Asianet Suvarna News Asianet Suvarna News

ಚಿತ್ರರಂಗದ ಕಷ್ಟನೀಗಿಸಲು ನಟಿ ತಾರಾ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದಾರೆ!

ಮಿಕ್ಕೆಲ್ಲ ಕ್ಷೇತ್ರಗಳಂತೆ ಚಿತ್ರರಂಗ ಕೂಡ ಕೊರೋನಾ ದಾಳಿಗೆ ನಲುಗಿದೆ. ಪ್ರದರ್ಶನವಿಲ್ಲ, ಚಿತ್ರೀಕರಣವಿಲ್ಲ, ಕಾರ್ಮಿಕರಿಗೆ ಆದಾಯವಿಲ್ಲ, ನಿರ್ಮಾಪಕರಿಗೆ ಭರವಸೆಯಿಲ್ಲ, ತಂತ್ರಜ್ಞರಿಗೆ ಆಸರೆಯಿಲ್ಲ ಎಂಬಂಥ ಸ್ಥಿತಿಯಲ್ಲಿ ಇರುವ ಚಿತ್ರರಂಗಕ್ಕೆ ತಕ್ಷಣಕ್ಕೆ ಆಗಬೇಕಾದ್ದು ಏನು? ಸರ್ಕಾರದಿಂದ ಚಿತ್ರರಂಗ ಏನು ಬಯಸುತ್ತಿದೆ ಎನ್ನುವುದನ್ನು ಅಧ್ಯಯನ ಮಾಡಿರುವ ತಾರಾ ಅನುರಾಧಾ ಸರ್ಕಾರಕ್ಕೊಂದು ಮನವಿ ನೀಡಿದ್ದಾರೆ. ಅದರ ಮುಖ್ಯಾಂಶಗಳು ಇಲ್ಲಿವೆ.
actress Tara anuradha meets Karnataka CM Yediyurappa regarding Film Industry Crisis
Author
Bangalore, First Published Apr 16, 2020, 11:18 AM IST

ನಿರ್ಮಾಪಕರ ಹಿತರಕ್ಷಣೆ

ಕನ್ನಡ ಚಲನಚಿತ್ರರಂಗದ ಅನ್ನದಾತರು, ಯಜಮಾನರು ಎಂಬ ಗೌರವಕ್ಕೆ ಪಾತ್ರರಾದ ನಿರ್ಮಾಪಕರು ಕಷ್ಟಕ್ಕೆ ಸಿಲುಕಿದ್ದಾರೆ. ಹೊಸ ನಿರ್ಮಾಪಕರ ಹಲವಾರು ಸಿನಿಮಾಗಳ ದೊಡ್ಡ ಸಾಲೇ ಬಿಡುಗಡೆಯ ಸಾಲಿನಲ್ಲಿದೆ. ಬಡ್ಡಿಗೆ ಹಣ ತಂದು ಹೂಡಿಕೆ ಮಾಡಿ ಚಲನಚಿತ್ರ ನಿರ್ಮಿಸಿದ ನಿರ್ಮಾಪಕರ ಸ್ಥಿತಿ ಲಾಕ್ಡೌನ್‌ ನಿಂದಾಗಿ ಅತ್ಯಂತ ಸಂಕಷ್ಟದ ತುತ್ತತುದಿ ತಲುಪಿದೆ. ಈಗಿನ ಪರಿಸ್ಥಿತಿಯಲ್ಲಿ ಒಂದು ವೇಳೆ ಕೆಲ ದಿನಗಳ ನಂತರ ಲಾಕ್ಡೌನ್‌ ತೆರವಾದರೂ ಕೂಡ ನಮ್ಮ ಕನ್ನಡ ಚಲನಚಿತ್ರರಂಗ ಸುಧಾರಿಸಿಕೊಳ್ಳುವುದಕ್ಕೇ ಕನಿಷ್ಠ ಆರು ತಿಂಗಳು ಬೇಕಾಗಬಹುದು. ನಿರ್ಮಾಣದ ಹಂತದಲ್ಲಿರುವ ಚಿತ್ರಗಳ ನಿರ್ಮಾಪಕರು, ಲಾಕ್ಡೌನ್‌ ಜಾರಿಯ ಮುನ್ನವಷ್ಟೇ ತಮ್ಮ ಚಲನಚಿತ್ರ ಬಿಡುಗಡೆ ಮಾಡಿದ್ದ ನಿರ್ಮಾಪಕರು ಈಗಿನ ಪರಿಸ್ಥಿತಿಯಲ್ಲಿ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವುದೇ ನಿರ್ಮಾಪಕರಿಗೂ ನಷ್ಟವಾಗದಂತೆ ಚಿತ್ರ ಬಿಡುಗಡೆಗೆ ಮಾರ್ಗಸೂಚಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರದ ನೆರವು ಅತ್ಯಂತ ಅಗತ್ಯ. ಅವರಿಗೆ ನೀಡಬಹುದಾದ ನೆರವು ಹೀಗಿದೆ:

1. ಬಡ್ಡಿ ಮನ್ನಾ ಮಾಡಿ:

ಬಡ್ಡಿಗೆ ಸಾಲ ಮಾಡಿ ಹಣ ತಂದು ಚಲನಚಿತ್ರ ನಿರ್ಮಿಸಿ ಈಗ ಬಂದೊದಗಿರುವ ಲಾಕ್ಡೌನ್‌ ಸಂಕಷ್ಟದಿಂದಾಗಿ ಬಡ್ಡಿ ಕಟ್ಟಲೂ ಸಾಧ್ಯವಾಗದೇ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ನಿರ್ಮಾಣ ಹಂತದಲ್ಲಿರುವ ಕನ್ನಡ ಚಲನಚಿತ್ರಗಳ ನಿರ್ಮಾಪಕರಿಗೆ ಸಾಲ ನೀಡಿರುವ ಫೈನ್ಯಾನ್ಶಿಯರ್‌ಗಳು ಮಾನವೀಯತೆಯ ದೃಷ್ಟಿಯಿಂದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬಹುದು ಅಥವಾ ಬಡ್ಡಿ ಕಡಿಮೆ ಮಾಡುವಂತೆ ಮನವೊಲಿಸಬಹುದು.

ವಾಣಿಜ್ಯ ಮಂಡಳಿ 75ನೇ ವರ್ಷದ ಉತ್ಸವ ಲಾಂಛನ ಅನಾವರಣ!

2. ಕಡ್ಡಾಯ ಸಹಾಯಧನ

ಲಾಕ್ಡೌನ್‌ ಜಾರಿಯ ಮುನ್ನವಷ್ಟೇ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಿಗೆ ಕಡ್ಡಾಯವಾಗಿ ರಾಜ್ಯ ಸರ್ಕಾರದ ಸಹಾಯಧನ (ಸಬ್ಸಿಡಿ) ದೊರೆಯುವಂತೆ ಮಾಡಬಹುದು.

3. ಮುಂಬರುವ ಸಮಸ್ಯೆಗಳ ಪರಿಹಾರ

ಲಾಕ್ಡೌನ್‌ ತೆರವಾದ ನಂತರ ಕನ್ನಡ ಚಲನಚಿತ್ರಗಳ ನಿರ್ಮಾಪಕರಿಗೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ ಅವುಗಳ ಪರಿಹಾರಕ್ಕೆ ಅಗತ್ಯ ರೋಡ್‌ ಮ್ಯಾಪ್‌ ಸಿದ್ದಪಡಿಸುವುದು.

ಕಾರ್ಮಿಕ-ತಂತ್ರಜ್ಞರಿಗೆ ಭರವಸೆ

ಕನ್ನಡ ಚಲನಚಿತ್ರರಂಗದ ನರನಾಡಿಗಳಂತೆ ಜೀವತುಂಬಿ ಕೆಲಸ ಮಾಡುವ ಕನ್ನಡ ಚಲನಚಿತ್ರ ನಿರ್ದೇಶಕರು, ಛಾಯಾಗ್ರಾಹಕರು, ಸಂಕಲನಕಾರರು, ಪೋಷಕ ಕಲಾವಿದರು, ಒಕ್ಕೂಟದ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರ ಪೈಕಿ ಬಹುತೇಕರು ಬಹಳ ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಲೈಟ್‌ ಬಾಯ್‌ ನಿಂದ ಹಿಡಿದು ತಂತ್ರಜ್ಞರವರೆಗೂ, ಪೋಷಕ ಕಲಾವಿದರು, ಉದಯೋನ್ಮುಖ ನಿರ್ದೇಶಕರು, ಸಹಾಯಕ ನಿರ್ದೇಶಕರು ಕಷ್ಟದಲ್ಲಿದ್ದಾರೆ. ಸಾಮಾನ್ಯ ದಿನಗಳಲ್ಲೇ ತಿಂಗಳಿಗೆ ಒಂದು ವಾರ ಕೆಲಸ ಸಿಕ್ಕರೇ ನಮ್ಮ ಪುಣ್ಯ ಅಂದುಕೊಂಡು ಆ ದುಡಿಮೆಯಲ್ಲೇ ಸಂಸಾರ ಸಾಗಿಸುವ ಜೀವಗಳೂ ಇಲ್ಲಿವೆ. ಲಾಕ್ಡೌನ್‌ ನ ಈ ಸಂಕಷ್ಟದ ಸಂಧರ್ಭದಲ್ಲಿ ಈ ವರ್ಗದ ಕಾರ್ಮಿಕರಿಗೆ ನಿತ್ಯದ ಬದುಕು ಸಾಗಿಸಲು ಬವಣೆ ಪಡುತ್ತಿರುವವರ ನೆರವಿಗೆ ಮುಂದಾಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಇವರಿಗೆ ಈ ಕೆಳಗಿನ ನೆರವು ನೀಡಬಹುದು.

1. ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡು

ಕಡುಬಡವರಾದ ನಿರ್ದೇಶಕರು, ಛಾಯಾಗ್ರಹಕರು, ಸಂಕಲನಕಾರರು, ಕಲಾವಿದರು, ಪೋಷಕ ಕಲಾವಿದರು, ಒಕ್ಕೂಟ, ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಬಿ.ಪಿ.ಎಲ್‌ ಕಾರ್ಡ್‌ ಹಾಗೂ ಎ.ಪಿ.ಎಲ್‌ ಕಾರ್ಡ್‌ ನೀಡಬಹುದಾಗಿದೆ.

2. ಉಚಿತ ಆರೋಗ್ಯ ಸೇವೆ

ಹಿರಿಯ ಹಾಗೂ ಬಡ ನಿರ್ದೇಶಕರು, ಛಾಯಾಗ್ರಹಕರು, ಸಂಕಲನಕಾರರು, ಕಲಾವಿದರು, ಪೋಷಕ ಕಲಾವಿದರು, ಒಕ್ಕೂಟ, ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಭಾಗ್ಯ ಕಾರ್ಡ್‌ ಒದಗಿಸಿ ಉಚಿತ ಆರೋಗ್ಯ ಸೇವೆ ಲಭ್ಯವಾಗುವಂತೆ ಕಾಳಜಿ ವಹಿಸಬಹುದು.

ಮೈಸೂರಲ್ಲೇ ಫಿಲ್ಮ್‌ಸಿಟಿ ನಿರ್ಮಾಣಕ್ಕೆ ಚಿತ್ರರಂಗ ಆಗ್ರಹ

3.ದಿನಸಿ ಕೂಪನ್‌

ದಿನನಿತ್ಯದ ಹೊಟ್ಟೆಪಾಡು ಮತ್ತು ಆರೋಗ್ಯ ಕಾಪಾಡುವ ಸಲುವಾಗಿ ಅಗತ್ಯ ದಿನಸಿ / ಔಷಧ ಕೊಳ್ಳಲು ಅನುಕೂಲವಾಗುವಂತೆ ಐದು ಸಾವಿರ ರೂಪಾಯಿ ಮೊತ್ತದ ಕೂಪನ್‌ ಗಳನ್ನು ಒದಗಿಸುವುದು.

ಪ್ರದರ್ಶಕ, ವಿತರಕರಿಗೆ ಬೆಂಬಲ

ಇತ್ತೀಚಿನ ವರ್ಷಗಳಲ್ಲಿ ಚಿತ್ರಮಂದಿರಗಳನ್ನು ನಡೆಸುವುದೇ ಬಹುದೊಡ್ಡ ಸಾಹಸ ಎಂಬಂತಾಗಿದೆ. ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಗಳ ನಡೆಸುತ್ತಿರುವ ಪ್ರದರ್ಶನಕರ ನೆರವಿಗೆ ಮಾರ್ಗಸೂಚಿ ರೂಪಿಸಿ ಸರ್ಕಾರ ಅಗತ್ಯ ನೆರವು ನೀಡಬೇಕಾದ ಅನಿವಾರ್ಯ ಸ್ಥಿತಿ ಈಗ ಲಾಕ್ಡೌನ್‌ ನಿಂದಾಗಿ ಬಂದೊದಗಿದೆ.

1. ತೆರಿಗೆ ಹಾಗೂ ವಿದ್ಯುತ್‌ ದರ ವಿನಾಯಿತಿ

ಪ್ರದರ್ಶಕರಿಗೆ ಚಿತ್ರಮಂದಿರದ ಕಟ್ಟಡದ ತೆರಿಗೆ ಹಾಗೂ ವಿದ್ಯುತ್‌ ದರ ಕಡಿಮೆ ಮಾಡುವ ಮೂಲಕ ನೆರವಾಗಬಹುದು

ಚಿತ್ರರಂಗದ ಎಲ್ಲರಿಗೂ ಆಸರೆ

1. ಕನ್ನಡ ಚಲನಚಿತ್ರರಂಗದ ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕಲಾವಿದರೂ ತಂತ್ರಜ್ಞರೂ ಸಂತ್ರಸ್ತರಿಗಾಗಿ ರೂಪಿಸಿರುವ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನ ಸಹಾಯ ಮಾಡುವುದು.

2. ಕನ್ನಡ ಚಲನಚಿತ್ರರಂಗದ ಕಲಾವಿದರೆಲ್ಲ ಒಟ್ಟಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೆಗಳನ್ನು ಆಯೋಜಿಸಿ, ಎಲ್ಲ ಕಲಾವಿದರು ಭಾಗವಹಿಸಿ ಅದರಿಂದ ಸಂಗ್ರಹವಾಗುವ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದು.

3. ಅನುಕೂಲಸ್ಥ ನಿರ್ಮಾಪಕರು ತಮ್ಮ ಚಲನಚಿತ್ರದ ಲಾಭಾಂಶದಲ್ಲಿ ಒಂದಷ್ಟುಪ್ರಮಾಣದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುವುದು.

4. ಅನುಕೂಲಸ್ಥ ನಿರ್ಮಾಪಕರು ಸರ್ಕಾರದಿಂದ ತಮ್ಮ ಚಿತ್ರಕ್ಕೆ ಬರುವ ಸಹಾಯಧನ (ಸಬ್ಸಿಡಿ) ಹಾಗೂ ಪ್ರಶಸ್ತಿಯೊಂದಿಗೆ ಬರುವ ಗೌರವಧನದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುವುದು.

ಕಳೆದ ವಾರ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಒಂದು ಸಭೆ ಇತ್ತು. ಅಲ್ಲಿ ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟಎಲ್ಲರೂ ಬಂದಿದ್ದರು. ಆ ಸಭೆಯಲ್ಲಿ ಕನ್ನಡ ಚಿತ್ರರಂಗ ಈ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಒಂದು ವರದಿ ಸಲ್ಲಿಸಬೇಕು ಎಂಬ ಮಾತು ಬಂತು. ನಾನು ತಕ್ಷಣ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತಾದ ಒಂದು ವರದಿ ಬರೆದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೇನೆ. ನಾನು ಹೋದಾಗ ಅವರು ವಾಕ್‌ ಮಾಡುತ್ತಿದ್ದರು. ನನ್ನನ್ನು ಗಮನಿಸಿ ಅಲ್ಲೇ ನಿಂತು ನಾಲ್ಕು ಪುಟಗಳ ವರದಿಯನ್ನು ಪೂರ್ತಿ ಓದಿ, ಏನಾದ್ರೂ ಮಾಡ್ತೀನಮ್ಮಾ ಎಂದರು. ಮನೆ ಹಿರಿಯರು ಹಾಗೆ ಹೇಳಿದ್ದು ಕೇಳಿ ನನಗೆ ಸಂತೋಷವಾಗಿದೆ. ಚಿತ್ರರಂಗದ ಕೆಲವಾದರೂ ಸಮಸ್ಯೆ ಬಗೆಹರಿಯುವ ಕುರಿತು ನಂಬಿಕೆ ಇದೆ. - ತಾರ ಅನುರಾಧ

Follow Us:
Download App:
  • android
  • ios