777 ಚಾರ್ಲಿಯಿಂದ ಬಂದ ಅಪಾರ ಹಣದ ಕೆಲವು ಭಾಗವನ್ನು ಕೆಆರ್‌ಜಿ ಸ್ಟುಡಿಯೋಸ್ ಇನ್ನೂ ರಕ್ಷಿತ್ ಶೆಟ್ಟಿಯವರ ಪರಂವಃ ಸ್ಟುಡಿಯೋಗೆ ನೀಡಿಲ್ಲ ಎಂಬೊಂದು ಗಾಳಿ ಸುದ್ದಿ ಹರಿದಾಡುತ್ತಿದ್ದು, ಇದೇ ಕಾರಣದಿಂದ ರಕ್ಷಿತ್ ತಮ್ಮ ಮುಂಬರುವ ಸಿನಿಮಾವನ್ನು ಕೆವಿಎನ್ ಸ್ಟುಡಿಯೋದಲ್ಲಿ ಬಿಡುಗಡೆ ಮಾಡುತ್ತಿದ್ದಾರಾ?

ರಕ್ಷಿತ್ ಶೆಟ್ಟಿ ನಿರ್ಮಿಸುವ ಅಥವಾ ಅರ್ಪಿಸುವ ಸಿನಿಮಾಗಳನ್ನು ಕಾರ್ತಿಕ್ ಗೌಡ ನೇತೃತ್ವದ ಕೆಆರ್‌ಜಿ ಸ್ಟುಡಿಯೋಸ್ ಡಿಸ್ಟ್ರಿಬ್ಯೂಷನ್‌ಗೆ ತೆಗೆದುಕೊಳ್ಳುವುದು ಅತಿ ಸಾಮಾನ್ಯ ವಿಷಯ. ಕಳೆದ ವರ್ಷ ಸೂಪರ್ ಹಿಟ್ ಆದ 777 ಚಾರ್ಲಿ ಮತ್ತು ಗರುಡ ಗಮನ ವೃಷಭ ವಾಹನ ಎರಡೂ ಸಿನಿಮಾಗಳನ್ನು ವಿತರಣೆ ಮಾಡಿದ್ದು ಕೆಆರ್‌ಜಿ ಸ್ಟುಡಿಯೋಸ್‌. ಆ ಮೂಲಕ ಕೆಆರ್‌ಜಿಯವರು ಲಾಭ ಮಾಡಿಕೊಂಡರು ಎನ್ನುವುದು ಇಂಡಸ್ಟ್ರಿ ಬಲ್ಲವರ ಖಚಿತ ಮಾತು. 

ಆದರೆ ರಕ್ಷಿತ್ ಶೆಟ್ಟಿ ತಾವೇ ನಟಿಸಿ ನಿರ್ಮಿಸುತ್ತಿರುವ ಹೊಸ ಸಿನಿಮಾ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಎ ಮತ್ತು ಸೈಡ್ ಬಿ ಎರಡನ್ನೂ ಕೆವಿಎನ್‌ ಸಂಸ್ಥೆಗೆ ವಿತರಿಸಲು ನಿರ್ಧರಿಸಿದ್ದಾರಂತೆ. ಆ ಮೂಲಕ ಕೆಆರ್‌ಜಿ ಸಂಸ್ಥೆಯನ್ನು ದೂರ ಇಟ್ಟಿದ್ದಾರೆ. ಹೀಗ್ಯಾಕೆ ಎನ್ನುವುದು ಸದ್ಯದ ಕುತೂಹಲ. 

ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಸೆಪ್ಟೆಂಬರ್ 1ರಂದು ಬಿಡುಗಡೆಯಾಗುತ್ತಿದೆ. ಸೈಡ್ ಬಿ ಅಕ್ಟೋಬರ್ 20ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವ ಬ್ರೇಕಿಂಗ್ ನ್ಯೂಸ್ ಕೊಟ್ಟ ಚಿತ್ರತಂಡ ಅದೇ ಹೊತ್ತಿಗೆ ಕೆವಿಎನ್‌ ಜೊತೆಗಿನ ಪಾಲುದಾರಿಕೆಯನ್ನೂ ಘೋಷಿಸಿಕೊಂಡಿದೆ. ಅದು ಯಾಕೆ ಹೀಗಾಯಿತು ಎನ್ನುವುದಕ್ಕೆ ಹಲವು ಕಾರಣಗಳನ್ನು ಗಾಂಧಿನಗರದ ನಂಬರರ್ಹ ಮೂಲಗಳು ನೀಡುತ್ತಿವೆ.

ಅಮೆರಿಕಾಗೆ ಹಾರಿದ ರಕ್ಷಿತ್ ಶೆಟ್ಟಿ; ಕೆಲವು ದಿನ ಯಾರಿಗೂ ಸಿಗಲ್ಲ ಸಿಂಪಲ್ ಸ್ಟಾರ್

777 ಚಾರ್ಲಿಯಿಂದ ಬಂದ ಅಪಾರ ಹಣದ ಕೆಲವು ಭಾಗವನ್ನು ಕೆಆರ್‌ಜಿ ಸ್ಟುಡಿಯೋಸ್ ಇನ್ನೂ ರಕ್ಷಿತ್ ಶೆಟ್ಟಿಯವರ ಪರಂವಃ ಸ್ಟುಡಿಯೋಗೆ ನೀಡಿಲ್ಲ ಎಂಬುದು ಸ್ಯಾಂಡಲ್‌ವುಡ್ ಬಲ್ಲ ಮೂಲಗಳು ನೀಡುತ್ತಿರುವ ಮಾಹಿತಿ. ಮೇಲಿಂದ ಮೇಲೆ ದೊಡ್ಡ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿರುವ ಕೆಆರ್‌ಜಿ, ಚಾರ್ಲಿಯ ಲಾಭಾಂಶದ ಪಾಲನ್ನು ಮಾತ್ರ ತನ್ನಲ್ಲಿಯೇ ಇಟ್ಟುಕೊಂಡಿದೆಯಂತೆ. ಅಷ್ಟು ಮಾತ್ರಕ್ಕೆ ರಕ್ಷಿತ್ ಶೆಟ್ಟಿ ಕೆಆರ್‌ಜಿಯವರನ್ನು ದೂರ ಮಾಡಿಲ್ಲ. ಕೆಆರ್‌ಜಿ ಮೇಲೆ ಅವರಿಗೆ ಇರುವ ನಂಬಿಕೆ ದೊಡ್ಡದು. ಕೆಆರ್‌ಜಿ ಎಂದರೆ ಈಗ ಆನೆ ನಡೆದಿದ್ದೇ ದಾರಿ ಎಂಬಂತೆ ನಡೆಯುತ್ತಿರುವ ಸಂಸ್ಥೆ. ಅವರ ಮೇಲೆ ನಂಬಿಕೆ ಇಡುವುದಷ್ಟೇ ಬೇರೆಯವರ ಕೆಲಸ. ಕೆಆರ್‌ಜಿ ಎಂದರೆ ವಿತರಣೆಗೆ ಹೇಳಿ ಮಾಡಿಸಿದ ಸಂಸ್ಥೆ ಎಂಬ ಮಾತು ಈಗ ಚಾಲ್ತಿಯಲ್ಲಿದೆ. ಅದಕ್ಕೆ ಕಾರಣ ಜಯಣ್ಣ ಎಂಬುದು ಮತ್ತದೇ ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಮಾತು. ಕೆಆರ್‌ಜಿ ಸ್ಟುಡಿಯೋಸ್‌ಗೆ ಥಿಯೇಟರ್ ಒಟ್ಟು ಹಾಕಿ ಕೊಡುವುದೇ ಜಯಣ್ಣ ಎನ್ನುತ್ತಾರೆ. ಅದರಿಂದಾಗಿ ಸಂಸ್ಥೆ ನಾಲ್ಕು ಕಾಸು ಹೆಚ್ಚು ಗಳಿಸುತ್ತಿದೆ ಎಂಬುದು ಗಾಂಧಿನಗರದ್ದೇ ಲೆಕ್ಕಾಚಾರ. 

ಈ ಮಧ್ಯೆ ರಕ್ಷಿತ್ ಶೆಟ್ಟಿಯ ಬಹು ನಿರೀಕ್ಷಿತ ಸಿನಿಮಾ ಕೆಆರ್‌ಜಿ ಕೈಯಿಂದ ತಪ್ಪಿ ಹೋಗಿದೆ. ಅದರಿಂದ ಬರುವ ಲಾಭದ ಪಾಲು ಕೆವಿಎನ್‌ ಸಂಸ್ಥೆಗೆ ಸಿಗಲಿದೆ. ಇಷ್ಟಕ್ಕೂ ರಕ್ಷಿತ್ ಶೆಟ್ಟಿ ಕೆವಿಎನ್‌ ಕೈ ಹಿಡಿದಿದ್ದು ಯಾಕೆ? ಇದಕ್ಕೆ ಉತ್ತರ ಸಿಗಬೇಕಾದರೆ ಮತ್ತದೆ 777 ಚಾರ್ಲಿ ಸಿನಿಮಾದ ನಿರ್ಮಾಣದ ಕತೆಯ ಕಡೆಗೆ ಹೋಗಬೇಕು.

ರಕ್ಷಿತ್‌ ಹೊಸ ಸಿನಿಮಾ ಫಿಕ್ಸ್; 'ಸಪ್ತಸಾಗರದಾಚೆ ಎಲ್ಲೋ' ದಾಟ್ತಾರಾ ಶೆಟ್ರು?

777 ಚಾರ್ಲಿ ನಿರ್ಮಾಣದ ಸಂದರ್ಭದಲ್ಲಿಯೇ ರಕ್ಷಿತ್ ಶೆಟ್ಟಿ ಅವರು ಪುಷ್ಕರ್ ಮಲ್ಲಿಕಾರ್ಜುನಯ್ಯ ಜೊತೆಗಿನ ವ್ಯಾವಹಾರಿಕ ಸಂಬಂಧ ಕೊನೆಗೊಳಿಸಿದ್ದರು. ಪುಷ್ಕರ್ ಅವರಿಗೆ ಸಲ್ಲಬೇಕಿದ್ದ ಹಣವನ್ನು ನೀಡಬೇಕಾಗಿದ್ದ ಸಂದರ್ಭದಲ್ಲಿ ಅ‍ವರ ನೆರವಿಗೆ ಬಂದಿದ್ದು ಇದೇ ಕೆವಿಎನ್ ಸಂಸ್ಥೆ. ರಕ್ಷಿತ್‌ ಶೆಟ್ಟಿಗೆ ಬೇಕಿದ್ದ ಹಣವನ್ನು ಸಾಲ ರೂಪದಲ್ಲಿ ನೀಡಿದ್ದ ಸಂಸ್ಥೆಯ ಬಹುಶಃ ಮುಂದಿನ ಸಿನಿಮಾದ ವಿತರಣೆಯನ್ನೂ ತನಗೆ ನೀಡಬೇಕೆಂದು ಕೇಳಿಕೊಂಡಿರಬೇಕುಬಹುದು. ರಕ್ಷಿತ್ ಶೆಟ್ಟಿ ಧನ್ಯವಾದ ಸಮರ್ಪಣೆಗಾಗಿ ಒಪ್ಪಿಕೊಂಡಿರಬೇಕು. ಆ ನಿಟ್ಟಿನಲ್ಲಿ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಕೆವಿಎನ್‌ ಪಾಲಾಗಿದೆಯಂತೆ.