ಅರ್ಜುನ್ ಸರ್ಜಾ ಕಟ್ಟಿಸಿದ ಆಂಜನೇಯ ದೇವಾಲಯದ ಕುಂಭಾಭಿಷೇಕದಲ್ಲಿ ವಿನಯ್ ಗುರೂಜೀ!
ಕೊರೋನಾ ಕಾಟದಿಂದ ಸರಳವಾಗಿ ದೇವಸ್ಥಾನ ಕುಂಭಾಭಿಷೇಕ ಮಾಡಿಸಿದ ಅರ್ಜುನ್ ಸರ್ಜಾ.
ಬಹುಭಾಷಾ ನಟ ಅರ್ಜುನ್ ಸರ್ಜಾ ಬಹಳ ವರ್ಷಗಳಿಂದ ಕಟ್ಟಿಸುತ್ತಿದ್ದ ಆಂಜನೇಯಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ಜುಲೈ 1 ಮತ್ತು 2ರಂದು ನಡೆಯುತ್ತಿದೆ. ಕೊರೋನಾ ಸೋಂಕಿನಿಂದ ಆಪ್ತರು ಹಾಗೂ ಧರ್ಮಪೀಠದ ಹಿರಿಯರನ್ನು ಕರೆಯಿಸಿ ಪೂಜೆ ಸಲ್ಲಿಸಿದ್ದಾರೆ. ಇಡೀ ಸರ್ಜಾ ಫ್ಯಾಮಿಲಿ ಆಂಜನೇಯನ ಭಕ್ತರು.
ಅಭಿಮಾನಿಗಳು ಹಾಗೂ ಆಂಜನೇಯ ಸ್ವಾಮಿ ಭಕ್ತಾದಿಗಳು ಪೂಜೆಯಲ್ಲಿ ಭಾಗಿಯಾಗಲು ಸಾಧ್ಯವಾಗದ ಕಾರಣ ಯುಟ್ಯೂಬ್ ಚಾನೆಲ್‌ನಲ್ಲಿ ಲೈವ್ ವೀಕ್ಷಣೆ ಏರ್ಪಾಡು ಮಾಡಲಾಗಿತ್ತು. 'ನನ್ನ ಬಹು ದಿನಗಳ ಆಸೆ, ನಮ್ಮ ಕುಟುಂಬದಿಂದ ಚೆನ್ನೈನಲ್ಲಿ ನಿರ್ಮಾಣ ಆಗುತ್ತಿರುವ ಆಂಜನೇಯ ಸ್ವಾಮಿ ದೇವಸ್ಥಾನ ಕಾರ್ಯ ಈಗ ಸಂಪೂರ್ಣವಾಗಿದೆ. ಕುಂಭಾಭಿಷೇಕ ಸಮಾರಂಭವನ್ನು ಇಟ್ಟುಕೊಂಡಿದ್ದೇವೆ. ಕೊರೋನಾದಿಂದ ಜನರ ಹಿತವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾರನ್ನೂ ಆಹ್ವಾನಿಸೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಪ್ರಸಾರ ಮಾಡುತ್ತಿದ್ದೇವೆ,' ಎಂದು ಅರ್ಜುನ್ ಸರ್ಜಾ ಮಾತನಾಡಿದ್ದಾರೆ.
ಚೆನ್ನೈನ ವಿಮಾನ ನಿಲ್ದಾಣದ ಬಳಿ ಇರುವ ಆಂಜನೇಯನ ಮೂರ್ತಿ ಸುಮಾರು 140 ಟನ್ ತೂಕವಿದೆ. ಕಾರ್ಯಕ್ರಮಕ್ಕೆ ವಿನಯ್ ಗುರೂಜಿ ಕೂಡ ಆಗಮಿಸಿ ಆಂಜನೇಯನ ಫೋಟೋ ನೀಡಿ ಆಶೀರ್ವಾದಿಸಿದ್ದಾರೆ. ಅರ್ಜುನ್ ಸರ್ಜಾ ಕುಟುಂಬ ಮತ್ತು ಧ್ರುವ ಸರ್ಜಾ ಕುಟುಂಬ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು. ಕೊರೋನಾ ಕಳೆಯುತ್ತಿದ್ದಂತೆ ದೇವಸ್ಥಾನಕ್ಕೆ ತಪ್ಪದೆ ಭೇಟಿ ನೀಡುವುದಾಗಿ ಅಭಿಮಾನಿಗಳು ಕಾಮೆಂಟ್ ಮೂಲಕ ತಿಳಿಸಿದ್ದಾರೆ.