ಸಾರ್ವಜನಿಕ ಕಾರ್ಯಕ್ರಮ ಅಂತ ರಿಷಬ್ ಶೆಟ್ಟಿ ಹೋದಲ್ಲೆಲ್ಲಾ ಸಿಗುವ ಪೊಲೀಸರು, ನಿಮ್ಮ ಡಿಟೆಕ್ಟಿವ್ ದಿವಾಕರ್ ಸೂಪರ್ ಅಂತ ಮೆಚ್ಚುಗೆಯ ಮಾತನಾಡಿ ಕೈ ಕುಲುಕುವುದು ಮಾಮೂಲು ಆಗಿದೆಯಂತೆ. 

ರಿಷಬ್ ಅವರೇ ಈ ಸಂಗತಿಯನ್ನು ಹೇಳಿಕೊಂಡಿದ್ದಾರೆ. ‘ಬೆಲ್ ಬಾಟಮ್ ಯಶಸ್ವಿ ಎರಡನೇ ವಾರ ಪೂರೈಸುತ್ತಿದೆ. ಎಲ್ಲ ಕಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ವಿಶೇಷವಾಗಿ ನಾನು ನಿರ್ವಹಿಸಿದ ಡಿಟೆಕ್ಟಿವ್ ದಿವಾಕರನ ಪಾತ್ರಕ್ಕೆ ಪೊಲೀಸರೇ ಫಿದಾ ಆಗಿದ್ದಾರೆ. ಆತ ತಮಗೆ ಸ್ಫೂರ್ತಿ ಎಂಬುದಾಗಿ ಹೇಳುತ್ತಾರೆ. ಇದು ನನಗೆ ಖುಷಿ ನೀಡಿದೆ. ಒಂದು ಪಾತ್ರ ಈ ಮಟ್ಟದಲ್ಲಿ ಪ್ರಬಾವ ಬೀರುವುದು ಚಿತ್ರದ ಹೆಚ್ಚುಗಾರಿಕೆಯೂ ಹೌದು’ ಎನ್ನುತ್ತಾರೆ ರಿಷಬ್ ಶೆಟ್ಟಿ. ‘ಬೆಲ್ ಬಾಟಮ್’ ಚಿತ್ರದಲ್ಲಿನ ದಿವಾಕರ ಓರ್ವ ಸಾಮಾನ್ಯ ಪೇದೆ. ಆತನಿಗೆ ಆ ಕೆಲಸ ಮಾಡಲು ಇಷ್ಟ ಇಲ್ಲ. ತಂದೆ ಒತ್ತಾಯಕ್ಕೆ ಆ ಕೆಲಸ ಮಾಡಿದರೂ, ಮೇಲಾಧಿಕಾರಿಗಳು ಹೇಳುವ ಕೆಲಸಗಳನ್ನು ಪ್ರಶ್ನಿಸುತ್ತಲೇ ಸ್ವೀಕರಿಸುತ್ತಾನೆ. ಅದು ಆತನಿಗೆ ಅನಿವಾರ್ಯ. ಕೊನೆಗೆ ಕಾನ್‌ಸ್ಟೇಬಲ್ ಆಗುತ್ತಾನೆ. ತನ್ನಿಷ್ಟದಂತೆ ಡಿಟೆಕ್ಟಿವ್ ಕೆಲಸ ನಿಯೋಜನೆಗೊಳ್ಳುತ್ತಾನೆ. ಅದರಲ್ಲಿ ಸಕ್ಸಸ್ ಕಂಡು ಎಲ್ಲರಿಗೂ ಬೇಕಾಗುವುದು ದಿವಾಕರ ಪಾತ್ರದ ವೈಶಿಷ್ಟ್ಯ. 

’ಬೆಲ್‌ಬಾಟಂ’ ಗೆಲ್ಲಲು ಕಾರಣ ಏನು? ಏನಂತಾರೆ ರಿಷಬ್ ಶೆಟ್ಟಿ?

ಇದೇ ಈಗ ಪೊಲೀಸರಿಗೂ ಇಷ್ಟವಾಗಿದೆ. ಆ ಪಾತ್ರದ ಮೂಲಕ ತಮ್ಮ ಆಸುಪಾಸಿನಲ್ಲಿರುವ ಅದೆಷ್ಟೋ ದಿವಾಕರರನ್ನು ಕಾಣುತ್ತಿದ್ದಾರಂತೆ. ಸದ್ಯಕ್ಕೀಗ ಬೆಲ್ ಬಾಟಮ್ ಸಕ್ಸಸ್ ಮೂಲಕ ಆಗುತ್ತಿರುವ ಇಂತಹ ವಿಭಿನ್ನ ಬಗೆಯ ಅನುಭವ ತಮಗೂ ಖುಷಿ ತಂದಿದೆ. ಸಿನಿಮಾ ಮಾಡಿದ್ದಕ್ಕೂ ಸಾರ್ಥಕ ಎನಿಸುತ್ತದೆ ಎನ್ನುತ್ತಾರವರು.