Asianet Suvarna News Asianet Suvarna News

ನನ್ನ ಹಾಡು ನನ್ನದು ನನ್ನ ರಾಗ ನನ್ನದು; ಅನಂತ್ ನಾಗ್,ಜಯಂತ ಕಾಯ್ಕಿಣಿ ಮಾತುಗಳು

ಮೂರು ತಲೆಮಾರಿನ ಚಿತ್ರಪ್ರೇಮಿಗಳ ನಿಟ್ಟುಸಿರಿಗೆ ರಾ ಸಂಯೋಜನೆ ಮಾಡಿದ ರಾಜನ್‌-ನಾಗೇಂದ್ರ ಜೋಡಿಯ ಎರಡನೆಯ ಜೀವವೂ ಕಣ್ಮರೆಯಾಗಿದೆ. ಅವರಿಗೆ ಕನ್ನಡ ಮೂವರು ಪ್ರತಿಭಾವಂತರು ನುಡಿನಮನ ಸಲ್ಲಿಸಿದ್ದಾರೆ.
 

Actor Anant nag poet jayant kaikini music composer hamsalekha recall rajan vcs
Author
Bangalore, First Published Oct 13, 2020, 8:39 AM IST
  • Facebook
  • Twitter
  • Whatsapp

ನಮ್ಮ ಬದುಕಿಗೇ ಹಿನ್ನೆಲೆ ಸಂಗೀತ ನೀಡಿದವರು! 

- ಜಯಂತ ಕಾಯ್ಕಿಣಿ

Actor Anant nag poet jayant kaikini music composer hamsalekha recall rajan vcs

ನಾವು ರಾಜನ್‌ - ನಾಗೇಂದ್ರ ಅವರ ಹಾಡುಗಳನ್ನು ಇಯರ್‌ ಫೋನ್‌ ಹಾಕ್ಕೊಂಡು ಕೇಳಿದವರಲ್ಲ. ಜನರ ಜೊತೆಗೇ ಕೇಳಿದವರು. ಅದು ಮದುವೆ ಮಂಟಪಗಳಲ್ಲಿರಬಹುದು, ಊರ ಜಾತ್ರೆಯಲ್ಲಿರಬಹುದು, ಟೂರಿಂಗ್‌ ಟಾಕೀಸಿನಲ್ಲಿ , ಸರ್ಕಸ್‌ನಲ್ಲಿ ನಮ್ಮನ್ನು ಸ್ಪೀಕರ್‌ಗಳಿಂದ ಸೆಳೆಯುತ್ತಾ ಅವು ಸಾಮಾಜಿಕ ಪರಿಸರದ ಭಾಗವಾಗಿಯೇ ನಮಗೆ ದಕ್ಕಿದ್ದು. ಇವತ್ತಿನ ಹಾಗೆ ಪ್ರತ್ಯೇಕ ವ್ಯಕ್ತಿಗತವಾಗಿ ಬಂದದ್ದಲ್ಲ. ಐದು ದಶಕಗಳ ಆ ಜಮಾನಾದ ಅದ್ಭುತ ಹಾಡುಗಳನ್ನು ರಾಜನ್‌ ನಾಗೇಂದ್ರ ನಮಗೆ ಕೊಟ್ಟರು. ಇವರ ‘ಆಕಾಶವೆ ಬೀಳಲಿ ಮೇಲೆ’ ಇರಬಹುದು, ‘ಎರಡು ಕನಸು’ಚಿತ್ರದ ಎಲ್ಲಾ ಹಾಡುಗಳಿರಬಹುದು, ಈಗ ಈ ಹೊತ್ತಿನಲ್ಲಿ ನಾನು ನೆನಪು ಮಾಡಿಕೊಂಡರೆ ಆ ಹಾಡುಗಳನ್ನು ಬಯಲಲ್ಲಿ ಸಂತೆಯಲ್ಲಿ ಜನರ ಜೊತೆಗೆ ಕೇಳಿದ ಚಿತ್ರವೇ ಮನಸ್ಸಿಗೆ ಬರುತ್ತದೆ. ಅದು ಬಾವೀಲಿ ಮೋಟಾರ್‌ ಸೈಕಲ್‌ ಹೊಡಿಯೋನ ಸ್ಪೀಕರಿಂದ ಕೇಳಿದ್ದಿರಬಹುದು, ಯಕ್ಷಗಾನ ಮೇಳದವರ ಅಡ್ವರ್‌ಟೈಸ್‌ಮೆಂಟ್‌ ಸ್ಪೀಕರಿನದ್ದಿರಬಹುದು, ಗೆಳೆಯನ ಮದುವೆ ಮನೆಯಲ್ಲಿರಬಹುದು.. ಅಥವಾ ಶಾಲೆ ಕಾಲೇಜಿನ ವಾರ್ಷಿಕೋತ್ಸವವೇ ಇರಬಹುದು.. ಜನರೊಂದಿಗೆ ಕೂತು ಅನುಭವಿಸಿದ ಹಾಡುಗಳ ದೊಡ್ಡ ಮೊತ್ತ ಅದು. ಮಾಧುರ್ಯವೇ ಆ ಹಾಡುಗಳ ಜೀವಾಳ. ಶಾಸ್ತ್ರೀಯ ಸಂಗೀತದಲ್ಲಿ ಇದು ಕಿರಾನಾ ಘರಾನಾ, ಅದು ಜೈಪುರ್‌ ಘರಾನಾ, ಇದು ಗ್ವಾಲಿಯರ್‌ ಘರಾನಾ ಅಂತಾರಲ್ಲ.. ಹಾಗೇ ಸಿನಿಮಾ ಸಂಗೀತ ರಂಗಕ್ಕೆ ಬಂದಾಗ ಕೆಲವು ಘರಾನಾಗಳು ಬಹಳ ಸ್ಪಷ್ಟ. ರಾಜನ್‌ ನಾಗೇಂದ್ರ ಅಂಥದ್ದೊಂದು ಘರಾನಾ. ಹಾಡು ಕೇಳಿದ ತಕ್ಷಣ ಇದು ರಾಜನ್‌ ನಾಗೇಂದ್ರ ಘರಾನಾದ್ದು ಅಂತ ಗುರುತಿಸಬಹುದು. ಅಷ್ಟುಸ್ಪಷ್ಟಒಕ್ಕಣಿಕೆ ಇರುತ್ತದೆ.

ಖ್ಯಾತ ಸಂಗೀತ ನಿರ್ದೇಶಕ ರಾಜನ್‌ ವಿಧಿವಶ 

ರಾಜನ್‌ ನಾಗೇಂದ್ರ ಕಂಪೊಸಿಶನ್‌ ಆಗಿರಲಿ, ಎಸ್‌ಪಿ ಬಾಲಸುಬ್ರಹ್ಮಣ್ಯಂ ಧ್ವನಿ ಆಗಿರಲಿ, ನಮ್ಮ ಜೀವನಕ್ಕೇ ರೀರೆಕಾರ್ಡಿಂಗ್‌ ಇದ್ದಹಾಗೆ. ನಮ್ಮ ನಮ್ಮ ಖಾಸಗಿ ಬಾಳುವೆಗೇ ಆ ಮಹನೀಯರು ಕೊಟ್ಟಅವ್ಯಾಹತ ಹಿನ್ನೆಲೆ ಸಂಗೀತ ಅದು. ಈಗ ಕಣ್ಮುಚ್ಚಿ ಆಲಿಸಿದರೆ ನಮ್ಮನ್ನು ಆವರಿಸುವುದು ಆ ಚಿತ್ರಗಳ ಸನ್ನಿವೇಶಗಳಲ್ಲ. ಬದಲಿಗೆ ಅವನ್ನು ನಾವು ಅಲಿಸಿದಾಗಿನ ನಮ್ಮ ನಮ್ಮ ಜೀವನದ ಕ್ಷಣಗಳು. ಅಂಥ ಅಮೂಲ್ಯ ಋುಣ ಅದು. ಅನಂತವಾದದ್ದು .

‘ಆಕಾಶವೇ ಬೀಳಲಿ ಮೇಲೆ’, ‘ಎಂದು ನಿನ್ನ ನೋಡುವೆ’, ‘ಹೂವಿಂದ ಹೂವಿಗೆ ಹಾರುವ ದುಂಬಿ’, ‘ಬಾನಲ್ಲೂ ನೀನೇ ಬುವಿಯಲ್ಲೂ ನೀನೇ’, ‘ಮಾಮರವೆಲ್ಲೋ ಕೋಗಿಲೆ ಎಲ್ಲೋ’, ಅವರು ತಮ್ಮ ಶೈಲಿಗೆ ವಿಭಿನ್ನವಾಗಿ ಮಾಡಿದ್ದ ‘ಪರಸಂಗದ ಗೆಂಡೆತಿಮ್ಮ’ದ ಹಾಡುಗಳು, ‘ನಗುವಾ ಗುಲಾಬಿ ಹೂವೆ’ ... ಇಂಥ ಅಸಂಖ್ಯಅನುಪಮ ಗೀತೆಗಳು ನಮ್ಮ ಜೀವದ ಭಾಗವಾಗಿವೆ... ಭಾಗ್ಯವೂ ಆಗಿವೆ.

ಸಂಗೀತವನ್ನೇ ಜೀವಿಸಿದ ಜೀವ

-ಹಂಸಲೇಖ

Actor Anant nag poet jayant kaikini music composer hamsalekha recall rajan vcs

ಪರಿಪೂರ್ಣವಾದ ಜೀವನ ಅವರದ್ದು, ಅವರ ಇಡೀ ಬದುಕೇ ಸಂಗೀತಮಯ. ನನ್ನ ಪ್ರಕಾರ ಕನ್ನಡ ಚಲನಚಿತ್ರದ ಇತಿಹಾಸದಲ್ಲಿ ರಾಜನ್‌ ನಾಗೇಂದ್ರ ಅವರ ಜೋಡಿ ಅಪರೂಪವಾದದ್ದು. ಶಂಕರ್‌- ಜೈ ಕಿಶನ್‌, ಲಕ್ಷ್ಮೇಕಾಂತ್‌-ಪ್ಯಾರೇಲಾಲ್‌, ಪಾರ್ಕ್ ಲೀ -ವಿಶ್ವನಾಥನ್‌ ಮೂರ್ತಿ ಮತ್ತು ರಾಜನ್‌- ನಾಗೇಂದ್ರ ಈ ನಾಲ್ಕು ಜೋಡಿ ಭಾರತದ ಹಿಟ್‌ ಮ್ಯೂಸಿಕ್‌ ಡೈರೆಕ್ಟರ್ಸ್‌. ಇದರಲ್ಲಿ ನಮ್ಮ ಕನ್ನಡದ ಒಂದು ಜೋಡಿ ಇದೆ ಎನ್ನುವುದು ನಾವೆಲ್ಲಾ ಹೆಮ್ಮೆ ಪಡಬೇಕಾದ ಸಂಗತಿ. ಸುಮಾರು 45 ವರ್ಷಗಳ ಕಾಲ ರಾಜನ್‌ ನಾಗೇಂದ್ರ ಜೋಡಿ ಅತ್ಯಮೋಘ ಎನ್ನಿಸುವ ಸಂಗೀತ ನೀಡಿದೆ.

Actor Anant nag poet jayant kaikini music composer hamsalekha recall rajan vcs

ಪ್ರತಿ ವರ್ಷ, ಪ್ರತಿ ಚಿತ್ರದಿಂದ ಚಿತ್ರಕ್ಕೆ ಇವರು ಅಪ್‌ಡೇಟ್‌ ಆಗುತ್ತಾ ಬಂದರು. ಹೊಸತನವನ್ನು ರೂಢಿಸಿಕೊಂಡರು. ಇದೆಲ್ಲಾ ಮಾಡಿಯೂ ತಾವು ಇದನ್ನು ಮಾಡಿದ್ದು, ಅದನ್ನು ಮಾಡಿದ್ದು ಎಂದು ಎಲ್ಲಿಯೂ ಹೇಳಿಕೊಳ್ಳದ, ಪ್ರಚಾರ ಬಯಸದ, ಸಂಗೀತವನ್ನೇ ಜೀವಿಸಿದ ಜೋಡಿ ಇದು. ಇಡೀ ಬದುಕಿನಲ್ಲಿ ಒಂದೇ ಒಂದು ವಿವಾದ ಇಲ್ಲದೇ ಸಂಗೀತದ ಮೂಲಕ ಜನರ ಮನ ತಣಿಸಿದವರು. ನಾನು ಕಂಡ ಹಾಗೆ ಕನ್ನಡದಲ್ಲಿ ಅವರಷ್ಟುಶಿಸ್ತಿನ ಸಂಗೀತ ನಿರ್ದೇಶಕರು ಕಡಿಮೆ.

ಹಾಡು ಮುಗಿದಿದೆ, ಮಾಧುರ್ಯ ಉಳಿದಿದೆ

- ಅನಂತ್‌ನಾಗ್

Actor Anant nag poet jayant kaikini music composer hamsalekha recall rajan vcs

ಹಳೆಯ ಕೊಂಡಿಗಳೆಲ್ಲಾ ಒಂದೊಂದಾಗಿಯೇ ಕಳಚಿ ಹೋಗುತ್ತಿರುವುದನ್ನು ಯೋಚನೆ ಮಾಡಿದರೆ ಬೇಸರವಾಗುತ್ತದೆ. ರಾಜನ್‌ ಬಗ್ಗೆ ಅಲ್ಲೊಮ್ಮೆ ಇಲ್ಲೊಮ್ಮೆ ಮಾತನಾಡುವ ಅವಕಾಶ ಸಿಕ್ಕಿತ್ತು. ಇತ್ತೀಚೆಗೆ ಯಾರೋ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಮಾತನಾಡುತ್ತೀರಾ ಎಂದು ಕೇಳಿದ್ದರು. ಜತೆಯಲ್ಲಿ ಇದ್ದೇ ಮಾತನಾಡುವುದು ಕಷ್ಟ, ಇನ್ನು ಎಲ್ಲೋ ಇದ್ದುಕೊಂಡು ಮಾತನಾಡುವುದು ಹೇಗೆ ಎಂಬ ಕಾರಣಕ್ಕೆ ತಡ ಮಾಡಿದ್ದೆ. ಈಗ ನೋಡಿದರೆ ಅವರೇ ಎದ್ದು ಹೋಗಿಬಿಟ್ಟಿದ್ದಾರೆ.

ಅವರು ಸಂಗೀತ ಸಂಯೋಜಿಸಿದ ನನ್ನ ಮೊದಲ ಸಿನಿಮಾ ಬಯಲುದಾರಿ. ಅನಂತರ ಭಗವಾನ್‌ ನಿರ್ದೇಶನದ ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ನಾ ನಿನ್ನ ಬಿಡಲಾರೆ ಹೀಗೆ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಆವಾಗೆಲ್ಲಾ ಸಿನಿಮಾ ಕೆಲಸಗಳೆಲ್ಲಾ ಮದ್ರಾಸ್‌ನಲ್ಲಿ ನಡೆಯುತ್ತಿತ್ತು. ನಿರ್ಮಾಪಕರು, ನಿರ್ದೇಶಕರು ಕೆಲಸ ಶುರು ಮಾಡಿ ಮದ್ರಾಸ್‌ಗೆ ಹೋಗಿ ಕೆಲಸ ಶುರು ಮಾಡುತ್ತಿದ್ದರು. ಸಂಗೀತ ಸಂಯೋಜನೆ ಕೆಲಸಗಳು ನಡೆಯುತ್ತಿತ್ತು. ಒಂದು ಸಿನಿಮಾದಲ್ಲಿ ಒಬ್ಬೊಬ್ಬರ ಕೊಡುಗೆ ಶೇ.10, ಶೇ.15 ಇದ್ದರೆ ಸಂಗೀತ ನಿರ್ದೇಶಕರದು ಶೇ.40ರಿಂದ 60 ಕೊಡುಗೆ. ದೊಡ್ಡ ಜವಾಬ್ದಾರಿ. ಆದರೆ ಶ್ರೇಯ ಮಾತ್ರ ನಟ, ನಟಿಯರಿಗೆ. ನಾವು ತುಟಿ ಅಲ್ಲಾಡಿಸುವುದಷ್ಟೇ. ನಮಗೆ ಶೂಟಿಂಗ್‌ಗೆ ರೆಡಿಯಾದಾಗಲೇ ಕರೆ ಬರುವುದು. ಜಾಸ್ತಿ ಎಂದರೆ ನಮ್ಮ ಕೊಡುಗೆ ಶೇ.10ರಿಂದ 15 ಇರಬಹುದು. ಹಾಗಾಗಿಯೇ ಭೀಮಸೇನ ಜೋಶಿಗಳು ಒಮ್ಮೆ ನನಗೆ ಹಾಡುವವರು ನಾವು, ಉತ್ಸವಮೂರ್ತಿಗಳು ನೀವು ಎಂದಿದ್ದರು. ಹಾಗೆ ಕರೆಯುವ ಅಧಿಕಾರ, ಸ್ಥಾನಮಾನ ಅವರಿಗೆ ಇದೆ. ಅವರು ಹೇಳಿದಂತೆ ನಾವು ಉತ್ಸವ ಮೂರ್ತಿಗಳೇ.

Actor Anant nag poet jayant kaikini music composer hamsalekha recall rajan vcs

ಹಿನ್ನೆಲೆಯಲ್ಲಿ ಯಾರು ಕೆಲಸ ಮಾಡುತ್ತಾರೋ ಅವರಿಗೆ ನಿಜವಾಗಿ ಸಲ್ಲಬೇಕಾದ ಶ್ರೇಯ ಸಲ್ಲುವುದೇ ಇಲ್ಲ. ಒಂದು ಸಿನಿಮಾ ಓಡಬೇಕಾದರೆ ಬಹಳ ದೊಡ್ಡ ಭಾರ ಸಂಗೀತ ನಿರ್ದೇಶಕರ ಮೇಲೆ ಇರುತ್ತದೆ. ಅದು ನಮ್ಮ ಅರಿವಿಗೆ ಬರುವುದಿಲ್ಲ. ಅದನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದು ರಾಜನ್‌-ನಾಗೇಂದ್ರ. ಅವರ ಸಂಗೀತದಲ್ಲಿರುವ ಮಾಧುರ್ಯ ವಿವರಿಸಲು ಅಸಾಧ್ಯ.

ಬಹಳ ಹಿಂದೆ ರೇಡಿಯೋದಲ್ಲಿ ಹಾಡು ಕೇಳುತ್ತಿದ್ದೆ.

ಹೂವಿಂದ ಹೂವಿಗೆ ಹಾರುವ ದುಂಬಿ

ಏನನು ಹಾಡುತಿಹೆ ನೀ ಏನನು ಹಾಡುತಿಹೆ

ಹೂವಿನ ಕೋಮಲ ಭಾವನೆ ಕೆಣಕಿ

ಏತಕೆ ಕಾಡುತಿಹೇ ನೀ ಏತಕೆ ಕಾಡುತಿಹೆ

ಎಂಥಾ ಟ್ಯೂನು, ಎಂಥಾ ಸಾಹಿತ್ಯ. ಯಾರು ಬರೆದಿದ್ದು ಎಂದು ಹುಡುಕಿದೆ. ಗೀತಪ್ರಿಯ ಸಾಹಿತ್ಯ ನೀಡಿದ್ದರೆ ರಾಜನ್‌ ನಾಗೇಂದ್ರ ಸಂಗೀತ ಸಂಯೋಜನೆ. ಆಮೇಲಿಂದ ಅದನ್ನು ಗೂಗಲ್‌ನಲ್ಲಿ ಪದೇ ಪದೇ ಕೇಳುತ್ತೇನೆ. ಆ ಸಾಹಿತ್ಯ, ಆ ಟ್ಯೂನ್‌ನಲ್ಲಿಯೇ ಆ ಹಾಡನ್ನು ಕಲ್ಪಿಸಿಕೊಳ್ಳಬಹುದು. ಆ ಹಾಡು ಕೇಳಿದರೇನೇ ಪೂರ್ಣತ್ವ ಸಿಕ್ಕಿಬಿಡುತ್ತದೆ. ಅಂಥಾ ಕ್ರಿಯಾಶೀಲತೆ ಅವರದು. ಆ ಹಾಡನ್ನು ನೋಡಿದರೆ ನಟ, ನಟಿಯರು ನೆನಪಲ್ಲಿರುತ್ತಾರೆ. ಹಾಡು ಮಾತ್ರ ಕೇಳಿದರೆ ಹಾಡಿನ, ರಾಗ ಸಂಯೋಜನೆಯ ಅಪಾರ ಸೌಂದರ್ಯ ನಾಟುತ್ತದೆ.

ರಾಜನ್‌-ನಾಗೇಂದ್ರ ವಿಶೇಷತೆ ಏನೆಂದರೆ ಅವರು ನೀವು ಹಾಡು ಬರೆಯಿರಿ, ನಾವು ಟ್ಯೂನು ಕೊಡುತ್ತೇವೆ ಎನ್ನುತ್ತಿದ್ದರು. ಆದರೆ ಆಗ ಟ್ಯೂನ್‌ ಕೊಟ್ಟು ಹಾಡು ಬರೆಸಲಾಗುತ್ತದೆ. ಅವರು ಮಾತ್ರ ಎಷ್ಟುಸಿನಿಮಾ ಮಾಡಿದರೂ ಹಾಡು ಬರೆಸಿ ಸೊಗಸಾದ ಟ್ಯೂನ್‌ ಹಾಕುತ್ತಿದ್ದರು. ಅಂಥಾ ಸಂಗೀತ ಮಾಧುರ್ಯ ಇವರಿಗೆ ಮಾತ್ರ ಸಾಧ್ಯವಿತ್ತು. ಒಮ್ಮೆಯಂತೂ ಹೆಂಗೆ ಇಷ್ಟೊಂದು ಸುಂದರವಾಗಿ ಟ್ಯೂನ್‌ ಮಾಡುತ್ತೀರಿ ಎಂದು ಕೇಳಿಯೇ ಬಿಟ್ಟಿದ್ದೆ. ಅವರು ನಕ್ಕಿದ್ದರು.

ರಾಜನ್‌ ಅವರ ಕ್ಷೇತ್ರದಲ್ಲಿ ಇದ್ದಾಗ ಮಾತ್ರ ಒಂದೊಂದು ಸಂಗೀತೋಪಕರಣಗಳ ಬಳಿಗೆ ಹೋಗಿ ಸಂಗೀತಕಾರರ ಬಳಿ ಮಾತನಾಡುತ್ತಿದ್ದರು. ಇಲ್ಲದಿದ್ದರೆ ಅವರು ಮಿತಭಾಷಿ. ಮಾತು ತುಂಬಾ ಕಡಿಮೆ.

ರಾಜನ್‌- ನಾಗೇಂದ್ರ ಜೋಡಿಯಲ್ಲಿ ರಾಜನ್‌ ಹಿರಿಯಣ್ಣ. ನಾಗೇಂದ್ರ ಹೋದ ಮೇಲೆ 20 ವರ್ಷ ಒಂಟಿಯಾಗಿಯೇ ಸಾಗಿ ಬಂದಿದ್ದಾರೆ. ಈಗ ಅವರೂ ಹೊರಟು ಬಿಟ್ಟಿದ್ದಾರೆ. ಹಾಡು ಮುಗಿದಿದೆ. ಮಾಧುರ್ಯ ಕಿವಿಯಲ್ಲಿ ಉಳಿದುಬಿಟ್ಟಿದೆ.


 

Follow Us:
Download App:
  • android
  • ios