ಹಿರಿಯ ನಟ, ಮಾಜಿ ಸಚಿವ ಅನಂತ್ ನಾಗ್ ಇಂದು (ಫೆಬ್ರವರಿ 22) ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.

ಹಿರಿಯ ನಟ, ಮಾಜಿ ಸಚಿವ ಅನಂತ್ ನಾಗ್ ಇಂದು (ಫೆಬ್ರವರಿ 22) ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸಂಜೆ 4.30ಕ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​ ನೇತೃತ್ವದಲ್ಲಿ ಬಿಜೆಪಿಗೆ ಸೇರುತ್ತಿದ್ದಾರೆ. ಈ ಹಿಂದೆ ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಅನಂತ್ ನಾಗ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. 2004ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​​ನಿಂದ ಸ್ಪರ್ಧಿಸಿ ಸೋತಿದ್ದರು.

ಇದೀಗ ಅನಂತ್ ನಾಗ್ ಬಿಜೆಪಿ ಸೇರುತ್ತಿದ್ದಾರೆ. ಸಿನಿಮಾರಂಗದಲ್ಲೂ ಸಕ್ರೀಯರಾಗಿರುವ ಅನಂತ್ ನಾಗ್ ಇದೀಗ ರಾಜಕೀಯದಲ್ಲೂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಈ ವೇಳೆ ಅನಂತ್ ನಾಗ್ ಕೂಡ ಭಾಗಿಯಾಗುತ್ತಿದ್ದಾರೆ. 

ಅನಂತ್ ನಾಗ್ ರಾಜಕೀಯ ಹಿನ್ನಲೆ 

ಅನಂತ್ ನಾಗ್ 1980 ರ ದಶಕದಿಂದನೂ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. 1983ರ ವಿಧಾನಸಭೆ ಚುನಾವಣೆ ವೇಳೆ ಅನಂತ್ ನಾಗ್ ಜನತಾ ಪಾರ್ಟಿಯ ಸ್ಟಾರ್ ಪ್ರಚಾರಕರಾಗಿದ್ದರು. 1985 ಮತ್ತು 1989 ರ ಚುನಾವಣೆ ವೇಳೆಯೂ ಅನಂತ್ ನಾಗ್ ವೇದಿಕೆಯಲ್ಲಿ ಕಾಣಿಸಿಕೊಂಡರು. 1983ರಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಜ್ಞಾನಪೀಠ ವಿಜೇತ ಕವಿ ಶಿವರಾಮ ಕಾರಂತ ವಿರುದ್ಧ ಅನಂತ್ ನಾಗ್ ಸ್ಪರ್ಧೆ ಮಾಡಿದ್ದರು. ಆದರೆ ಆ ಈ ಚುನಾವಣೆಯಲ್ಲಿ ಶಿವರಾಮ ಕಾರಂತ ಮತ್ತು ಅನಂತ್ ನಾಗ್ ಇಬ್ಬರು ಸೋಲು ಕಂಡಿದ್ದರು. 

ಬಳಿಕ 1994ರಲ್ಲಿ ಬೆಂಗಳೂರಿನ ಮಲ್ಲೇಶ್ವರ ಕ್ಷೇತ್ರದಿಂದ ಗೆದ್ದ ಅನಂತ್ ನಾಗ್ ವಿಧಾನಸೌಧ ಪ್ರವೇಶ ಮಾಡಿದರು. ಜೆ.ಎಚ್.ಪಟೇಲ್ ಸಂಪುಟದಲ್ಲಿ ಬಿಡಿಎ ಸಚಿವರಾಗಿ ಕಾರ್ಯನಿರ್ವಹಿಸಿದರು. ಮುತ್ಸದ್ಧಿ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರೊಂದಿಗೆ ಅನಂತ್ ನಾಗ್ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು. ಕೊನೆಯವರೆಗೂ ಇಬ್ಬರ ನಡುವಿನ ಸಂಬಂಧ ಹಾಗೇ ಇತ್ತು. ಜನತಾದಳ ಪಕ್ಷ ಒಡೆದು ಚೂರಾಗುವವರೆಗೂ ಅನಂತ್ ನಾಗ್ ಪಕ್ಷದಲ್ಲಿಯೇ ಇದ್ದರು. 2004ರ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಜೆಡಿಎಸ್ ನಿಂದ ಕಣಕ್ಕೆ ಇಳಿದರು. ಆದರೆ ಸೋಲು ಕಂಡರು. 

ಸಿನಿಮಾಗಳು 

ರಾಜಕೀಯ ಮತ್ತು ಸಿನಿಮಾ ಎರಡನ್ನು ನಿಭಾಯಿಸಿಕೊಂಡು ಬಂದಿದ್ದಾರೆ ಅನಂತ್ ನಾಗ್. 1973 ಸಂಕಲ್ಪ ಸಿನಿಮಾದಿಂದ ಪ್ರಾರಂಭವಾದ ಸಿನಿಮಾ ಜರ್ನಿ ಇಂದಿಗೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ನೂನಾರು ಸಿನಿಮಾಗಳಲ್ಲಿ ನಟಿಸಿರುವ ಅನಂತ್ ನಾಗ್ ಕನ್ನಡ ಜೊತೆಗ ಹಿಂದಿ, ಮಲಯಲಾಳಂ ಮತ್ತು ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕಿರುತೆರೆಯಲ್ಲಿ ಮಿಂಚಿದ್ದಾರೆ. ಸಹೋದರ ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಅನಂತ್ ನಾಗ್ ಕಾಣಿಸಿಕೊಂಡಿದ್ದರು. ಕೊನೆಯದಾಗಿ ವಿಜಯಾನಂದ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ತಿಮ್ಮಯ್ಯ ಅಂಡ್ ತಿಮ್ಮಯ್ಯ ಸಿನಿಮಾದಲ್ಲಿ ಅನಂತ್ ನಾಗ್ ದಿಗಂತ್ ಜೊತೆ ಕಾಣಿಸಿಕೊಂಡಿದ್ದರು. ಸದ್ಯ ಅನೇಕ ಸಿನಿಮಾಗಳು ಅನಂತ್ ನಾಗ್ ಕೈಯಲ್ಲಿದೆ. ಈ ನಡುವೆ ಮತ್ತೆ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ.