ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ದಿ ಡೆವಿಲ್' ಚಿತ್ರವು ಡಿಸೆಂಬರ್ 11 ರಂದು ಬಿಡುಗಡೆಯಾಗಲಿದೆ. ದರ್ಶನ್ ಅನುಪಸ್ಥಿತಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸಹನಟರೊಬ್ಬರು ಕಣ್ಣೀರಿಟ್ಟಿದ್ದು, ಚಿತ್ರತಂಡವು ಬಿಡುಗಡೆಗೆ ಭರ್ಜರಿ ಸಿದ್ಧತೆ ನಡೆಸಿದೆ. ಚಿತ್ರದ ಟ್ರೈಲರ್ ಡಿ.5 ರಂದು ಬಿಡುಗಡೆಯಾಗಲಿದೆ.

ಬೆಂಗಳೂರು: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಡಿಸೆಂಬರ್ 11ರಿಂದ ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಬಿಡುಗಡೆಗೆ ಮುನ್ನ ಚಿತ್ರದ ಮೊದಲ ಮಾಧ್ಯಮಗೋಷ್ಠಿ ಗುರುವಾರ ಅಧಿಕೃತವಾಗಿ ನಡೆಯಿತು. ಚಿತ್ರದ ಶೂಟಿಂಗ್ ಸಂಪೂರ್ಣವಾದ ನಂತರ, ಮೊದಲ ಬಾರಿಗೆ ಆಯೋಜಿಸಲಾದ ಈ ಮಾಧ್ಯಮಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಪ್ರಕಾಶ್ ವೀರ್, ನಾಯಕ ನಟಿ ರಚನಾ ರೈ, ಹಾಗೂ ತಾಂತ್ರಿಕ ತಂಡದ ಪ್ರಮುಖ ಸದಸ್ಯರು ಭಾಗವಹಿಸಿದ್ದರು. ದರ್ಶನ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ದರ್ಶನ್ ಇಲ್ಲದೆ ಕಣ್ಣೀರಿಟ್ಟ ಕಲಾವಿದರರು

ದರ್ಶನ್ ಅನುಪಸ್ಥಿತಿ ಹಿನ್ನೆಲೆಯಲ್ಲಿ, ಚಿತ್ರದ ಪ್ರಚಾರವನ್ನು ತಂಡವೇ ಮುಂದುವರೆಸುತ್ತಿದೆ. ಈ ವೇಳೆ ವೇದಿಕೆಯ ಮೇಲಿದ್ದ ನಟ ಹುಲಿ ಕಾರ್ತಿಕ್, ದರ್ಶನ್ ಅವರ ಇತ್ತೀಚಿನ ಸ್ಥಿತಿಯನ್ನು ಸ್ಮರಿಸಿ ಕಣ್ಣೀರಿಟ್ಟರು. ಅವರ ಭಾವನಾತ್ಮಕ ಪ್ರತಿಕ್ರಿಯೆ ಕಾರ್ಯಕ್ರಮದಲ್ಲಿದ್ದ ಎಲ್ಲರ ಮನಸಿಗೂ ತಟ್ಟಿತು.

ಡಿಸೆಂಬರ್ 11ರಿಂದ ಭರ್ಜರಿ ಬಿಡುಗಡೆ

ಚಿತ್ರ ವಿತರಣೆ ಜವಾಬ್ದಾರಿಯನ್ನು ನಿರ್ಮಾಪಕ ಸುಪ್ರೀತ್ ವಹಿಸಿಕೊಂಡಿದ್ದು, ರಾಜ್ಯಾದ್ಯಂತ ಭರ್ಜರಿ ಬಿಡುಗಡೆಗೆ ಯೋಜನೆ ರೂಪಿಸಲಾಗಿದೆ. ವಿಶೇಷವೆಂದರೆ, ಬಿಡುಗಡೆಯ ದಿನವಾದ ಗುರುವಾರ ಬೆಳಿಗ್ಗೆ 6.30ರಿಂದಲೇ ಮೊದಲ ಶೋ ಪ್ರಾರಂಭವಾಗಲಿದೆ. ಹಲವಾರು ಕಡೆಗಳಲ್ಲಿ ವಿಶೇಷವಾಗಿ ಫ್ಯಾನ್ ಶೋಗಳನ್ನೂ ಆಯೋಜಿಸಲಾಗಿದೆ.

ಕೊನೆಗೂ ಅವರಿಲ್ಲದೆ ಮಾಧ್ಯಮಗಳ ಮುಂದೆ ಬರಬೇಕಾಗಿದೆ: ನಿರ್ಮಾಪಕ

ನಿರ್ದೇಶಕ ನಿರ್ಮಾಪಕ ಪ್ರಕಾಶ್ ವೀರ್ ಹೇಳಿಕೆ, ದರ್ಶನ್ ಬರ್ತಾರೆ ಅಂತ ಇಷ್ಟು ದಿನ ಮಾಧ್ಯಮ ಗೋಷ್ಠಿ ಮಾಡದೆ ಕಾದೆ. ಕೊನೆಗೂ ಅವರಿಲ್ಲದೆ ಮಾಧ್ಯಮಗಳ ಮುಂದೆ ಬರಬೇಕಾಗಿದೆ. ದಿ ಡೆವಿಲ್ 2018 ರಲ್ಲೇ ದರ್ಶನ್ ಜೊತೆಗೆ ಕಮಿಟ್ ಆಗಿದ್ದ ಸಿನಿಮಾ. ಕೋವಿಡ್ ಕಾರಣದಿಂದ ಸಿನಿಮಾ ತಡವಾಯ್ತು. ದರ್ಶನ್ ಈ ಸಿನಿಮಾದ ಅತಿದೊಡ್ಡ ಶಕ್ತಿ. ಅವರಿಲ್ಲದೆ ಸಿನಿಮಾ ಬಿಡುಗಡೆ ಮಾಡಬೇಕಾಗಿದೆ ಎಂದರು.

ಸಿನಿಮಾ ಕುರಿತು ತಂಡದ ನಿರೀಕ್ಷೆಗಳು

ಪ್ರಕಾಶ್ ವೀರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ದಿ ಡೆವಿಲ್’, ದರ್ಶನ್ ಅವರ ವಿಭಿನ್ನ ಅವತಾರದ ಮತ್ತೊಂದು ಆಕ್ಷನ್–ಎಂಟರ್ಟೈನರ್‌ ಆಗಿದೆ. ನಾಯಕಿ ರಚನಾ ರೈ, ಚಿತ್ರದ ಕಥೆಯು ದರ್ಶನ್ ಅಭಿಮಾನಿಗಳಿಗೆ ಹೊಸ ಅನುಭವ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚಿತ್ರ ತಂತ್ರಜ್ಞರು, ಕ್ಯಾಮೆರಾ, ಸಂಗೀತ ಎಡಿಟಿಂಗ್ ವಿಭಾಗದವರು ಸಿನಿಮಾ ಪ್ರೇಕ್ಷಕರಿಗೆ ಉತ್ತಮ ಅನುಭವ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಡಿಸೆಂಬರ್ 5ರಂದು ಬೆಳಗ್ಗೆ 10:05ಕ್ಕೆ ಡೆವಿಲ್ ಟ್ರೈಲರ್ ರಿಲೀಸ್ ಆಗಲಿದೆ. ಇದರ ಘೋಷಣೆಯನ್ನು ಕೂಡ ವಿಭಿನ್ನವಾಗಿ ಮಾಡಿದೆ ಚಿತ್ರತಂಡ. ದರ್ಶನ್ ಅವರ ಧ್ವನಿಯಲ್ಲಿ ʼನಾನ್‌ ಬರ್ತಿದ್ದೀನಿ ಚಿನ್ನʼ ಅಂತ ಟ್ರೈಲರ್ ರಿಲೀಸ್ ದಿನಾಂಕ ಅನೌನ್ಸ್ ಮಾಡಿದೆ. ಈಗಾಗಲೇ ಡೆವಿಲ್ ಸಿನಿಮಾದ ಎರಡು ಹಾಡುಗಳು ರಿಲೀಸ್ ಆಗಿದ್ದು, ಟ್ರೆಂಡಿಂಗ್ ನಲ್ಲಿದೆ. ಜೈಮಾತಾ ಕಂಬೈನ್ಸ್ ಬ್ಯಾನರ್‌ಅಡಿಯಲ್ಲಿ ಜೆ ಜಯಮ್ಮ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಚಿತ್ರವನ್ನು ಬೆಂಗಳೂರು, ಬ್ಯಾಂಕಾಕ್ ರಾಜಸ್ಥಾನದಲ್ಲಿ ಶೂಟಿಂಗ್ ಮಾಡಲಾಗಿದೆ.