ವೇಷ ಅಡುಗೆ ಭಟ್ಟ, ಕೈಯಲ್ಲಿ ರಕ್ತಸಿಕ್ತ ಚಾಕು! ಬೆಳ್ಳಿ ಪರದೆ ಮೇಲೆ ಜೊತೆ ಜೊತೆಯಲಿ 'ಆರ್ಯ'
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟ ಅನಿರುದ್ಧ್ ಅವರು ಷೆಫ್ ಚಿದಂಬರ ಚಿತ್ರದ ಮೂಲಕ ಬೆಳ್ಳಿಪರದೆಯ ಮೇಲೆ ಮಿಂಚಲಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಜೊತೆಜೊತೆಯಲಿ (Jote Joteyali) ಧಾರಾವಾಹಿಯ ಮೂಲಕ ಎಲ್ಲರ ಮನವನ್ನು ಗೆದ್ದಿರೋ ನಟ ಅನಿರುದ್ಧ್ ಜತ್ಕರ್. ಈ ಹೆಸರಿಗಿಂತಲೂ ಹೆಚ್ಚಾಗಿ ಅವರನ್ನು ಈ ಧಾರಾವಾಹಿಯ ಪಾತ್ರವಾಗಿರುವ ಆರ್ಯ ಇಲ್ಲವೇ ಆರ್ಯವರ್ಧನ್ ಎಂದರೆ ಹಲವರಿಗೆ ಅರ್ಥವಾದೀತು. ತಮ್ಮ ಅದ್ಭುತ ಅಭಿನಯದಿಂದ ಮನೆಮಾತಾದವರು ಅನಿರುದ್ಧ್. ಜೊತೆಜೊತೆಯಲಿ ಧಾರಾವಾಹಿಯ ಬಳಿಕ ಅವರು, ಎಸ್. ನಾರಾಯಣ್ ನಿರ್ದೇಶನದ ‘ಸೂರ್ಯವಂಶ’ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ವಿಚಾರವನ್ನು ಖುದ್ದು ಅನಿರುದ್ಧ್ ಅವರೇ ತಿಳಿಸಿದ್ದರು. ಎಸ್.ನಾರಾಯಣ್ ಜೊತೆಗೆ ಅನಿರುದ್ಧ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ ಕೆಲ ಕಾರಣಗಳಿಂದ ಈ ಧಾರಾವಾಹಿ ಇನ್ನೂ ಶುರುವಾಗಲಿಲ್ಲ. ಇದೀಗ ಅನಿರುದ್ಧ್ ಅವರು ಸಿನಿಮಾದತ್ತ ಮುಖ ಮಾಡಿದ್ದು, ಅಡುಗೆ ಭಟ್ಟನಾಗಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ತೆರೆಗೆ ಬಂದಿದ್ದ ರಾಜಾ ಸಿಂಹ ಸಿನಿಮಾ ಬಳಿಕ ಹಿರಿತೆರೆಯಿಂದ ಕಿರುತೆರೆಯತ್ತ ಮುಖ ಮಾಡಿದ್ದ ಅನಿರುದ್ಧ್ ಅವರು, ಈಗ ಅಡುಗೆ ಭಟ್ಟನಾಗಿ ಆರು ವರ್ಷದ ಬಳಿಕ ಮತ್ತೆ ಹಿರಿತೆರೆಗೆ ವಾಪಸಾಗುತ್ತಿದ್ದಾರೆ.
ರಾಘು ಚಿತ್ರದ ಖ್ಯಾತಿಯ ನಿರ್ದೇಶಕ ಎಂ. ಆನಂದರಾಜ್ ನಿರ್ದೇಶನದ ಚಿತ್ರದಲ್ಲಿ ಅನಿರುದ್ಧ್ ನಟಿಸುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಇಂದು ಅನಾವರಣಗೊಂಡಿದೆ. ಅಡುಗೆ ಭಟ್ಟನಾಗಿ ಕಾಣಿಸಿಕೊಳ್ಳಲಿರುವ ಅನಿರುದ್ಧ್ ಅವರ ಈ ಚಿತ್ರದ ಹೆಸರು Chef ಚಿದಂಬರ (Chef Chidambar) ಎಂದು. ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್ ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಮುಂತಾದವರು ನಟಿಸಲಿದ್ದಾರೆ. ಇದೊಂದು ಡಾರ್ಕ್ ಕಾಮಿಡಿ ಸಿನಿಮಾವಾಗಿದೆ ಎಂದಿರುವ ಚಿತ್ರ ಸಾಹಿತಿ ಆನಂದ್, ಚಿತ್ರದಲ್ಲಿ ಅನಿರುದ್ಧ್ ಅವರನ್ನು ಮೊದಲ ಬಾರಿಗೆ ಬಾಣಸಿಗನ ಪಾತ್ರದಲ್ಲಿ ತೋರಿಸಲಾಗುತ್ತಿದೆ ಎಂದಿದ್ದಾರೆ. ನಾನು ಸ್ಕ್ರಿಪ್ಟ್ ಬರೆದಿದ್ದೆ, 30 ವರ್ಷದ ಸೂಕ್ತ ನಟನ ಹುಡುಕಾಟದಲ್ಲಿದ್ದೆ, ಕುಟುಂಬ ಪ್ರೇಕ್ಷಕರೊಂದಿಗೆ ಅನುರಣಿಸಬಲ್ಲ ವ್ಯಕ್ತಿ, ಅನಿರುದ್ಧ್ ಅವರ ಆಲೋಚನೆ ನನ್ನ ಮನಸಿಗೆ ಬಂತು ಎಂದು ಆನಂದ್ ತಿಳಿಸಿದ್ದಾರೆ.
Megha Shetty: ಮರಾಠಿ ಸಿನಿಮಾದಲ್ಲಿ ಜೊತೆಜೊತೆಯಲಿ 'ಅನು' ಮಿಂಚಿಂಗ್!
ಇದೇ ತಿಂಗಳ 10ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ಹೇಳಿದೆ. ಡಾರ್ಕ್ ಕಾಮಿಡಿ ಜಾನರ್‌ನ ಈ ಚಿತ್ರದಲ್ಲಿ ಅನಿರುದ್ಧ್ ಅವರು ಮುಖ್ಯ ಬಾಣಸಿಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಇದನ್ನು ನೋಡಬಹುದು. ರೂಪಾ ಡಿ.ಎನ್ ಅವರು ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾಕ್ಕೆ ನಿರ್ದೇಶಕರೇ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ವಿಶೇಷ ಏನೆಂದರೆ ಚಿತ್ರದ ಪೋಸ್ಟರ್‌ನಲ್ಲಿ ಎರಡು ಶೇಡ್‌ಗಳು ಕಾಣಿಸುತ್ತಿವೆ. ಕೈಯಲ್ಲಿ ತರಕಾರಿ ಕತ್ತರಿಸುವ ಚಾಕು ಹಿಡಿದರೂ, ನೋಡುವ ನೋಟ, ಕೈಯಲ್ಲಿ ತೊಟ್ಟಿಕ್ಕುವ ರಕ್ತ ಬೇರೆಯದೇ ಕಥೆ ಹೇಳುತ್ತಿದೆ. ಕಥೆಯು ಅಪರಾಧ, ಕೊಲೆ ಮತ್ತು ನಿಗೂಢತೆಯ ಅಂಶಗಳನ್ನು ಒಳಗೊಂಡಿದೆ, ನಾಯಕನ ಆಂತರಿಕ ಸಂಘರ್ಷ, ಆತ ಅದರಲ್ಲಿ ಸಿಲುಕಿಕೊಳ್ಳುವುದು ಮತ್ತು ಆತ ಸಂಕಟದಿಂದ ಹೊರಬರಲು ಅವನು ಮಾಡುವ ತಂತ್ರಗಳ ಸುತ್ತ ಕತೆ ಸುತ್ತುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ, ವಿಕ್ರಾಂತ್ ರೋಣ ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ, ಮಾಧುರಿ ಪರಶುರಾಮ್ ಕೋರಿಯೋಗ್ರಫ್ ಚಿತ್ರಕ್ಕಿದೆ.