ಸಂಬಂಧಗಳ ಅರಿವಿಲ್ಲದ ಸಮುದಾಯ... ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ನಟ ಜಗ್ಗೇಶ್ ನೋವಿನ ನುಡಿ
ಅರಣ್ಯ ಇಲಾಖೆ ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಹೈಕೋರ್ಟ್ ತಡೆ ನೀಡಿದ ಬೆನ್ನಲ್ಲೇ ನಟ ಜಗ್ಗೇಶ್ ನೋವಿನ ಟ್ವೀಟ್
ಸ್ಯಾಂಡಲ್‌ವುಡ್ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಹುಲಿ ಉಗುರು ಧರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ನೀಡಿರುವ ನೋಟಿಸ್‌ಗೆ ಹೈಕೋರ್ಟ್ ಇಂದು ತಡೆ ನೀಡಿದೆ. ನೋಟಿಸ್ ನೀಡಿದ ಒಂದು ಗಂಟೆಯಲ್ಲಿಯೇ 14 ಮಂದಿ ಅಧಿಕಾರಿಗಳು ಮನೆಗೆ ಹೋಗಿ ತಪಾಸಣೆ ಮಾಡಿ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದಕ್ಕೆ ಕೋರ್ಟ್ ಅರಣ್ಯಾಧಿಕಾರಿಗಳನ್ನು ತರಾಟೆಗೂ ತೆಗೆದುಕೊಂಡಿದೆ. ಈ ಹಿಂದೆ ಸಂದರ್ಶನದಲ್ಲಿ ಮಾತಾಡಿದ್ದ ನಟ ಜಗ್ಗೇಶ್ ನನ್ನ ಬಳಿ ಹುಲಿ ಉಗುರಿನ ಲಾಕೆಟ್ ಇದೆ. ನನಗೆ 20 ವರ್ಷ ತುಂಬಿದಾಗ ಅಮ್ಮ ನನಗಾಗಿ ಈ ಲಾಕೆಟ್ ನೀಡಿದ್ದರು. ಮಗ ಹುಲಿ ಇದ್ದಾಂಗೆ ಇರಬೇಕು ಎಂದು ಅಮ್ಮ ಈ ಲಾಕೆಟ್ನ ಹಾಕಿದ್ದರು ಎಂದು ಜಗ್ಗೇಶ್ ಹೇಳಿದ್ದರು. ಅದರ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಶೋಧನೆ ನೆಪದಲ್ಲಿ ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿತ್ತು. ನೋಟಿಸ್ ಅನ್ನು ಪ್ರಶ್ನಿಸಿ ಜಗ್ಗೇಶ್ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಅದಕ್ಕೆ ಹೈಕೋರ್ಟ್ ತಡೆ ನೀಡಿದೆ.
ಇದರ ಬೆನ್ನಲ್ಲೇ ಜಗ್ಗೇಶ್ ತಮ್ಮ ಎಕ್ಸ್ ಖಾತೆಯಲ್ಲಿ ನೋವಿನ ನುಡಿಗಳನ್ನು ಬರೆದಿದ್ದಾರೆ. ನಾನಾಯಿತು ನನ್ನ ಬದುಕಾಯಿತು ಎಂದು ಶ್ರದ್ಧೆಯಿಂದ ಬಾಳುತ್ತಿರುವ ನನ್ನನ್ನು ಪ್ರಚಾರ ವಸ್ತುವಿನಂತೆ ಬಳಕೆ ಮಾಡಲಾಯಿತು!ಪ್ರೀತಿ ನಂಬಿಕೆ ಸಂಬಂಧ ಎಂದು ಸಾಮಾಜಿಕವಾಗಿ ಮಾತಾನಾಡುತ್ತಿದ್ದ ನನ್ನನ್ನು ಮೂಕನಾಗಿಸಿ ಇನ್ನು ಮುಂದೆ ಯಾವ ವಿಷಯವು ಮಾತನಾಡದಂತೆ ದಿಗ್ಬಂಧ ಹಾಕಿಕೊಂಡಿತು ಮನಸ್ಸು ಇಂದಿನ ದುರ್ದೈವ ಪ್ರಚಾರ ಕಂಡು! ಸಂಬಂಧ ಅರಿವಿಲ್ಲದ ಸಮುದಾಯ ಎಂದು ಹೇಳಿದ್ದಾರೆ. ಇದಕ್ಕೆ ಹಲವರು ನಟನಿಗೆ ಸಾಂತ್ವನದ ನುಡಿಗಳನ್ನಾಡಿದ್ದಾರೆ. ದೀಪದಂತೆ ಬೆಳಗುತ್ತಿರಿ, ಕತ್ತಲು ತಾನಾಗಿಯೇ ದೂರವಾಗುತ್ತದೆ. ರಾಯರಿದ್ದಾರೆ ನಿಮ್ಮೊಳಗೆ ಎಂದು ಬಳಕೆದಾರರೊಬ್ಬರು ಹೇಳಿದ್ದರೆ, ಎಂತಹಾ ಮಳೆಯನ್ನೂ ತಡೆದುಕೊಳ್ಳುವ 'ಸೂರಿನ' ಶಕ್ತಿ ಮನಸ್ಸಿಗಿರಬೇಕು. ಇಲ್ಲವಾದಲ್ಲಿ ತೊಯ್ದು ತೊಪ್ಪೆಯಾಗಲು ಸಿದ್ಧರಿರಬೇಕು. ಸೂರನ್ನು ಗಟ್ಟಿ ಮಾಡಿಕೊಳ್ಳಿ. ಮಳೆ, ಬಿಸಿಲು ಸಹಜ ಎಂದು ಇನ್ನೊಬ್ಬರು ಹೇಳಿದ್ದಾರೆ.
ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಧರಿಸಿದ್ದಾಗಿನಿಂದ ಶುರುವಾಗಿರುವ ಈ ಗಲಾಟೆಗೆ ಸಂಬಂಧಿಸಿದಂತೆ ಕೆಲವರಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ಗಣ್ಯಾತಿಗಣ್ಯರು ತಾವು ಅಥವಾ ಮಕ್ಕಳು ಧರಿಸಿದ್ದು ನಕಲಿ ಉಗುರು ಎಂದು ಹೇಳಿ ನುಣುಚಿಕೊಂಡಿದ್ದೂ ಆಗಿದೆ. ಇವರ ಉಸಾಬರಿಗೂ ಅರಣ್ಯಾಧಿಕಾರಿಗಳು ಹೋಗಿಲ್ಲ ಎನ್ನುವ ಗಂಭೀರ ಆರೋಪ ಕೇಳಿಬರುತ್ತಿದೆ. ತಾವು ಧರಿಸಿದ್ದು ನಕಲಿ ಪೆಂಡೆಂಟ್ ಎಂದು ತೋರಿಸಲು ಕೆಲವು ಗಣ್ಯರು ತಮ್ಮ ಮನೆಗೇ ಅಧಿಕಾರಿಗಳನ್ನು ಕರೆಸಿ ಪೆಂಡೆಂಟ್ ಒಪ್ಪಿಸಿದ್ದಾರೆ. ಅದರ ಫೋಟೋಶೂಟ್ ಮಾಡಿಸಿಕೊಂಡು ಜನರ ಮುಂದೆ ಇಟ್ಟಿದ್ದೂ ಆಗಿದೆ. ಇದರ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳನ್ನು ಮನೆಗೆ ಕರೆಯಿಸಿ ನೀಡಿರುವ ಪೆಂಡೆಂಟೇ ಇಷ್ಟು ವರ್ಷ ಧರಿಸಿದ್ದು ಹೌದಾ ಎಂದು ಹಲವರು ಪ್ರಶ್ನೆ ಕೇಳುತ್ತಿದ್ದಾರೆ. ಹೀಗೆ ಹುಲಿಯುಗುರಿನ ಪೆಂಡೆಂಟ್ ಸದ್ಯ ಸಾಕಷ್ಟು ಹಲ್ಚಲ್ ಸೃಷ್ಟಿಸುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮದ ಬಗ್ಗೆ ಸಾಕಷ್ಟು ಟೀಕೆಗಳೂ ಕೇಳಿ ಬರುತ್ತಿರುವ ನಡುವೆಯೇ ನಟ ಜಗ್ಗೇಶ್ ಅವರ ಟ್ವೀಟ್ ವೈರಲ್ ಆಗುತ್ತಿದೆ.
ಜಗ್ಗೇಶ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ಅವರು, ಹುಲಿ ಉಗುರು ಪೆಂಡೆಂಟ್ ಧರಿಸಿದ ಪ್ರಕರಣದಲ್ಲಿ ನೋಟಿಸ್‌ಗೆ ಉತ್ತರ ನೀಡುವ ಮುನ್ನವೇ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಮನೆಯಲ್ಲಿ ಹುಲಿ ಉಗುರು ಪರಶೀಲನೆ ನೆಪದಲ್ಲಿ ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸಂದರ್ಶನದಲ್ಲಿ ಹೇಳಿದ ಮಾತನ್ನ ಆಧಾರಿಸಿ ತೇಜೋವಧೆ ಮಾಡಲಾಗುತ್ತಿದೆ ಎಂದು ಉಲ್ಲೇಖ ಮಾಡಿದ್ದರು. ಇದನ್ನು ಗಮಿಸಿದ ಕೋರ್ಟ್ ನೋಟಿಸ್‌ಗೆ ತಡೆ ನೀಡಿದೆ.
ಚಿತ್ರ ನಟರು ಹುಲಿ ಉಗುರು ಯಾಕೆ ಧರಿಸ್ಬಾರ್ದು? ಇವ್ರು ಕೊಟ್ಟಿದ್ದಾರೆ ಕಾರಣ ನೋಡಿ...