ಶೂಟಿಂಗ್‌ಗೆ ಹೊರಟ ಪವರ್‌ಸ್ಟಾರ್‌

ನಟ ಪುನೀತ್‌ರಾಜ್‌ಕುಮಾರ್‌ ತಮ್ಮ ಎರಡು ಚಿತ್ರಗಳಿಗೆ ಶೂಟಿಂಗ್‌ ಮಾಡುವುದಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಸೆ.26 ರಿಂದ ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ‘ಯುವರತ್ನ’ ಹಾಗೂ ಅಕ್ಟೋಬರ್‌ 13ರಿಂದ ಚೇತನ್‌ ಕುಮಾರ್‌ ‘ಜೇಮ್ಸ್‌’ ಚಿತ್ರ ಸೆಟ್‌ಗಳಿಗೆ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಜತೆಗೆ ಮಾತುಕತೆ.

ತುಂಬಾ ದಿನಗಳ ನಂತರ ಚಿತ್ರೀಕರಣಕ್ಕೆ ಹೊರಡುತ್ತಿದ್ದೀರಿ. ಹೇಗನಿಸುತ್ತಿದೆ?

ನನಗೆ ಶೂಟಿಂಗ್‌ ಸಂಭ್ರಮಕ್ಕಿಂತ ಹೆಚ್ಚಾಗಿ ಎಲ್ಲರ ಜತೆಗೆ ಸೇರಿ ಮತ್ತೆ ಕೆಲಸ ಮಾಡುತ್ತಿದ್ದೇನೆಂಬ ಎಕ್ಸೈಟ್‌ಮೆಂಟ್‌ ಉಂಟಾಗಿದೆ. ಯಾಕೆಂದರೆ ಕಾರ್ಮಿಕರು, ತಂತ್ರಜ್ಞರು ಕಳೆದ ಐದಾರು ತಿಂಗಳುಗಳಿಂದ ಕೆಲಸ ಇಲ್ಲದೆ ಕೂತಿದ್ದಾರೆ. ನಾನೂ ಕೂಡ ಸಿನಿಮಾ ಕಾರ್ಮಿಕನೇ. ಹೀಗಾಗಿ ಮತ್ತೆ ತುಂಬಾ ದಿನಗಳ ನಂತರ ಕೆಲಸ ಎಲ್ಲರು ಜತೆಗೂಡಿ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ ಖುಷಿ ಮತ್ತು ಸಂಭ್ರಮ ಆಗುತ್ತಿದೆ.

ಹಾಗಾದರೆ ‘ಯುವರತ್ನ’ ಚಿತ್ರಕ್ಕೆ ಎಷ್ಟುದಿನ ಶೂಟಿಂಗ್‌ ಇದೆ?

ಸೆ.26ರಿಂದ ಚಿತ್ರೀಕರಣ ಶುರುವಾಗಿದೆ. 10 ರಿಂದ 15 ದಿನ ಶೂಟಿಂಗ್‌. ಬೆಂಗಳೂರಿನ ಕಂಠೀರವ ಸ್ಟುಡಿಯೋ ಸೇರಿದಂತೆ ಬೇರೆ ಬೇರೆ ಕಡೆ ಸೆಟ್‌ಗಳನ್ನು ಹಾಕುತ್ತಿದ್ದೇವೆ. ಹಾಡಿನ ಜತೆಗೆ ಮಾತಿನ ಭಾಗದ ಚಿತ್ರೀಕರಣ ನಡೆಯಲಿದೆ.

ಏನೇ ಧೈರ್ಯ ಇದ್ದರೂ ಕೊರೋನಾ ಅನ್ನೋ ಭಯ ಇರುತ್ತದೆ ಅಲ್ವಾ?

ಹಾಗಂತ ಸುಮ್ಮನೆ ಕೂರಕ್ಕೆ ಆಗಲ್ಲ.ಯಾಕೆಂದರೆ ಎಷ್ಟುದಿನ ಹೀಗೆ ಅಂತ ಹೇಳಕ್ಕೆ ಆಗುತ್ತಿಲ್ಲ. ಕೊರೋನಾ ವೈರಸ್‌ ಅದಾಗಿಯೇ ಹೋಗುತ್ತದೋ ಅಥವಾ ಅದಕ್ಕೆ ವ್ಯಾಕ್ಸಿನ್‌ ಬರುತ್ತದೋ ಎಂಬುದು ಗೊತ್ತಿಲ್ಲ. ಹೀಗಾಗಿ ನಾವೇ ಮುನ್ನೆಚ್ಚರಿಕೆ ತೆಗೆದುಕೊಂಡು ನಮ್ಮ ಕೆಲಸಗಳ ಕಡೆ ಗಮನ ಕೊಡಬೇಕಿದೆ. ಭಯಕ್ಕಿಂತ ಹೆಚ್ಚಾಗಿ ಸವಾಲಾಗಿ ತೆಗೆದುಕೊಳ್ಳಬೇಕಾದ ವಾತಾವರಣ ಇದು.

ಚೇತನ್‌ ಕುಮಾರ್‌ ನಿರ್ದೇಶನದ ‘ಜೇಮ್ಸ್‌’ ಚಿತ್ರಕ್ಕೆ ಯಾವಾಗ ಶೂಟಿಂಗ್‌?

‘ಯುವರತ್ನ’ ನಂತರ ‘ಜೇಮ್ಸ್‌’ ಚಿತ್ರೀಕರಣ ಕೂಡ ಮಾಡಬೇಕೆಂದು ನಿರ್ಧರಿಸಿದ್ದೇವೆ. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್‌ 13ರಿಂದ ‘ಜೇಮ್ಸ್‌’ ಶೂಟಿಂಗ್‌ ಶುರುವಾಗಲಿದೆ. ಲಾಕ್‌ಡೌನ್‌ ಟೈಮ್‌ನಲ್ಲಿ ಗಡ್ಡ ಬಿಟ್ಟಿದ್ದೆ. ಅದು ಜೇಮ್ಸ್‌ ಚಿತ್ರದ ಒಂದು ಗೆಟಪ್‌ ಕೂಡ ಹೌದು. ಹಾಗಂತ ಸಿನಿಮಾ ಪೂರ್ತಿ ಇದೇ ರೀತಿ ಇರಲ್ಲ.

ಆದರೆ, ಎಲ್ಲರ ಬೇಡಿಕೆಯಂತೆ ಚಿತ್ರಮಂದಿರಗಳೇ ಆರಂಭವಾಗುತ್ತಿಲ್ಲವಲ್ಲ?

ನಮ್ಮ ಚಿತ್ರರಂಗದ ಇಕಾನಮಿ ನಿಂತಿರುವುದು ಥಿಯೇಟರ್‌ಗಳ ಮೇಲೆ. ಹೀಗಾಗಿ ಖಂಡಿತವಾಗಿ ಚಿತ್ರಮಂದಿರಗಳು ಕೂಡಲೇ ಆರಂಭವಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳುತ್ತದೆಂಬ ನಂಬಿಕೆ ಇದೆ. ಥಿಯೇಟರ್‌ಗಳು ಆರಂಭವಾಗಬೇಕು, ಜನ ಸಿನಿಮಾ ನೋಡಲು ಬರಬೇಕಿದೆ.

‘ಮಜಾ ಟಾಕೀಸ್‌’ ಶೋನಲ್ಲಿ ಕಾಣಿಸಿಕೊಂಡಿದ್ದ ಅನುಭವ ಹೇಗಿತ್ತು?

ಸಿನಿಮಾ ಬಿಟ್ಟು ನಾನು ಇತ್ತೀಚೆಗೆ ಕಾಣಿಸಿಕೊಂಡಿದ್ದು ಮಜಾ ಟಾಕೀಸ್‌ನಲ್ಲಿ. ಕಿರುತೆರೆ ನನಗೆ ಹೊಸದಲ್ಲ. ಆದರೂ ಈ ಸಮಯದಲ್ಲಿ ಆ ಶೋಗೆ ಹೋಗಿದ್ದ ಕಾರಣ ಅಲ್ಲೂ ಕಾರ್ಮಿಕರು ಪ್ರೀತಿಯಿಂದ ಕೆಲಸ ಮಾಡುತ್ತಿದ್ದಾರೆ. ಅಲ್ಲಿಗೆ ಹೋದರೆ ಅವರ ಉತ್ಸಾಹ ಹೆಚ್ಚಾಗುತ್ತದೆ ಎಂದರೆ ಯಾಕೆ ಹೋಗಬಾರದು ಅಂತ ಹೋದೆ. ಇಡೀ ಶೋ ತುಂಬಾ ಖುಷಿ ಕೊಟ್ಟಿತು. ಸೃಜನ್‌ ಪಂಚಿಂಗ್‌ ಡೈಲಾಗ್‌, ನನ್ನಿಂದ ಆ ಶೋನಲ್ಲಿ ಮಾತನಾಡಿಸಿದ್ದು ಎಲ್ಲವೂ ಚೆನ್ನಾಗಿತ್ತು. ಒಬ್ಬ ನಟನಾಗಿ ನಾನು ಆ ಶೋನ ಎಂಜಾಯ್‌ ಮಾಡಿದೆ. ಜತೆಗೆ ಕೆಲಸ ಮಾಡಿದ ತೃಪ್ತಿ ಸಿಕ್ಕಿತು.

ಶಿವರಾಜ್‌ಕುಮಾರ್‌ ನಾಯಕತ್ವದ ಬಗ್ಗೆ ಏನು ಹೇಳುತ್ತೀರಿ?

ಚಿತ್ರರಂಗದಲ್ಲಿ ಒಂದಿಷ್ಟುಕೆಲಸಗಳು ಆಗಬೇಕಿದೆ. ಅದು ಕೇವಲ ಲಾಕ್‌ಡೌನ್‌, ಕೊರೋನಾ ಕಾಲಕ್ಕೆ ಮಾತ್ರ ಸೀಮಿತವಾಗುವ ಕೆಲಸಗಳು ಅಲ್ಲ. ಎಲ್ಲಾ ಕಾಲಕ್ಕೂ ಉದ್ಯಮದ ಪರ ನಿಂತು ಎಲ್ಲರನ್ನು ಜತೆ ಮಾಡಿಕೊಂಡು ಮುಂದಾಳತ್ವ ವಹಿಸಿಕೊಳ್ಳುವವರ ಅಗತ್ಯವಿತ್ತು. ಈಗ ಎಲ್ಲರು ಶಿವಣ್ಣ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಒಳ್ಳೆಯ ಸಮಯ ಮತ್ತು ಸೂಕ್ತವಾದ ಆಯ್ಕೆ. ನಾನು ಶಿವಣ್ಣ ಅವರ ಸೋದರನಾಗಿ ಕುಟುಂಬದಿಂದ ಅವರಿಗೆ ಎಲ್ಲ ರೀತಿಯ ಬೆಂಬಲ ಇರುತ್ತದೆ. ಹಾಗೆ ಒಬ್ಬ ನಟನಾಗಿಯೂ ಶಿವಣ್ಣ ತೆಗೆದುಕೊಳ್ಳುವ ನಿರ್ಧಾರ ಮತ್ತು ಅವರು ಮಾಡುವ ಕೆಲಸಗಳ ಜತೆಗೆ ಇರುತ್ತೇನೆ.

ಚಿತ್ರರಂಗದ ನಾಯಕತ್ವದ ಕೊರತೆ ನೀಗುತ್ತದೆಯೇ?

ಎಲ್ಲರನ್ನೂ ಜತೆ ಮಾಡಿಕೊಂಡು ಹೋಗುವ ಗುಣ ಶಿವಣ್ಣ ಅವರಿಗೆ ಇದೆ. ಯಾಕೆಂದರೆ ಅವರಿಗೆ ಎಲ್ಲರನ್ನೂ ಕಂಡರೆ ಪ್ರೀತಿ ಮತ್ತು ಅಭಿಮಾನ. ಅದೇ ಅವರಲ್ಲಿ ನಾಯಕತ್ವದ ಗುಣ ಬೆಳೆಸಿದೆ. ಅವರ ಸೋದರನಾಗಿ ಅವರ ಪ್ರೀತಿಯನ್ನು ಹಂಚಿಕೊಂಡು ಬೆಳೆದವನಾಗಿ ಶಿವಣ್ಣ ಅವರ ಜತೆಗೆ ನಿಲ್ಲುತ್ತೇನೆ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಆಗುತ್ತದೆ.

ಫೇಕ್ ಸ್ಕ್ರೀನ್ ಶಾಟ್ ತೋರಿಸಿ ನಿರ್ದೇಶಕನ ವಿರುದ್ಧ ಆರೋಪಿಸಿದ ನಟಿ ಈಕೆಯೇ..!

ಚಿತ್ರರಂಗವನ್ನೇ ನಂಬಿಕೊಂಡಿರುವ ಕಾರ್ಮಿಕರು, ತಂತ್ರಜ್ಞರ ಜೀವನ ತುಂಬಾ ಕಷ್ಟದಲ್ಲಿದೆ. ಹೀಗಾಗಿ ನಾವೆಲ್ಲ ಶೂಟಿಂಗ್‌ ಮಾಡುತ್ತೇವೆಂದು ಧೈರ್ಯವಾಗಿ ಹೊರಟರೆ ಎಲ್ಲರಿಗೂ ಕೆಲಸ ಸಿಗುತ್ತದೆ. ನಾನು ಕೂಡ ಒಬ್ಬ ಕಾರ್ಮಿಕನಾಗಿ, ನಟನಾಗಿ, ನಿರ್ಮಾಪಕನಾಗಿ ಹೇಳುವುದು ಕೂಡ ಇಷ್ಟೆ, ಚಿತ್ರರಂಗದಲ್ಲಿ ಎಲ್ಲರು ಕೆಲಸ ಮಾಡುತ್ತಾ ಖುಷಿಯಾಗಿ ಇದ್ದಾಗ ಮಾತ್ರ ಉದ್ಯಮ ಬೆಳೆಯುತ್ತದೆ ಎಂದು ನಟ ಪುನೀತ್‌ ರಾಜ್‌ಕುಮಾರ್‌ ಹೇಳಿದ್ದಾರೆ.