ಲಕ್ಷ್ಮೀ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಪ್ರಕರಣ: ವಿಚಾರಣೆ ವೇಳೆ ಅಪ್ರಾಪ್ತ ಬಾಲಕನ ಹೇಳಿಕೆಗೆ ಪೊಲೀಸರೇ ಶಾಕ್
ಇತ್ತೀಚೆಗೆ ನ್ಯೂ ತಿಪ್ಪಸಂದ್ರದ ಮುಖ್ಯರಸ್ತೆಯಲ್ಲಿ ಲಕ್ಷ್ಮೀ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ್ದ ಘಟನೆ ಸಂಬಂಧ ಅಪ್ರಾಪ್ತ ಬಾಲಕನೊಬ್ಬನನ್ನು ಜೀವನಭೀಮಾನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು (ನ.18) : ಇತ್ತೀಚೆಗೆ ನ್ಯೂ ತಿಪ್ಪಸಂದ್ರದ ಮುಖ್ಯರಸ್ತೆಯಲ್ಲಿ ಲಕ್ಷ್ಮೀ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ್ದ ಘಟನೆ ಸಂಬಂಧ ಅಪ್ರಾಪ್ತ ಬಾಲಕನೊಬ್ಬನನ್ನು ಜೀವನಭೀಮಾನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಶುಕ್ರವಾರ ಮಧ್ಯರಾತ್ರಿ ವ್ಯಕ್ತಿಯೊಬ್ಬ ರಸ್ತೆಯ ಬದಿಯ ಲಕ್ಷ್ಮೀ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ್ದ. ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ಸ್ಥಳೀಯರು ನೀಡಿದ ದೂರಿನ ಮೇರೆಗೆ ಪೊಲೀಸರು ಅಪ್ರಾಪ್ತ ಬಾಲಕನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಾಲಮಂದಿರಕ್ಕೆ ಕಳುಹಿಸಿದ್ದಾರೆ.
ಲಕ್ಷ್ಮೀ ಭುವನೇಶ್ವರಿ ದೇವಿ ವಿಗ್ರಹ ವಿರೂಪಗೊಳಿಸಿ ದುಷ್ಕರ್ಮಿ ವಿಕೃತಿ!
ಅಪ್ರಾಪ್ತನು ಎಸ್‌ಎಸ್‌ಎಲ್‌ಸಿಯಲ್ಲಿ ಮೂರು ಬಾರಿ ಅನುತ್ತೀರ್ಣನಾಗಿದ್ದ. ಇದರಿಂದ ಬೇಸರಗೊಂಡಿದ್ದ ಆತ ರಸ್ತೆ ಬದಿಯ ಲಕ್ಷ್ಮೀ ಭುವನೇಶ್ವರಿ ದೇವರ ವಿಗ್ರಹ ವಿರೂಪಗೊಳಿಸಿದ್ದ ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣವಾಗುತ್ತಿರುವುದರಿಂದ ಮಾನಸಿಕವಾಗಿ ಕುಂದಿದ್ದ. ಮನೆಯಲ್ಲಿ ದೇವರ ಫೋಟೋಗಳನ್ನು ಸಹ ಒಡೆದು ಹಾಕಿದ್ದ. ಬುದ್ಧಿವಾದ ಹೇಳಿದ ಪೋಷಕರ ಜತೆಗೂ ಆತ ಜಗಳ ಮಾಡಿದ್ದ ಎಂದು ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.