ಸದ್ದಿಲ್ಲದೇ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೊಸ ಚಿತ್ರವೊಂದು ನವೆಂಬರ್ 8ಕ್ಕೆ ಬಿಡುಗಡೆಯಾಗುತ್ತಿದೆ. 'ಆ ದೃಶ್ಯ'ದಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷ. ಏನೀ ಚಿತ್ರದ ಸ್ಪೆಷಲ್?

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆಗೆ ಸಜ್ಜಾಗಿದೆ. ಹೆಸರು ‘ಆ ದೃಶ್ಯ’. ಇದು ಪಿ. ವಾಸು ನಿರ್ದೇಶನದ ‘ದೃಶ್ಯ’ ಚಿತ್ರದ ಮುಂದುವರಿದ ಭಾಗವಲ್ಲ. ಆದರೂ ಅದರಂತæ ಈ ಸಿನಿಮಾವೂ ಹೊಸ ಇಮೇಜ್‌ನಲ್ಲಿ ಮೂಡಿ ಬಂದಿದ್ದು, ನವೆಂಬರ್‌ 8ಕ್ಕೆ ಅದ್ದೂರಿಯಾಗಿ ಬಿಡುಗಡೆ ಮಾಡಲು ನಿರ್ಮಾಪಕ ಕೆ ಮಂಜು ಸಜ್ಜಾಗಿದ್ದಾರೆ. ಹಾಗೆ ನೋಡಿದರೆ ನ.1ಕ್ಕೆ ಈ ಸಿನಿಮಾ ಬರಬೇಕಿತ್ತು. ಆದರೆ, ಶಿವರಾಜ್‌ಕುಮಾರ್‌ ನಟನೆಯ ‘ಆಯುಷ್ಮಾನ್‌ ಭವ’ ಸಿನಿಮಾ ಬರುತ್ತದೆ ಎನ್ನುವ ಕಾರಣಕ್ಕಾಗಿ ಅವರಿಗಾಗಿ ‘ಆ ದೃಶ್ಯ’ ಚಿತ್ರವನ್ನು ಮುಂದೂಡಲಾಗಿತ್ತು. ಈಗ ಶಿವಣ್ಣ ಸಿನಿಮಾದ ದಿನಾಂಕ ನಿಗದಿ ಆಗಿಲ್ಲ. ಹೀಗಾಗಿ ಚಿತ್ರವನ್ನು ನ.8ಕ್ಕೆ ಬಿಡುಗಡೆ ಮಾಡುತ್ತಿದ್ದಾರೆ.

ಈ ಹಿಂದೆ ಸುದೀಪ್‌ ಅವರ ನಿರ್ಮಾಣದಲ್ಲಿ ಮೂಡಿಬಂದಿದ್ದ ‘ಜಿಗರ್‌ಥಂಡಾ’ ಚಿತ್ರವನ್ನು ನಿರ್ದೇಶಿಸಿದ್ದ ಶಿವಗಣೇಶ್‌ ಅವರೇ ‘ಆ ದೃಶ್ಯ’ಕ್ಕೂ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರಕ್ಕಾಗಿ 10 ಕೆಜಿ ತೂಕ ಇಳಿಸಿಕೊಳ್ಳುವ ಜತೆಗೆ ತಮ್ಮ ಔಟ್‌ ಲುಕ್‌ಅನ್ನೇ ಬದಲಿಸಿಕೊಳ್ಳುವ ಮೂಲಕ ರವಿಚಂದ್ರನ್‌ ಅವರು ಗಮನ ಸೆಳೆದಿದ್ದಾರೆ. ಅಚ್ಯುತ್‌ ಕುಮಾರ್‌, ರಮೇಶ್‌ ಭಟ್‌, ಚೈತ್ರಾ ಆಚಾರ್‌ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಕನಸುಗಾರನಿಗೆ ಗೌರವ ಡಾಕ್ಟರೇಟ್

‘ದೃಶ್ಯ ಸಿನಿಮಾ ರೀತಿಯಲ್ಲೇ ಆ ದೃಶ್ಯ ಕೂಡ ರವಿಚಂದ್ರನ್‌ ಅವರಿಗೆ ಹೊಸ ಇಮೇಜ್‌ ನೀಡುವ ಸಿನಿಮಾ ಆಗಲಿದೆ. ಕ್ರೈಮ್‌ ಮರ್ಡರ್‌ ಮಿಸ್ಟ್ರಿ ಕತೆ ಇದು. ಕೊನೆಯ ತನಕ ಕುತೂಹಲದಿಂದ ನೋಡಿಸಿಕೊಂಡು ಹೋಗುತ್ತದೆ. ಮೂರು ಫೈಟ್‌ಗಳಿವೆ. ಸಾಹಸ ಪ್ರಿಯರಿಗೂ ಈ ಸಿನಿಮಾ ಮೆಚ್ಚುಗೆ ಆಗುತ್ತದೆ. ಕ್ರೈಮ್‌ ಥ್ರಿಲ್ಲರ್‌ ಚಿತ್ರಗಳಿಗಾಗಿ ಕಾಯುತ್ತಿರುವವರು ಈ ಚಿತ್ರವನ್ನು ಧಾರಾಳವಾಗಿ ನೋಡಬಹುದು’ ಎನ್ನುತ್ತಾರೆ ನಿರ್ಮಾಪಕ ಕೆ ಮಂಜು.

ಕನ್ನಡ ಚಿತ್ರರಂಗದಲ್ಲಿ 'ಪ್ರೇಮಲೋಕ'ವನ್ನೇ ಸೃಷ್ಟಿಸಿದ ರವಿಚಂದ್ರನ್ ಶಾಂತಿಯಿಂದಿದ್ದ ಚಿತ್ರರಂಗದಲ್ಲಿ ಕ್ರಾಂತಿಯನ್ನೇ ಮಾಡಿದವರು. ಅದ್ಭುತ ಸೆಟ್ ಮೂಲಕ ಎಂಥವರ ಕಣ್ಣನ್ನೂ ಕೊರೈಸುವಂತೆ ಮಾಡಿದ 'ಕನಸುಗಾರ', 'ಏಕಾಂಗಿ'ಯಾಗಿಯೇ ವಿಭಿನ್ನವಾದ ಚಿತ್ರಗಳನ್ನು ಮಾಡಿದವರು. ಇದೀಗ ಹೊಸ ಪಾತ್ರದಲ್ಲಿ ಈ 'ಕಲಾವಿದ' ಹೇಗೆ ಕಾಣಿಸುತ್ತಾರೆ ಎಂಬುವುದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ.

ರವಿಮಾಮನಿಗೆ ಕಿಚ್ಚ ಸಲಹೆ