ಶೂಟಿಂಗ್‌ ಶುರು ಮಾಡುತ್ತೇವೆ

- ಶ್ರೀಮುರಳಿ

ಸರಕಾರ ಶೂಟಿಂಗ್‌ ಮಾಡುವುದಕ್ಕೆ ಅನುಮತಿ ನೀಡಿರುವುದು ಸಂತೋಷದ ವಿಚಾರ. ನಮ್ಮ ಮದಗಜ ಚಿತ್ರ ಸರಕಾರ ಹೇಳಿರುವ ಎಲ್ಲಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಶೂಟಿಂಗ್‌ನಲ್ಲಿ ತೊಡಗಿಕೊಳ್ಳಲಿದೆ. ಆ ನಿಟ್ಟಿನಲ್ಲಿ ಇಡೀ ತಂಡ ಪ್ಲಾನ್‌ ಮಾಡಿಕೊಳ್ಳುತ್ತಿದೆ. ನಿರ್ಮಾಪಕ ಉಮಾಪತಿ, ನಿರ್ದೇಶಕ ಮಹೇಶ್‌ ಕುಮಾರ್‌ ಸೇರಿದಂತೆ ನಾವೆಲ್ಲರೂ ಒಂದಷ್ಟುಚರ್ಚೆ ಮಾಡಿದ್ದೇವೆ. ನಾವು ಅಂದುಕೊಂಡಿದ್ದ ಲೊಕೇಷನ್‌ಗಳಲ್ಲಿ ಹೆಚ್ಚು ಕೊರೋನಾ ಕೇಸ್‌ಗಳು ಇಲ್ಲದೇ ಇರುವುದರಿಂದ ಈ ಹಿಂದೆ ಅಂದುಕೊಂಡಿದ್ದ ಲೊಕೇಷನ್‌ಗಳಲ್ಲಿಯೇ ಶೂಟಿಂಗ್‌ ಮಾಡುತ್ತೇವೆ. ಮುಂದಿನ ತಿಂಗಳು ಅಂದರೆ ಜುಲೈ ಮಧ್ಯದಲ್ಲಿ ಎಲ್ಲಾ ಸಿದ್ಧತೆಯೊಂದಿಗೆ ಶೂಟಿಂಗ್‌ಗೆ ತೆರಳುತ್ತೇವೆ. ಪ್ರತಿಯೊಬ್ಬರ ಹೆಲ್ತ್‌ ಚೆಕಪ್‌ ಮಾಡಿ, ಎಲ್ಲರಿಗೂ ಸೂಕ್ತ ಸುರಕ್ಷಾ ವ್ಯವಸ್ಥೆಯನ್ನು ಮಾಡಿಕೊಂಡೇ ಮುಂದಿನ ಕಾರ್ಯಗಳನ್ನು ಮಾಡುವುದು.

ಷರತ್ತುಗಳ ವ್ಯಾಪ್ತಿಯಲ್ಲಿ ಶೂಟಿಂಗ್‌ ಕಷ್ಟ

-ಆರ್‌ ಚಂದ್ರು

ಷರತ್ತುಗಳನ್ನು ಹಾಕಿಕೊಂಡು ಶೂಟಿಂಗ್‌ ಮಾಡಕ್ಕೆ ಆಗಲ್ಲ. 40 ಅಥವಾ 50 ಮಾತ್ರ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಬೇಕು ಅಂದರೆ ನಮ್ಮ ‘ಕಬ್ಜ’ ಚಿತ್ರಕ್ಕಂತೂ ಕಷ್ಟಆಗುತ್ತದೆ. ಯಾಕೆಂದರೆ ನಮ್ಮ ಸಿನಿಮಾ ಸೆಟ್‌ನಲ್ಲಿ ದಿನಕ್ಕೆ ಕನಿಷ್ಠ 300 ರಿಂದ 350 ಜನ ಇರುತ್ತಾರೆ. ಅಷ್ಟುಜನ ಬೇಕು ಕೂಡ. ಈಗ ಕೊರೋನಾ ಕಾರಣಕ್ಕೆ ಅಷ್ಟುಜನಕ್ಕೆ ಅವಕಾಶ ಕೊಡಲ್ಲ ಅಂದರೆ ಶೂಟಿಂಗ್‌ಗೆ ಹೋಗಬೇಕಾ, ಬೇಡವಾ ಎಂಬುದನ್ನು ಯೋಚಿಸಬೇಕಿದೆ. ಎರಡು ದಿನದಲ್ಲಿ ಉಪೇಂದ್ರ ಅವರ ಮನೆಯಲ್ಲಿ ಕಬ್ಜ ಚಿತ್ರತಂಡದ ಎಲ್ಲರು ಸಭೆ ಸೇರುತ್ತಿದ್ದೇವೆ. ಅಲ್ಲಿ ನಿರ್ಧಾರ ಮಾಡುತ್ತೇವೆ. ಕಡಿಮೆ ಕಲಾವಿದರ ಇರುವ ದೃಶ್ಯಳನ್ನು ಚಿತ್ರೀಕರಣ ಮಾಡಕ್ಕೆ ಆಗುತ್ತದೆಯೇ ಅಥವಾ ಕೊರೋನಾ ಸಂಪೂರ್ಣವಾಗಿ ಮುಕ್ತಾಯವಾದ ಮೇಲೆ ಶೂಟಿಂಗ್‌ ಮಾಡಬೇಕಾ ಎಂಬುದನ್ನು ಸಭೆಯ ನಂತರ ನಿರ್ಧರಿಸುತ್ತೇವೆ. ಆದರೆ, ಶೂಟಿಂಗ್‌ಗೆ ಅನುಮತಿ ಕೊಟ್ಟರು ಈಗಿರುವ ಷರತ್ತುಗಳಲ್ಲಿ ಸಿನಿಮಾ ಶೂಟಿಂಗ್‌ ಮಾಡಕ್ಕೆ ಸಾಧ್ಯವಿಲ್ಲ.

ಡಬ್ಬಿಂಗ್‌ ಸೀರಿಯಲ್‌ಗಳಲ್ಲಿ ಕನ್ನಡ ಬಲ್ಲವರಿಗೆ ಏನು ಕೆಲಸ ಗೊತ್ತೇ?

ಸದ್ಯ ಶೂಟಿಂಗ್‌ ಕಷ್ಟಸ್ವಾಮಿ

-ಕೆಎ ಸುರೇಶ್‌

ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದೆ ನಿಜ. ಆದರೆ, ಶೂಟಿಂಗ್‌ ಮೈದಾನಕ್ಕೆ ಬರುವುದಕ್ಕೆ ಯಾರಿಗೂ ಧೈರ್ಯ ಇಲ್ಲ. ಕೊರೋನಾ ಭಯ ಸಿನಿಮಾದವರ ಮನಸ್ಸುಗಳಲ್ಲೂ ಇದೆ. ಯಾರಿಗೂ ಚಿತ್ರೀಕರಣದಲ್ಲಿ ಭಾಗವಹಿಸುವ ಮೂಡ್‌ ಇಲ್ಲ. ಇಂಥ ಹೊತ್ತಿನಲ್ಲಿ ನಾವು ಯಾರಿಗೂ ಬಲವಂತ ಮಾಡಿ ಚಿತ್ರೀಕರಣಕ್ಕೆ ಕರೆಸುವುದಕ್ಕೆ ಆಗಲ್ಲ. ಅದರಲ್ಲೂ ಶೂಟಿಂಗ್‌ ಮಾಡುವಾಗ ಪಾಲಿಸಬೇಕಾದ ನಿಯಮಗಳು ಬಂದ ಮೇಲೆ ಯಾರೆಲ್ಲ ಶೂಟಿಂಗ್‌ಗೆ ಹೋಗುತ್ತಾರೆ ಎಂಬುದನ್ನು ನೋಡಬೇಕಿದೆ. ನನ್ನ ನಿರ್ಮಾಣದ ‘ತೋತಾಪುರಿ’ ಚಿತ್ರದ ಎರಡು ಭಾಗಗಳನ್ನು ಒಟ್ಟಿಗೆ ಶೂಟಿಂಗ್‌ ಮಾಡುತ್ತಿದ್ದೇವೆ. ಹೀಗಾಗಿ ಮೊದಲ ಭಾಗ ಚಿತ್ರೀಕರಣ ಮುಗಿದ್ದು, ದ್ವಿತಿಯ ಭಾಗದ ಚಿತ್ರೀಕರಣ ಶೇ.80 ಆಗಿತ್ತು. ಕಲಾವಿದರು ಚಿತ್ರೀಕರಣಕ್ಕೆ ರೆಡಿಯಾದರೆ ಹೋಗಬಹುದು. ನನ್ನ ಪ್ರಕಾರ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಜುಲೈ ನಂತರ ಚಿತ್ರೀಕರಣಕ್ಕೆ ಹೋಗುವುದು ಉತ್ತಮ ಅನಿಸುತ್ತದೆ. ಚಿತ್ರೋದ್ಯಮ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ನೋಡಬೇಕಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನವೇ ಸಿಬ್ಬಂದಿಗೆ ಸಂಬಳ ನೀಡಿದ್ದ ಸುಶಾಂತ್ ಸಿಂಗ್! 

ತಯಾರಿ ಮಾಡೋಕೆ ಟೈಮ್‌ ಬೇಕು

-ಶ್ರೀನಿ

ತಕ್ಷಣಕ್ಕೆ ಚಿತ್ರೀಕರಣಕ್ಕೆ ಹೋಗಲು ಸಾಧ್ಯವಿಲ್ಲ. ತಯಾರಿಗಳು ಆಗಬೇಕಲ್ಲ. ಶೂಟಿಂಗ್‌ ಸೆಟ್‌ನಲ್ಲಿ ಹೇಗಿರಬೇಕು, ಸ್ಯಾನಿಟೈಸರ್‌, ಮಾಸ್ಕ್‌, ಕೈಗವಸುಗಳು ಸೇರಿದಂತೆ ವೈದ್ಯಕೀಯ ಪರೀಕ್ಷೆ ಮಾಡುವ ಸಲಕರಣೆಗಳು, ಅವುಗಳನ್ನು ಬಳಸುವ ರೀತಿ ಇದೆಲ್ಲದಕ್ಕೂ ತಯಾರಿ ಬೇಕು. ಇನ್ನೂ ಒಂದು ಚಿಕ್ಕ ಬಜೆಟ್‌ನ ಸಿನಿಮಾ ಆದರೂ ಕನಿಷ್ಠ 100 ಇರುತ್ತಾರೆ. ಆದರೆ, 40 ಅಥವಾ 50 ಜನ ಇಟ್ಟುಕೊಂಡು ಶೂಟಿಂಗ್‌ ಮಾಡಿದರೆ ಆಗಲ್ಲ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ಕಾದು ನೋಡುತ್ತಿದ್ದೇವೆ. ಕೊರೋನಾ ಬಂದು ಲಾಕ್‌ಡೌನ್‌ ಆಗುವ ಮೊದಲು ಶೂಟಿಂಗ್‌ನಲ್ಲಿ ಇದ್ದ ನನ್ನ ನಿರ್ದೇಶನ, ನಟನೆಯ ‘ಓಲ್ಡ್‌ ಮಾಂಕ್‌’ ಚಿತ್ರಕ್ಕೆ 15 ದಿನ ಶೂಟಿಂಗ್‌ ಆಗಿತ್ತು. ಎರಡನೇ ಹಂತದ ಚಿತ್ರೀಕರಣಕ್ಕೆ ಹೋಗಬೇಕು ಎನ್ನುವ ಹೊತ್ತಿಗೆ ಲಾಕ್‌ಡೌನ್‌ ಶುರುವಾಯಿತು. ಈಗ ಲಾಕ್‌ಡೌನ್‌ ಇಲ್ಲ. ಆದರೆ, ಕೊರೋನಾ ಇದೆ. ಅದರ ಭಯ ಎಲ್ಲರಲ್ಲೂ ಇದೆ. ಜೀವನ ಹಾಗೂ ಆರೋಗ್ಯದ ಪ್ರಶ್ನೆ ಇದು. ಹೀಗಾಗಿ ಅನುಮತಿ ಕೊಟ್ಟಕೂಡಲೇ ಚಿತ್ರೀಕರಣಕ್ಕೆ ಹೋಗುವುದಕ್ಕೆ ಆಗಲ್ಲ.

ಕರೆದರೆ ನನ್ನ ಶೂಟಿಂಗ್‌ಗೆ ಹೋಗುವೆ

- ಅದಿತಿ ಪ್ರಭುದೇವ

ಚಿತ್ರತಂಡಗಳು ಕರೆ ಮಾಡಿ ಯಾವಾಗ ಶೂಟಿಂಗ್‌ಗೆ ಕರೆದರೂ ನಾನು ಹೋಗುತ್ತೇನೆ. ಆದರೆ ಇನ್ನು ಎರಡು ಮೂರು ವಾರಗಳ ಕಾಲ ಶೂಟಿಂಗ್‌ ಅನುಮಾನ. ಎರಡು ತಂಡಗಳ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಎಲ್ಲರೂ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಲಾವಿದರಾಗಿ ನಾವು ಇಂದು ನಿರ್ಮಾಪಕರ ಹಿತ ಕಾಯಬೇಕಿದೆ. ನಮ್ಮ ಕಂಫರ್ಟ್‌ ಝೋನ್‌ನಿಂದ ಆಚೆ ಬಂದು ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್‌ನಲ್ಲಿ ತೊಡಗಿಕೊಳ್ಳಬೇಕು. ಯಾವಾಗ ಶೂಟಿಂಗ್‌ ಆರಂಭ ಎನ್ನುವುದು ನನ್ನೊಬ್ಬಳ ನಿರ್ಧಾರ ಅಲ್ಲ. ಅದನ್ನು ಇಡೀ ಚಿತ್ರತಂಡ ನಿರ್ಧಾರ ಮಾಡುತ್ತದೆ. ನಿರ್ಮಾಪಕ, ನಿರ್ದೇಶಕರು ಮಾಡುತ್ತಾರೆ. ಹಾಗಾಗಿ ನಾನು ಯಾವಾಗಲೇ ಕರೆದರೂ ಹೋಗಿ ಶೂಟಿಂಗ್‌ ಮುಗಿಸಿಕೊಡಲು ಸಿದ್ಧವಾಗಿದ್ದೇನೆ. ಬಹುಶಃ ಇನ್ನೊಂದು ವಾರ ಆದ ನಂತರ ನನ್ನ ಮುಂದಿನ ಸಿನಿಮಾಗಳ ಶೂಟಿಂಗ್‌ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಗುತ್ತದೆ.

ನಮ್ಮದು ಪ್ರೇಮಕತೆ, ಚುಂಬನ ಇಲ್ಲದಿದ್ದರೆ ಹೇಗೆ!

- ಅನೂಪ್‌ ಆ್ಯಂಟನಿ, ನಿರ್ದೇಶಕ

ನಮ್ಮ ಮೆಹಬೂಬ ಚಿತ್ರದ ಶೇ.75ರಷ್ಟುಚಿತ್ರೀಕರಣ ಕೆಲಸಗಳು ಮುಗಿದಿದ್ದವು. ಇನ್ನು ಸಾಂಗ್ಸ್‌, ಫೈಟ್‌, ಕೆಲವು ದೃಶ್ಯಗಳು ಮಾತ್ರವೇ ಬಾಕಿ ಇದ್ದವು. ಹಿಂದೆ ವಿದೇಶಗಳಲ್ಲಿ ಸಾಂಗ್‌ ಶೂಟ್‌ ಮಾಡುವ ಯೋಚನೆ ಇತ್ತು. ಆದರೆ ಈಗ ಅದು ಬದಲಾಗಿದೆ. ಬೆಂಗಳೂರು, ಮೈಸೂರು ಸುತ್ತಮುತ್ತಲೇ ಶೂಟಿಂಗ್‌ ಮಾಡಿಕೊಳ್ಳುತ್ತೇವೆ. ನಮ್ಮದು ಪ್ಯೂರ್‌ ಲವ್‌ ಸಬ್ಜೆಕ್ಟ್. ಸರಕಾರ ಶೂಟಿಂಗ್‌ನಲ್ಲಿ ಹಗ್‌ ಮಾಡುವುದು, ಕಿಸ್‌ ಮಾಡುವುದು ಬೇಡ ಎಂದು ಹೇಳಿದೆ. ಆದರೆ ಇದು ನಮ್ಮ ಸಿನಿಮಾ ಸಬ್ಜೆಕ್ಟ್ಗೆ ಕಷ್ಟಆಗುತ್ತದೆ. ಹಾಗಾಗಿ ಅಧಿಕ ಮಟ್ಟದ ಸುರಕ್ಷಾ ಕ್ರಮಗಳನ್ನು ಕೈಗೊಂಡು ನಮ್ಮ ಚಿತ್ರಕ್ಕೆ ಬೇಕಾದ ಎಲ್ಲಾ ಸೀನ್‌ಗಳನ್ನೂ ಶೂಟ್‌ ಮಾಡುತ್ತೇವೆ. ಹಳೆಯ ಲೊಕೇಷನ್‌ಗಳು ಬದಲಾಗಿ ಹೊಸ ಲೊಕೇಷನ್‌ ಹುಡುಕುತ್ತಿದ್ದೇವೆ. ಒಂದು ವಾರದಲ್ಲಿ ತಂಡದೊಂದಿಗೆ ಮಾತನಾಡಿ ಎರಡನೇ ವಾರದಲ್ಲಿ ಶೂಟಿಂಗ್‌ಗೆ ತೆರಳುವ ಪ್ಲಾನ್‌ ಇದೆ.

ಹೊಸ ಉತ್ಸಾಹದಲ್ಲಿದ್ದಾರೆ ರಿಷಭ್ ಶೆಟ್ಟಿ

ಸಾಧಕ ಬಾಧಕ ನೋಡಿಕೊಂಡು ಮುಂದಿನ ನಿರ್ಧಾರ

-ಗಣೇಶ್‌, ನಟ

ಚಿತ್ರೀಕರಣಕ್ಕೆ ಹೋಗುವ ವಿಚಾರ ಒಬ್ಬರ ನಿರ್ಧಾರದ ಮೇಲೆ ನಿಂತಿಲ್ಲ. ಎಲ್ಲರ ಜತೆ ಮಾತನಾಡಿ ಆ ಮೇಲೆ ಪ್ಲಾನ್‌ ಮಾಡಿಕೊಳ್ಳಬೇಕಿದೆ. ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರಲ್ಲಿ ಇದರ ಭಯ ಹೋಗಿಲ್ಲ. ಈ ನಡುವೆ ಕೊರೋನಾ ಜತೆ ಬದುಕಬೇಕು ಎನ್ನುತ್ತಿದ್ದಾರೆ. ಬದುಕುವುದು ಹೇಗೆ ಎಂಬುದು ಒಂದು ಸವಾಲು. ಇನ್ನೂ ನಮ್ಮ ವೃತ್ತಿಗಳನ್ನು ಈ ಸಂಕಷ್ಟದಲ್ಲಿ ನಿಭಾಯಿಸುದು ಮತ್ತೊಂದು ಸವಾಲು. ಯಾಕೆಂದರೆ ಸಿನಿಮಾ ಅನ್ನುವುದು ಜನರಿಂದ ಕೂಡಿದ ಕ್ಷೇತ್ರ. ತೆರೆ ಮೇಲೆ ಕಾಣಿಸಿಕೊಳ್ಳುವವರು ಮಾತ್ರ ಸಿನಿಮಾ ಅಲ್ಲ. ಅದರ ಹಿಂದೆ ನೂರಾರು ಜನ ಕೆಲಸ ಮಾಡುತ್ತಿರುತ್ತಾರೆ. ಅವರೆಲ್ಲ ಒಂದು ಕಡೆ ಸೇರಬೇಕು. ಈ ಹೊತ್ತಿನಲ್ಲಿ ಅವರನ್ನು ಸೇರಿಸುವುದು ಹೇಗೆ, ಸೇರಿದರೆ ಏನಾಗುತ್ತದೆ, ನಮ್ಮ ಮುನ್ನೆಚ್ಚರಿಕೆಗಳೇನು ಎಂಬುದನ್ನು ಮಾತನಾಡಬೇಕಿದೆ. ಹೀರೋ, ಕಲಾವಿದರ ಕಾಲ್‌ಶೀಟ್‌ ಇದೆ ಶೂಟಿಂಗ್‌ಗೆ ಹೋಗೋಣ ಅನ್ನುವ ಸ್ಥಿತಿಯಲ್ಲಿ ನಾವು ಇಲ್ಲ. ಸಿನಿಮಾ ಕಮಿಟ್‌ಮೆಂಟ್‌ ಜತೆಗೆ ಸಾಮಾಜಿಕ ಕಮಿಟ್‌ಮೆಂಟ್‌ ಕೂಡ ಮುಖ್ಯ. ಶೂಟಿಂಗ್‌ ಗೈಡ್‌ಲೈನ್ಸ್‌ ಏನಿದೆ ಗೊತ್ತಿಲ್ಲ. ಹಾಗಂತ ಕೆಲಸ ಮಾಡದೆ ಸುಮ್ಮನೆ ಕೂರಕ್ಕೆ ಆಗಲ್ಲ. ಚಿತ್ರೋದ್ಯಮದ ಕೆಲಸಗಳನ್ನು ನಂಬಿಕೊಂಡು ಸಾವಿರಾರು ಮಂದಿ ಜೀವನ ರೂಪಿಸಿಕೊಂಡಿದ್ದಾರೆ. ಅವರ ಉದ್ಯೋಗ ಹಾಗೂ ಹಸಿವಿನ ಪ್ರಶ್ನೆಯೂ ಇಲ್ಲಿದೆ. ಈ ಎಲ್ಲವನ್ನೂ ಗಮನದಲ್ಲಿಟ್ಟು ನಾವು ಇದೇ ಶುಕ್ರವಾರ ನನ್ನ ಚಿತ್ರಗಳ ನಿರ್ದೇಶಕರು, ತಂಡಗಳ ಜತೆ ಸಭೆ ಮಾಡುತ್ತಿದ್ದೇವೆ. ಇಲ್ಲಿ ಚರ್ಚಿಸಿ ನಿರ್ಧಾರಿಸುತ್ತೇವೆ. ಸದ್ಯಕ್ಕೆ ಯೋಗರಾಜ್‌ ಭಟ್‌ ನಿರ್ದೇಶನದ ‘ಗಾಳಿಪಟ 2’, ಸಿಂಪಲ್‌ ಸುನಿ ನಿರ್ದೇಶನದ ‘ಸಕತ್‌’ ಹಾಗೂ ಮಹೇಶ್‌ ಎಂಬುವವರು ಮಾಡಲಿರುವ ಹೊಸ ಸಿನಿಮಾ ‘ಥ್ರಿಬಲ್‌ ರೈಡಿಂಗ್‌’ ಚಿತ್ರಗಳು ಶೂಟಿಂಗ್‌ಗೆ ಹೋಗಬೇಕಿದೆ.

ಯುವರತ್ನ ನಂತರ ಜೇಮ್ಸ್‌ ಶೂಟಿಂಗ್‌ ಮಾತು

-ಚೇತನ್‌ಕುಮಾರ್‌, ನಿರ್ದೇಶಕ

ನಾವು ಶೂಟಿಂಗ್‌ಗೆ ಹೋಗಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ನಮಗಿಂತ ಮುಂಚೆ ‘ಯುವರತ್ನ’ ಚಿತ್ರದ ಹಾಡಿನ ಜತೆಗೆ ಒಂದಿಷ್ಟುದೃಶ್ಯಗಳ ಚಿತ್ರೀಕರಣ ಆಗಬೇಕಿದೆ. ಅವರು ಶೂಟಿಂಗ್‌ ಮಾಡುವಾಗ ನಮ್ಮ ‘ಜೇಮ್ಸ್‌’ ಚಿತ್ರಕ್ಕೆ ಸಮಯ ಸಿಗುತ್ತದೆ. ಅವರು ಚಿತ್ರೀಕರಣಕ್ಕೆ ಹೋದ ಮೇಲೆ ನಮಗೂ ಒಂದು ಸ್ಪಷ್ಟತೆ ಬರುತ್ತದೆ. ಕಡಿಮೆ ಕಲಾವಿದರು, ತಂತ್ರಜ್ಞರನ್ನು ಇಟ್ಟುಕೊಂಡು ಸಿನಿಮಾ ಶುರು ಮಾಡುವುದು ಹೇಗೆ ಎಂಬುದು ಇನ್ನೇರಡ್ಮೂರು ದಿನಗಳಲ್ಲಿ ಗೊತ್ತಾಗಲಿದೆ. ಆದರೆ, ಹೊರಗಿನ ಪರಿಸ್ಥಿತಿ ಅನುಕೂಲವಿಲ್ಲ. ನಿತ್ಯ ಪ್ರಕರಣಗಳು ಹೆಚ್ಚಾಗುತ್ತಿವೆ.