ಉಮಾಪತಿ ಮತ್ತು ಸಹೋದರ ದೀಪಕ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

'ರಾಬರ್ಟ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಉಮಾಪತಿ ಮತ್ತು ಅವರ ಸಹೋದರ ದೀಪಕ್‌ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. 

ಹತ್ಯೆಗೆ ಸ್ಕೆಚ್ ಹಾಕಿರುವುದರ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಏಳು ಆರೋಪಿಗಳನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ಮಾತ್ರ ತಲೆ ಮರೆಸಿಕೊಂಡಿದ್ದರು. ಜಯನಗರ ಪೊಲೀಸರು 'ಆಪರೇ‍ನ್ ಬ್ಲಾಕ್ ಡಾಗ್' ಎಂಬ ಹೆಸರಿನಲ್ಲಿ ಆರೋಪಿಯ ಪತ್ತೆಗೆ ಶೋಧ ನಡೆಸಿದ್ದರು. ಈ ವೇಳೆ ರೌಡಿ ಶೀಟರ್ ರಾಜೇಶ್ ಅಲಿಯಾಸ್ ಕರಿಯಾ ರಾಜೇಶ್‌ ಅವರನ್ನು ಬಂಧಿಸಿದ್ದಾರೆ. ಈತ ಸೈಕಲ್ ರವಿ ವಿರೋಧಿಯಾಗಿದ್ದು, ಬಾಂಬೆ ರವಿ ತಂಡದಲ್ಲಿ ಗುರುತಿಸಿಕೊಂಡಿದ್ದ.

ಸ್ಯಾಂಡಲ್‌ವುಡ್‌ ಬೆಚ್ಚಿಬೀಳಿಸುವ ಸುದ್ದಿ! ದರ್ಶನ್ ಚಿತ್ರದ ನಿರ್ಮಾಪಕನ ಹತ್ಯೆಗೆ ಸ್ಕೆಚ್! 

ಬಾಂಬೆ ರವಿ ತಂಡದ ಸದಸ್ಯನಾಗಿದ್ದ ರಾಜೇಶ್ ನೇಪಾಳದಲ್ಲಿ ತಲೆಮರಿಸಿಕೊಂಡಿದ್ದ ಎನ್ನಲಾಗಿದೆ. ಇವರ ತಂಡದವರು ಉದ್ಯಮಿಗಳಿಗೆ ಧಮ್ಕಿ ಹಾಕಿ ಹಣ ವಸೂಲಿ ಮಾಡುವುದು, ದರೋಡೆ ಮಾಡುವುದು ವೃತ್ತಿ ಮಾಡಿಕೊಂಡಿದ್ದರು. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಸಹೋದರ ದೀಪಕ್, ಸೈಕಲ್ ರವಿ, ಬೇಕರಿ ರಘುಗೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಪ್ರಕರಣದ ಹಿನ್ನೆಲೆ:
ಕುಖ್ಯಾತ ರೌಡಿಶೀಟರ್‌ ಬಾಂಬೆ ರವಿ ಆ್ಯಂಡ್‌ ಗ್ಯಾಂಗ್‌ ಸ್ಕೆಚ್‌ ಹಾಕಿದ್ದು ನಟ ದರ್ಶನ್‌ ಅಭಿನಯದ ‘ರಾಬರ್ಟ್‌’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಅವರಿಗೆ ಅಲ್ಲ, ಬದಲಿಗೆ ಸ್ಕೆಚ್‌ ನಡೆದಿದ್ದು, ನಿರ್ಮಾಪಕರ ಸಹೋದರನಿಗೆ ಎಂಬ ವಿಷಯ ಜಯನಗರ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ನಿರ್ಮಾಪಕನ ಸಹೋದರ ದೀಪಕ್‌ ಹತ್ಯೆಗೆ ಬಾಂಬೆ ರವಿ ಸಂಚು ರೂಪಿಸಿದ್ದ. ಬಂಧಿತ ಆರೋಪಿಗಳು ಗೊಂದಲ ಹೇಳಿಕೆ ನೀಡುವ ಮೂಲಕ ನಿರ್ಮಾಪಕರ ಹೆಸರನ್ನು ಮೊದಲಿಗೆ ಹೇಳಿದ್ದರು. ತನಿಖೆ ವೇಳೆ ದೀಪಕ್‌ ಹತ್ಯೆಗೆ ಸ್ಕೆಚ್‌ ನಡೆದಿತ್ತು ಎಂದು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೀಪಕ್‌, ನಿರ್ಮಾಪಕ ಉಮಾಪತಿ ಅವರ ದೊಡ್ಡಪ್ಪನ ಪುತ್ರ. ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ವ್ಯವಹಾರ ಹೊಂದಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ದೀಪಕ್‌ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿತ್ತು. ಆದರೆ ಆರೋಪಿಗಳು ಗೊಂದಲದ ಹೇಳಿಕೆಯಿಂದ ಪ್ರಕರಣದ ತನಿಖೆಗೆ ಅಡ್ಡಿಯಾಗಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿ, ಬಾಂಬೆ ರವಿ ತಂಡದಲ್ಲಿ ಗುರುತಿಸಿಕೊಂಡಿದ್ದ ರಾಜೇಶ್ ಬಲೆಗೆ ಬಿದ್ದಿದ್ದು, ಪ್ರಕರಣದ ಮತ್ತಷ್ಟು ವಿವರಗಳು ಬಯಲಾಗುವ ಸಾಧ್ಯತೆ ಇದೆ.