- ಹತ್ತು ವರ್ಷದ ನನ್ನ ಬದುಕನ್ನು ಪಣ ಇಟ್ಟಿದ್ದೇನೆ. ಗೆಲ್ಲುವ ನಂಬಿಕೆ, ಆಸೆ ಎರಡೂ ಇದೆ. ಬಿದ್ದರೆ ಒಂದು ಪೆಟ್ಟು ಜಾಸ್ತಿಯಾಗಬಹುದು. ಗೆದ್ದರೆ ಬದುಕೇ ಬದಲಾಗು ನಿರೀಕ್ಷೆ ಇದೆ.

- ನನಗೆ ಬೇಕಾದ ಪಾತ್ರವನ್ನು ಯಾರೂ ಕೊಡಲಿಲ್ಲ. ನಾನು ಹೇಗೆ ಪಾತ್ರ ಮಾಡಬೇಕು ಅಂತ ಕನಸು ಕಟ್ಟಿಕೊಂಡಿದ್ದೆನೋ ಆ ಪಾತ್ರಕ್ಕಾಗಿ ಹತ್ತು ವರ್ಷ ಕಾದೆ. ಸಿಗಲಿಲ್ಲ. ಇನ್ನೆಷ್ಟುಕಾಯೋದು. ನಾನೇ ಬರೆದ ಚಿತ್ರಕ್ಕೆ ನಾನೇ ನಿರ್ದೇಶಕನಾದೆ, ನಾನೇ ನಿರ್ಮಾಪಕನಾದೆ.

ತೆರೆಗೆ ಅಪ್ಪಳಿಸಲಿರುವ 'ಶ್ಯಾಡೋ' ಮತ್ತು 'ರಾಮಾರ್ಜುನ';500 ಥಿಯೇಟರ್‌ಗಳಲ್ಲಿ 'ಇನ್ಸ್‌ಪೆಕ್ಟರ್‌ ವಿಕ್ರಂ' 

- ಒಂದು ವರ್ಷದ ಹಿಂದೆಯೇ ನನ್ನ ಸಿನಿಮಾ ರೆಡಿಯಾಗಿತ್ತು. ಕೊರೋನಾದಿಂದಾಗಿ ಒಂದು ವರ್ಷ ತಡವಾಯಿತು. ಪ್ರಮೋಷನ್‌ಗೆ ಸ್ವಲ್ಪ ದಿನ ತಗೋಳೋಣ ಎಂದುಕೊಂಡೆ. ಆದರೆ ಅಷ್ಟುದಿನ ಇರಲಿಲ್ಲ. ಬಂದರೆ ಈಗ, ಇಲ್ಲದಿದ್ದರೆ ಇಲ್ಲ ಎಂದುಕೊಂಡು ಥಿಯೇಟರ್‌ಗೆ ಬರುತ್ತಿದ್ದೇನೆ. ಒಳ್ಳೆಯದಾಗುವ ಸೂಚನೆ ಸಿಕ್ಕಿದೆ.

- ನಮ್ಮ ಸಿನಿಮಾ ಓಟಿಟಿಗೆ ಕೊಡುವ ಯೋಚನೆಯಿತ್ತು. ಅವತ್ತೊಂದಿನ ಸಿನಿಮಾ ಯಾರಿಗೋ ಕಳುಹಿಸಬೇಕಿತ್ತು. ಇಂಟರ್‌ನೆಟ್‌ ಸಮಸ್ಯೆಯಿಂದ ಅಪ್‌ಲೋಡ್‌ ಆಗುತ್ತಿರಲಿಲ್ಲ. ಗೆಳೆಯ ರಕ್ಷಿತ್‌ ಶೆಟ್ಟಿಗೆ ಕಾಲ್‌ ಮಾಡಿ ಇಂಟರ್‌ನೆಟ್‌ ಸಮಸ್ಯೆ ಇದೆ ಎಂದೆ. ಮನೆಗೆ ಬಾ ಎಂದ. ಅದ್ಯಾವುದೋ ಗಳಿಗೆಯಲ್ಲಿ ಅವನಿಗೆ ನನ್ನ ಸಿನಿಮಾ ನೋಡಬೇಕು ಅನ್ನಿಸಿದೆ. ನಾನು ತೋರಿಸಲ್ಲ ಎಂದೆ. ನನ್ನ ಸಿನಿಮಾ ಬೇರೆ, ನಿನ್ನ ಸಿನಿಮಾ ಬೇರೆ ಅಂತ. ಕಡೆಗೆ 10 ನಿಮಿಷಾ ಸಿನಿಮಾ ತೋರಿಸುವ ಒಪ್ಪಂದವಾಗಿ, ಅವನು ಸಿನಿಮಾ ಇಷ್ಟಪಟ್ಟು, ಕಡೆಗೆ ನಿರ್ಮಾಣ ಪಾಲುದಾರನಾಗಿ ಬಂದ. ಅವನಿಂದಾಗಿ ಕಾರ್ತಿಕ್‌ ಗೌಡ ವಿತರಕರಾಗಿ ಬಂದರು. ರಾಮಾರ್ಜುನ ಹೈವೋಲ್ಟೇಜ್‌ ಎನರ್ಜಿ ಜೊತೆ ರಿಲೀಸ್‌ ಆಗುತ್ತಿದೆ.

- ಸಿನಿಮಾ ನಂಬಿಕೊಂಡು ಬಂದವನು ನಾನು. ಪ್ರೀತಿಯಿಂದ ಈ ಸಿನಿಮಾ ಮಾಡಿದ್ದೇನೆ. ಇದರಲ್ಲಿ ನನ್ನದು ಇನ್ಸುರೆನ್ಸ್‌ ಏಜೆಂಟ್‌ ಪಾತ್ರ. ಸಾವಿನ ಮನೆಗೆ ಹೋಗಿ ಅಲ್ಲಿ ಅವರನ್ನು ಹೆದರಿಸಿ ಇನ್ಸುರೆನ್ಸ್‌ ಮಾಡಿಸುವ ವಿಚಿತ್ರ ಪಾತ್ರ. ಮೊದಲಾರ್ಧದವರೆಗೆ ಹೇಳುವುದು ಕಡಿಮೆ. ಸಿನಿಮಾದ ದ್ವಿತೀಯಾರ್ಧ ಅಚ್ಚರಿಗಳ ಮೂಟೆ.

- ಅದ್ಭುತ ಸಂಗೀತ ಕೊಟ್ಟಆನಂದ್‌ರಾಜ್‌ ಮತ್ತು ನನ್ನ ಜತೆ ಸಂಕಲನಕಾರನಾಗಿ ಕೆಲಸ ಮಾಡಿದ ಹೇಮಂತ್‌, ಛಾಯಾಗ್ರಾಹಕ ನವೀನ್‌ಕುಮಾರ್‌ಗೆ ನಾನು ಆಭಾರಿ. ಒಂದೊಂದು ಪುಟ ಡೈಲಾಗನ್ನು ನಿರರ್ಗಳವಾಗಿ ಹೇಳುತ್ತಿದ್ದ ಸಿನಿಮಾದ ನಾಯಕಿ ನಿಶ್ವಿಕಾ ನಾಯ್ಡು ಈ ಚಿತ್ರದ ನಿಜವಾದ ಹೀರೋ.

ರಾಮಾರ್ಜುನ ಚಿತ್ರಕ್ಕೆ ನಿರ್ಮಾಪಕನಾದ ರಕ್ಷಿತ್‌ ಶೆಟ್ಟಿ

- ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ ಎಂಬುದು ನನ್ನ ನಂಬಿಕೆ. ಪ್ರೇಕ್ಷಕರು ಕೈ ಹಿಡಿದು ಕರೆದೊಯ್ಯಬೇಕು ಅನ್ನುವುದು ಪ್ರಾರ್ಥನೆ.

ಗೆಳೆಯ ಅನೀಶ್‌ ಗೆಲ್ಲಬೇಕು: ರಕ್ಷಿತ್‌ ಶೆಟ್ಟಿ

ರಾಮಾರ್ಜುನ ಬಿಡುಗಡೆ ಹಂತದಲ್ಲಿ ನಿರ್ಮಾಣ ಪಾಲುದಾರನಾಗಿ ಬಂದಿದ್ದು ರಕ್ಷಿತ್‌ ಶೆಟ್ಟಿ. ಥಿಯೇಟರ್‌ನಲ್ಲಿ ಸಿನಿಮಾ ಬಿಡುಗಡೆ ಆಗುವುದಕ್ಕೆ ಕಾರಣವೇ ರಕ್ಷಿತ್‌ ಎಂದು ಅನೀಶ್‌ ನೆನೆಯುತ್ತಾರೆ. ಅದಕ್ಕೆ ರಕ್ಷಿತ್‌, ‘ಈ ಸಿನಿಮಾವನ್ನು ನಾನು ಮತ್ತು ಗೆಳೆಯರು ಆಕಸ್ಮಿಕವಾಗಿ ನೋಡಿದೆವು. ಅಷ್ಟೇನೂ ಕಮರ್ಷಿಯಲ್‌ ಸಿನಿಮಾ ನೋಡಿದ ನಮ್ಮೆಲ್ಲರಿಗೂ ಈ ಸಿನಿಮಾ ತುಂಬಾ ಇಷ್ಟವಾಯಿತು. ಇದು ಓಟಿಟಿಯಲ್ಲಿ ನೋಡುವ ಸಿನಿಮಾ ಅಲ್ಲ, ಥಿಯೇಟರ್‌ನಲ್ಲೇ ಬಿಡುಗಡೆಯಾಗಬೇಕಾದ, ನೋಡಬೇಕಾದ ಸಿನಿಮಾ. ಗೆಳೆಯ ಅನೀಶ್‌ಗೆ ಕನಸಿದೆ. ಪ್ರೇಕ್ಷಕರ ಮನಸ್ಸು ಅರ್ಥವಾಗುತ್ತದೆ. ಅವನು ಇನ್ನಷ್ಟುನಿರ್ದೇಶನ ಮಾಡಬೇಕು. ರಾಮಾರ್ಜುನ ಗೆಲ್ಲಬೇಕು. ಗೆಳೆಯ ಅನೀಶ್‌ಗೆ ಒಳ್ಳೆಯದಾಗಬೇಕು’ ಎಂದರು. ವಿತರಕ ಕಾರ್ತಿಕ್‌ ಗೌಡ, ತಾನು ಈ ಸಿನಿಮಾ ನೋಡಿ ವಿಶಿಲ್‌ ಹೊಡೆದಿದ್ದಾಗೆ ಹೇಳಿಕೊಂಡು ಧೈರ್ಯದಿಂದ ಸಿನಿಮಾ ಬಿಡುಗಡೆ ಮಾಡುತ್ತಿದ್ದೇನೆ ಎಂದರು.