ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿರುವ, ನೂತನ್ ಉಮೇಶ್ ನಿರ್ದೇಶನದ ಫೈಟರ್ ಚಿತ್ರ ಇಂದು ತೆರೆ ಕಾಣುತ್ತಿದೆ. ಕೆ ಸೋಮಶೇಖರ್ ನಿರ್ಮಾಪಕರು. ಸಿನಿಮಾ ಬಗ್ಗೆ ವಿನೋದ್ ಪ್ರಭಾಕರ್ ಜತೆ ಮಾತುಕತೆ..

ಪ್ರಿಯಾ ಕೆರ್ವಾಶೆ

ಫೈಟರ್‌ ವಿನೋದ್‌ ಅವರಿಗೆ ದೊಡ್ಡ ಬ್ರೇಕ್‌ ಕೊಡುವ ಸಿನಿಮಾನ?

ದೊಡ್ಡ ಬ್ರೇಕ್‌ ಕೊಡಬಹುದು ಅನ್ನುವಂಥಾ ನಿರೀಕ್ಷೆ ಇಟ್ಟುಕೊಂಡಿಲ್ಲ. ನಿರ್ಮಾಪಕರಿಗೆ ಲಾಭ ತಂದುಕೊಡುವ ಸಿನಿಮಾ ಅನ್ನಬಹುದೇನೋ. ಈ ಸಿನಿಮಾ 2018ರಲ್ಲಿ ಶುರುವಾದದ್ದು. ಆ ಹೊತ್ತಿಗೆ ತೆರೆ ಕಾಣುತ್ತಿದ್ದರೆ ನೀವು ಹೇಳಿದ್ದು ಆಗಬಹುದಿತ್ತೇನೋ.

ಸಿನಿಮಾ ಬಗ್ಗೆ ಎಷ್ಟು ನಿರೀಕ್ಷೆ ಇದೆ?

ಇದರಲ್ಲಿ ಮನರಂಜನೆ ನೀಡುವ ಅಂಶಗಳು ಸಾಕಷ್ಟಿವೆ. ಕಾಮಿಡಿ ಇದೆ, ಫ್ಯಾಮಿಲಿ ಸೆಂಟಿಮೆಂಟ್‌ ಇದೆ. ಭರ್ಜರಿ ಫೈಟ್ ಇದೆ. ರೈತರ ಬದುಕು, ಭೂಮಿಗಾಗಿ ಅವರ ಹೋರಾಟದ ಅಂಶಗಳಿವೆ. ಪ್ರೇಕ್ಷಕರು ಹಾಕಿದ ಹಣಕ್ಕೆ ಖಂಡಿತಾ ಮೋಸ ಆಗಲ್ಲ ಈ ಭರವಸೆಯನ್ನಂತೂ ನಾನು ಕೊಡಬಲ್ಲೆ. ನನ್ನ ಮಾತು ನೇರ. ಇದ್ದದ್ದನ್ನ ಇದ್ದ ಹಾಗೆ ಹೇಳೋದು ನನ್ನ ಕ್ರಮ. ಹೀಗಾಗಿ ಈ ಬಗ್ಗೆ ಅನುಮಾನಿಸಬೇಕಿಲ್ಲ.

'ಫೈಟರ್' ಸಿನಿಮಾದ ಲವ್ ಸಾಂಗ್ ರಿಲೀಸ್: ಪ್ರೀತಿಸುವಂತೆ ಹಿಂದೆ ಬಿದ್ದ ನಟಿ ಲೇಖಾ ಚಂದ್ರ !

ಹೋರಾಟದ ಕಥೆ ಅಂತೀರಾ, ಟ್ರೇಲರ್‌ನಲ್ಲಿ ಹೋರಾಟಗಾರನ ಲುಕ್‌ ಕಾಣಲಿಲ್ಲ?

ಇದರಲ್ಲಿ ನಾನೊಬ್ಬ ರೈತನ ಮಗ. ತಂದೆಯ ರಿವೆಂಜನ್ನು ನಾನು ತಗೊಂಡಿರ್ತೀನಿ. ನನ್ನ ತಾಯಿ ಡಿಸಿ ಆಗಿರ್ತಾರೆ. ಬಾವುಟ ಹಿಡಿದು ಬೀದಿಗಿಳಿದು ಹೋರಾಟ ಮಾಡೋದೆಲ್ಲ ಇರಲ್ಲ. ಒಂದಿಷ್ಟು ಮೆಸೇಜ್‌, ರೈತರು ಭೂಮಿ ಹೇಗೆ ಕಳೆದುಕೊಳ್ತಿದ್ದಾರೆ, ಕೃಷಿಯಲ್ಲಿ ರಾಸಾಯನಿಕ ಬಳಕೆ ದುಷ್ಪರಿಣಾಮಗಳ ಬಗೆಗೆ ಅರಿವು ಮೂಡಿಸುವ ಪ್ರಯತ್ನವಿದೆ. ರಾಜೇಶ್‌ ನಟರಂಗ ಕೃಷಿಕ ತಂದೆಯ ಪಾತ್ರ ನಿರ್ವಹಿಸಿದ್ದಾರೆ.

ಸಿನಿಮಾ ಈ ಕಾಲಕ್ಕೆ ತಕ್ಕಂತೆ ಅಪ್‌ಗ್ರೇಡ್‌ ಆಗಿದೆಯೇ?

ಹೌದು. ಸಿನಿಮಾ ಎಡಿಟಿಂಗ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದೇವೆ. ಗುರುಕಿರಣ್‌ ಸಂಗೀತದಲ್ಲೂ ಹೊಸತನ ನೀಡಿದ್ದಾರೆ.

ಸಿನಿಮಾದಲ್ಲಿ ಮರಿ ಟೈಗರ್‌ ಜೊತೆ ಟೈಗರ್‌ ಕಾಣಿಸಿಕೊಂಡಿದ್ದಾರೆ?

ಅದೇ ಸಸ್ಪೆನ್ಸ್‌. ಅದು ಯಾಕೆ ಹಾಗಾಯ್ತು ಅನ್ನೋದನ್ನು ನೀವು ಸಿನಿಮಾದಲ್ಲೇ ನೋಡಬೇಕು. ಆದರೆ ನನ್ನ ತಂದೆಯ ಪಾತ್ರಕ್ಕೆ ನಾನು ಡಬ್ಬಿಂಗ್‌ ಮಾಡಿದ್ದು ವಿಭಿನ್ನ ಅನುಭವ. ಪ್ರಭಾಕರ್‌ ಅವರು ಅನೇಕ ಸಿನಿಮಾಗಳಲ್ಲಿ ಡೈಲಾಗ್‌ ಹೇಳೋ ರೀತಿಯನ್ನು ಸುಮಾರು 20 ಬಗೆಯಲ್ಲಿ ಅನುಕರಿಸಿದ್ದೀನಿ. ಅದು ಸಿನಿಮಾದಲ್ಲಿ ಚೆನ್ನಾಗಿ ಬಂದಿದೆ.

ನಮ್ಮ ಸಿನಿಮಾಗೆ ಯಾವಾಗ್ಲೂ ಸಾಥ್ ಕೊಟ್ಟಿದ್ದೀರಾ, ಮುಂದೆಯೂ ಸಾಥ್ ಕೊಡಿ: ವಿನೋದ್ ಪ್ರಭಾಕರ್ ಪತ್ನಿ

ದರ್ಶನ್ ಹಾಗೂ ಕನ್ನಡ ಹೋರಾಟಗಾರರ ಬೆಂಬಲ ಈ ಸಿನಿಮಾಕ್ಕೆ ಸಿಕ್ಕಿದೆ..

ಹೌದು. ದರ್ಶನ್‌ ಅವರ ಸಪೋರ್ಟ್‌ ಆರಂಭದಿಂದಲೇ ಇದೆ. ಅದು ಕೊನೇವರೆಗೂ ಇರಲಿ ಅಂತಲೇ ಆಶಿಸುತ್ತೀನಿ. ಅವರು ನನ್ನ ತಾಯಿ ಹೊಟ್ಟೆಯಲ್ಲಿ ಹುಟ್ಟಿಲ್ಲದೇ ಇರಬಹುದು, ಆದರೆ ಅದಕ್ಕಿಂತ ಹೆಚ್ಚಾಗಿದ್ದಾರೆ. ಇನ್ನು ಕನ್ನಡ ಹೋರಾಟಗಾರರು ಈ ಸಿನಿಮಾಕ್ಕೆ ಸಾಕಷ್ಟು ಬೆಂಬಲ ನೀಡಿದ್ದಾರೆ.

ಮುಂದೆ ಮಾಡೋದೆಲ್ಲ ಕಂಟೆಂಟ್‌ ಸಿನಿಮಾ

‘ಮಾದೇವ’ ಅನ್ನೋ ಹೊಸ ಸಿನಿಮಾದಲ್ಲಿ ಹ್ಯಾಂಗ್‌ಮೆನ್‌ ಪಾತ್ರ ಮಾಡುತ್ತಿದ್ದೇನೆ. ಇನ್ನೊಂದು ಹೊಸ ಸಿನಿಮಾದ ಟೀಸರ್‌ ಶೀಘ್ರ ಬಿಡುಗಡೆಯಾಗಲಿದೆ. ಈ ಸಿನಿಮಾಗಳೆಲ್ಲ ಗಟ್ಟಿ ಕಂಟೆಂಟ್‌ ಇರುವಂಥವು. ನನಗೆ ಬ್ರೇಕ್‌ ನೀಡುವಂಥಾ ಸಿನಿಮಾಗಳಿವು. ಮುಂದಿನ ದಿನಗಳಲ್ಲಿ ಇಂಥಾ ಕಂಟೆಂಟ್‌ ಆಧರಿತ ಚಿತ್ರಗಳಲ್ಲಿ ಮಾಡುತ್ತೇನೆ. ಪ್ರಯೋಗಶೀಲತೆಗೆ ಒತ್ತು ನೀಡುತ್ತೇನೆ.

ಪರಭಾಷೆ ವ್ಯಾಮೋಹ ಇಲ್ಲ

ನನ್ನ ಸೋಷಿಯಲ್‌ ಮೀಡಿಯಾ ಪೇಜ್‌ಗಳೆಲ್ಲ ಅಚ್ಚಗನ್ನಡದಲ್ಲಿದೆ. ಏನೇ ಮಾಡಿದರೂ ನನ್ನ ನೆಲದಲ್ಲಿ ನನ್ನ ಜನರಿಗಾಗಿ ಮಾಡಬೇಕು ಅನ್ನುವುದು ನನ್ನ ಕನಸು. ಹೀಗಾಗಿ ಪರಭಾಷೆಯಿಂದ ಆಫರ್‌ಗಳು ಬಂದರೂ ನಾನು ಆ ಕಡೆ ಹೋಗಿಲ್ಲ.