ರಘುಶಾಸ್ತ್ರಿ ನಿರ್ದೇಶನದ ‘ಟಕ್ಕರ್‌’ ಚಿತ್ರದ ಟೀಸರ್‌ ನೋಡಿದ ದರ್ಶನ್‌, ಇಡೀ ಚಿತ್ರತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರದ ನಾಯಕ ಮನೋಜ್‌ ಅವರು ದರ್ಶನ್‌ ಅವರ ಸಂಬಂಧಿ. ಅಲ್ಲದೆ ಇದು ಅವರ ಮೊದಲ ಸಿನಿಮಾ. ನಾಗೇಶ್‌ ಕೋಗಿಲು ನಿರ್ಮಾಣದ ಈ ಚಿತ್ರದ ಟೀಸರ್‌ ಇತ್ತೀಚೆಗಷ್ಟೆ ಬಿಡುಗಡೆಗೊಂಡಿತು.

 

ತಮ್ಮ ಹುಡುಗನ ಮೊದಲ ಚಿತ್ರಕ್ಕೆ ಶುಭ ಕೋರಲು ದರ್ಶನ್‌ ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಟೀಸರ್‌ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುವ ಜತೆಗೆ ಈ ಚಿತ್ರವನ್ನು ಯಾವ ರೀತಿ ಬಿಡುಗಡೆ ಮಾಡಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಮೊದಲ ಟೀಸರ್‌ ತುಂಬಾ ಚೆನ್ನಾಗಿ ಬಂದಿದೆ ಎಂದಿದ್ದು ಮಾತ್ರವಲ್ಲದೆ, ಧ್ವನಿಮುದ್ರಣಗೊಂಡಿರುವ ಟೈಟಲ್‌ ಸಾಂಗ್‌ ಅನ್ನು ಕೇಳಿ ಅದರ ಬಗ್ಗೆ ಕೂಡಾ ದರ್ಶನ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾಗಿ ಚಿತ್ರದ ನಿರ್ದೇಶಕ ರಘು ಶಾಸ್ತ್ರಿ ತಿಳಿಸಿದ್ದಾರೆ.

‘ನಿನ್ನನ್ನು ನಂಬಿ ನಿರ್ಮಾಪಕರು ಹಣ ಹೂಡಿದ್ದಾರೆ. ಪ್ರತೀ ಹಂತದಲ್ಲೂ ಅವರ ಜೊತೆಗಿರಬೇಕು. ನಿರ್ಮಾಪಕರ ಹಿತ ಕಾಯಬೇಕಿರುವುದು ಪ್ರತಿಯೊಬ್ಬ ಕಲಾವಿದನ ಕರ್ತವ್ಯ. ನಾಗೇಶ್‌ ಕೋಗಿಲು ಮತ್ತು ನಿನ್ನ ಸ್ನೇಹ ಬಾಂಧವ್ಯ ಈ ಒಂದು ಸಿನಿಮಾಗೆ ಕೊನೆಯಾಗಬಾರದು. ಟಕ್ಕರ್‌ ಸಿನಿಮಾ ತೆರೆಗೆ ಬಂದಮೇಲೂ ಇನ್ನೂ ಸಾಕಷ್ಟುಸಿನಿಮಾಗಳು ನೀವು ಒಟ್ಟಿಗೇ ಕೆಲಸ ಮಾಡುವಂತಾಗಲಿ’ ಎಂದು ದರ್ಶನ್‌ ಶುಭ ಹಾರೈಸಿದ್ದಾರೆ.