ಬೆಂಗಳೂರು(ಅ.29): ಚಿತ್ರನಗರಿಯನ್ನು (ಫಿಲ್ಮ್‌ಸಿಟಿ) ಸ್ಥಳಾಂತರ ಮಾಡುವ ಸರ್ಕಾರದ ಉದ್ದೇಶಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮೈಸೂರಿನಲ್ಲಿಯೇ ಚಿತ್ರನಗರಿ ನಿರ್ಮಿಸಬೇಕು ಎಂದು ಆಗ್ರಹಿಸಿದೆ.

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜಯರಾಜ್‌ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕನಕಪುರ ರಸ್ತೆಯಲ್ಲಿನ ರೋರಿಚ್‌ ಎಸ್ಟೇಟ್‌ನಲ್ಲಿ ಚಿತ್ರ ನಗರಿ ನಿರ್ಮಿಸಬಾರದು ಎಂದು ಮನವಿ ಮಾಡಿತು. ಈಗಾಗಲೇ ನಿರ್ಧರಿಸಿರುವಂತೆ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಅಂಜನಾದ್ರಿ ಬೆಟ್ಟವೇರಲು ಇನ್ನು ಕಷ್ಟಪಡಬೇಕಿಲ್ಲ!

ಈ ವೇಳೆ ಮಾತನಾಡಿದ ಮಂಡಳಿ ಅಧ್ಯಕ್ಷ ಜಯರಾಜ್‌, ಕಾಂಗ್ರೆಸ್‌ ಸರ್ಕಾರದ ಆಡಳಿತದ ವೇಳೆ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ನಂತರ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದಾಗ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಮನಗರದಲ್ಲಿ ನಿರ್ಮಿಸುವ ಬಗ್ಗೆ ನಿರ್ಧರಿಸಿದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರಕ್ಕೆ ಬಂದ ತರುವಾಯ ರಾಮನಗರದಿಂದ ರೋರಿಚ್‌ ಎಸ್ಟೇಟ್‌ಗೆ ಸ್ಥಳಾಂತರ ಮಾಡಿದರು. ಮೈಸೂರು ಸಾಂಸ್ಕೃತಿಕ ನಗರಿಯಾಗಿದೆ. ಹೀಗಾಗಿ ಅಲ್ಲಿಯೇ ಚಿತ್ರನಗರಿ ನಿರ್ಮಿಸಿದರೆ ಉತ್ತಮ ಎಂಬುದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮಾತನಾಡಿ, ದಿವಂಗತ ಡಾ.ರಾಜ್‌ಕುಮಾರ್‌ ಸಮಾಧಿ ಪ್ರವಾಸೋದ್ಯಮ ಸ್ಥಳವಾಗಿದ್ದರಿಂದ ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಈ ಯೋಜನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿದ್ದ ವೇಳೆ ಒಪ್ಪಿಗೆ ಸೂಚಿಸಿದ್ದರು. 10 ಕೋಟಿ ರು. ಬಜೆಟ್‌ನಲ್ಲಿ ನಿಗದಿ ಸಹ ಮಾಡಿದ್ದರು.

ಕಾಂಗ್ರೆಸ್‌ಗೆ ಹಾರುವ ಸುಳಿವು ನೀಡಿದ ಬಿಜೆಪಿ ಮುಖಂಡ

ಈ ಅನುದಾನವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೇಳಲಾಗಿದೆ. ಡಾ.ರಾಜ್‌ಕುಮಾರ್‌ ಪ್ರತಿಷ್ಠಾನದಂತೆ, ಅಂಬರೀಶ್‌ ಪ್ರತಿಷ್ಠಾನಕ್ಕೂ ಒಂದು ಟ್ರಸ್ಟ್‌ ರಚನೆಯಾಗಬೇಕಿದೆ. ನವೆಂಬರ್‌ ತಿಂಗಳ 24ರೊಳಗೆ ಟ್ರಸ್ಟ್‌ ರಚನೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಂಬರೀಶ್‌ ಪ್ರತಿಷ್ಠಾನ ರಚನೆ ಕುರಿತು ಆಶ್ವಾಸನೆ ನೀಡಿದ್ದಾರೆ ಎಂದರು.

ನಿಯೋಗದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಚಿನ್ನೇಗೌಡ, ಸಾ.ರಾ.ಗೋವಿಂದು, ಶಾಸಕ ಕುಮಾರ ಬಂಗಾರಪ್ಪ ಸೇರಿದಂತೆ ಇತರರು ಇದ್ದರು.