ನಮ್ಮ ಇಂಡಸ್ಟ್ರಿಯಲ್ಲಿ ಮಲೆನಾಡನ್ನು ಪ್ರಾಕೃತಿಕ ಸೌಂದರ್ಯಕ್ಕಾಗಿಯೋ, ಇನ್ಯಾವುದೋ ಪಾತ್ರಕ್ಕಾಗಿಯೋ ಸಾಂದರ್ಭಿಕವಾಗಿ ತೋರಿಸುತ್ತಾರೆ. ಆದರೆ ಮಲೆನಾಡನ್ನೇ ಮುಖ್ಯವಾಗಿಟ್ಟು ಮಾಡುವ ಸಿನಿಮಾಗಳು ಕಡಿಮೆ ಎಂದು ನಿರ್ದೇಶಕ ರಕ್ಷಿತ್‌ ತೀರ್ಥಹಳ್ಳಿ ಹೇಳಿದರು.

- ‘ತಿಮ್ಮನ ಮೊಟ್ಟೆಗಳು’ ನಾನು ಬರೆದ ಸಣ್ಣಕಥೆ ಆಧರಿಸಿ ತಯಾರಾದ ಸಿನಿಮಾ. ನಾನು ಈವರೆಗೆ ನಿರ್ದೇಶಿಸಿರುವ ‘ಹೊಂಬಣ್ಣ’, ‘ಎಂಥಾ ಕಥೆ ಮಾರಾಯ’ ಸಿನಿಮಾಗಳೆಲ್ಲ ಪಶ್ಚಿಮ ಘಟ್ಟದ ಸ್ಥಿತ್ಯಂತರದ ಕಥೆಯನ್ನಾಧರಿಸಿದವು. ಈ ಚಿತ್ರವೂ ಹಾಗೇ. ಇದರಲ್ಲಿ ಕಾಳಿಂಗ ಸರ್ಪ ಇಡೀ ಪಶ್ಚಿಮ ಘಟ್ಟದ ಪ್ರತಿನಿಧಿಯಂತೆ ಬರುತ್ತದೆ. ಮೂರು ಮುಖ್ಯ ಪಾತ್ರಗಳು ಆ ವಿಚಾರದಲ್ಲಿ ತಾಳುವ ನಿಲುವು, ನಿರ್ಧಾರಗಳು ಸಿನಿಮಾದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ.

- ಒಮ್ಮೆ ಸ್ನೇಹಿತರೆಲ್ಲ ಮಾತನಾಡುತ್ತಿದ್ದಾಗ ನನ್ನದೊಂದು ಕಥೆಯ ವಿಚಾರ ಪ್ರಸ್ತಾಪವಾಯಿತು. ಇದರಲ್ಲಿ ಒಂದು ಸಿನಿಮಾಕ್ಕೆ ಬೇಕಾದ ಎಲ್ಲಾ ಅಂಶಗಳೂ ಇವೆಯಲ್ಲಾ ಅನ್ನೋದನ್ನು ನಿರ್ಮಾಪಕ ಆದರ್ಶ್ ಹೇಳಿದರು, ಆಮೇಲಿಂದ ಈ ಕಥೆಯ ಸಿನಿಮಾ ಸಾಧ್ಯತೆ ಬಗ್ಗೆ ಚರ್ಚಿಸಿ ಚಿತ್ರ ಮಾಡಲು ಮುಂದಾದೆವು.

- ನಮ್ಮ ಇಂಡಸ್ಟ್ರಿಯಲ್ಲಿ ಮಲೆನಾಡನ್ನು ಪ್ರಾಕೃತಿಕ ಸೌಂದರ್ಯಕ್ಕಾಗಿಯೋ, ಇನ್ಯಾವುದೋ ಪಾತ್ರಕ್ಕಾಗಿಯೋ ಸಾಂದರ್ಭಿಕವಾಗಿ ತೋರಿಸುತ್ತಾರೆ. ಆದರೆ ಮಲೆನಾಡನ್ನೇ ಮುಖ್ಯವಾಗಿಟ್ಟು ಮಾಡುವ ಸಿನಿಮಾಗಳು ಕಡಿಮೆ. ನಾನು ಆ ಪ್ರಯತ್ನ ಮಾಡಿದ್ದೇನೆ. ಇದರಲ್ಲಿ ಮಲೆನಾಡ ನೈಜ ಬದುಕನ್ನು ಕಟ್ಟಿಕೊಟ್ಟಿದ್ದೇನೆ. ಬದುಕು ಮತ್ತು ನಂಬಿಕೆ ಎಂಬ ತತ್ವದ ಮೇಲೆ ಇಡೀ ಸಿನಿಮಾದ ಹರಿವು ಇದೆ. ಮಲೆನಾಡಿನ ಸಾಮಾನ್ಯನ ಬದುಕನ್ನು, ಸಂದಿಗ್ಧಗಳನ್ನು ತಿಮ್ಮನ ಪಾತ್ರದ ಮೂಲಕ ಹೇಳಿದ್ದೇನೆ. ಆದರೆ ಬೇರೆ ಬೇರೆ ಸನ್ನಿವೇಶಗಳಲ್ಲಿ ನಮ್ಮ ಬದುಕಿನಲ್ಲಿಯೂ ಎದುರಾಗುವ ವಿಚಾರಗಳು ಸಿನಿಮಾದಲ್ಲಿವೆ. ಮಲೆನಾಡಲ್ಲಿ ನಡೆಯುವ ಕಥೆ ಆಗಿರುವ ಕಾರಣ ಅಲ್ಲಿಯ ಭಾಷೆಯನ್ನೇ ಬಳಸಿದ್ದೇವೆ.

- ನಾವು ಚಿಕ್ಕವರಿದ್ದಾಗ ನಮ್ಮೂರಿನಲ್ಲಿ ಕಾಳಿಂಗ ಸರ್ಪಗಳು ಅಪರೂಪದಲ್ಲಿ ಅಪರೂಪವಾಗಿದ್ದವು. ಆದರೆ ಈಗ ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಅದೇ ಕೇರೆ ಹಾವು, ಇತರೆ ಚಿಕ್ಕಪುಟ್ಟ ಜೀವಿಗಳ ಸಂತತಿ ಕಡಿಮೆ ಆಗಿದೆ. ಇಂಥಾ ಬದಲಾವಣೆಗಳ ಹಿಂದಿನ ಅಂಶವನ್ನೂ ಸಿನಿಮಾದಲ್ಲಿ ಚರ್ಚಿಸಲಾಗಿದೆ.

- ಮೌಢ್ಯ ಮತ್ತು ನಂಬಿಕೆ ಇವುಗಳ ನಡುವೆ ಇರುವುದು ನೂಲೆಳೆಯ ಅಂತರ. ಮಲೆನಾಡ ನಾಗಬನಗಳು, ಮನುಷ್ಯ ಪ್ರವೇಶಿಸಲಾಗದ ಕಾಡುಗಳ ಬಗೆಗಿನ ಕಥೆಗಳು ಪ್ರಕೃತಿಯ ಮೇಲಾಗುವ ಮನುಷ್ಯನ ಹಸ್ತಕ್ಷೇಪವನ್ನು ತಪ್ಪಿಸುತ್ತವೆ. ಇದರಿಂದ ಅಪರೂಪದ ಜೀವಸಂಕುಲವಿರುವ ಕಾಡು ತನ್ನತನ ಉಳಿಸಿಕೊಳ್ಳುತ್ತದೆ. ಇಂಥಾ ವಿಚಾರಗಳು ಸಿನಿಮಾದಲ್ಲಿವೆ.

- ಸಿನಿಮಾಗಳಲ್ಲಿನ ವರ್ಗೀಕರಣವನ್ನು ನಾನು ಒಪ್ಪುವುದಿಲ್ಲ. ನೀವು ವರ್ಲ್ಡ್‌ ಸಿನಿಮಾವನ್ನು ಗಮನಿಸಿದರೆ ಇಂಥಾ ಸಿನಿಮಾಗಳನ್ನು ಪ್ರೇಕ್ಷಕರು ಥೇಟರ್‌ಗೆ ಬಂದು ನೋಡುವುದು ಕಡಿಮೆ. ಹೀಗಾಗಿ ಇಂಥಾ ಚಿತ್ರ ಬರುವುದೂ ಕಡಿಮೆ. ಆದರೆ ತಿಂಗಳಿಗೆ ಎರಡಾದರೂ ವಾಸ್ತವಿಕ ನೆಲೆಯ ಇಂಥಾ ಚಿತ್ರಗಳು ಬರುತ್ತಿದ್ದರೆ ಪ್ರೇಕ್ಷಕರಲ್ಲಿ ಅಭಿರುಚಿ ಬೆಳೆಯುತ್ತದೆ.