ಸ್ಯಾಂಡಲ್ ವುಡ್ ಕ್ವೀನ್, ಮೋಹಕತಾರೆ ನಟಿ ರಮ್ಯಾ ಮುಖ್ಯಭೂಮಿಕೆಯಲ್ಲಿದ್ದ 'ಉತ್ತರಾಕಂಡ' ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿದ್ದಾರೆ. ರಮ್ಯಾ ಅವರ ನಿರ್ಧಾರದಿಂದ ತೆರೆ ಮೇಲೆ ನಟಿಯನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ.

ಬೆಂಗಳೂರು (ಮಾ.26): ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ ನಟಿ ರಮ್ಯಾ (ದಿವ್ಯ ಸ್ಪಂದನಾ) ಮುಖ್ಯಭೂಮಿಕೆಯಲ್ಲಿದ್ದ 'ಉತ್ತರಾಕಂಡ' ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿದ್ದಾರೆ. ರಮ್ಯಾ ಅವರ ನಿರ್ಧಾರದಿಂದ ತೆರೆ ಮೇಲೆ ನಟಿಯನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ. ರಮ್ಯಾ ಅವರು ಮತ್ತೆ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿಪ್ರಿಯರು ಈ ಚಿತ್ರದ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈಗ ಅವರಿಗೆ ನಿರಾಸೆಯಾಗಿದೆ.

ಸೋಶಿಯಲ್​ ಮೀಡಿಯಾ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಈ ಸುದ್ದಿಯನ್ನು ನಟಿ ರಮ್ಯಾ ಸ್ಪಷ್ಟಪಡಿಸಿದ್ದಾರೆ. ಡೇಟ್ಸ್​ ಸಮಸ್ಯೆಯಿಂದಾಗಿ ನಾನು ಉತ್ತರಕಾಂಡದಲ್ಲಿ ನಟಿಸುತ್ತಿಲ್ಲ. ಸಿನಿಮಾ ಮತ್ತು ರಾಜಕೀಯದ ಕೆಲಸಗಳನ್ನು ನಾನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇನೆ. ಸಿನೆಮಾ ತಂಡಕ್ಕೆ ಒಳ್ಳೆಯದಾಗಲಿ ಎಂದು ಬರೆದುಕೊಂಡಿದ್ದಾರೆ.

ಚಿತ್ರದ ಮುಹೂರ್ತದಲ್ಲಿ ನಟಿ ರಮ್ಯಾ ಭಾಗಿಯಾಗಿದ್ದರು. ಆದರೆ ಇದ್ದಕ್ಕಿದ್ದಂತೆ ರಮ್ಯಾ ಈ ಚಿತ್ರದಿಂದಲೂ ಹೊರಬಂದು ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ. ಈ ಹಿಂದೆ ಕೂಡ ರಾಜ್‌ ಬಿ ಶೆಟ್ಟಿ ನಟನೆಯ "ಸ್ವಾತಿ ಮುತ್ತಿನ ಮಳೆ ಹನಿಯೇ" ಚಿತ್ರದಲ್ಲಿ ನಟಿಸುತ್ತೇನೆ ಎಂದಿದ್ದ ರಮ್ಯಾ ಆ ಚಿತ್ರದಿಂದಲೂ ಹೊರಬಂದು ಶಾಕ್‌ ಕೊಟ್ಟಿದ್ದರು. ಹೀಗಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತೇನೆ ಎಂದು ಭರವಸೆ ಕೊಟ್ಟು ನಟಿಸದೇ ನಿರಾಸೆ ಮಾಡುತ್ತಿದ್ದು, ಚಿತ್ರದಿಂದ ರಮ್ಯಾ ಹೊರಬರುತ್ತಿರುವುದ್ಯಾಕೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.

ಶರತ್ ಮಂಜುನಾಥ್ ರೋಹಿತ್ ಪದಕಿ ನಿರ್ದೇಶನದಲ್ಲಿ ಉತ್ತರಾಕಂಡ ಸಿನಿಮಾ ತೆರೆಗೆ ಬರ್ತಿದ್ದು, ಡಾಲಿ ಧನಂಜಯ್ ಬರ್ತಡೇ ದಿನವೇ ಆಗಸ್ಟ್ 2022ರಲ್ಲಿ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಉತ್ತರಕಾಂಡ ಸಿನಿಮಾ ನಿರ್ಮಾಣವಾಗಲಿದೆ. ಉತ್ತರದ ದರೋಡೆಕೋರರ ಕಥೆ ಇದಾಗಿದೆ. ನಟ ಶಿವರಾಜ್‌ ಕುಮಾರ್ , ಅತುಲ್ ಕುಲಕರ್ಣಿ, ದಿಗಂತ್ ಕೂಡ ಈ ಸಿನೆಮಾದಲ್ಲಿ ಬಣ್ಣ ಹಚ್ಚಲಿದ್ದಾರೆ.

ಧನಂಜಯ್‌, ರೋಹಿತ್ ಪದಕಿ ಹಾಗೂ ಕೆಆರ್‌ಜಿ ಕಾಂಬಿನೇಷನ್‌ನಲ್ಲಿ ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾ ಸಕ್ಸಸ್ ಕಂಡಿತ್ತು. ಉತ್ತರಕಾಂಡ ಚಿತ್ರದಲ್ಲಿ ಸಿಕ್ಕಾಪಟ್ಟೆ ಖಡಕ್‌ ರೋಲ್‌ನಲ್ಲಿ ಧನಂಜಯ್‌ ಮಿಂಚಿದ್ದು, ಚಿತ್ರದ ಟೀಸರ್‌ ಕಳೆದ ವರ್ಷ ಬಿಡುಗಡೆಯಾಗಿತ್ತು. ಉತ್ತರಕರ್ನಾಟಕದ ಭಾಷೆಯನ್ನು ಈ ಸಿನೆಮಾದಲ್ಲಿ ಬಳಸಲಾಗಿದೆ. ಮತ್ತು ಉತ್ತರಕರ್ನಾಟಕದಲ್ಲಿ ಆಡಿಷನ್ ಮಾಡುತ್ತಿದೆ. ಮಾರ್ಚ್ 27- ವಿಜಯಪುರ. ಮಾರ್ಚ್ 28- ಹುಬ್ಬಳ್ಳಿಯಲ್ಲಿ ಆಡಿಷನ್‌ ನಡೆಯಲಿದೆ.