ನಟ ಕಿಚ್ಚ ಸುದೀಪ್ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದು ರಾಜಕೀಯ ಸೇರ್ಪಡೆ ಕುರಿತಾದ ಭೇಟಿ ಎಂದು ಕೆಲವರು ಮಾತನಾಡುತ್ತಿದ್ದು, ಇದಕ್ಕೆ ಸ್ವತಃ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು (ಫೆ.06): ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ರಾಜಕೀಯ ಸೇರ್ಪಡೆಯಾಗುತ್ತಾರೆ ಎಂಬ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಈ ಬಗ್ಗೆ ಸ್ವತಃ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವ ಮನೆಗೆ ತೆರಳಿ ನಟ ಕಿಚ್ಚ ಸುದೀಪ ಅವರು ಕೆಲಹೊತ್ತು ಅವರೊಂದಿಗೆ ಚರ್ಚೆ ಮಾಡಿದ್ದಾರೆ. ಸುದೀಪ್ ಅವರೊಂದಿಗೆ ನಟ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಕೂಡ ಅವರೊಂದಿಗೆ ಸಾಥ್ ನೀಡಿದ್ದಾರೆ. ಗುರುವಾರ ಬೆಳಗ್ಗೆಯೇ ಡಿ.ಕೆ. ಶಿವಕುಮಾರ್ ಅವರ ಮನೆಗೆ ತೆರಳಿದ ಸುದೀಪ್ ಹಾಗೂ ಅನೂಪ್ ಭಂಡಾರಿ ಅವರು ಕೆಲ ಹೊತ್ತು ಚರ್ಚೆ ಮಾಡಿ ಹೊರಗೆ ಬಂದಿದ್ದಾರೆ. ಇದು ರಾಜಕೀಯ ಅಥವಾ ಬೇರೆ ಯಾವ ಕುರಿತಾದ ಚರ್ಚೆ ಎಂಬುದು ಭಾರೀ ಕುತೂಹಲ ಕೆರಳಿಸಿತ್ತು. ಇದರ ಬೆನ್ನಲ್ಲಿಯೇ ಡಿ.ಕೆ. ಶಿವಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ.

ನಟ ಸುದೀಪ್ ಭೇಟಿಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಸುದೀಪ್ ಅವರದ್ದೇನೋ ಪರ್ಸನಲ್ ಇಶ್ಯೂ ಇತ್ತು. ಅವರದು ಶೂಟಿಂಗ್ ಮಾಡುವ ಜಾಗದ ಕುರಿತಾಗಿ ಏನೋ ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದಿತ್ತು. ಆಸ್‌ ಎ ಫ್ರೆಂಡ್‌ (As a Friend) ಆಗಿ ಅವರು ನಮ್ಮ ಮನೆಗೆ ಭೇಟಿ ಮಾಡುವುದಕ್ಕೆ ಬಂದಿದ್ದರು. ಸಿನಿಮಾ ಶೂಟಿಂಗ್ ಜಾಗದ ವಿಚಾರವಾಗಿ ಅವರೊಂದಿಗೆ ನಾನು ಮಾತನಾಡಿದ್ದೇನೆ. ಅದನ್ನು ಬಿಟ್ಟು ಬೇರೆನೂ ಚರ್ಚೆ ಮಾಡಿಲ್ಲ. ಅವರ ಭೇಟಿಯಲ್ಲಿ ರಾಜಕೀಯನೂ ಇಲ್ಲಾ..., ಎನೂ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟೀಕರಣ ನೀಡಿದರು.

ಸಿಸಿಎಲ್ ಪಂದ್ಯಕ್ಕೆ ಆಹ್ವಾನ: ಕಿಚ್ಚ ಸುದೀಪ್ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಪಂದ್ಯಕ್ಕೆ ಆಹ್ವಾನ ನೀಡಲು ಆಗಮಿಸಿದ್ದರು ಎಂದೂ ಹೇಳಲಾಗುತ್ತಿದೆ. ಫೆ.8 ಮತ್ತು ಫೆ.9ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಎಲ್ ಪಂದ್ಯಗಳು ನಡೆಯಲಿದೆ. ಫೆಬ್ರವರಿ 8 ರಂದು ಹೈದರಾಬಾದ್ ವಿರುದ್ದ ಮೊದಲ ಪಂದ್ಯ ಆಡಲಿರುವ ಕರ್ನಾಟಕ ಬುಲ್ಡೋಜರ್ ಪಂದ್ಯ ನಡೆಯಲ್ಲಿದ್ದು, ಈ ಪಂದ್ಯ ವೀಕ್ಷಣೆಗೆ ಬರುವಂತೆ ಆಹ್ವಾನಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: ಮಗಳ ಜೊತೆಗೆ ವಿಮಾನದಲ್ಲಿ ಪ್ರಯಾಣಿಸಿದ ಕಿಚ್ಚನ ಜೊತೆ ಗಗನಸಖಿಯ ಸೆಲ್ಫಿ ಸಂಭ್ರಮ!

ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾ ಭರ್ಜರಿ ಸಕ್ಸಸ್: ಕನ್ನಡ ಚಿತ್ರರಂಗದಲ್ಲಿ 2024ರ ಸಾಲಿನಲ್ಲಿ ಸುಮಾರು ಏಳೆಂಟು ತಿಂಗಳ ಕಾಲ ಒಂದೇ ಒಂದು ಯಶಸ್ವಿ ಸಿನಿಮಾ ಬಿಡುಗಡೆ ಆಗಲಿಲ್ಲ. ಕಾಂತಾರ, ಕೆಜಿಎಫ್ ಸಿನಿಮಾಗಳು ಬಿಡುಗಡೆಯಾದ ನಂತರ ದೊಡ್ಡ ಮಟ್ಟದ ಯಶಸ್ಸಿನ ಸಿನಿಮಾಗಳೇ ಇರಲಿಲ್ಲ. ಕೃಷ್ಣಂ ಪ್ರಣಯ ಸಖಿ, ಭೀಮ ಸಿನಿಮಾಗಳನ್ನು ಬಿಟ್ಟರೆ ಯುಐ ಸಿನಿಮಾ ಒಂದಷ್ಟು ಸದ್ದು ಮಾಡಿತ್ತು. ಆದರೆ, ವರ್ಷಾಂತ್ಯದಲ್ಲಿ ಬಿಡುಗಡೆಯಾದ ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಸಿನಿಮಾ ಭರ್ಜರಿಯಾಗಿ ಯಶಸ್ಸು ಕಂಡಿದೆ. ಈ ಸಿನಿಮಾಗೆ ಕನ್ನಡ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜೊತೆಗೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಮ್ಯಾಕ್ಸ್‌ ಸಿನಿಮಾಗೆ ಭಾರೀ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಶ್ರೀದೇವಿ ಮಗಳು ಜಾಹ್ನವಿ ಕಪೂರ್‌ಗೆ ಕ್ಯಾಮೆರಾ ಸೆನ್ಸೇ ಇಲ್ಲ; ಬಟಾ ಬಯಲಿನಲ್ಲಿ ಪ್ಯಾಂಟ್..!

ಬಿಗ್ ಬಾಸ್ ನಂತರ ಕಿಚ್ಚನ ಮುಂದಿನ ನಡೆಯೇನು?
ಕಿಚ್ಚ ಸುದೀಪ್ ಅವರು ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನ 11 ಸೀಸನ್‌ಗಳನ್ನು ನಡೆಸಿಕೊಟ್ಟಿದ್ದಾರೆ. ಇದೀಗ ತಾವೇ ಇದೇ ತಮ್ಮ ಕೊನೆಯ ಸೀಸನ್ ಎಂದು ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಕಿಚ್ಚ ಸುದೀಪ್ ಜೀ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ, ಮುಂದಿನ ದಿನಗಳಲ್ಲಿ ಸುದೀಪ್ ಜೀ ಕನ್ನಡ ವಾಹಿನಿಯ ಯಾವುದಾದರೂ ಒಂದು ರಿಯಾಲಿಟಿ ಶೋನಲ್ಲಿ ಭಾಗವಹಿಸಬಹುದು ಎಂಬ ಭಾರೀ ನಿರೀಕ್ಷೆಗಳಿವೆ. ಈ ಬಗ್ಗೆ ಕಿಚ್ಚ ಅವರ ಕಡೆಯಿಂದ ಯಾವುದೇ ಮಾಹಿತಿಯಿಲ್ಲ.