‘ನೈಟಿ ಮಾತ್ರ ಹಾಕೋಬೇಡ ಮೇನಕ. ನಮಗೆ ನೈಂಟಿ ಹೊಡದಂಗೆ ಆಗ್ತದೆ ಜೀವಕ್ಕೆ’ ಎಂಬ ಹಾಡಿಗೆ ಸ್ಟೆಪ್ಸ್ ಹಾಕಿದ ಲಾಸ್ಯ ನಾಗರಾಜ್ ಎಲ್ಲರ ಹೃದಯಕ್ಕೂ ಲಗ್ಗೆ ಇಟ್ಟಿದ್ದಾರೆ.

ಅಜಯ್‌ ರಾವ್‌ ನಟನೆಯ ‘ಕೃಷ್ಣ ಟಾಕೀಸ್‌’ನಲ್ಲಿ ಈಗ ಐಟಂ ಹಾಡಿನ ಹವಾ. ಕತ್ತಲ ತುಂಬಿಕೊಂಡಿದ್ದ ಸೆಟ್‌ನಲ್ಲಿ ರಂಗು ರಂಗಿನ ಲೈಟಿಂಗ್‌ನಿಂದ ಕೂಡಿದ ಕಲರ್‌ಫುಲ್‌ ಸೆಟ್‌ನಲ್ಲಿ, ನಾಯಕ ಐಟಂ ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ ಹಿನ್ನೆಲೆಯಿಂದ ‘ನೈಟಿ ಮಾತ್ರ ಹಾಕೋಬೇಡ ಮೇನಕ. ನಮಗೆ ನೈಂಟಿ ಹೊಡದಂಗೆ ಆಗ್ತದೆ ಜೀವಕ್ಕೆ’ ಎನ್ನುವ ಹಾಡಿನ ಸಾಲುಗಳು ಸದ್ದು ಮಾಡುತ್ತಿದ್ದವು. ಇದು ಮೋಹನ್‌ ಬಿ ಕೆರೆ ಸ್ಟುಡಿಯೋದಲ್ಲಿ ಕಂಡ ದೃಶ್ಯ.

ಈ ಹಾಡಿಗೆ ಅಭಿಷೇಕ್‌ ಹಾಗೂ ಪ್ರಮೋದ್‌ ಮರವಂತೆ ಅವರು ಹಾಡು ಬರೆದಿದ್ದು, ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಭೂಷಣ್‌ ನೃತ್ಯ ನಿರ್ದೇಶನದ ಈ ಹಾಡಿಗೆ ಸೊಂಟ ಬಳುಕಿಸಿದ್ದು ನಟಿ ಲಾಸ್ಯ ನಾಗರಾಜ್‌. ಈಕೆ ಬಿಗ್‌ಬಾಸ್‌ ಮನೆಯ ಸ್ಪರ್ಧಿಯಾಗಿದ್ದವರು. ‘ನನ್ನ ದೇಹ ನನ್ನಿಷ್ಟ’ ಎಂದು ಹೇಳುತ್ತ ಹಾಟ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಅಪ್‌ಲೋಡ್‌ ಮಾಡಿ ಸುದ್ದಿಯಾದವರು. ‘ಅಸತೋಮ ಸದ್ಗಮಯ’ ಚಿತ್ರದಲ್ಲಿ ನಟಿಸಿದವರು. ಈಗ ಅಜಯ್‌ ರಾವ್‌ ಜತೆಗೆ ಟಪ್ಪಾಂಗುಚ್ಚಿ ಹಾಕುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅದರಲ್ಲೂ ಐಟಂ ಹಾಡಿಗೆ ಕುಣಿದಿರುವುದು ವಿಶೇಷ. ಲಾಸ್ಯ ನಾಗರಾಜ್‌ ಜತೆಗೆ ಅಜಯ್‌ರಾವ್‌, ಚಿಕ್ಕಣ್ಣ ಸೇರಿದಂತೆ ಐವತ್ತಕ್ಕೂ ಹೆಚ್ಚು ಕಲಾವಿದರು ಈ ಐಟಂ ಹಾಡಿಗೆ ನೃತ್ಯ ಮಾಡಿದ್ದಾರೆ. ಐಟಂ ಹಾಡಿನ ಜತೆಗೆ ಅತಿಥಿ ಪಾತ್ರದಲ್ಲೂ ಲಾಸ್ಯ ನಾಗರಾಜ್‌ ಕಾಣಿಸಿಕೊಂಡಿದ್ದಾರೆ. ವಿಜಯಾನಂದ್‌ ಈ ಚಿತ್ರದ ನಿರ್ದೇಶಕರು.

ಕೃಷ್ಣ ಟಾಕೀಸ್‌ನಲ್ಲಿ ಸಿಂಧು ಲೋಕನಾಥ್

ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. 20ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ 60ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ಹಾಗೂ 40ಕ್ಕೂ ಹೆಚ್ಚು ಚಿತ್ರಗಳಿಗೆ ಗೀತರಚನೆ ಮಾಡಿರುವ ಆನಂದ ಪ್ರಿಯ ಈ ಚಿತ್ರದ ಮೂಲಕ ತಮ್ಮ ಹೆಸರನ್ನು ವಿಜಯಾನಂದ್‌ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ.