ಅಪರ್ಣಾ ವಸ್ತಾರೆ ಅವರನ್ನು ನೆನೆದು ಸಾಹಿತಿ ನಾಗರಾಜ ವಸ್ತಾರೆ ಭಾವುಕರಾದರು. ಗ್ರಾಮಾಯಣ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ 'ಅವಳು ನನ್ನೊಳಗೇ ಇದ್ದಾಳೆ' ಎಂದ ಅವರ ಮಾತು ಎಲ್ಲರ ಮನಮುಟ್ಟಿತು.

‘ಅಪರ್ಣಾ ನೆನಪಾದರೆ ಮಾತು ಮರೆತು ಹೋಗುತ್ತೆ, ಮೂಕನಾಗುತ್ತೇನೆ. ಅವಳು ನಟಿಸಿದ ಗ್ರಾಮಾಯಣ ಚಿತ್ರದ ಟ್ರೇಲರ್‌ ಬಿಡುಗಡೆ ಸಂದರ್ಭ ನಾನು ಅವಳೊಡನೆ ಇರಬೇಕಿತ್ತು. ಅವಳಿಲ್ಲಿ ವೇದಿಕೆ ಮೇಲೆ ಮತ್ತು ನಾನು ವೇದಿಕೆ ಕೆಳಗೆ. ಅವಳಿಲ್ಲದೇ ನಾನು ಮೆರೆಯಲಾರೆ. ಅವಳು ನನ್ನೊಳಗೇ ಇದ್ದಾಳೆ, ನಾನು ಸದಾ ಅವಳನ್ನು ಹೊತ್ತೊಯ್ಯುವ ತೇರು.’

ಗತಿಸಿದ ಪತ್ನಿ, ಖ್ಯಾತ ನಿರೂಪಕಿ, ನಟಿ ಅಪರ್ಣಾ ವಸ್ತಾರೆ ಅವರನ್ನು ನೆನೆಸಿಕೊಂಡು ಹೀಗೆ ಭಾವುಕವಾಗಿ ಮಾತನಾಡಿದ್ದು ಸಾಹಿತಿ ನಾಗರಾಜ ವಸ್ತಾರೆ. ದೇವನೂರು ಚಂದ್ರು ನಿರ್ದೇಶನದ ‘ಗ್ರಾಮಾಯಣ’ ಸಿನಿಮಾ ಟ್ರೇಲರನ್ನು ವಸ್ತಾರೆ ಹಾಗೂ ದುನಿಯಾ ವಿಜಯ್‌ ಅನಾವರಣ ಮಾಡಿದರು.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಟ ದುನಿಯಾ ವಿಜಯ್, ''ನನಗೆ ವಿನಯ್ ರಾಜಕುಮಾರ್ ಎಂದರೆ ಬಹಳ ಇಷ್ಟ. ಟ್ರೇಲರ್ ಅದ್ಭುತವಾಗಿದೆ. ದೇವನೂರು ಚಂದ್ರು ಉತ್ತಮ ನಿರ್ದೇಶಕ.‌ ನಾನು ಅವರನ್ನು ಎರಡನೇ ಸೂರಿ ಅಂತಲೇ ಕರೆಯುತ್ತೇನೆ.‌ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಲಹರಿ ಸಂಸ್ಥೆಗೆ ಹಾಗೂ‌ ಇಡೀ "ಗ್ರಾಮಾಯಣ" ತಂಡಕ್ಕೆ ಒಳ್ಳೆಯದಾಗಲಿ'' ಎಂದು ಹಾರೈಸಿದರು.

ಅಭಿಮಾನಿಗಳು ಹೇಳಬೇಕು

ತಂದೆ-ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಮಾತನಾಡಿ, ಈ ಚಿತ್ರದ ಬಗ್ಗೆ ನಾವು ಹೇಳುವುದಕ್ಕಿಂತ ಅಭಿಮಾನಿಗಳು ಹೇಳಬೇಕು. ಜುಲೈ 3ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡರು. ದೇವನೂರು ಚಂದ್ರು, ‘ಈ ಸಿನಿಮಾ ಜೊತೆ 10 ವರ್ಷದ ಜರ್ನಿ. ಸೋಲು ಗೆಲುವು ಅನ್ನುವ ಹಂತವನ್ನೆಲ್ಲ ದಾಟಿದ್ದೇವೆ. ಸಿನಿಮಾ ಪ್ರೀತಿಯಷ್ಟೇ ಕಾಯುತ್ತದೆ ಎಂಬ ವಿಶ್ವಾಸ ನಮ್ಮದು’ ಎಂದರು.

ವಿನಯ್‌ ರಾಜ್‌ಕುಮಾರ್‌; ಅಪರ್ಣಾ ವಸ್ತಾರೆ ಜೊತೆಗಿನ ತನ್ನ ಡೈಲಾಗ್‌ ಹೇಳಿ ಗತಿಸಿದ ನಿರೂಪಕಿ, ನಟಿ ಅಪರ್ಣಾ ಅವರನ್ನು ಸ್ಮರಿಸಿಕೊಂಡರು. ನಾಯಕಿ ಮೇಘಾ, ನಿರ್ಮಾಪಕರಾದ ಜಿ ಮನೋಹರನ್‌, ಲಹರಿ ವೇಲು, ರಾಘವೇಂದ್ರ ರಾಜ್‌ಕುಮಾರ್‌, ಯುವ ರಾಜ್‌ಕುಮಾರ್‌, ನವೀನ್‌ ಶಂಕರ್‌, ಸಿಂಪಲ್‌ ಸುನಿ ಹಾಜರಿದ್ದರು.