ಸಾರಾ ಅಬೂಬಕ್ಕರ್ ಅವರ ‘ವಜ್ರಗಳು’ ಕಾದಂಬರಿ ಆಧರಿತ ‘ಸಾರಾ ವಜ್ರಗಳು’ ಚಿತ್ರದ ಟ್ರೇಲರ್ ಸಖತ್ ಮೆಚ್ಚುಗೆಗೆ ಪಾತ್ರವಾಗಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಇದನ್ನು ನಿರ್ದೇಶಕಿ ರೂಪಾ ಅಯ್ಯರ್, ನಿರ್ದೇಶಕ ಕೆ.ಎಂ.ಚೈತನ್ಯ ಸೇರಿದಂತೆ ಹಲವರು ಸೋಷಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಆರ್ನಾ ಸಾಧ್ಯ ಅವರ ಮೂರನೇ ಸಿನಿಮಾ ಇದು. ಅನು ಪ್ರಭಾಕರ್ ಮುಖ್ಯ ಪಾತ್ರದಲ್ಲಿದ್ದಾರೆ. ‘ಚಿತ್ರಕ್ಕಾಗಿ ಕಾದಂಬರಿಯ ಹಕ್ಕು ಪಡೆದು ಸಾಕಷ್ಟುನಟಿಯರಿಗೆ ಕತೆ ಹೇಳಿದ್ದೆ. ಹೆಚ್ಚಿನವರು ನಿರಾಕರಿಸಿದರು. ಆದರೆ, ನಟಿ ಅನುಪ್ರಭಾಕರ್ ಅವರು ಸಾರಾ ಅಬೂಬಕ್ಕರ್ ಅವರ ‘ವಜ್ರಗಳು’ ಕಾದಂಬರಿ ಓದಿದ್ದರು. ಹೀಗಾಗಿ ತಕ್ಷಣ ಒಪ್ಪಿಗೆ ಕೊಟ್ಟು, ಸಿನಿಮಾ ಮಾಡುವ ಉತ್ಸಾಹ ತೋರಿಸಿದರು. ಒಬ್ಬ ನಿರ್ದೇಶಕಿಯಾಗಿ ಬರಹಗಾರ್ತಿಯೊಬ್ಬರ ಕಾದಂಬರಿಯನ್ನು ತೆರೆ ಮೇಲೆ ತಂದ ಹೆಮ್ಮೆ ನನಗೆ ಇದೆ’ ಎನ್ನುತ್ತಾರೆ ನಿರ್ದೇಶಕಿ ಆರ್ನಾ ಸಾಧ್ಯ.
ಹಂಸಲೇಖ ಸ್ಟುಡಿಯೋದಲ್ಲಿ ಚಿತ್ರಕ್ಕೆ ರೀ ರೆಕಾರ್ಡಿಂಗ್ ನಡೆಯುತ್ತಿದೆ. ಕೊರೋನಾ ಭೀತಿ ಹೀಗೆ ಮುಂದುವರೆದರೆ ಈ ಚಿತ್ರವನ್ನೂ ನೇರವಾಗಿ ಓಟಿಟಿಯಲ್ಲೇ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಚಿಂತನೆ ನಡೆಸಿದೆ. ರೆಹಮಾನ್ ಹಾಸನ್, ರಮೇಶ್ ಭಟ್, ಶಂಖನಾದ ಅರವಿಂದ್, ಸುಧಾ ಬೆಳವಾಡಿ, ರಾಮಸ್ವಾಮಿ, ಪ್ರದೀಪ್ ಪೂಜಾರಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಗಾಯಕಿ ಸುಹಾನ ಸೈಯದ್ ಕೂಡ ಈ ಚಿತ್ರದಲ್ಲಿ ಪಾತ್ರ ಮಾಡಿರುವುದು.
ಕಾದಂಬರಿ ಆಧರಿತ ಚಿತ್ರದಲ್ಲಿ ಅನು ಪ್ರಭಾಕರ್- ರೆಹಮಾನ್!
ಸಂಭ್ರಮ ಡ್ರೀಮ್ ಹೌಸ್ ಹಾಗೂ ದೇವೇಂದ್ರ ರೆಡ್ಡಿ ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಪರಮೇಶ್ ಸಿ.ಎಂ ಛಾಯಾಗ್ರಹಣ, ವಿ.ಮನೋಹರ್ ಸಂಗೀತ ನಿರ್ದೇಶನ ಹಾಗೂ ಅಕ್ಷಯ್ ಪಿ ರಾವ್ ಅವರ ಸಂಕಲನ ಇದೆ. ಪತ್ರಕರ್ತ ಬಿಎಂ ಹನೀಫ್ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ.
