ಅದೇ ಹೊತ್ತಲ್ಲಿ ನಿರೂಪಕಿ ಆರ್‌ಜೆ ಸೌಜನ್ಯ ಅದೋ ಬಂದರು ಎಂದರು. ಅಷ್ಟೇ. ಬ್ಯಾಕ್‌ಗ್ರೌಂಡಲ್ಲಿ ಜೋರಾಗಿ ಸಾಂಗು. ನೆರೆದ ಅಭಿಮಾನಿಗಳ ಡಿ-ಬಾಸ್‌ ಡಿ-ಬಾಸ್‌ ಎಂಬ ಘೋಷಣೆ. ಕ್ಯಾಮರಾಗಳು ಫೋಕಸ್‌ ಆದವು. ಎಲ್ಲರ ದೃಷ್ಟಿಬಾಗಿಲತ್ತಲೇ ನೆಟ್ಟಿತು. ದರ್ಶನ್‌ ಪ್ರವೇಶಿಸಿದರು.

ಇಂಡಿಯಾ ವರ್ಸಸ್‌ ಇಂಡಿಯಾ ಟೈಟಲ್‌ ಆರಂಭದಲ್ಲಿ ಮದರ್‌ ಅಂತ ಸೇರಿಸಿದರೆ ಮದರ್‌ ಇಂಡಿಯಾ ಆಗುತ್ತದೆ. ಅದು ಅಮ್ಮ ಸುಮಲತಾ. ಇಂಗ್ಲೆಂಡ್‌ ಅನ್ನು ಗಲ್‌ರ್‍ಫ್ರೆಂಡ್‌ ಅಂತ ಇಟ್ಟುಕೊಂಡರೆ ಅದು ಮಾನ್ವಿತಾ. ಮಧ್ಯ ಇರುವ ಬ್ಲೂ ಡೈಮಂಡ್‌ ಯಾರು ಅಂದ್ರೆ ಅದು ವಶಿಷ್ಟಸಿಂಹ.- ದರ್ಶನ್‌

ದರ್ಶನ್‌ ಯಾವ ಕಾರ್ಯಕ್ರಮಗಳಿಗೆ ಬರುತ್ತಾರೋ ಅಲ್ಲೆಲ್ಲಾ ಹೆಚ್ಚುಕಡಿಮೆ ಇಂಥಾ ದೃಶ್ಯ ಸ್ಕಿ್ರಪ್ಟ್‌ ಬರೆಯದೆಯೇ ಇರುತ್ತದೆ. ಅವರು ಬಂದಿದ್ದು ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನ ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರದ ಟ್ರೇಲರ್‌ ರಿಲೀಸ್‌ಗೆ. ಅಭಿಮಾನಿಗಳ ಜತೆ 10 ರಿಂದ 1ರವರೆಗೆ ಕೌಂಟ್‌ ಮಾಡಿದ ದರ್ಶನ್‌ ಟ್ರೇಲರ್‌ ಬಿಡುಗಡೆ ಮಾಡಿದರು. ಎಲ್ಲರೂ ಟ್ರೇಲರನ್ನು ಮೆಚ್ಚಿಕೊಂಡರು. ಈ ಸಂದರ್ಭದಲ್ಲಿ ಮೊದಲು ಮೈಕು ಹಿಡಿದಿದ್ದು ನಾಗತಿಹಳ್ಳಿ ಚಂದ್ರಶೇಖರ್‌. ಅವರು ದರ್ಶನ್‌ಗೆ ವಂದನಾರ್ಪಣೆ ಸಲ್ಲಿಸುವ ಮೂಲಕವೇ ಮಾತು ಶುರು ಮಾಡಿದರು.

ಪುತ್ರನನ್ನೇ ಉದಾಹರಣೆಯಾಗಿಸಿ ಮಕ್ಕಳಿಗೆ ಕನ್ನಡ ಕಲಿಸಿ ಎಂದ ದರ್ಶನ್!

‘ದರ್ಶನ್‌ ಹಿರಿಯ ನಟ. ಯಾರಿಗೆ ಜನರನ್ನು ಥಿಯೇಟರ್‌ಗೆ ಕರೆದುಕೊಂಡು ಬರುವ ಶಕ್ತಿ ಇರುತ್ತದೋ ಅವರೇ ಈಗ ಹಿರಿಯರು’ ಎಂದರು. ಶಿಳ್ಳೆ, ಚಪ್ಪಾಳೆ ಎಲ್ಲವೂ ಬಿತ್ತು. ಹಿರಿಯ ನಟ ಎಂದಾಗ ಗಲಿಬಿಲಿಗೊಂಡ ದರ್ಶನ್‌ ಆಮೇಲೆ ಸಾವರಿಸಿಕೊಂಡು ನಕ್ಕರು. ನಾಗತಿಹಳ್ಳಿ ಮೇಷ್ಟು್ರ ಮೈಸೂರಿನಲ್ಲಿದ್ದಾಗ ಅವರು ಮತ್ತು ತೂಗುದೀಪ ಶ್ರೀನಿವಾಸ್‌ ಫ್ರೆಂಡ್ಸ್‌ ಆಗಿದ್ದರು. ಆ ದಿನಗಳನ್ನೂ ಮೇಷ್ಟು್ರ ನೆನಪಿಸಿಕೊಂಡರು.

ದರ್ಶನ್‌ ಯಾವಾಗೆಲ್ಲಾ ನನ್ನ ಜತೆ ಇರುತ್ತಾರೋ ಆವಾಗೆಲ್ಲಾ ನನಗೆ ಗೆಲುವು ಸಿಗುತ್ತದೆ ಎನ್ನುವ ನಂಬಿಕೆ ನನಗಿದೆ.- ಸುಮಲತಾ

ದರ್ಶನ್‌ಗೆ ಈ ಸಿನಿಮಾದ ಒಂದು ಹಾಡು ಬಹಳ ಇಷ್ಟ. ಕನ್ನಡ ಕಲಿ ಕನ್ನಡ ಕಲಿ ಎಂಬ ಹಾಡನ್ನು ಪ್ರಸ್ತಾಪಿಸಿ ಮಗನ ಕತೆ ಹೇಳಿದರು. ‘ಮೊನ್ನೆ ಟಿವಿ ನೋಡುತ್ತಿದ್ದಾಗ ಒಬ್ಬ ಸಾಹಿತಿಯ ಸುದ್ದಿ ಬರುತ್ತಿತ್ತು. ನನ್ನ ಮಗ ಆಗ ಸಾಹಿತಿ ಎಂದರೆ ಯಾರು ಎಂದು ಕೇಳಿದ. ಆಗ ನನಗೆ ನಮ್ಮ ಪರಿಸ್ಥಿತಿ ಹೇಗಿದೆ ಅನ್ನುವುದು ಅರಿವಾಯಿತು. ನಾಗತಿಹಳ್ಳಿ ಮೇಷ್ಟು್ರ ಚೆನ್ನಾಗಿ ಸಿನಿಮಾ ಮಾಡುತ್ತಾರೆ’ ಎಂದಾಗ ಮತ್ತೆ ಜೋರು ಚಪ್ಪಾಳೆ.

ಬದುಕಿದರೆ ದರ್ಶನ್‌ ಥರ ಬದುಕಬೇಕು ಅಂದುಕೊಂಡಿದ್ದೆ. ಅವರು ಕಾರು ಪ್ಯಾಷನ್‌, ದನ-ಕರುಗಳ ಮೇಲೆ ಪ್ರೀತಿ ಎಲ್ಲವೂ ನನಗಿಷ್ಟ. ನನ್ನ ಕನಸನ್ನು ದರ್ಶನ್‌ ಜೀವಿಸುತ್ತಿದ್ದಾರೆ-ವಶಿಷ್ಟಸಿಂಹ

ಕಾರ್ಯಕ್ರಮದಲ್ಲಿ ನಿರ್ಮಾಪಕ ಶಂಕರೇಗೌಡ, ಅಮೃತ್‌ ನೋನಿಯ ಶ್ರೀನಿವಾಸಮೂರ್ತಿ, ಭಾಗ್ಯ ಮತ್ತು ಇಡೀ ಚಿತ್ರತಂಡ ಭಾಗವಹಿಸಿ ಸಂಭ್ರಮ ಪಟ್ಟಿತು. ಅವರ ಸಂಭ್ರಮ ದುಪ್ಪಟ್ಟಾಗುವಂತೆ ಕೆಲವೇ ದಿನಗಳಲ್ಲಿ ಸಿನಿಮಾದ ಟ್ರೇಲರ್‌ ಲಕ್ಷಾಂತರ ಮಂದಿಯನ್ನು ತಲುಪಿದೆ.