ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದ ವೀರಭೂಮಿ ಮ್ಯೂಸಿಯಂನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜೀವನ, ಹೋರಾಟ ಹಾಗೂ ಸ್ವಾತಂತ್ರ್ಯ ಚಳವಳಿಯನ್ನು ಆಧರಿಸಿದ ಬಯೋಪಿಕ್ ಪ್ರದರ್ಶನಗೊಳ್ಳುತ್ತಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿರುವ ವೀರಭೂಮಿ ಮ್ಯೂಸಿಯಂನಲ್ಲಿ ದೃಶ್ಯರೂಪ ಪಡೆದುಕೊಂಡಿರುವ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಬಯೋಪಿಕ್ ಚಿತ್ರಕ್ಕೆ ಅದ್ಭುತ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ನಿರ್ಮಾಪಕ, ಛಾಯಾಗ್ರಹಕ ಹಾಗೂ ಕತೆಗಾರ ಅನಿಲ್ ಅಣ್ಣಯ್ಯ ಅವರ ಸಾರಥ್ಯದಲ್ಲಿ ಮೂಡಿ ಬಂದಿರುವ ಬಯೋಪಿಕ್ ಇದಾಗಿದೆ.
ಎಪಿಸೋಡ್‌ಗಳ ರೂಪದಲ್ಲಿ ಮೂಡಿ ಬಂದಿರುವ ಈ ಚಿತ್ರವು 13 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ವೀರಭೂಮಿ ಮ್ಯೂಸಿಯಂನಲ್ಲಿ ನೋಡಬಹುದಾಗಿದೆ. ಈ ಕುರಿತು ಮಾತನಾಡಿದ ಅನಿಲ್ ಅಣ್ಣಯ್ಯ, ‘ವೀರಭೂಮಿ ಮ್ಯೂಸಿಯಂನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜೀವನ, ಪಯಣ ಹಾಗೂ ಸ್ವಾತಂತ್ರ್ಯದ ಹೋರಾಟವನ್ನು ನೆನಪಿಸುವ ವಿವಿಧ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ.
13 ನಿಮಿಷಗಳ ವಾರ್ ಎಪಿಸೋಡ್
ಈ ಪೈಕಿ ನಾನು ನಿರ್ದೇಶಿಸಿರುವ ರಾಯಣ್ಣ ಅವರ ಬಯೋಪಿಕ್ ಚಿತ್ರವೂ ಒಂದು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧೀಕರ ನೀಡಿದ ಅಧ್ಯಯನದ ಚಿತ್ರಕಥೆಯನ್ನು ಆಧರಿಸಿ ನಾನು ರೀ ಕ್ರಿಯೇಟ್ ಮಾಡಿರುವ ಚಿತ್ರ ಇದಾಗಿದೆ. ವಿಶೇಷವಾಗಿ 13 ನಿಮಿಷಗಳ ವಾರ್ ಎಪಿಸೋಡ್‌ನ ಪ್ರದರ್ಶನೂ ಒಂದಾಗಿದೆ. ಪ್ರತಿ ನಿತ್ಯ ಇಲ್ಲಿಗೆ ಬರುತ್ತಿರುವ ಪ್ರವಾಸಿಗರಿಂದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ’ ಚಿತ್ರವು ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ನಾನು ಸುಮಾರು 1998ರಲ್ಲಿ ಕನ್ನಡಪ್ರಭ ಪತ್ರಿಕೆಗಾಗಿ ಜಿಂಗಲ್ ರೀತಿಯ ಜಾಹೀರಾತು ಮಾಡಿಕೊಟ್ಟಿದೆ. ಚಿತ್ರ ನಿರ್ಮಾಣ, ನಿರ್ದೇಶನ, ಜಾಹೀರಾತು ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನನಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಯೋಪಿಕ್ ರೂಪಿಸುವ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ’ ಎನ್ನುತ್ತಾರೆ.


