ಜೈಲಿನಲ್ಲಿರುವ ನಟ ದರ್ಶನ್ ತನ್ನ ಮಗನ ಹುಟ್ಟಹಬ್ಬಕ್ಕೂ ಏನು ಮಾಡಲಾಗದ ಪರಿಸ್ಥಿತಿ. ದುಬಾರಿ ಗಿಫ್ಟ್ ಮೂಲಕ ಮಗನ ಹುಟ್ಟು ಹಬ್ಬ ಆಚರಿಸುತ್ತಿದ್ದ ದರ್ಶನ್ ಈ ಬಾರಿ ಜೈಲಿನಲ್ಲಿ ಸಿಗೋ ಚಾಕೋಲೆಟ್ನ್ನು ಪುತ್ರ ವಿನೀಶ್ಗೆ ನೀಡಿ ಶುಭಕೋರಿದ್ದಾರೆ. ತಂದೆ ಶುಭಾಶಯಕ್ಕೆ ಮಗ ಭಾವುಕನಾಗಿದ್ದಾನೆ.
ಬೆಂಗಳೂರು (ಅ.31) ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಇತರ ಆರೋಪಿಗಳು ಜೈಲಿನಲ್ಲಿದ್ದಾರೆ. ಸತತವಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದರೂ ಬಿಡುಗಡೆ ಭಾಗ್ಯ ಸಿಗುತ್ತಿಲ್ಲ. ಹಬ್ಬ ಹರಿದಿನಗಳನ್ನು ದರ್ಶನ್ ಜೈಲಿನಲ್ಲೇ ಆಚರಿಸುವಂತಾಗಿದೆ. ಇದರ ನಡುವೆ ನಟ ದರ್ಶನ್ ಹಾಗೂ ಕುಟುಂಬ ಭಾವುಕಗೊಂಡ ಘಟನೆ ನಡೆದಿದೆ. ಇಂದು (ಅ.31) ದರ್ಶನ್ ಪುತ್ರ ವಿನೀಶ್ ಹುಟ್ಟು ಹಬ್ಬ. ಜೈಲಿನಲ್ಲಿರುವ ನಟ ದರ್ಶನ್ ಜೈಲಿನಲ್ಲಿ ಸಿಗುವ ಚಾಕೋಲೆಟ್ ಪಡೆದು ಮಗನಿಗೆ ಹುಟ್ಟಹಬ್ಬದ ಗಿಫ್ಟ್ ಆಗಿ ನೀಡಿದ್ದಾರೆ. ಮಗನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗಲಿಲ್ಲ ಎಂದು ದರ್ಶನ್ ಕೊರಗಿದರೆ, ತಂದೆ ನೀಡಿದ ಚಾಕೋಲೆಟ್ ಹಿಡಿದು ವಿನೀಶ್ ಭಾವುಕನಾದ ಘಟನೆ ನಡೆದಿದೆ.
18ನೇ ವರ್ಷದ ಹುಟ್ಟುಹಬ್ಬ, ಕಿಟ್ಕ್ಯಾಟ್ ಗಿಫ್ಟ್
ವಿನೀಶ್ ದರ್ಶನ್ ಇಂದು 18ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದುಬಾರಿ ಗಿಫ್ಟ್, ಅದ್ದೂರಿ ಪಾರ್ಟಿ ಮೂಲಕ ಮಗ ವಿನೀಶ್ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದ ನಟ ದರ್ಶನ್ ಕಳೆದ ಕೆಲ ವರ್ಷಗಳಿಂದ ಜೈಲಿನಲ್ಲಿ ಕಳೆಯುತ್ತಿದ್ದಾರೆ. ಈ ಬಾರಿ ಪುತ್ರನ ಹುಟ್ಟಹಬ್ಬಕ್ಕೆ ನಟ ದರ್ಶನ್ ಜೈಲಿನಲ್ಲಿ ಸಿಗುವ ಕಿಟ್ಕ್ಯಾಟ್ ಚಾಕೋಲೆಟ್ನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಮಗನ ಅಪ್ಪಿ ಭಾವುಕರಾದ ನಟ ದರ್ಶನ್
ಹುಟ್ಟು ಹಬ್ಬ ಸಲುವಾಗಿ ದರ್ಶನ್ ಭೇಟಿಯಾಗಲು ವಿನೀಶ್ ಜೈಲಿಗೆ ಭೇಟಿ ನೀಡಿದ್ದರು. ಮಗನ ಕಂಡು ದರ್ಶನ್ ಭಾವುಕರಾಗಿದ್ದಾರೆ. ಮಗನ ಬಿಗಿದಪ್ಪಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಕೆಲ ಕಾಲ ಬಿಗಿದಪ್ಪಿಕೊಂಡ ದರ್ಶನ್ ಬಳಿಕ ಚಾಕೋಲೆಟ್ ನೀಡಿದ್ದಾರೆ. ಜೈಲಿನಲ್ಲಿರುವ ದರ್ಶನ್ ಅಸಹಾಯಕರಾಗಿ ಜೈಲಿನ ಚಾಕೋಲೆಟ್ನ್ನು ಉಡುಗೊರೆಯಾಗಿ ಮಗನಿಗೆ ನೀಡಿದ್ದಾರೆ.
ಇದಕ್ಕಿಂತ ದೊಡ್ಡದು ಯಾವುದು ಇಲ್ಲ
ದರ್ಶನ್ ನೀಡಿದ ಗಿಫ್ಟ್, ಅಪ್ಪುಗೆಯಿಂದ ವಿನೀಶ್ ಭಾವುಕನಾಗಿದ್ದಾನೆ. ಪ್ರಪಂಚದಲ್ಲಿ ಈ ಗಿಫ್ಟ್ ಗಿಂತ ದೊಡ್ಡದು ಯಾವುದು ಇಲ್ಲ ಎಂದು ವಿನೀಶ್ ಪೋಸ್ಟ್ ಹಾಕಿದ್ದಾನೆ. ಅಪ್ಪನಿಂದ ಸಿಕ್ಕ ಚಾಕೋಲೆಟ್, ಪ್ರೀತಿಯ ಅಪ್ಪುಗೆಯಿಂದ ವಿನೀಶ್ ಭಾವುಕನಾಗಿದ್ದಾನೆ.
ಇತ್ತೀಚೆಗೆ ದರ್ಶನ್ ಪ್ರಕರಣದಲ್ಲಿ ನಟ ಧನ್ವೀರ್ ಧಮ್ಕಿ, ಆಡಿಯೋ ಕರೆಗಳು ಕೋಲಾಹಲ ಸೃಷ್ಟಿಸಿತ್ತು. ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಮಾತನಾಡಿರುವ ಆಡಿಯೋಗಳು ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ನಟ ಧನ್ವೀರ್ ವಿರುದ್ಧ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಕೋರ್ಟ್ ಮೆಟ್ಟೆಲೇರಿದ್ದರು. ದರ್ಶನ್ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್, ವಿಜಯಲಕ್ಷ್ಮಿ, ದರ್ಶನ್ ವಿರುದ್ದ ಹೇಳಿಕೆ ನೀಡದಂತೆ ಕೋರ್ಟ್ ಆದೇಶಿಸಿತ್ತು. ವಿಜಯಲಕ್ಷ್ಮಿ ವಿರುದ್ಧ, ಅವರು ಕುಟುಂಬಸ್ಥರ ವಿರುದ್ಧ ಅವಹೇಳನ ಮಾಡಿ ಮಾತನಾಡಬಾರದು ಎಂದು ಸೂಚಿಸಿತ್ತು. ತಪ್ಪು ಕಲ್ಪನೆ, ಸುಳ್ಳು ಮಾಹಿತಿ ನೀಡಿ ಮಾತನಾಡಬಾರದು ಎಂದು ದರ್ಶನ್ ಅರ್ಜಿ ಸಲ್ಲಿಕೆ ಮಾಡಿದ್ದರು. ಟ್ರಯಲ್ ಕೇಸ್ ಮತ್ತು ಆ ಕೇಸ್ ಗೆ ಸಂಬಂಧಿಸಿದಂತೆ ದರ್ಶನ್ ಬಗ್ಗೆ ಮಾತನಾಡಬಾರದು ಎಂದು ಕೋರ್ಟ್ ಸೂಚಿಸಿತ್ತು.
ನಟ ದರ್ಶನ್ಗೆ ಮತ್ತೆ ಬೆನ್ನು ನೋವಿನ ಸಮಸ್ಯೆಗಳು ಕಾಣಿಸಿಕೊಂಡಿದೆ. ಹೀಗಾಗಿ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಮನವಿ ಸಲ್ಲಿಸಲು ಸಜ್ಜಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿನ ದರ್ಶನ್ ಜೊತೆಗಿದ್ದ ಆಪ್ತರೇ ಇದೀಗ ಮಾಫಿ ಸಾಕ್ಷಿಯಾಗಿ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ. ಪ್ರಮುಖವಾಗಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿದ್ದಾನೆ. ಇತ್ತ ಪ್ರದೋಷ್ ಹೇಳಿಕೆ ದಾಖಲಿಸದಂತೆ ತಡೆಯಲು ದರ್ಶನ್ ಪರ ವಕೀಲರು ಸತತ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.






