ಸುಳ್ಳು ಹೇಳಿ ಮತ್ತೊಮ್ಮೆ ಜಗ್ಗೇಶ್‌ ಬಟಾಬಯಲು| ಆಡಿಯೋದಲ್ಲಿ ಇರುವುದು ಜಗ್ಗೇಶ್‌ ಅವರದ್ದೇ ಧ್ವನಿ| ಜಗ್ಗೇಶ್‌ ಅವರ ಜತೆ ಮಾತನಾಡಿದ ನಿರ್ಮಾಪಕ ನಾನೆ| ‘ಇನ್ಸ್‌ಪೆಕ್ಟರ್‌ ವಿಕ್ರಂ’ ನಿರ್ಮಾಪಕ ವಿಖ್ಯಾತ್‌ ಹೇಳಿಕೆ| ನನ್ನ ಧ್ವನಿಯನ್ನು ಮಿಮಿಕ್ರಿ ಮಾಡಲಾಗಿದೆ ಎಂದಿದ್ದ ನಟ

ಬೆಂಗಳೂರು(ಫೆ.24): ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅಭಿಮಾನಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ದೂರವಾಣಿ ಸಂಭಾಷಣೆಯ ಆಡಿಯೋ ತನ್ನದಲ್ಲ ಎಂದು ಹೇಳಿದ್ದ ನಟ ಜಗ್ಗೇಶ್‌ ಸುಳ್ಳು ಬಟಾಬಯಲಾಗಿದೆ. ‘ಆ ಆಡಿಯೋ ಧ್ವನಿ ಜಗ್ಗೇಶ್‌ ಅವರದ್ದೇ. ಅವರು ಮಾತನಾಡಿರುವುದು ನನ್ನ ಜತೆಗೆ’ ಎಂದು ನಿರ್ಮಾಪಕ ಎ.ಆರ್‌. ವಿಖ್ಯಾತ್‌ ಹೇಳಿಕೆ ನೀಡಿದ್ದಾರೆ.

"

ದರ್ಶನ್‌ ಅಭಿಮಾನಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಜಗ್ಗೇಶ್‌ ಅವರ ಆಡಿಯೋ ಎಲ್ಲಾ ಕಡೆ ವೈರಲ್‌ ಆಗುತ್ತಿದಂತೆಯೇ, ‘ಅದು ನಾನು ಮಾತನಾಡಿದ್ದು ಅಲ್ಲ. ನನ್ನ ಧ್ವನಿಯನ್ನು ಯಾರೋ ಮಿಮಿಕ್ರಿ ಮಾಡಿದ್ದಾರೆ. ಇದನ್ನು ಮಾಧ್ಯಮದವರು ತಿರುಚಿದ್ದಾರೆ’ ಎಂದು ಹೇಳಿ ಬಚಾವ್‌ ಆಗಲು ಜಗ್ಗೇಶ್‌ ಯತ್ನಿಸಿದ್ದರು. ಆದರೆ, ಈಗ ನಿರ್ಮಾಪಕ ವಿಖ್ಯಾತ್‌ ಹೇಳಿಕೆಯಿಂದಾಗಿ ಜಗ್ಗೇಶ್‌ ತಾನೊಬ್ಬ ಸುಳ್ಳುಗಾರ ಎಂದು ನಿರೂಪಿಸಿದಂತಾಗಿದೆ.

"

ಆರೋಪಕ್ಕೆ ವಿಖ್ಯಾತ್‌ ತಿರುಗೇಟು:

‘ನಟ ಜಗ್ಗೇಶ್‌ ಫೆ.9ರಂದು 8.30ಕ್ಕೆ ನನಗೆ ಫೋನ್‌ ಕಾಲ್‌ ಮಾಡಿದ್ದರು. ಈಗ ಎಲ್ಲಾ ಕಡೆ ವೈರಲ್‌ ಆಗಿರುವ ಅದೇ ಫೋನ್‌ ಕಾಲ್‌. ಅದರಲ್ಲಿ ಜಗ್ಗೇಶ್‌ ಅವರೊಂದಿಗೆ ಮಾತನಾಡಿರುವ ನಿರ್ಮಾಪಕ ನಾನೇ. ನನ್ನ ಜತೆ ಮಾತನಾಡಿರುವುದು ಜಗ್ಗೇಶ್‌ ಅವರೇ. ಈ ಫೋನ್‌ ಕಾಲ್‌ ಅನ್ನು ನಾನು ಯಾವುದೇ ಕಾರಣಕ್ಕೂ ರೆಕಾರ್ಡ್‌ ಮಾಡಿಕೊಂಡು ಚಿತ್ರದ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿಲ್ಲ. ದೇವರ ಮೇಲೆ ಪ್ರಮಾಣ ಮಾಡುತ್ತೇನೆ, ಇದು ಯಾರ ಕೆಲಸ ಎಂಬುದು ನನಗೆ ಗೊತ್ತಿಲ್ಲ’ ಎಂದು ವಿಖ್ಯಾತ್‌ ಹೇಳಿದ್ದಾರೆ.

‘ಈ ಫೋನ್‌ ಕಾಲ್‌ ಆಡಿಯೋ ಕ್ಲಿಪ್‌ ಹೇಗೆ ಲೀಕಾಯಿತು, ಹೇಗೆ ಹಂಚಿಕೆ ಆಯಿತು ಎಂಬುದು ಸಂಪೂರ್ಣವಾಗಿ ತನಿಖೆ ಆಗಲಿ. ಅದಕ್ಕೆ ನನ್ನ ಸಹಕಾರ ಇದೆ. ನಾನು ಆಡಿರುವ ಮಾತುಗಳ ಬಗ್ಗೆ ನನಗೆ ತಿಳುವಳಿಕೆ ಇದೆ. ಆದರೆ, ಆಡಿಯೋ ಕ್ಲಿಪ್‌ನಲ್ಲಿ ಜಗ್ಗೇಶ್‌ ಆಡಿರುವ ಮಾತುಗಳಿಗೆ ಅವರೇ ಜವಾಬ್ದಾರರು’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಜಗ್ಗೇಶ್‌ ಅವರ ಸುಳ್ಳುಗಳು ಸಾಕ್ಷಿ ಸಮೇತ ಜನತೆಯ ಮುಂದೆ ಬಂದಿವೆ.

"

ದರ್ಶನ್‌ ಅಭಿಮಾನಿಗಳ ಘೇರಾವ್‌ ಪ್ರಕರಣದ ನಂತರ ಜಗ್ಗೇಶ್‌ ಮಾತನಾಡುತ್ತಾ, ‘ಇದೆಲ್ಲವೂ ಒಬ್ಬ ಚಿಕ್ಕ ನಿರ್ಮಾಪಕ ತನ್ನ ಸಿನಿಮಾಗಾಗಿ ಮಾಡುತ್ತಿರುವ ಪ್ರಚಾರ’ ಎಂದು ಹೇಳಿದ್ದರು. ಆದರೆ ಪ್ರಜ್ವಲ್‌ ದೇವರಾಜ್‌ ನಟನೆಯ ‘ಇನ್‌ಸ್ಪೆಕ್ಟರ್‌ ವಿಕ್ರಮ್‌’ ಸಿನಿಮಾ ನಿರ್ಮಾಪಕ ವಿಖ್ಯಾತ್‌ ಈ ಮಾತನ್ನು ಸಂಪೂರ್ಣ ಅಲ್ಲಗಳೆದಿದ್ದಾರೆ.

‘ನನ್ನ ನಿರ್ಮಾಣದ ‘ಇನ್ಸ್‌ಪೆಕ್ಟರ್‌ ವಿಕ್ರಮ್‌’ ಚಿತ್ರದ ಪ್ರಚಾರಕ್ಕಾಗಿ ನಾನು ಈ ಫೋನ್‌ ಆಡಿಯೋ ಬಳಸಿದ್ದೇನೆಂಬ ಹೇಳಿಕೆಯನ್ನು ನಾನು ಸ್ಪಷ್ಟವಾಗಿ ಅಲ್ಲಗಳೆಯುತ್ತೇನೆ. ನಟ ದರ್ಶನ್‌ ಅವರು ನಮ್ಮ ‘ಇನ್ಸ್‌ಪೆಕ್ಟರ್‌ ವಿಕ್ರಮ್‌’ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿ, ನಮಗೆ ಸಹಕಾರ ನೀಡಿದ್ದಾರೆ. ಅವರ ಬಗ್ಗೆ ಹಾಗೂ ಅವರ ಅಭಿಮಾನಿಗಳ ಬಗ್ಗೆ ನನಗೆ ಯಾವತ್ತಿಗೂ ಗೌರವ ಇದೆ’ ಎಂದು ವಿಖ್ಯಾತ್‌ ಹೇಳಿದ್ದಾರೆ.