ಅಪ್ಪು ನಿಶ್ಚಲವಾಗಿ ಮಲಗಿದ್ದ, ಹಣೆಗೊಂದು ಮುತ್ತುಕೊಟ್ಟು ಬಂದೆ: ರವಿಚಂದ್ರನ್

ತಮ್ಮ ಪುತ್ರ ಮನುರವಿಚಂದ್ರನ್‌ ನಟನೆಯ ‘ಮುಗಿಲ್‌ಪೇಟೆ’ ಚಿತ್ರದ ಬಿಡುಗಡೆ ಪತ್ರಿಕಾಗೋಷ್ಟಿಯಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌(Ravichandran) ಅವರು ಹೇಳಿದ ನೇರ ಮತ್ತು ಭಾವನಾತ್ಮಕ ಮಾತುಗಳು ಇಲ್ಲಿವೆ.

Actor Ravichandran remembers Puneeth Rajkumar request to build a studio in his name dpl

- ಆರ್‌ ಕೇಶವಮೂರ್ತಿ

  • ನಾನು ನಿರ್ದೇಶನ ಮಾಡುವ ಚಿತ್ರದಲ್ಲಿ ನಟಿಸುವ ಆಸೆ ಅಪ್ಪುಗೆ ಇತ್ತು. ತನ್ನ ಆಸೆಯನ್ನು ನನ್ನ ಪತ್ನಿ ಬಳಿ ಕೂಡ ಹೇಳಿಕೊಂಡಿದ್ದ.
  • ನನ್ನ ಮತ್ತು ಪುನೀತ್‌ ಅವರನ್ನು ಜತೆಯಾಗಿಸುವ ‘ದ್ವಿತ್ವ’ ಚಿತ್ರ ಸೆಟ್ಟೇರಿತು. ಅದು ಫೋಟೋಶೂಟ್‌ ಆಗುವ ಮುನ್ನವೇ ಅಪ್ಪು ಇಲ್ಲವಾದರು.
  • ಆಸ್ಪತ್ರೆಯಲ್ಲಿ ನಿಶ್ಚಲವಾಗಿ ಮಲಗಿದ್ದ ಪುನೀತ್‌ ಹಣೆಗೆ ಮುತ್ತು ಕೊಟ್ಟು ನೋವಿನಿಂದ ವಾಪಸ್ಸಾದೆ.
  • ನಗು ನಗುತ್ತ ಮಗುವಾಗಿ ಬಂದ, ಅದೇ ನಗು ಹೊತ್ತು ಮಗುವಾಗಿಯೇ ಹೋದ.

- ಭಾವನಾತ್ಮಕವಾಗಿ ಈ ಮಾತು ಹೇಳಿಕೊಂಡಿದ್ದು ರವಿಚಂದ್ರನ್‌. ಪವರ್‌ ಸ್ಟಾರ್‌(Power star) ಹಾಗೂ ಕ್ರೇಜಿಸ್ಟಾರ್‌ ಅವರದು ಅಪರೂಪದ ಸ್ನೇಹ ಸಂಬಂಧ. ಆದರೂ ಪುನೀತ್‌ ಅಗಲಿದ ನಂತರ ಅಪ್ಪು ಕುರಿತು ರವಿಚಂದ್ರನ್‌ ಎಲ್ಲೂ ಮಾತನಾಡಿಲ್ಲ. ಆ ನೋವನ್ನು ನುಂಗಿಕೊಂಡೇ ಇದ್ದವರು, ‘ಮುಗಿಲ್‌ಪೇಟೆ’ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ತಮ್ಮ ನೋವನ್ನು ವ್ಯಕ್ತಪಡಿಸಿದರು. ಓವರ್‌ ಟು ಕ್ರೇಜಿಸ್ಟಾರ್‌...

ನಾನು ಮಾತನಾಡುತ್ತಿದ್ದೆ, ಅಪ್ಪು ಮಾತಿನಲ್ಲದೆ ಮಲಗಿದ್ದ

ಅಪ್ಪು ಇಲ್ಲ ಎಂದು ಕೇಳಿಸಿಕೊಂಡ ದಿನ ತುಂಬಾ ಕ್ರೂರವಾಗಿತ್ತು. ಬೆಂಗಳೂರಿನ(Bengaluru) ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಾನು ‘ದೃಶ್ಯ 2’ ಚಿತ್ರದ ನನ್ನ ಪಾತ್ರಕ್ಕೆ ಡಬ್ಬಿಂಗ್‌ ಮಾಡುತ್ತಿದ್ದೆ. ಯಾಕೋ ಏನೋ ಗೊತ್ತಿಲ್ಲ, ಎಂದಿನಂತೆ ಡಬ್‌ ಮಾಡಲು ಆಗಲೇ ಇಲ್ಲ. ಯಾಕೆ ಹೀಗೆ ಎಂಬುದು ಅರ್ಥನೇ ಆಗಲಿಲ್ಲ. ಮನೆಗೆ ಹೋಗಿ ಬರೋಣ ಎಂದು ವಿಕ್ರಮ್‌ ಆಸ್ಪತ್ರೆಯ ರಸ್ತೆಯಲ್ಲಿ ಹೊರಟರೆ ಜನ ಗುಂಪು ಸೇರಿದ್ದರು. ಯಾಕೆ ಗುಂಪು, ಟ್ರಾಫಿಕ್‌ ಜಾಮ್‌ ಆಗಿದೆ ಎಂದರೆ ರಸ್ತೆ ರಿಪೇರಿ ಎಂದರು. ಆದರೆ, ಆಸ್ಪತ್ರೆ ದಾಟಿ ಸಿಗ್ನಲ್‌ಗೆ ಬರುವ ಹೊತ್ತಿಗೆ ‘ಅಪ್ಪು ನೋ ಮೋರ್‌’ ಎನ್ನುವ ಸುದ್ದಿ ನನ್ನ ಮೊಬೈಲ್‌ಗೆ ಬಂತು. ಕೂಡಲೇ ಕಾರು ತಿರುಗಿಸಿ ವಿಕ್ರಮ್‌ ಆಸ್ಪತ್ರೆ ಒಳಗೆ ಹೋದರೆ ರಾಘಣ್ಣ ಒಂದು ಕಡೆ ಕೂತು ಅಳುತ್ತಿದ್ದರು. ಮತ್ತೊಂದು ಕಡೆ ಶರ್ಟ್‌ ಇಲ್ಲದೆ ಪುನೀತ್‌ ಅವರನ್ನು ಬೆಡ್‌ ಮೇಲೆ ಮಲಗಿಸಿದ್ದರು. ರಾಜ್‌ಕುಟುಂಬದ ಹೊರತಾಗಿ ಪುನೀತ್‌ ದೇಹದ ಮುಂದೆ ನಿಂತಿದ್ದ ಮೊದಲ ವ್ಯಕ್ತಿ ನಾನೇ. ತುಂಬಾ ಹೊತ್ತು ಹಾಗೆ ನೋಡುತ್ತ ನಿಂತುಬಿಟ್ಟೆ. ಅದೇ ವಿಕ್ರಮ್‌ ಆಸ್ಪತ್ರೆಯ ಪಕ್ಕದಲ್ಲಿರುವ ಸ್ಟುಡಿಯೋದಲ್ಲಿ ನಾನು ನನ್ನ ಪಾತ್ರಕ್ಕೆ ಮಾತು ಕೊಡುತ್ತಿದ್ದರೆ, ಇತ್ತ ಅಪ್ಪು ಮಾತಿಲ್ಲದೇ ಪಾತ್ರ ಮುಗಿಸಿ ಮೌನವಾಗಿ ಮಲಗಿದ್ದರು. ತುಂಬಾ ಹೊತ್ತು ನೋಡುತ್ತಾ ನಿಂತ ನಾನು ಪುನೀತ್‌ ಹಣೆಗೆ ಮುತ್ತುಕೊಟ್ಟು ನೋವಿನಿಂದಲೇ ಅಲ್ಲಿಂದ ತೆರಳಿದೆ. ನನ್ನ ಜೀವನದಲ್ಲೇ ಮೊದಲ ಬಾರಿ ಹೀಗೆ ನಿಧನರಾದ ವ್ಯಕ್ತಿಗೆ ಮುತ್ತು ಕೊಟ್ಟಿದ್ದು.

ಜತೆಯಾಗಿ ನಟಿಸುವ ಆಸೆಯೂ ಈಡೇರಲಿಲ್ಲ

ನಾನು ಮತ್ತು ಪುನೀತ್‌ ದ್ವಿತ್ವ ಚಿತ್ರದಲ್ಲಿ ನಟಿಸಬೇಕಿತ್ತು. ಒಂದು ತಿಂಗಳಿಂದ ಅದರ ಚಿತ್ರೀಕರಣ ಮುಂದೂಡುತ್ತಲೇ ಬರುತ್ತಿದ್ವಿ. ಕೊನೆಗೆ ಸೆ.27ರಂದು ಫೋಟೋಶೂಟ್‌ ಮಾಡುವ ಪ್ಲಾನ್‌ ಮಾಡಿದ್ವಿ. ಜೇಮ್ಸ್‌ ಶೂಟಿಂಗ್‌ ಮುಗಿಸಿ ದ್ವಿತ್ವ ಚಿತ್ರದ ಕೆಲಸ ಶುರು ಮಾಡೋಣ ಅಂತ ಅಪ್ಪುನೇ ಹೇಳಿದ. ಅವರ ಪ್ರಕಾರ ಇನ್ನೆರಡು ದಿನ ಜೇಮ್ಸ್‌ ಚಿತ್ರದ ಕೆಲಸ ಮುಗಿಸಿದ್ದರೆ ನಾನು, ಅಪ್ಪು ಮೂರನೇ ದಿನ ಕ್ಯಾಮೆರಾ(Camera) ಮುಂದೆ ನಿಲ್ಲುತ್ತಿದ್ವಿ. ಎರಡ್ಮೂರು ದಿನ ಕಾದಿದ್ದರೆ ಇಬ್ಬರು ಜತೆಯಾಗಿ ನಟಿಸುವ ಆಸೆ ಈಡೇರುತ್ತಿತ್ತು. ವಿಧಿ ಅದಕ್ಕೂ ಅವಕಾಶ ಕೊಡಲಿಲ್ಲ. ಜತೆಯಾಗಿ ನಟಿಸುವ ಆಸೆಯೂ ಈಡೇರಲಿಲ್ಲ ಎನ್ನುವ ನೋವು ನನ್ನ ಮನಸ್ಸಿನಿಂದ ಯಾವತ್ತಿಗೂ ದೂರವಾಗಲ್ಲ.

ನನ್ನ ನಿರ್ದೇಶನದಲ್ಲಿ ನಟಿಸುವ ಆಸೆ

ಅಪ್ಪು ನಟನೆಯ ಪ್ರತಿ ಚಿತ್ರದ ಮುಹೂರ್ತಕ್ಕೂ ಹೋಗಿ ನಾನೇ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವುದಕ್ಕೆ ಒಂದು ಕಾರಣ ಇತ್ತು. ಪುನೀತ್‌ಗೆ ನನ್ನ ನಿರ್ದೇಶನದಲ್ಲಿ ನಟಿಸುವ ಆಸೆ ಇತ್ತು. ಈ ಬಗ್ಗೆ ಅಪ್ಪುನೇ ನನ್ನ ಪತ್ನಿ ಬಳಿ ಒಮ್ಮೆ ಗೋವಾದಿಂದ ಬರುವಾಗ ಹೇಳಿಕೊಂಡಿದ್ದರು. ಅವರ ಮನೆಯಲ್ಲೂ ಮಾತನಾಡಿದ್ದರು. ಆದರೆ, ಯಾಕೆ ನಾನು ಪುನೀತ್‌ಗೆ ನಿರ್ದೇಶನ ಮಾಡಲಿಲ್ಲ ಎಂಬುದು ಬೇರೆ ಕಥೆ. ಹೀಗೆ ನನ್ನ ನಿರ್ದೇಶನದಲ್ಲಿ ನಟಿಸುವ ಆಸೆ ಇಟ್ಟುಕೊಂಡಿದ್ದ ಪುನೀತ್‌, ತನ್ನ ಪ್ರತಿ ಚಿತ್ರದ ಮುಹೂರ್ತಕ್ಕೂ ನನ್ನನ್ನೇ ಕರೆದು ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿಸುತ್ತಿದ್ದ.

ಪುನೀತ್‌ ಹೆಸ್ರಲ್ಲಿ ಸ್ಟುಡಿಯೋ ನಿರ್ಮಿಸಿ

ಅಪ್ಪು ಮಗು ಥರಾ ಬಂದ. ಹುಟ್ಟುತ್ತಲೇ ಕ್ಯಾಮೆರಾ ಮುಂದೆ ನಿಂತು ನಗುತ್ತಲೇ ಇಲ್ಲಿವರೆಗೂ ಬಂದ. ಹಾಗೆ ನಗುತ್ತಲೇ ಹೋದ. ಪುನೀತ್‌ ನಿಧನದ ನಂತರ ಹಲವು

ಪ್ರಶಸ್ತಿಗಳನ್ನು ಘೋಷಣೆ ಮಾಡುತ್ತಿದ್ದಾರೆ. ಆ ಬಗ್ಗೆ ನನ್ನ ಅಭ್ಯಂತರ ಇಲ್ಲ. ಆದರೆ, ಪುನೀತ್‌ ಹೆಸರಿನಲ್ಲಿ ಒಂದು ಸ್ಟುಡಿಯೋ ಮಾಡಲು ನಿರ್ಧರಿಸಿ. ಅದೇ ಪುನೀತ್‌ಗೆ ನೀವು- ನಾವು ಸಲ್ಲಿಸುವ ಅತ್ಯುತ್ತಮ ಗೌರವ. ಪುನೀತ್‌ ಹೆಸರಿನ ಸ್ಟುಡಿಯೋದಲ್ಲಿ ನಿರಂತರವಾಗಿ ಸಿನಿಮಾಗಳು ಹುಟ್ಟಿಕೊಳ್ಳುತ್ತಿದ್ದರೆ ಅಪ್ಪು ಎನ್ನುವ ಮಗು ಎಲ್ಲೂ ಹೋಗದೆ ನಮ್ಮ ಮಡಿಲಲ್ಲೇ ಇರುತ್ತದೆ. ಚಿತ್ರರಂಗ ಮತ್ತು ಸರ್ಕಾರ ಈ ಬಗ್ಗೆ ಯೋಚನೆ ಮಾಡಿ ಮುಂದೆ ಬಂದರೆ ಪುನೀತ್‌ ಹೆಸರಿನಲ್ಲಿ ಚಿತ್ರರಂಗಕ್ಕೊಂದು ಸ್ಟುಡಿಯೋ ಮಾಡುವ ಕೆಲಸದ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ.

Latest Videos
Follow Us:
Download App:
  • android
  • ios