'ಕಾಂತಾರ' ಮೂಡ್‌ನಿಂದ ಹೊರಬಂದಿಲ್ಲ ಎಂದ ವೀರೇಂದ್ರ ಹೆಗ್ಗಡೆ..!
ಮಂಗಳೂರು ನಗರದ ಭಾರತ್ ಬಿಗ್ ಸಿನಿಮಾದಲ್ಲಿ ಪತ್ನಿ ಹೇಮಾವತಿ ವಿ.ಹೆಗ್ಗಡೆ ಹಾಗೂ ಕುಟುಂಬಿಕರ ಜೊತೆ ಕಾಂತಾರ ಸಿನಿಮಾ ವೀಕ್ಷಿಸಿದ ವೀರೇಂದ್ರ ಹೆಗ್ಗಡೆ
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಅ.22): ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರೂ ಅದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕುಟುಂಬ ಸಮೇತ ಆಗಮಿಸಿ ನಿನ್ನೆ(ಶುಕ್ರವಾರ) ನಗರದಲ್ಲಿ ಕಾಂತಾರ ಚಿತ್ರವನ್ನು ವೀಕ್ಷಿಸಿದ್ದಾರೆ. ಚಿತ್ರದ ಕಲಾವಿದರ ಜೊತೆ ಕೂತು ಸಿನಿಮಾ ವೀಕ್ಷಿಸಿದ ಹೆಗ್ಗಡೆಯವರು, ಸಿನಿಮಾದ ವಿಭಿನ್ನ ಪ್ರಯತ್ನವನ್ನು ಹಾಡಿ ಹೊಗಳಿದ್ದಾರೆ.
ನಗರದ ಭಾರತ್ ಬಿಗ್ ಸಿನಿಮಾದಲ್ಲಿ ಪತ್ನಿ ಹೇಮಾವತಿ ವಿ.ಹೆಗ್ಗಡೆ ಹಾಗೂ ಕುಟುಂಬಿಕರ ಜೊತೆ ವೀರೇಂದ್ರ ಹೆಗ್ಗಡೆಯವರು ಕಾಂತಾರ ಸಿನಿಮಾ ವೀಕ್ಷಿಸಿದರು. ಈ ವೇಳೆ ಸಿನಿಮಾದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ, ನಟ ಮತ್ತು ಬರಹಗಾರ ಶಾನಿಲ್ ಗುರು ಸೇರಿ 15ಕ್ಕೂ ಅಧಿಕ ಕಲಾವಿದರು ಹಾಜರಿದ್ದರು. ರಾತ್ರಿ 10.30ರವರೆಗೆ ಸಿನಿಮಾ ವೀಕ್ಷಿಸಿದ ಹೆಗ್ಗಡೆ ಕುಟುಂಬ ಚಿತ್ರತಂಡದ ಪ್ರಯತ್ನಕ್ಕೆ ಬೆನ್ನು ತಟ್ಟಿದೆ. ಬಳಿಕ ಹೆಗ್ಗಡೆಯವರನ್ನ ಚಿತ್ರತಂಡದ ವತಿಯಿಂದ ಗೌರವಿಸಲಾಯಿತು. ಬಳಿಕ ಕಲಾವಿದರನ್ನು ಪರಿಚಯ ಮಾಡಿಕೊಂಡ ಹೆಗ್ಗಡೆಯವರು ಕಾಣಿಕೆ ನೀಡಿ ಆಶೀರ್ವಾದ ಮಾಡಿದರು.
ಕಾಂತಾರ ನಟಿಗೆ ಫುಲ್ ಡಿಮ್ಯಾಂಡ್: ಸಪ್ತಮಿ ಗೌಡಗೆ ಅವಕಾಶಗಳ ಮಹಾಪೂರ
ಸಿನಿಮಾದ ಮೂಡ್‌ನಿಂದ ಹೊರ ಬಂದಿಲ್ಲ ಅಂದ ಧರ್ಮಾಧಿಕಾರಿಗಳು!
ಸಿನಿಮಾ ಬಳಿಕ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಸಿನಿಮಾ ನೋಡಿ ಬಹಳ ದಿನವಾಗಿತ್ತು, ಒಂದು ವಿಭಿನ್ನ ಸಿನಿಮಾ ನೋಡಿದೆ. ರಾಜ್ಯದ ಒಂದು ಭಾಗದ ಅನುಭವಗಳು, ನಂಬಿಕೆ, ನಡವಳಿಕೆಗಳು. ದೈವಾರಾಧನೆಯ ಸೂಕ್ಷ್ಮತೆಗಳನ್ನ ಬಹಳ ಚೆನ್ನಾಗಿ ರಿಷಭ್ ತೋರಿಸಿದ್ದಾರೆ. ಈ ಚಿತ್ರದಿಂದ ಯುವಕರಿಗೆ ಹೊಸ ಕಥೆ ಮತ್ತು ಹಳೆಯ ಸ್ಮರಣೆ ಆಗುತ್ತೆ. ಹೊಸ ದೃಷ್ಟಿಕೋನದ ಜೊತೆ ಅಸತ್ಯದ ವಿರುದ್ದ ಹೋರಾಡುವ ಕಥೆಗಳು ನಮ್ಮಲ್ಲಿ ಜಾಸ್ತಿ. ಸತ್ಯದ ರಕ್ಷಣೆ, ಅನ್ಯಾಯದ ವಿರುಧ್ಧ ಹೋರಾಟ ಮತ್ತು ನೆಮ್ಮದಿಯ ಜೀವನ ನಮಗೆ ಬೇಕು. ನೆಮ್ಮದಿ ಇಲ್ಲದಿರೋ ವ್ಯಕ್ತಿಯಿಂದಲೇ ಚಿತ್ರದ ಕಥೆ ಆರಂಭವಾಗಿದೆ. ಎಲ್ಲಾ ಇದ್ದರೂ ಚಿತ್ರದಲ್ಲಿ ರಾಜನಿಗೆ ನೆಮ್ಮದಿ ಇಲ್ಲ. ಹಾಗಾಗಿ ಶಾಂತಿ, ನೆಮ್ಮದಿ, ಜಾತಿ ಮತ ಬಿಟ್ಟು ಸಹಬಾಳ್ವೆಯ ಸಂದೇಶ ಈ ಚಿತ್ರದಲ್ಲಿ ಇದೆ. ನಾನು ಬಹಳ ಸಂತೋಷ ಪಟ್ಟಿದ್ದೇನೆ, ಚಿತ್ರ ನೋಡಿ ನಾನು ಇನ್ನೂ ಆ ಮೂಡ್‌ನಿಂದ ಹೊರಗೆ ಬಂದಿಲ್ಲ. ಅಂತ ತಿಳಿಸಿದ್ದಾರೆ.
ಎಲ್ಲೆಲ್ಲೂ ಕಾಂತಾರ ಆರಾಧನೆ: ರಿಷಬ್ ಶೆಟ್ಟಿಯಲ್ಲಿ ದೇವರನ್ನು ಕಂಡ ಫ್ಯಾನ್ಸ
ಎಲ್ಲಾ ಕಲಾವಿದರಿಗೆ ಅಭಿನಂದನೆ ಸಲ್ಲಿಸಲು ನಾನು ಇಷ್ಟ ಪಡ್ತೇನೆ. ಟೆಕ್ನಾಲಜಿ ಬೆಳೆದಿದೆ, ಅದನ್ನ ರಿಷಭ್ ಶೆಟ್ಟಿ ಚೆನ್ನಾಗಿ ಬಳಸಿಕೊಂಡಿದ್ದಾರೆ. ಕಲಾವಿದರು, ವಿಜಯ್ ಕಿರಂಗದೂರು ಅವರಿಗೆ ನಮ್ಮ ಕುಟುಂಬದ ಪರವಾಗಿ ಅಭಿನಂದನೆ. ಯಾವತ್ತೂ ನಮ್ಮ ದೈವಗಳು ಅಧರ್ಮಕ್ಕೆ ಬೆಂಬಲ ಕೊಡಲ್ಲ ಅನ್ನೋದು ಚಿತ್ರದ ಸಂದೇಶ. ನಮ್ಮ ಸಮಾಜದಲ್ಲಿ ಸ್ವಾರ್ಥಿಗಳು ಇರ್ತಾರೆ, ಭೂಮಿ, ಸಂಪತ್ತಿನ ಬಗ್ಗೆ ಆಸೆಯಿರುತ್ತೆ. ಆದರೆ ದೈವಗಳು ಸತ್ಯ ಮತ್ತು ಧರ್ಮ ಹೊರತು ಪಡಿಸಿ ಯಾವುದಕ್ಕೂ ಬೆಂಬಲ ಕೊಡಲ್ಲ ಅಂತ ಸಿನಿಮಾ ತೋರಿಸಿದೆ. ಇದು ಒಂದೊಳ್ಳೆ ಸಂದೇಶ ಅನ್ನೋದು ನನ್ನ ಅನಿಸಿಕೆ ಎಂದರು.
ಧರ್ಮ ಸೂಕ್ಷ್ಮದಲ್ಲಿ ವಿಮರ್ಶೆ ಮಾಡುವ ಅಗತ್ಯವೇ ಇಲ್ಲ: ಹೆಗ್ಗಡೆ
ದೈವಾರಾಧನೆ ಹಿಂದೂ ಸಂಸ್ಕೃತಿ ಅಲ್ಲ ಎಂಬ ನಟ ಚೇತನ್ ಹೇಳಿಕೆ ವಿಚಾರ ಸಂಬಂಧಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮದ ಭಾಗ ಹೌದೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ಎರಡೂ ಜಿಲ್ಲೆಯಲ್ಲಿ ವ್ಯಾಪಕವಾಗಿ ದೈವಾರಾಧನೆ ಇದೆ. ಅವಿಭಜಿತ ಜಿಲ್ಲೆಯ ಮೂಲ ಸ್ವರೂಪ ಅರಿಯದೇ ಮಾತನಾಡಿದರೆ ಅದು ಬೇರೆಯಾಗುತ್ತೆ. ಧರ್ಮ ಅನ್ನುವ ಮೂಲ ಹುಡುಕಿಕೊಂಡು ಹೋದರೆ ಎಲ್ಲೂ ಸಿಗಲ್ಲ. ನಮ್ಮ ನಂಬಿಕೆ, ನಡವಳಿಕೆ, ಆಚರಣೆಗಳು ನಮ್ಮಲ್ಲಿ ಬೆಳೆದು ಬಂದವು. ಹಾಗಾಗಿ ನಾವು ಇದನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ಹಾಗಾಗಿ ಅವರು ಹಿಂದೂ ಧರ್ಮದ ಯಾವ ಸೂಕ್ಷ್ಮತೆ ನೋಡಿದ್ದಾರೋ ಗೊತ್ತಿಲ್ಲ. ನಮ್ಮ ಎರಡೂ ಜಿಲ್ಲೆಯಲ್ಲಿ ವ್ಯಾಪಕವಾಗಿ ಇರೋ ನಂಬಿಕೆ ಇದು. ನಾವು ದೈವಾರಾಧನೆ ಮಾಡಿ ದೈವಗಳಿಗೆ ಗೌರವ ಕೊಡ್ತೇವೆ ಅನ್ನೋದು ಸತ್ಯ. ದೈವ ಮೈ ಮೇಲೆ ಬಂದಾಗ ಆ ಮಾತಿಗೆ ನಾವು ಗೌರವ ಕೊಡ್ತೇವೆ. ಇದು ಧರ್ಮ ಸೂಕ್ಷ್ಮದಲ್ಲಿ ವಿಮರ್ಶೆ ಮಾಡುವ ಅಗತ್ಯವೇ ಇಲ್ಲ ಎಂದರು.