ಜೂ.9ರಂದು 777 ಚಾರ್ಲಿ ಚಿತ್ರದ 100 ಪ್ರೀಮಿಯರ್ ಶೋ ಪ್ರದರ್ಶನ ಕಂಟೆಂಟ್ ಮೇಲೆ ನಂಬಿಕೆ ಇಟ್ಟವರು ನಾವು, ಅದಕ್ಕಾಗಿಯೇ ಪ್ರೀಮಿಯರ್ ಶೋ: ರಕ್ಷಿತ್ ಶೆಟ್ಟಿ
ಚಿತ್ರರಂಗ ಬದಲಾಗುತ್ತಿದೆ. ಕನ್ನಡ ಸಿನಿಮಾಗಳು ಬೇರೆ ಬೇರೆ ಪ್ರಾಂತ್ಯಕ್ಕೆ ಹೋಗುತ್ತಿದ್ದಂತೆಯೇ ಹೊಸ ಹೊಸ ರೀತಿಯ ಪ್ರಚಾರ ತಂತ್ರಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಪುರಾವೆ 777 ಚಾರ್ಲಿ ಸಿನಿಮಾ. ಸಿನಿಮಾ ಬಿಡುಗಡೆಗೆ ಮುನ್ನವೇ ಕರ್ನಾಟಕ ಹೊರತು ಪಡಿಸಿ ದೇಶದ 21 ಕಡೆ ಪ್ರೀಮಿಯರ್ ಶೋ ನಡೆಸಿರುವ ತಂಡ, ಜೂ.9ರಂದು ಕರ್ನಾಟಕದಲ್ಲಿ 100 ಕಡೆಗಳಲ್ಲಿ ಪ್ರೀಮಿಯರ್ ಶೋ ಪ್ರದರ್ಶನ ಮಾಡುತ್ತಿದೆ. ಪ್ರೀಮಿಯರ್ ಶೋ ವೀಕ್ಷಕರಿಂದಲೇ ಸಿನಿಮಾಗೆ ಪ್ರಚಾರ ಸಿಗುತ್ತದೆ ಅನ್ನುವುದು ತಂಡದ ನಂಬಿಕೆ.
ಚಿತ್ರತಂಡದ ನಂಬಿಕೆ ಸುಳ್ಳಾಗಿಲ್ಲ. ಪ್ರೀಮಿಯರ್ ಶೋ ಪ್ರದರ್ಶನ ಕಂಡಲ್ಲೆಲ್ಲಾ ಜನ ಮೆಚ್ಚಿದ್ದಾರೆ. ಚಿತ್ರ ನೋಡಿ ನಕ್ಕಿದ್ದಾರೆ, ಕಣ್ಣೀರು ಹಾಕಿದ್ದಾರೆ, ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಈ ಐಡಿಯಾದ ಕುರಿತು ರಕ್ಷಿತ್ ಶೆಟ್ಟಿ, ‘ಕಂಟೆಂಟ್ ಮೇಲೆ ನಂಬಿಕೆ ಇಟ್ಟವರು ನಾವು. ನಮಗಿಂತ ಹೆಚ್ಚು ಸಿನಿಮಾ ಮಾತನಾಡಬೇಕು. ಅದಕ್ಕಾಗಿಯೇ ಪ್ರೀಮಿಯರ್ ಶೋ ಇಟ್ಟಿದ್ದೇವೆ. ಸಿನಿಮಾ ನೋಡಿದವರೇ ಆ ಸಿನಿಮಾದ ಬಗ್ಗೆ ಬೇರೆಯವರಿಗೆ ಹೇಳುತ್ತಾರೆ ಎಂಬ ನಮ್ಮ ನಂಬಿಕೆ ಈಗಲೇ ನಿಜವಾಗಿದೆ’ ಎನ್ನುತ್ತಾರೆ.
ಸಿನಿಮಾದ ಕುರಿತು ಮಾತನಾಡುವ ಅವರು, ‘ಇದೊಂದು ಮನಸ್ಸು ಬದಲಿಸುವ ಸಿನಿಮಾ. ಈ ಚಿತ್ರದ ಚಿತ್ರೀಕರಣದ ನಂತರ ನನ್ನಲ್ಲಿ ಆದ ಬದಲಾವಣೆಯನ್ನು ನಾನು ವಿವರಿಸಲಾರೆ. ಈ ಸಿನಿಮಾ ನೋಡಿದ ಬಳಿಕ ನಾಯಿಗಳನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ’ ಎಂದರು.
ನಿರ್ದೇಶಕ ಕಿರಣ್‌ರಾಜ್ ಅವರ ಸಿನಿಮಾ ಪ್ಯಾಷನ್ ಅವರ ಮಾತಲ್ಲಿ ತಿಳಿಯುತ್ತದೆ. ‘ಈ ಸಿನಿಮಾ ಹೇಗೆ ರೂಪುಗೊಂಡಿತು ಎಂಬ ಒಂದು ಡಾಕ್ಯುಮೆಂಟರಿ ರೆಡಿ ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ಅದನ್ನು ಬಿಡುಗಡೆ ಮಾಡುತ್ತೇವೆ. ಮುಂದೆ ಸಿನಿಮಾ ಮಾಡುವವರಿಗೆ ಅದೊಂದು ಪಠ್ಯವಾಗಬೇಕು’ ಎನ್ನುತ್ತಾರೆ ಅವರು.
777 ಚಾರ್ಲಿ ಸಿನಿಮಾ ಜೂ.10ರಂದು ಕನ್ನಡ, ಹಿಂದಿ, ತಮಿಳು, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ದೇಶದಲ್ಲೇ 1000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣಲಿದೆ. ವಿದೇಶದಲ್ಲಿಯೂ 500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಇದೆ. ಉತ್ತರ ಭಾರತದಲ್ಲಿ ಸುಮಾರು 350ಕ್ಕೂ ಹೆಚ್ಚು, ಆಂಧ್ರ-ತೆಲಂಗಾಣ ಮತ್ತು ತಮಿಳುನಾಡಲ್ಲಿ 100ರಿಂದ 125, ಕೇರಳದಲ್ಲಿ 100 ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆ ಕಾಣಲಿದೆ.
ಪಾತ್ರಧಾರಿಗಳಾದ ಅದ್ರಿಕಾ, ಸಂಗೀತಾ ಶೃಂಗೇರಿ, ಪ್ರೊಡಕ್ಷನ್ ಡಿಸೈನರ್ ಉಲ್ಲಾಸ್ ಹೈದೂರ್, ಡಿಓಪಿ ಅರವಿಂದ್ ಕಶ್ಯಪ್, ಸಂಗೀತ ನಿರ್ದೇಶಕ ನೊಬಿನ್ ಪೌಲ್, ನಾಯಿ ತರಬೇತುದಾರ ಪ್ರಮೋದ್, ನಿರ್ಮಾಣ ಪಾಲುದಾರ ಸುಭಾಷ್ ಸುದ್ದಿಗೋಷ್ಠಿಯಲ್ಲಿ ಇದ್ದರು.
777 ಚಾರ್ಲಿ ಚಿತ್ರ ನೋಡಿ ಕಣ್ಣೀರು ಹಾಕಿದೆ: ರಮ್ಯಾ
ಬೆಂಗಳೂರಿನಲ್ಲಿ ಸೆಲೆಬ್ರಿಟಿಗಳಿಗಾಗಿ ಆಯೋಜಿಸಿದ್ದ ‘777 ಚಾರ್ಲಿ’ ಚಿತ್ರದ ಪ್ರೀಮಿಯರ್ ಶೋವನ್ನು ನಟಿ ರಮ್ಯಾ ವೀಕ್ಷಿಸಿದ್ದಾರೆ. ಆ ಬಳಿಕ ಸಿನಿಮಾ ಬಗೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಚಾರ್ಲಿ ಸ್ವೀಟ್ ಸಿನಿಮಾ. ಚಿತ್ರ ನೋಡ್ತಾ ನೋಡ್ತಾ ಕಣ್ಣೀರು ಹಾಕಿದ್ದೀನಿ. ಇದು ಭಾವನಾತ್ಮಕವಾಗಿ ಎಲ್ಲರಿಗೂ ಕನೆಕ್ಟ್ ಆಗುತ್ತೆ. ದೊಡ್ಡವರು, ಮಕ್ಕಳು ಜೊತೆಯಾಗಿ ಎನ್‌ಜಾಯ್ ಮಾಡಬಹುದು. ಹಿಂದೆ ಕನ್ನಡದಲ್ಲಿ ಯಾರೂ ಇಂಥಾ ಕಥೆ ಹೇಳಿಲ್ಲ. ರಕ್ಷಿತ್ ಆ ನಿಟ್ಟಿನಲ್ಲಿ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ’ ಅಂತ ರಮ್ಯಾ ಹೇಳಿದ್ದಾರೆ.
"
