ವಿಜಯಪ್ರಸಾದ್‌ ನಿರ್ದೇಶನ, ಕೆ ಎ ಸುರೇಶ್‌ ನಿರ್ಮಾಣ, ಜಗ್ಗೇಶ್‌, ಅದಿತಿ ಪ್ರಭುದೇವ, ಧನಂಜಯ, ಸುಮನಾ ರಂಗನಾಥ್‌ ಮೊದಲಾದವರು ನಟಿಸಿರುವ ‘ತೋತಾಪುರಿ’ ಚಿತ್ರ ಸೆ.30ಕ್ಕೆ ಬಿಡುಗಡೆಯಾಗಲಿದೆ. ಸಿನಿಮಾ ಬಗ್ಗೆ ನಾಯಕಿ ಅದಿತಿ ಪ್ರಭುದೇವ ಹೇಳಿರುವ ಮಾತುಗಳು ಇಲ್ಲಿವೆ.

ಪ್ರಿಯಾ ಕೆರ್ವಾಶೆ

- ಹಳ್ಳಿ ಸೊಗಡಿನಲ್ಲಿ ಮೂಡಿಬಂದಿರೋ ಸಿನಿಮಾವಿದು. ನಾನು ಮುಸ್ಲಿಂ ಮನೆತನದ ಹುಡುಗಿ. ತುಂಬು ಕುಟುಂಬದ ಹಿನ್ನೆಲೆ ನನ್ನ ಪಾತ್ರಕ್ಕಿದೆ. ಬ್ಯಾಂಕ್‌ನಲ್ಲಿ ಕೆಲಸ ಮಾಡೋ ಸ್ವಾಭಿಮಾನಿ, ಗಟ್ಟಿಗಿತ್ತಿ. ಪಾತ್ರ ಹೆಸರು ಶಕೀಲಾ ಬಾನು.

- ಅಚ್ಚಗನ್ನಡದಲ್ಲಿ ಮಾತಾಡೋ ಈ ಪಾತ್ರವನ್ನು ನೋಡಿ ಕೆಲವರು ಕೇಳಿದ್ರು, ಮುಸ್ಲಿಂ ಹೆಣ್ಣುಮಕ್ಕಳು ಇಷ್ಟುಚೆನ್ನಾಗಿ ಕನ್ನಡ ಮಾತಾಡ್ತಾರಾ ಅಂತ. ನಮ್ಮ ನೆಲದಲ್ಲಿ ನಮ್ಮೊಂದಿಗೇ ಹುಟ್ಟಿಬೆಳೆದ ಮುಸ್ಲಿಂ ಬಾಂಧವರು ನಮ್ಮ ಹಾಗೇ ಅಚ್ಚಗನ್ನಡ ಮಾತಾಡಿದ್ರೆ ಅದ್ರಲ್ಲಿ ಆಶ್ಚರ್ಯ ಪಡುವಂಥದ್ದೇನಿದೆ? ನಮ್ಮೂರು ದಾವಣಗೆರೆ ಕಡೆ ಎಲ್ಲ ಸಮುದಾಯದವರೂ ಸ್ವಚ್ಛ ಕನ್ನಡ ಮಾತಾಡ್ತಾರೆ. ಜೊತೆಗೆ ಇದೊಂದು ಭರವಸೆಯೂ ಹೌದು.

- ಈ ಸಿನಿಮಾದಲ್ಲಿ ನಾನು ಜಗ್ಗೇಶ್‌ ಅವರ ಜೊತೆ ನಟಿಸಿದ್ದೇನೆ. ಅಂಥಾ ದಿಗ್ಗಜ ನಟರೊಂದಿಗೆ ನಟಿಸೋ ಅವಕಾಶ ಸಿಗುವುದೇ ನನ್ನ ಅದೃಷ್ಟ. ಜಗ್ಗೇಶ್‌, ಶಿವಣ್ಣ, ರವಿಚಂದ್ರನ್‌ ಮೊದಲಾದವರ ಜೊತೆಗೆ ನಟಿಸೋಕೆ ಅವಕಾಶ ಸಿಗಲಿ ಅಂತಲೇ ನನ್ನಂಥಾ ಕಲಾವಿದರು ಹಂಬಲಿಸುತ್ತಾರೆ.

ಅಪರೂಪದ ಸಿನಿಮಾಗಳಲ್ಲಿ ಒಂದು Totapuri: ಜಗ್ಗೇಶ್‌

- ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಅಷ್ಟಾಗಿ ಡಬಲ್‌ ಮೀನಿಂಗ್‌ ಮಾತುಗಳಿರಲಿಲ್ಲ. ಮೂರ್ನಾಲ್ಕು ಕಡೆ ಆ ಥರದ ಮಾತು ಬರುತ್ತಷ್ಟೇ. ಆದರೆ ನನ್ನ ಜೊತೆ ನಟಿಸೋ ಬೇರೆ ಆ್ಯಕ್ಟರ್‌ಗಳಿಗೆಲ್ಲ ಈ ಥರದ ಸಂಭಾಷಣೆ ಇದೆ. ಶುರು ಶುರುವಿಗೆ ನಲ್ಲಿ, ನೀರು ಅಂತೆಲ್ಲ ಹೇಳಿದಾಗ ಏನು ಹೇಳ್ತಿದ್ದಾರೆ ಅಂತಲೇ ಅರ್ಥ ಆಗುತ್ತಿರಲಿಲ್ಲ. ಇದನ್ನೆಲ್ಲ ಅರ್ಥ ಮಾಡಿಕೊಂಡು ನಾನೂ ಈ ಧಾಟಿಯಲ್ಲಿ ಮಾತಾಡ್ಬೇಕು ಅನ್ನೋ ಟೈಮಿಗೆ ಶೂಟಿಂಗೇ ಮುಗ್ದು ಹೋಯ್ತು.

- ಚಿತ್ರದ ಟ್ರೇಲರ್‌ ನೋಡಿ ಬಹಳ ಜನ ಮೆಚ್ಚಿಕೊಂಡು ಮಾತಾಡಿದರು. ಕೆಲವೊಬ್ಬರು ಹೀಗಳಿಕೆಯ ಮಾತುಗಳನ್ನೂ ಹೇಳಿದರು. ಸಮಾಜ ಅಂದಮೇಲೆ ಎಲ್ಲಾ ಬಗೆಯ ಜನರೂ ಇರ್ತಾರಲ್ಲ, ಅವರ ಮಾತನ್ನು ಸಹಜವಾಗಿ ತೆಗೆದುಕೊಂಡಿದ್ದೇನೆ.

- ನಿರ್ದೇಶಕ ವಿಜಯ ಪ್ರಸಾದ್‌ ಅವರ ಯೋಚನೆ, ಗ್ರಹಿಕೆ, ವಿಚಾರಗಳನ್ನು ವಿಶಿಷ್ಟವಾಗಿ ಕನ್ವೇ ಮಾಡುವ ರೀತಿ ನನ್ನನ್ನು ಬಹಳ ಪ್ರಭಾವಿಸಿದೆ.

- ಈ ಸಿನಿಮಾದಲ್ಲಿ ಹಿಂದೂ ಮುಸ್ಲಿಮ್‌ ಜನರೆಲ್ಲ ಬಂದರೂ ವಿವಾದ ಆಗುವ ಯಾವುದೇ ಸಂಗತಿಗಳಿಲ್ಲ. ಧರ್ಮ, ಜಾತಿ ಹೊರ ಆವರಣಗಳಷ್ಟೇ, ಒಳಗಿಂತ ನಾವೆಲ್ಲ ಮನುಷ್ಯರೇ ಅಲ್ವಾ? ಅದನ್ನು ಸಿನಿಮಾ ಹೇಳುತ್ತೆ. ಈ ಸಿನಿಮಾದ ಎರಡನೇ ಭಾಗವೂ ಬರ್ತಿರೋದು ಖುಷಿ.

ಕೆಲಸಕ್ಕಿಂತ ಪತಿ ಮುಖ್ಯ, ಪಾರ್ಟಿ ಗೀಟಿ ಮಾಡಲ್ಲ; ಪ್ರಯಾರಿಟಿ ಲಿಸ್ಟ್‌ ಬಿಚ್ಚಿಟ್ಟ ನಟಿ Aditi Prabhudeva

ನನ್ನ ಹುಡುಗನಿಗೂ ಇಷ್ಟವಾಯ್ತು!

ಮೊದಲ ಬಾರಿ ನನ್ನ ಹುಡುಗ ಪಾಲ್ಗೊಂಡದ್ದು ‘ತೋತಾಪುರಿ’ ಈವೆಂಟ್‌ನಲ್ಲಿ. ಅವರಿಗೆ ಬಹಳ ಖುಷಿ ಆಯ್ತು. ಸಿನಿಮಾದಲ್ಲಿನ ನನ್ನ ಪಾತ್ರವನ್ನೂ ಅವರು ಮೆಚ್ಚಿಕೊಂಡರು. ಹಾಗೆ ನೋಡಿದರೆ ಮದುವೆ ನಂತರ ಸಿನಿಮಾದಲ್ಲಿ ನಟನೆ ಮಾಡ್ಬೇಕೋ ಬೇಡ್ವೋ ಅನ್ನೋ ಗೊಂದಲದಲ್ಲಿದ್ದೆ. ಆತ ಮಾತ್ರ, ಮದುವೆ ಆಗೋದಕ್ಕೂ ನಟನೆಗೂ ಏನು ಸಂಬಂಧ, ನೀನೊಬ್ಬಳು ಕಲಾವಿದೆಯಾಗಿದ್ದು, ಪ್ರತಿಭೆಯನ್ನು ಯಾಕೆ ಹತ್ತಿಕ್ಕುತ್ತೀಯಾ ಅಂದರು. ಅವರಷ್ಟುಹೇಳಿದ ಮೇಲೆ ಕೊನೇ ಉಸಿರಿರೋವರೆಗೂ ನಟಿಸ್ತೀನಿ ಅನ್ನೋ ನಿರ್ಧಾರಕ್ಕೆ ಬಂದೆ. ಎಂಗೇಜ್‌ಮೆಂಟ್‌ ಆದಮೇಲೆ ಸಿನಿಮಾ ಆಫ​ರ್‍ಸ್ ಬರೋದಿಲ್ಲ ಅಂದುಕೊಂಡಿದ್ದೆ. ಹಾಗೆಲ್ಲ ಏನೂ ಆಗಿಲ್ಲ. ಸದ್ಯಕ್ಕೀಗ ಒಂದು ವೆಬ್‌ ಸೀರೀಸ್‌ನಲ್ಲಿ ನಟಿಸುತ್ತಿದ್ದೀನಿ.