ಚಲನಚಿತ್ರ ಅಖಾಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ವಿರುದ್ಧ ಭ್ರಷ್ಟಾಚಾರದ ದೂರು ದಾಖಲು!
ಸುನೀಲ್ ಪುರಾಣಿಕ್ ವಿರುದ್ಧ ನೆಪೋಟಿಸಂ ಹಾಗೂ ಭ್ರಷ್ಟಾಚಾರ ಆರೋಪ ಮಾಡಿದ ನಟ ಮದನ್ ಪಾಟೀಲ್. ಪತ್ರದ ಮೂಲಕ ಪೊಲೀಸರಿಗೆ ತನಿಖೆ ಮಾಡಲು ಮನವಿ.
ಕರ್ನಾಟಕ ಚಲನಚಿತ್ರ ಅಕಾಡೆಮಿ 5ನೇ ಅಧ್ಯಕ್ಷರಾಗಿರುವ ಸುನೀಲ್ ಪುರಾಣಿಕ್ ವಿರುದ್ಧ ಮೊದಲ ಬಾರಿ ಅವ್ಯವಹಾರದ ಆರೋಪ ಕೇಳಿ ಬರುತ್ತಿದೆ. ವಿಡಿಯೋ ಮಾಡುವ ಮೂಲಕ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ ಹಾಗೂ ತಮ್ಮ ಪುತ್ರ ನಿರ್ಮಿಸಿದ ಕಿರುಚಿತ್ರಕ್ಕೆ ಅವಾರ್ಡ್ ಬರುವಂತೆ ಮಾಡಿ, ಹೇಗೆ ಸ್ವಜನಪಕ್ಷಪಾತಕ್ಕೆ ಪುರಾಣಿಕ್ ಅವರು ನಾಂದಿ ಹಾಡಿದ್ದಾರೆ ಎಂಬುದನ್ನು ಮದನ್ ಪಾಟೀಲ್ ವಿವರಿಸಿದ್ದಾರೆ.
ಸಮರ್ಥವಾಗಿ ಕೆಲಸ ಮಾಡಲು ಟೀಕೆಗಳು ಬೇಕು: ಸುನೀಲ್ ಪುರಾಣಿಕ್!'ಬ್ರಷ್ಟಾಚಾರ ನಿಗ್ರಹದಳದಲ್ಲಿ ನಾನು ಒಂದು ದೂರನ್ನು ದಾಖಲಿಸಿದ್ದೆ. ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿರುವ ಮೋಹನ್ ಕುಂಡಚ್ಚಿ ಸಹ ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಇದಕ್ಕೆ ಇಲಾಖೆಯಿಂದ ಬಂದ ಉತ್ತರ ಹಾಗೂ ನಾನು ಪಡೆದ ಹಲವು ಆರ್‌ಟಿಐ ದಾಖಲೆಗಳ ಸಮೇತ ಪುರಾಣಿಕ್ ವಿರುದ್ಧ ದೂರು ದಾಖಲಿಸಿದ್ದೇನೆ. ಒಂದು ಸಣ್ಣ ಉದಾಹರಣೆ ಹೇಳುವೆ. ಸರ್ಕಾರದ ಹಣ, ನಮ್ಮ ಹಣ ಪೋಲ್ ಅಗ್ತಿದೆ. ಅ ದುಂದು ವೆಚ್ಚ ಹೇಗೆ ಮಾಡಿದ್ದಾರೆ ಅಂದ್ರೆ ನಾಡಗೀತೆ ಹಾಡುವ ತಂಡಕ್ಕೆ ಬ್ಯಾಂಡ್ ಸೆಟ್ಟಿನವರಿಗೆ 13 ಲಕ್ಷ 75 ಸಾವಿರ ಹಣ ಕೊಟ್ಟಿದ್ದಾರೆ. ಅಂದಿನ ರಾತ್ರಿ ಊಟದ ವೆಚ್ಚ ಪ್ರತಿಯೊಬ್ಬರಿಗೆ 820 ರೂ. ವ್ಯಯಿಸಿದ್ದಾರೆ. 2018-19ರಲ್ಲಿ ಸಾಲಿನಲ್ಲಿ ಅಧ್ಯಕ್ಷರಾಗಿದ್ದಂತ ನಾಗತಿಹಳ್ಳಿ ಚಂದ್ರಶೇಖರ್ ಅವರು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪ ಸಮಾರಂಭಕ್ಕೆ ಕೇವಲ 8 ಲಕ್ಷ 30 ಸಾವಿರ ರೂ. ವೆಚ್ಚ ಮಾಡಿದ್ದಾರೆ. ಸುನೀಲ್ ಪುರಾಣಿಕ್ ಅವರು 2019-20 ಸಾಲಿನ ಸಿನಿಮೋತ್ಸವಕ್ಕೆ ಕೋಟ್ಯಂತರ ರೂ. ಹಣ ಖರ್ಚು ಮಾಡಲು ಮುಂದಾಗಿದ್ದರು. ಒಟ್ಟಾರೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ 18-19 ಸಾಲಿನಲ್ಲಿ 4 ಕೋಟಿ ರೂ. ವೆಚ್ಚ ಮಾಡಿದರೆ ಸುನೀಲ್ ಪುರಾಣಿಕ್ ಅವರು 19-20ರ ಸಾಲಿನಲ್ಲಿ 8 ಕೋಟಿ ರೂ ವೆಚ್ಚ ಮಾಡಿದ್ದಾರೆ. ಒಂದಕ್ಕೆ ಎರಡರಷ್ಟು ಸರ್ಕಾರದ ಹಣವನ್ನು ದುಂದು ವೆಚ್ಚ ಮಾಡಲಾಗಿದೆ. ಇದು ಯಾರ ಜೇಬಿಗೆ ಸಂದಿದೆ ಎಂದು ಸುನೀಲ್ ಪುರಾಣಿಕ್ ಉತ್ತರ ಕೊಡಬೇಕು,' ಎಂದು ಮದನ್ ಪಾಟೀಲ್ ಮಾತನಾಡಿದ್ದಾರೆ.
66ನೇ ನ್ಯಾಷನಲ್ ಫಿಲ್ಮಂ ಅವಾರ್ಡ್ ಕಾರ್ಯಕ್ರಮಲ್ಲಿ 'Mahan Hutatma' ಕಿರುಚಿತ್ರಕ್ಕೆ ಅವಾರ್ಡ್ ಬರುವಂತೆ ಜೂರಿಗಳಿಗೆ ಒತ್ತಾಯಿಸಿ ಪ್ರಶಸ್ತಿ ದಕ್ಕುವಂತೆ ಮಾಡಿದ್ದಾರೆ. ಕಾರಣ ಈ ಕಿರುಚಿತ್ರವನ್ನು ಅವರ ಪುತ್ರ ನಿರ್ದೇಶಿಸಿದ್ದರು. ಅದೇ ಜೂರಿಗಳನ್ನು 12ನೇ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್ ಸೆಲೆಕ್ಷನ್ ಕಮಿಟಿಗೆ ಆಯ್ಕೆ ಮಾಡಿದ್ದಾರೆ. 11 ವರ್ಷ ಇತಿಹಾಸಲ್ಲಿ ಇದೇ ಮೊದಲ ಬಾರಿ ಬೇರೆ ರಾಜ್ಯದ ಪ್ರತಿನಿಧಿಗಳು ಫಿಲ್ಮಂ ಸೆಲೆಕ್ಷನ್ ಕಮಿಟಿಯಲ್ಲಿದ್ದದು. ಅಲ್ಲದೆ ಅವರನ್ನ ಫೈನಲ್ ಅವಾರ್ಡ್ ಸೆಲೆಕ್ಷನ್ ಜೂರಿಯಾಗಿಯೂ ಮಾಡಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ದಾಖಲೆಗಳನ್ನು ನೀಡಿ ಮದನ್ ಅವರು ತನಿಖೆ ನಡೆಸಲು ಆಗ್ರಹಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ.