾಗಿ ವಿನಯ್ ರಾಜ್‌ಕುಮಾರ್ (Vinay Rajkumar) ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಇಂದು, ಅಂದರೆ 10 ಫೆಬ್ರವರಿ 2025ರಂದು ನಡೆದ ಮಹೂರ್ತ ಸಮಾರಂಭದಲ್ಲಿ ರಾಘವೇಂದ್ರ ರಾಜ್‌ಕುಮಾರ್ ದಂಪತಿಗಳು ಬಂದು ತಮ್ಮ ಮಗನ ಸಿನಿಮಾಗೆ ಶುಭ ಹಾರೈಸಿದ್ದಾರೆ. ರಾಜ್‌ಕುಮಾರ್ ಅವರ ಡ್ರೈವರ್ ಕ್ಯಾಮೆರಾ ಆನ್‌ ಮಾಡುವ ಮೂಲಕ ಈ ಚಿತ್ರಕ್ಕೆ ಶುಭ ಹಾರೈಸಿದರು. 

ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಸತೀಶ್ ನೀನಾಸಂ, ಯುವ ರಾಜ್‌ಕುಮಾರ್, ನವೀನ್ ಶಂಕರ್, ಪ್ರವೀಣ್ ತೇಜ್, ಲೂಸ್ ಮಾದ ಯೋಗಿ, ಕೆ ಮಂಜು, ಬಿ ಸುರೇಶ್, ಕೆಪಿ ಶ್ರೀಕಾಂತ್, ಉಮಾಪತಿ ಸೇರಿದಂತೆ ಹಲವರು ಬಂದು ದುನಿಯಾ ವಿಜಯ್ ಚಿತ್ರಕ್ಕೆ ಶುಭ ಕೋರಿದ್ದಾರೆ. ದುನಿಯಾ ವಿಜಯ್ ನಿರ್ದೇಶಕರಾಗಿ ಮಾತ್ರವಲ್ಲದೇ ಈ 'ಸಿಟಿ ಲೈಟ್ಸ್' ಚಿತ್ರದ ನಿರ್ಮಾಪಕರಾಗಿಯೂ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಬಗ್ಗೆ ದುನಿಯಾ ವಿಜಯ್ ಮಾತನ್ನಾಡಿದ್ದಾರೆ. 

'ನನ್ನ ಸಿನಿಮಾದ ಜವಾಬ್ದಾರಿಗಳನ್ನು ಎರಡು ದೀಪಗಳಾಗಿ ಮಾಡಿ ನನ್ನ ಮಕ್ಕಳಾದ 'ಮೋನಿಷಾ ಹಾಗೂ ಮೋನಿಕಾ ಕೈಗೆ ಕೊಟ್ಟಿದ್ದೇನೆ. ಈ ಇಬ್ಬರೂ ಅದನ್ನು ಕಾಪಾಡಿಕೊಂಡು ಉಳಿಸಿ ಬೆಳೆಸಿಕೊಂಡು ಹೋಗ್ತಾರೆ ಎಂಬ ನಂಬಿಕೆ ನನ್ನದು. ಇನ್ನು ಈ ಚಿತ್ರದ ನಾಯಕ ವಿನಯ್ ತುಂಬಾ ಒಳ್ಳೆಯ ವ್ಯಕ್ತಿ.. ನನ್ನ ಜೊತೆಯಲ್ಲಿ ನನ್ನಂತೆಯೇ ಇರುವ ಜೀವ. ಕರುನಾಡಿನ ಅಣ್ಣಾವ್ರ ಸಿನಿಮಾಗಳನ್ನು ನೋಡಿ ಬೆಳೆದವನು ನಾನು. ಈಗ ಅವರ ಮೊಮ್ಮಗನಿಗೆ ಸಿನಿಮಾ ಮಾಡುವ ಭಾಗ್ಯ ಲಭಿಸಿದೆ. 

ಇನ್ನು, ನನ್ನ ಬಗ್ಗೆ ಹೇಳಬೇಕು ಎಂದರೆ, ನಾನು ಯಾವುದೇ ತಂಡ ಕಟ್ಟಿಲ್ಲ. ಒಬ್ಬನೇ ನಾನೇ ನಾನಾಗಿ ಬೆಳೆದವನು ನಾನು. ನನಗೆ ಯಾರದೇ ಸಪೋರ್ಟ್ ಇರಲಿಲ್ಲ. ನನ್ನ ಛಲ ನನ್ನನ್ನು ಇಲ್ಲಯವರೆಗೆ ತಂದು ಮುಟ್ಟಿಸಿದೆ..' ಎಂದಿದ್ದಾರೆ, ಈ ವೇಳೆ ಅಲ್ಲಿ ವಿನಯ್ ರಾಜ್‌ಕುಮಾರ್, ಮೋನಿಷಾ, ಮೋನಿಷಾ ಸೇರಿದಂತೆ ಹಲವರು ಹಾಜರಿದ್ದರು. 

ವಿನಯ್ ರಾಜ್‌ಕುಮಾರ್ ಮಾತನಾಡಿ 'ನನಗೆ ವಿಜಯ್ ಸರ್, ಮಾಸ್ತಿ ಸರ್ ಹಾಗು ಚರಣ್‌ ರಾಜ್ ಸರ್ ಜೊತೆ ಕೆಲಸ ಮಾಡಲು ಖುಷಿ ಆಗುತ್ತೆ.. ಇವರೆಲ್ಲರ ಜೊತೆ ಕೆಲಸ ಮಾಡಬೇಕು ಎಂಬುದು ನನ್ನ ಬಹುದಿನಗಳ ಕನಸು. ಈಗ ಅದು ಈ ಚಿತ್ರದ ಮೂಲಕ ನೆರವೇರುತ್ತಿದೆ' ಎಂದರು. ಮೋನಿಷಾ 'ನಾನು ಲಂಡನ್‌ನಲ್ಲಿ ಆಕ್ಟಿಂಗ್ ಕಲಿತಿದ್ದೇನೆ. ನನಗೆ ಈ ಸಿನಿಮಾದಲ್ಲಿ ಒಳ್ಳೆಯ ಪಾತ್ರವಿದೆ. ಈ ಚಿತ್ರದ ಪಾತ್ರಕ್ಕಾಗಿ ಈಗ ತಯಾರಿ ಮಾಡಿಕೊಳ್ಳುತ್ತಿದ್ದೇನೆ' ಎಂದಿದ್ದಾರೆ. 

ಒಟ್ಟಿನಲ್ಲಿ, ದುನಿಯಾ ವಿಜಯ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಮಗಳು ಮೋನಿಷಾಗೆ ಸಿನಿಮಾ ನಿರ್ದೇಶನ ಮಾಡುವುದರ ಜೊತೆಗೆ, ನಿರ್ಮಾಣವನ್ನೂ ಮಾಡುವ ಮೂಲಕ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ವಿನಯ್ ರಾಜ್‌ಕುಮಾರ್ ಮತ್ತೊಂದು ಚಿತ್ರಕ್ಕೆ ಈ ಮೂಲಕ ನಾಯಕರಾಗಿದ್ದಾರೆ. ಅಂದಹಾಗೆ, ಇಂದು ಮುಹೂರ್ತ ಆಚರಿಸಿಕೊಂಡಿರುವ ಈ ಚಿತ್ರ, ಸದ್ಯವೇ ಶೂಟಿಂಗ್ ಶುರು ಮಾಡಿಕೊಳ್ಳಲಿದೆ.