ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್‌ ಫೆಬ್ರವರಿ 16ರಂದು 43ರ ವಸಂತಕ್ಕೆ ಕಾಲಿಡಲಿದ್ದಾರೆ. ಪ್ರತಿ ವರ್ಷವೂ ಅಭಿಮಾನಿಗಳನ್ನು ಭೇಟಿ ಮಾಡಿ, ಬಾಡೂಟ ಹಾಕಿಸುವ ದರ್ಶನ್ ಈ ವರ್ಷದ ಆಚರಣೆಗೆ ಬ್ರೇಕ್ ಹಾಕಿದ್ದಾರೆ.

"

ಹೌದು! ಕಳೆದ ವರ್ಷ ದರ್ಶನ್‌ ಮಧ್ಯರಾತ್ರಿ 12ಕ್ಕೇ ರಾಬರ್ಟ್‌ ಫಸ್ಟ್ ಲುಕ್ ಹಾಗೂ ಟೀಸರ್ ಬಿಡುಗಡೆ ಮಾಡಿ, ಅಭಿಮಾನಿಗಳ ಜೊತೆ ಸಮಯ ಕಳೆದರು. ಬೆಳಗ್ಗೆಯೂ ಅಕ್ಕಿ ಮೂಟೆಗಳನ್ನು ಹೊತ್ತು ತಂದ ಪ್ರತಿಯೊಬ್ಬ ಅಭಿಮಾನಿಯನ್ನೂ ಮಾತನಾಡಿಸಿದ್ದರು. ಆದರೆ ಈ ವರ್ಷ ಕೊರೋನಾ ಸೋಂಕಿರುವ ಕಾರಣ ಜಾರಿಯಲ್ಲಿರುವ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ದರ್ಶನ್ ಹುಟ್ಟಿದಬ್ಬ ಆಚರಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಫೇಸ್‌ಬುಕ್‌ ಲೈವ್ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ ದರ್ಶನ್, ದಯವಿಟ್ಟು ತಮ್ಮ ಕುಟುಂಬದ ಆರೋಗ್ಯ ಹಾಗೂ ಆರೈಕೆ ಬಗ್ಗೆ ಮೊದಲು ಗಮನ ಕೊಡಿ. ನನ್ನ ಹುಟ್ಟು ಹಬ್ಬಕ್ಕೆ ಹಣ ಖರ್ಚು ಮಾಡಿಕೊಂಡು ಬರುವುದು ಬೇಡ. ಅನೇಕರು ಈ ವರ್ಷ ಕೆಲಸ ಕಳೆದುಕೊಂಡಿದ್ದಾರೆ. ನಾನೂ ನಿಮ್ಮ ಹಾಗೆ ವರ್ಷವಿಡೀ ಕೆಲಸ ಮಾಡದೇ ಕೂತಿರುವೆ. ಎಲ್ಲರ ಪರಿಸ್ಥಿತಿ ಅರ್ಥ ಮಾಡಿಕೊಂಡು ಈ ನಿರ್ಧಾರ ಕೈಗೊಂಡಿರುವೆ ಎಂದು ದರ್ಶನ್ ಹೇಳಿದ್ದಾರೆ.

ದೊಡ್ಡ ಬಂಡವಾಳ ಚಿತ್ರಕ್ಕೆ ಒಂದಾದ ನಟ ದರ್ಶನ್‌ ಮತ್ತು ಹರಿಕೃಷ್ಣ!

ಮೊದಲ ಬಾರಿ ಫೇಸ್‌ಬುಕ್‌ ಲೈವ್ ಬಂದಿರುವ ಕಾರಣ ದರ್ಶನ್ ಅಭಿಮಾನಿಗಳು ಕೇಳಿರುವ ಪ್ರಶ್ನೆಗೆ ಉತ್ತರಿಸಿದ್ದಾರೆ. ನೆಚ್ಚಿನ ನಟನನ್ನು ಭೇಟಿ ಮಾಡಲಾಗದ ಫ್ಯಾನ್ಸ್ ಬೇಸರ ವ್ಯಕ್ತ ಪಡಿಸುತ್ತಿದ್ದರು. ಅವರಿಗೆ ಒಂದು ಉಪಾಯವನ್ನೂ ಹೇಳಿದ್ದಾರೆ. ಪ್ರತಿ ಊರಿಗೂ ಒಂದೊಂದು ದಿನಾಂಕ ನಿಗದಿ ಮಾಡಿಕೊಂಡು ಬರುವೆ. ಅಲ್ಲಿಯೇ ಎಲ್ಲರನ್ನು ಭೇಟಿ ಮಾಡುವೆ. ದಯವಿಟ್ಟು ಎಲ್ಲರೂ ಸಹಕರಿಸಬೇಕು. ಆ ದಿನ ಗುಂಪಾಗಿ ಸೇರಿಕೊಂಡು ತೊಂದರೆ ಮಾಡಬಾರದು, ಖಂಡಿತವಾಗಿಯೂ ಇದಕ್ಕೆ ಪೊಲೀಸರು ಒಪ್ಪಿಗೆ ನೀಡುವುದಿಲ್ಲ ಸರಕಾರ ನಿಯಮದ ಪ್ರಕಾರ ಇದು ತಪ್ಪು ಕೂಡ ಹೌದು. ಆದರೆ ಇದೆಲ್ಲಾ ಕಡಿಮೆಯಾಗಲಿ ಒಂದು ದಿನಾಂಕ ಹೇಳುವೆ ಎಂದಿದ್ದಾರೆ.