ಅದು ಪುಣ್ಯ ಸ್ಮರಣೆಯ ಶೋಕ ಮತ್ತು ಸಿನಿಮಾವೊಂದರ ಟ್ರೇಲರ್ ಬಿಡುಗಡೆ ಸಂಭ್ರಮ. ಈ ಎರಡಕ್ಕೂ ಒಂದೇ ವೇದಿಕೆ ಸಾಕ್ಷಿಯಾಗಿತ್ತು. ‘ನನ್ನ ಗೆಳೆಯನ ಪಾತ್ರಕ್ಕೆ ನನ್ನ ಧ್ವನಿ ಕೊಡುವ ಸಂದರ್ಭ ಬರುತ್ತದೆ ಅಂತ ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ.
ಅದು ಪುಣ್ಯ ಸ್ಮರಣೆಯ ಶೋಕ ಮತ್ತು ಸಿನಿಮಾವೊಂದರ ಟ್ರೇಲರ್ ಬಿಡುಗಡೆ ಸಂಭ್ರಮ. ಈ ಎರಡಕ್ಕೂ ಒಂದೇ ವೇದಿಕೆ ಸಾಕ್ಷಿಯಾಗಿತ್ತು. ‘ನನ್ನ ಗೆಳೆಯನ ಪಾತ್ರಕ್ಕೆ ನನ್ನ ಧ್ವನಿ ಕೊಡುವ ಸಂದರ್ಭ ಬರುತ್ತದೆ ಅಂತ ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ’... ಹೀಗೆ ಹೇಳಿ ಲೂಸ್‌ಮಾದ ಯೋಗೀಶ್ ಕ್ಷಣಕಾಲ ಮೌನಕ್ಕೆ ಜಾರಿದರು. ಅಲ್ಲಿವರೆಗೂ ಚಪ್ಪಾಳೆ, ಶಿಳ್ಳೆ, ಕೇಕೆಗಳು ಸದ್ದು ಹೊಡಿಸುತ್ತಿದ್ದ ಮೈದಾನ ಪೂರ್ತಿ ಮೌನ. ಆ ನಂತರ ವೇದಿಕೆ ಮೇಲೆ ಮಾತನಾಡಿದ ಬಹುತೇಕರು ಭಾವುಕರಾಗಿದ್ದರು.
ಅಂದಹಾಗೆ ಅದು ‘ಬೆಂಟ್ಲಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ. ಎಲ್ಲರು ಭಾವುಕರಾಗಿದ್ದ ಕಾರಣ ಈ ಚಿತ್ರದ ನಾಯಕ ಮತ್ತು ನಿರ್ದೇಶಕ ಸಂತೋಷ್ ಬಾಲರಾಜ್ ಅವರ ಅಕಾಲಿಕ ಮರಣ. ತಮ್ಮ ತಂದೆ ನಿರ್ಮಾಪಕ ಆನೆಕಲ್ ಬಾಲರಾಜ್ ಅವರನ್ನು ಕಳೆದುಕೊಂಡ ಸಂತೋಷನ್ ಬಾಲರಾಜ್, ನಿರ್ಮಾಣ ಸಂಸ್ಥೆಯ ಸಾರಥಿಯಾಗಿ ತಮ್ಮ ಚಿತ್ರವನ್ನು ತಾವೇ ನಿರ್ಮಿಸಿ, ನಿರ್ದೇಶಿಸಿ, ನಟಿಸುವ ಹೊಣೆ ಹೊತ್ತುಕೊಂಡರು. ಆದರೆ, ವಿಧಿ ಕನಸನ್ನು ಪೂರ್ತಿಗೊಳಿಸಲು ಬಿಡಲಿಲ್ಲ.
ಬಹುಶಃ ಚಿತ್ರದ ನಾಯಕ, ನಿರ್ದೇಶಕನ ಪುಣ್ಯ ಸ್ಮರಣೆ ವೇದಿಕೆಯಲ್ಲೇ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು ಕನ್ನಡದಲ್ಲಿ ಇದೇ ಮೊದಲು ಇರಬೇಕು. ಹೀಗೆ ಅಕಾಲಿಕವಾಗಿ ನಿಧನರಾದ ಸಂತೋಷ್ ಬಾಲರಾಜ್ ಅವರ ‘ಬೆಂಟ್ಲಿ’ ಚಿತ್ರದ ಅವರ ಪಾತ್ರಕ್ಕೆ ಲೂಸ್‌ಮಾದ ಯೋಗೀಶ್ ಡಬ್ಬಿಂಗ್ ಮಾಡಿದ್ದಾರೆ. ‘ನನ್ನ ಗೆಳೆಯ ನಿರ್ದೇಶಿಸಿ, ನಟಿಸಿದ ಚಿತ್ರದ ಟ್ರೇಲರ್ ಬಿಡುಗಡೆ ಆಗುತ್ತಿದೆ ಎಂದು ಖುಷಿ ಪಡಬೇಕೋ, ಇದೇ ವೇದಿಕೆಯಲ್ಲಿ ಅವನ ಮೊದಲ ವರ್ಷದ ಪುಣ್ಯ ಸ್ಮರಣೆ ಎಂದು ದುಃಖಿಸಬೇಕೋ ಗೊತ್ತಾಗುತ್ತಿಲ್ಲ. ನಾನು ಅವನ ಪಾತ್ರಕ್ಕೆ ಡಬ್ ಮಾಡುವ ಸಂದರ್ಭ ಈ ರೀತಿ ಬರಬಹುದು ಎಂದು ಊಹೆ ಮಾಡಿರಲಿಲ್ಲ. ಸಿನಿಮಾಗಳ ಬಗ್ಗೆ ಅಪಾರವಾದ ಕನಸುಗಳನ್ನು ಕಟ್ಟಿಕೊಂಡಿದ್ದ ಸಂತೋಷ್‌ನ ಕೊನೆಯ ಸಿನಿಮಾ ಇದು. ಈ ಸಿನಿಮಾ ಆದಷ್ಟು ಬೇಗ ರಿಲೀಸ್ ಆಗಲಿ. ಎಲ್ಲರು ಸೇರಿ ಈ ಸಿನಿಮಾನ ಗೆಲ್ಲಿಸೋಣ’ ಎಂದರು ಲೂಸ್‌ಮಾದ ಯೋಗೀಶ್.
ನೋವಿನ ಸಂಗತಿ
ಪ್ರಮೋದ್ ಶೆಟ್ಟಿ, ‘ಸಂತೋಷ್ ನನಗೆ ಕಡಿಮೆ ಪರಿಚಯ. ಆದರೆ, ಆತನ ಸಿನಿಮಾ ಕನಸುಗಳ ದೊಡ್ಡ ಪರಿಚಯವೇ ಇದೆ. ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ವ್ಯಕ್ತಿ. ತೀರಾ ಚಿಕ್ಕ ವಯಸ್ಸಿಗೆ ಸಂತೋಷ್ ಅಗಲಿದ್ದು ನೋವಿನ ಸಂಗತಿ. ‘ಬೆಂಟ್ಲಿ’ ಅವರ ಮಹತ್ವಾಕಾಂಕ್ಷೆಯ ಚಿತ್ರ. ಇದು ಗೆಲ್ಲಬೇಕು’ ಎಂದರು. ಶ್ವೇತಾ ಬಾಲರಾಜ್ ನಿರ್ಮಾಣದ ಈ ಚಿತ್ರದಲ್ಲಿ ಸಿಮ್ರಾನ್ ನಟೇಕರ್, ಶ್ರುತಿ, ಚರಣ್‌ರಾಜ್, ರಾಜಾ ಬಲವಾಡಿ ನಟಿಸಿದ್ದಾರೆ. ಸಂತೋಷ್ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆ.5 ರಂದು ಬಿಡುಗಡೆ ಆಗಿರುವ ‘ಬೆಂಟ್ಲಿ’ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.


