ನಟ ಅನೀಶ್ ತೇಜೇಶ್ವರ್ ಅವರ 'ಲವ್ ಒಟಿಪಿ' ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕರೂ ಪ್ರೇಕ್ಷಕರಿಲ್ಲ. ಇದರಿಂದ ಬೇಸರಗೊಂಡ ಅವರು, 14 ವರ್ಷಗಳ ಶ್ರಮಕ್ಕೆ ಬೆಲೆ ಸಿಗದಿದ್ದರೆ ಇದೇ ನನ್ನ ಕೊನೆಯ ಸಿನಿಮಾ ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಬೆಂಗಳೂರು (ನ.15): ನಟ ಅನೀಶ್‌ ತೇಜೇಶ್ವರ್‌ ನಟನೆಯ ಲವ್‌ ಒಟಿಪಿ ಸಿನಿಮಾ ಶುಕ್ರವಾರ ತೆರೆಗೆ ಬಂದಿದೆ. ಆದರೆ, ಸಿನಿಮಾ ಮಂದಿರದಲ್ಲಿ ಚಿತ್ರ ನೋಡಲು ಪ್ರೇಕ್ಷಕರೇ ಬರುತ್ತಿಲ್ಲ. ಇದರಿಂದ ಬೇಸರಪಟ್ಟುಕೊಂಡಿರುವ ಹೀರೋ ಅನೀಶ್‌ ತೇಜೇಶ್ವರ್‌, ಹಾಗೇನಾದರೂ ಮುಂದಿನ ಎರಡು ದಿನಗಳಲ್ಲಿ ಸಿನಿಮಾಗೆ ನಿರೀಕ್ಷೆಗೆ ತಕ್ಕಂತೆ ಜನ ಬರದೇ ಇದ್ದಲ್ಲಿ ಇದೇ ನನ್ನ ಕೊನೆಯ ಸಿನಿಮಾ ಎಂದು ಭಾವುಕವಾಗಿ ಹೇಳಿದ್ದಾರೆ. ಕಳೆದ 14 ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿದ್ದರೂ ಅನೀಶ್‌ ತೇಜೇಶ್ವರ್‌ ಹೆಸರಿನಲ್ಲಿ ಒಂದು ದೊಡ್ಡ ಹಿಟ್‌ ಸಿನಿಮಾವಿಲ್ಲ. ನಟ-ನಿರ್ದೇಶಕ ರಕ್ಷಿತ್‌ ಶೆಟ್ಟಿ ಸಮಕಾಲೀನರಾಗಿದ್ದರೂ ಅನೀಶ್‌ ತೇಜೇಶ್ವರ್‌ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಲು ಇನ್ನೂ ಒದ್ದಾಟ ಮಾಡುತ್ತಿದ್ದಾರೆ.

ಭಾರೀ ನಿರೀಕ್ಷೆ ಇಟ್ಟು ಲವ್‌ ಒಟಿಪಿ ಸಿನಿಮಾದಲ್ಲಿ ನಟಿಸಿ ನಿರ್ದೇಶನವನ್ನೂ ಅನೀಶ್ ಮಾಡಿದ್ದಾರೆ. ಆದರೆ, ಜನರ ಪ್ರತಿಕ್ರಿಯೆ ನೀರಸವಾಗುತ್ತಿದ್ದಂತೆ ತಮ್ಮ ಕಾರ್‌ನಲ್ಲಿಯೇ ಕುಳಿತು ಕಣ್ಣೀರು ಹಾಕಿದ್ದಾರೆ. ನ.14 ರಂದು ಸಿನಿಮಾ ರಾಜ್ಯಾದ್ಯಂತ ರಿಲೀಸ್‌ ಆಗಿದೆ. ಸಿನಿಮಾಗೂ ಒಳ್ಳೆಯ ವಿಮರ್ಶೆಗಳು ಸಿಕ್ಕಿವೆ. ಇಷ್ಟೆಲ್ಲಾ ಇದ್ದರೂ ಪ್ರೇಕ್ಷಕ ಮಾತ್ರ ಚಿತ್ರಮಂದಿರದತ್ತ ಬರುತ್ತಿಲ್ಲ.

Love OTP ಸಿನಿಮಾ ವಿಮರ್ಶೆ: ಪ್ರೇಮವನ್ನು ಅರ್ಥ ಮಾಡಿಕೊಳ್ಳಲು ಪ್ರೇರೇಪಿಸುವ ಪ್ರೇಮಕತೆ

ಬುಕ್ ಮೈ ಶೋನಲ್ಲೂ ಸಿನಿಮಾಗೆ ಪ್ರಶಂಸೆಗಳ‌ ಸುರಿಮಳೆ ಸಿಕ್ಕಿದೆ. ವಿಮರ್ಶಕರಿಂದ 3.5/5 ರೇಟಿಂಗ್ ಅನ್ನೂ ಸಿನಿಮಾ ಪಡೆದುಕೊಂಡಿದೆ. 14ವರ್ಷಗಳ ಸತತ ಪ್ರಯತ್ನಕ್ಕೆ‌ ಮತ್ತೆ ನಿರಾಸೆ ಎದುರಾದ ಕಾರಣಕ್ಕೆ ಅನೀಶ್‌ ಬೇಸರಗೊಂಡಿದ್ದು, ಇದಕ್ಕಿಂತ ಇನ್ನೇನು ಮಾಡ್ಬೇಕೆಂದು ನಟ ಕಣ್ಣೀರು ಹಾಕಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ವಿಡಿಯೋ ಬಿಟ್ಟು, ಜನರ ಮುಂದೆ ನೋವು ತೋಡಿಕೊಂಡಿದ್ದಾರೆ.

ಅನೀಶ್‌ ಬರೆದಿರುವ/ಹೇಳಿರುವ ಮಾತುಗಳು

ನಮಸ್ಕಾರ... ತುಂಬಾ ನೋವಿನಿಂದ ಹತಾಶೆಯಿಂದ ಈ ಮಾತುಗಳನ್ನ ಹೇಳ್ತೀನಿದ್ದೀನಿ. 14 ವರ್ಷದ ನಿರಂತರ ಶ್ರಮ. ಸೋಲುಗಳಿಗೆ ಕಂಗೆಡದೇ. ಸಿನಿಮಾದಿಂದ ಸಿನಿಮಾಗೆ ಆಶಾದಾಯಕವಾಗೇ ಇಲ್ಲಿವರೆಗೂ ಬಂದೆ. ನನ್ನ ವೃತ್ತಿ ಬದುಕಿನಲ್ಲೇ The Best Reviews ಲವ್ OTPಗೆ ಸಿಕ್ಕಿದೆ. ಸಿಕ್ತಿದೆ. ಆದರೆ, ಥಿಯೇಟರಿಗೆ ಯಾಕ್ ಯಾರೂ ಬರ್ತಿಲ್ಲ? ನಾನು ಇನ್ನೇನ್ ಮಾಡ್ಬೇಕು? ಗೊತ್ತಾಗ್ತಿಲ್ಲ.!

ಮೊನ್ನೆ ಪ್ರಿಮಿಯರ್ ನೋಡಿದ ಪತ್ರಕರ್ತರು ಅತ್ಯುತ್ತಮ ವಿಮರ್ಶೆಗಳನ್ನ ಕೊಟ್ಟಿದ್ದಾರೆ. ನಿನ್ನೆ ಯಾರೆಲ್ಲಾ ನೋಡಿದ್ದಾರೋ ಬುಕ್ ಮೈಶೋನಲ್ಲಿ ನಿರೀಕ್ಷೆಗೂ ಮೀರಿ ನಮ್ಮ‌ ಕೆಲಸವನ್ನ ಕೊಂಡಾಡ್ತಿದ್ದಾರೆ.. ಆದ್ರೂ ಯಾಕ್ ಈ ರೀತಿ..???? ಅರ್ಥ ಆಗ್ತಿಲ್ಲ. ಇವತ್ತು ನಾಳೆಯೊಳಗೆ ಪ್ರೇಕ್ಷಕರು ಬಂದ್ರೆ ಕೈ ಹಿಡಿದ್ರೆ ಮುಂದಿನ ದಾರಿ. ಇಲ್ಲಾಂದ್ರೆ ಇಲ್ಲಿಗೆ ನನ್ನ ಸಿನಿಮಾ ಪ್ರಯತ್ನವನ್ನ ನಿಲ್ಲಿಸ್ತೀನಿ. ತುಂಬಾ ದುಃಖದಿಂದ ಈ ವಿಚಾರ ಹೇಳ್ತಿದ್ದೀನಿ. ಈ ಕಣ್ಣೀರು ಸಿಂಪತಿಗಲ್ಲ. ಗಿಮಿಕ್ಕು ಅಲ್ಲ. ನನ್ನ ಅಂತರಾಳದ ನೋವಿದು' ಎಂದು ಅನೀಶ್‌ ಹೇಳಿದ್ದಾರೆ.

2010ರಲ್ಲಿ ಪ್ರಶಂಸೆ ಪಡೆದ ಪೊಲೀಸ್‌ ಕ್ವಾಟ್ರಸ್‌ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದ ಅನೀಶ್‌ ತೇಜೇಶ್ವರ್‌, ನಂತರ ನಮ್‌ ಏರಿಯಾಲ್‌ ಒಂದ್‌ ದಿನ, ಕಾಫಿ ವಿತ್‌ ಮೈ ವೈಫ್‌, ನನ್‌ ಲೈಫ್‌ ಅಲ್ಲಿ, ಎಂದೆಂದೂ ನಿನಗಾಗಿ, ನೀನೇ ಬರಿ ನೀನೆ (ಸ್ಟುಡಿಯೋ ಆಲ್ಬಮ್‌), ಅಕಿರಾ, ವಾಸು ನಾನ್‌ ಪಕ್ಕಾ ಕಮರ್ಷಿಯಲ್‌, ರಾಮಾರ್ಜುನ, ಮಾಯಾನಗರಿ, ಆರಾಮ್‌ ಅರವಿಂದ್‌ ಸ್ವಾಮಿ ಹಾಗೂ ಫಾರೆಸ್ಟ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಯಾವ ಸಿನಿಮಾಗಳೂ ಅವರಿಗೆ ಹೇಳಿಕೊಳ್ಳುವಂಥ ಸಕ್ಸಸ್‌ ನೀಡಿಲ್ಲ.

View post on Instagram